ಭಾರತೀಯ ವಿಜ್ಞಾನಿಗಳು ಮಂಗಳ ಗ್ರಹದ ಪರಿಸರವನ್ನು ಹೋಲುವ ಭೌಗೋಳಿಕ ತಾಣಗಳನ್ನು ಪತ್ತೆಹಚ್ಚಿದ್ದಾರೆ. ಈ ಪ್ರದೇಶಗಳಲ್ಲಿ ಮೆಲಂಟರೈಟ್ ಮತ್ತು ಜಿಪ್ಸಮ್ ಎಂಬ ಖನಿಜಗಳನ್ನು ಗುರುತಿಸಲಾಗಿದ್ದು, ಇದು ಮಂಗಳ ಗ್ರಹದ ನೀರಿನ ಚಟುವಟಿಕೆ ಮತ್ತು ವಾಸಯೋಗ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನವದೆಹಲಿ: ಕೇರಳ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಸಂಶೋಧಕರ ತಂಡ ಮಂಗಳ ಗ್ರಹದ ವಾಸಯೋಗ್ಯತೆ ಮತ್ತು ನೀರಿನ ಚಟುವಟಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಪ್ರಮುಖ ಭೂವೈಜ್ಞಾನಿಕ ತಾಣಗಳನ್ನು ಗುರುತಿಸಿದೆ. ಡಾ. ಸಜಿನ್ ಕುಮಾರ್ ಕೆ.ಎಸ್. ನೇತೃತ್ವದ ತಂಡವು ತಮಿಳುನಾಡಿನ ನೆಯ್ವೇಲಿ (Neyveli Tamil Nadu), ತಿರುಚಿರಾಪಳ್ಳಿ ಬ್ಯಾಡ್ಲ್ಯಾಂಡ್ಸ್ (Tiruchirappalli Badlands) ಹಾಗೂ ಚಿಲಿಯ ಅಟಕಾಮಾ ಮರುಭೂಮಿಯಲ್ಲಿ (Chile’s Atacama Desert) ಮಂಗಳ ಗ್ರಹದ ಪರಿಸರವನ್ನು ಹೋಲುವ ವಾತಾವರಣವನ್ನು ಪತ್ತೆಹಚ್ಚಿದೆ.
ಈ ತಾಣಗಳಲ್ಲಿ ಮಂಗಳದ ಮೇಲ್ಮೈಯಲ್ಲಿ ಕಂಡುಬರುವಂತಹ ಭೌಗೋಳಿಕ, ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳು ಇರುವುದು ದೃಢಪಟ್ಟಿದೆ. ಮಿಳುನಾಡಿನ ನೆಯ್ವೇಲಿ ಪ್ರದೇಶ ಬೆಂಗಳೂರಿನಿಂದ 260 ಕಿ.ಮೀ ದೂರದಲ್ಲಿದೆ.
ಖನಿಜಗಳ ಪತ್ತೆ ಮತ್ತು ತಂತ್ರಜ್ಞಾನ
ಸಂಶೋಧಕರು ನಯ್ವೇಲಿಯಲ್ಲಿ ಮೆಲಂಟರೈಟ್ (Melanterite) ಮತ್ತು ಚಿಲಿಯಲ್ಲಿ ಜಿಪ್ಸಮ್ (gypsum) ಎಂಬ ಎರಡು ಹೈಡ್ರಸ್ ಸಲ್ಫೇಟ್ ಖನಿಜಗಳನ್ನು ಗುರುತಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST- Department of Science and Technology) FIST ಕಾರ್ಯಕ್ರಮದ ಬೆಂಬಲದೊಂದಿಗೆ, ಸುಧಾರಿತ ಲೇಸರ್ ರಾಮನ್ ಸ್ಪೆಕ್ಟ್ರೋಮೀಟರ್ ಉಪಕರಣವನ್ನು ಬಳಸಿ ಈ ಖನಿಜಗಳ ವಿಶಿಷ್ಟ ರೋಹಿತದ ಸಹಿಗಳನ್ನು ವಿಶ್ಲೇಷಿಸಲಾಗಿದೆ. ಕೇವಲ ಉಪಗ್ರಹ ಅಥವಾ ಕಕ್ಷೀಯ ಅವಲೋಕನಗಳಿಂದ ಮಂಗಳವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲದಿರುವುದರಿಂದ, ಇಂತಹ ನಿಖರತೆಯ ಉಪಕರಣಗಳು ಭೂಮಿಯ ಮೇಲಿನ ಖನಿಜಗಳನ್ನು ದೃಢೀಕರಿಸಲು ಅತ್ಯಗತ್ಯವಾಗಿವೆ.
ಮಂಗಳ ಗ್ರಹದ ಇತಿಹಾಸಕ್ಕೆ ಖನಿಜಗಳ ಮಹತ್ವ
ಈ ಹೈಡ್ರಸ್ ಸಲ್ಫೇಟ್ಗಳು ನೀರು ಮತ್ತು ಬಂಡೆಗಳ ನಡುವಿನ ಪುರಾತನ ಪರಸ್ಪರ ಕ್ರಿಯೆಯನ್ನು ನಿರೂಪಿಸುತ್ತವೆ. ಮೆಲಂಟರೈಟ್ ಖನಿಜವು ತಾತ್ಕಾಲಿಕ ಆರ್ದ್ರ, ಆಮ್ಲೀಯ ಮತ್ತು ಆಕ್ಸಿಡೀಕರಣ ಪರಿಸ್ಥಿತಿಗಳಲ್ಲಿ ರೂಪುಗೊಳ್ಳಲಿದ್ದು, ಮಂಗಳದಲ್ಲಿ ಸಂಭವಿಸಿದ ಅಲ್ಪಾವಧಿಯ ನೀರಿನ ಪ್ರಕ್ರಿಯೆಗಳನ್ನು ಸೂಚಿಸುತ್ತದೆ. ಮತ್ತೊಂದೆಡೆ, ಜಿಪ್ಸಮ್ ಖನಿಜವು ಸುದಿರ್ಘ ಜಲೀಯ ಪರಿಸರವನ್ನು ದಾಖಲಿಸುವುದಲ್ಲದೆ, ತನ್ನ ಖನಿಜ ರಚನೆಯೊಳಗೆ ಸಂಭಾವ್ಯ ಜೈವಿಕ ಸಹಿಗಳನ್ನು (biosignatures) ಸಂರಕ್ಷಿಸಿಡುತ್ತದೆ. ಇದು ಪ್ರಾಚೀನ ಜೀವ ಜಾಲದ ಕುರುಹುಗಳನ್ನು ಹುಡುಕುವ ಖಗೋಳ ಜೀವವಿಜ್ಞಾನದ (Astrobiology) ಅಧ್ಯಯನಕ್ಕೆ ಮಹತ್ವದ ದಾರಿಯಾಗಿದೆ.
ಭವಿಷ್ಯದ ಪರಿಶೋಧನೆಗಳು
ಈ ಮಹತ್ವದ ಸಂಶೋಧನೆಗಳನ್ನು ಜರ್ನಲ್ ಆಫ್ ಜಿಯೋಫಿಸಿಕಲ್ ರಿಸರ್ಚ್: ಪ್ಲಾನೆಟ್ಸ್ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಎರಡು ಪ್ರಬಂಧಗಳಾಗಿ ಪ್ರಕಟಿಸಲಾಗಿದೆ. ಈ ಸಂಶೋಧನೆಯು ಭವಿಷ್ಯದ ಮಂಗಳ ಗ್ರಹದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ (Space missions) ಜೀವದ ಕುರುಹುಗಳು ಸಿಗಬಹುದಾದ ಸೂಕ್ತ ಸ್ಥಳಗಳನ್ನು ಆಯ್ಕೆ ಮಾಡಲು ಮಾರ್ಗದರ್ಶನ ನೀಡಲಿದೆ.


