ಭಾನುವಾರ ಸೂರ್ಯಗ್ರಹಣ: ಕರ್ನಾಟಕದಲ್ಲಿ ಖಂಡಗ್ರಾಸ!
ನಾಳೆ ಸೂರ್ಯಗ್ರಹಣ: ಕರ್ನಾಟಕದಲ್ಲಿ ಪಾಶ್ರ್ವ| ಉತ್ತರ ಭಾರತದಲ್ಲಿ ಕಂಕಣ ಗ್ರಹಣ ಗೋಚರ| ಬೆಳಗ್ಗೆ 10.13ರಿಂದ ಮಧ್ಯಾಹ್ನ 1.32ವರೆಗೆ ಗೋಚರ
ನವದೆಹಲಿ(ಜೂ.20): ಇದೇ ಜೂನ್ 21ರ ಭಾನುವಾರ ಅಪರೂಪದ ‘ಕಂಕಣ ಸೂರ್ಯಗ್ರಹಣ’ ಹಾಗೂ ‘ಪಾಶ್ರ್ವ ಸೂರ್ಯಗ್ರಹಣ’ ಸುಮಾರು ಮೂರೂವರೆ ತಾಸು ಸಂಭವಿಸಲಿದೆ.
ಭಾರತ, ಆಫ್ರಿಕಾ, ಚೀನಾ, ಯುರೋಪ್, ಆಸ್ಪ್ರೇಲಿಯಾ, ಪಾಕಿಸ್ತಾನಗಳಲ್ಲಿ ಗ್ರಹಣ ಗೋಚರಿಸಲಿದೆ. ಸೂರ್ಯನು ಗ್ರಹಣದ ಸಂದರ್ಭದಲ್ಲಿ ಭಾರತದ ರಾಜಸ್ಥಾನ, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಹಲವು ಭಾಗಗಳಲ್ಲಿ ಕಂಕಣಾಕೃತಿಯಲ್ಲಿ ಕಾಣಲಿದ್ದಾನೆ. ಕರ್ನಾಟಕ ಸೇರಿದಂತೆ ಉಳಿದ ಭಾಗಗಳಲ್ಲಿ ಖಂಡಗ್ರಾಸ (ಪಾಶ್ರ್ವ) ಸೂರ್ಯಗ್ರಹಣ ಗೋಚರಿಸಲಿದೆ.
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ, ಬಾದಾಮಿಯ ಬನಶಂಕರಿಯಲ್ಲಿ ಪ್ರವೇಶ ನಿಶಿದ್ಧ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೂಡ ಕಂಕಣ ಸೂರ್ಯಗ್ರಹಣ ಕಂಡಿತ್ತು. ಮುಂದಿನ ಸೂರ್ಯಗ್ರಹಣ ಡಿ.14ರಂದು ಸಂಭವಿಸಲಿದೆಯಾದರೂ ಅದು ಭಾರತದಲ್ಲಿ ಗೋಚರವಿಲ್ಲ.
ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಸಂಪೂರ್ಣ ಆವರಿಸಿದಾಗ ಖಗ್ರಾಸ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯ-ಭೂಮಿ ನಡುವೆ ಚಂದ್ರನು ನೇರ ರೇಖೆಯಲ್ಲಿ ಹಾದು ಹೋಗದಿದ್ದಾಗ ಪಾಶ್ರ್ವ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯನು ವಿಶಿಷ್ಟವಾಗಿ ಕಂಕಣ (ಬಳೆ) ಆಕಾರದಲ್ಲಿ ಕಾಣುವುದನ್ನು ಕಂಕಣ ಗ್ರಹಣ ಎನ್ನಲಾಗುತ್ತದೆ.
ಗ್ರಹಣದ ವೇಳೆ:
ಪಾಶ್ರ್ವ ಸೂರ್ಯಗ್ರಹಣ ಬೆಂಗಳೂರಿನಲ್ಲಿ ಬೆಳಗ್ಗೆ 10.13ಕ್ಕೆ ಆರಂಭವಾಗಿ ಮಧ್ಯಾಹ್ನ 1.32ಕ್ಕೆ ಮೋಕ್ಷವಾಗುತ್ತದೆ. ಮೈಸೂರಿನಲ್ಲಿ ಬೆಳಗ್ಗೆ 10.10ರಿಂದ 1.26ರವರೆಗೆ, ಧಾರವಾಡದಲ್ಲಿ 10.04ರಿಂದ 1.28ರವರೆಗೆ, ಬೆಳಗಾವಿಯಲ್ಲಿ 10.03ರಿಂದ 1.27ರವರೆಗೆ, ಕಲಬುರಗಿಯಲ್ಲಿ 10.09ರಿಂದ 1.38ರವರೆಗೆ, ಮಂಗಳೂರಿನಲ್ಲಿ 10.05ರಿಂದ 1.22ರವರೆಗೆ ಕಾಣಲಿದೆ.
ಜೂ.21ರ ಖಂಡಗ್ರಾಸ ಸೂರ್ಯ ಗ್ರಹಣ: ರಾಶಿ ಫಲ ಹೇಗಿದೆ?
ಕಂಕಣಾಕೃತಿಯಲ್ಲಿ ಗ್ರಹಣವು ರಾಜಸ್ಥಾನದ ಸೂರತ್‌ಗಢದಲ್ಲಿ ಬೆಳಗ್ಗೆ 10.14ರಿಂದ ಮಧ್ಯಾಹ್ನ 1.39ರವರೆಗೆ, ಹರ್ಯಾಣದಲ್ಲಿ ಸಿರ್ಸಾದಲ್ಲಿ 10.16ರಿಂದ 1.42ರವರೆಗೆ, ಕುರುಕ್ಷೇತ್ರದಲ್ಲಿ 10.21ರಿಂದ 1.47ರವರೆಗೆ, ಯಮುನಾನಗರದಲ್ಲಿ 10.22ರಿಂದ 1.48ರವರೆಗೆ, ಉತ್ತರಾಖಂಡದ ಜೋಶಿಮಠದಲ್ಲಿ 10.27ರಿಂದ 1.54ರವರೆಗೆ ಕಾಣಲಿದೆ.