ಭಾರತೀಯ ಸೇನೆಯು ಮೂರು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಸೇರಿಸಿಕೊಳ್ಳುವ ಮೂಲಕ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಕ್ಷಿಪಣಿಗಳು ಭಾರತದಲ್ಲೇ ನಿರ್ಮಾಣವಾಗಿದ್ದು, ವೈಮಾನಿಕ ಅಪಾಯಗಳನ್ನು ತಡೆಯಲು ಸಮರ್ಥವಾಗಿವೆ.

ಗಿರೀಶ್ ಲಿಂಗಣ್ಣ,ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತೀಯ ಸೇನೆ ತನ್ನ ಬತ್ತಳಿಕೆಗೆ ಮೂರು ಆಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆ ಹಾಕಿಕೊಂಡಿದೆ. ಈ ಕ್ಷಿಪಣಿಗಳು ಸಂಪೂರ್ಣವಾಗಿ ಭಾರತೀಯ ನಿರ್ಮಾಣದವಾಗಿದ್ದು, ಎಲ್ಲಾ ರೀತಿಯ ವೈಮಾನಿಕ ಅಪಾಯಗಳನ್ನು ನಿವಾರಿಸಲು ಸಮರ್ಥವಾಗಿವೆ.

ಈ ವ್ಯವಸ್ಥೆಗಳಲ್ಲಿ ಭಾರತ - ಇಸ್ರೇಲ್ ನಿರ್ಮಾಣದ ಎಂಆರ್‌ಎಸ್ಎಎಂ (ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್), ಭಾರತೀಯ ನಿರ್ಮಾಣದ ಕ್ಯುಆರ್‌ಎಸ್ಎಎಂ (ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್), ಮತ್ತು ವಿಶೋರದ್ಸ್ (VSHORADS - ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್) ಸೇರಿವೆ.

ಇವೆಲ್ಲ ಕ್ಷಿಪಣಿಗಳೂ ಸೇರಿ, ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸಿದ್ದು, ಆಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಯಶಸ್ಸಿಗೆ ಸಾಕ್ಷಿಯಾಗಿದೆ.

ಎಂಆರ್‌ಎಸ್ಎಎಂ (ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್): ಭಾರತೀಯ ಸೇನೆ ಇಸ್ರೇಲ್ ಸಹಯೋಗದಿಂದ ನಿರ್ಮಿಸಿರುವ ಕ್ಷಿಪಣಿ ವ್ಯವಸ್ಥೆಯನ್ನು ಎಪ್ರಿಲ್ 3 ಮತ್ತು 4ರಂದು ಪರೀಕ್ಷಿಸಿತು. ಈ ವ್ಯವಸ್ಥೆಯ ನಿರ್ಮಾಣದಲ್ಲಿ ಕಾರ್ಯಾಚರಿಸಿದ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಸಂಸ್ಥೆ ಈ ಸುದ್ದಿಯನ್ನು ಖಾತ್ರಿಪಡಿಸಿದೆ.

ಇಸ್ರೇಲಿನಲ್ಲಿ ಬರಾಕ್ 8 ಎಂದು ಕರೆಯಲ್ಪಡುವ ಈ ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (ಎಂಆರ್‌ಎಸ್ಎಎಂ) ಪರೀಕ್ಷೆಗಳು ಯಶಸ್ವಿಯಾಗಿವೆ. ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಪ್ರಕಾರ, ಈ ಯಶಸ್ಸಿನ ಮೂಲಕ ಭಾರತೀಯ ಸೇನೆ ಎಂಆರ್‌ಎಸ್ಎಎಂ ಅಧಿಕೃತ ಬಳಕೆಗೆ ಸನಿಹವಾಗಿದೆ.

ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಮತ್ತು ಭಾರತದ ಡಿಆರ್‌ಡಿಒ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಎಂಆರ್‌ಎಸ್ಎಎಂ ವ್ಯವಸ್ಥೆ ಮಲ್ಟಿ ಫಂಕ್ಷನ್ ರೇಡಾರ್, ಕಮಾಂಡ್ ಪೋಸ್ಟ್, ಮೊಬೈಲ್ ಲಾಂಚರ್‌ಗಳು, ಮತ್ತು ಬೆಂಬಲ ವಾಹನಗಳನ್ನು ಹೊಂದಿದೆ. ಈ ಕ್ಷಿಪಣಿಗಳನ್ನು ನೆಲದಿಂದ ಮತ್ತು ನೌಕಾಪಡೆಯ ನೌಕೆಗಳಿಂದ ಉಡಾವಣೆಗೊಳಿಸಬಹುದು. ಎಂಆರ್‌ಎಸ್ಎಎಂ ವ್ಯವಸ್ಥೆಯಲ್ಲಿನ ಕ್ಷಿಪಣಿಗಳು 70 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಶತ್ರು ಗುರಿಗಳ ಮೇಲೆ ದಾಳಿ ನಡೆಸಬಲ್ಲವಾಗಿದ್ದು, ಇದು ಭಾರತೀಯ ಸೇನೆ ಮತ್ತು ನೌಕಾಪಡೆ ಎರಡಕ್ಕೂ ಶಕ್ತಿಶಾಲಿ ರಕ್ಷಣಾ ಆಯ್ಕೆಯಾಗಿದೆ.

ಪರೀಕ್ಷೆಯ ಕುರಿತು ಮಾಹಿತಿ ನೀಡಿದ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ), ಪರೀಕ್ಷೆಗಳಲ್ಲಿ ಬೇರೆ ಬೇರೆ ವೇಗ ಮತ್ತು ಎತ್ತರಗಳಲ್ಲಿ ಹಾರಾಡುತ್ತಿದ್ದ ನಾಲ್ಕು ವೈಮಾನಿಕ ಗುರಿಗಳನ್ನು ಮೇಲೆ ದಾಳಿ ನಡೆಸಲಾಯಿತು ಎಂದಿದೆ.

ಐಎಐ ಈ ಕ್ಷಿಪಣಿ ವ್ಯವಸ್ಥೆ ಎಲ್ಲ ಗುರಿಗಳ ಮೇಲೂ ದಾಳಿ ನಡೆಸಿ, ಅವುಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿ, ನೈಜ ಯುದ್ಧದ ಸನ್ನಿವೇಶದಲ್ಲಿ ಬಳಸಲು ಸರ್ವ ಸನ್ನದ್ಧವಾಗಿದೆ ಎಂದು ಮಾಹಿತಿ ನೀಡಿದೆ.

ಭಾರತ ಈ ಕ್ಷಿಪಣಿ ವ್ಯವಸ್ಥೆಯನ್ನು 2017ರಲ್ಲಿ ಖರೀದಿಸಿದ್ದು, ಆ ಬಳಿಕ ಹಲವಾರು ಬಾರಿ ಅದನ್ನು ಪರೀಕ್ಷೆಗೆ ಒಳಪಡಿಸಿದೆ. ಎಂಆರ್‌ಎಸ್ಎಎಂ ಅನ್ನು ಈಗಾಗಲೇ ಭಾರತೀಯ ನೌಕಾಪಡೆ ಮತ್ತು ವಾಯು ಸೇನೆಗಳು ಬಳಸುತ್ತಿವೆ. ಇನ್ನು ಭೂಸೇನೆಗೂ ಈ ವ್ಯವಸ್ಥೆಯನ್ನು ಅಳವಡಿಸುವ, ಅನುಮತಿ ನೀಡುವ ನಿಟ್ಟಿನಲ್ಲಿ ಇತ್ತೀಚಿನ ಪರೀಕ್ಷೆಗಳನ್ನು ನಡೆಸಲಾಗಿದೆ.

ಐಎಐ ಅಧ್ಯಕ್ಷ ಮತ್ತು ಸಿಇಒ ಆಗಿರುವ ಬೊವಾಜ಼್ ಲೆವಿ ಅವರು ಈ ಯಶಸ್ವಿ ಪರೀಕ್ಷೆಗಳು ಭಾರತ ಮತ್ತು ಇಸ್ರೇಲ್ ಸಂಬಂಧವನ್ನು ಇನ್ನಷ್ಟು ಬಲಪಡಿಸಿವೆ ಎಂದಿದ್ದಾರೆ. ಈ ಬೆಳವಣಿಗೆ ಭಾರತದ ರಕ್ಷಣಾ ಸಚಿವಾಲಯ, ಭಾರತ ಮತ್ತು ಇಸ್ರೇಲ್‌ಗಳ ವಿವಿಧ ಸಂಸ್ಥೆಗಳ ನಡುವಿನ ತಂತ್ರಜ್ಞಾನ ಸಹಯೋಗಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ಐದು ಎಂಆರ್‌ಎಸ್ಎಎಂ ಕ್ಷಿಪಣಿ ರೆಜಿಮೆಂಟ್‌ಗಳನ್ನು ಚೀನಾ ಮತ್ತು ಪಾಕಿಸ್ತಾನದ ಜೊತೆಗಿನ ಗಡಿಯಲ್ಲಿ ಅಳವಡಿಸಲು ಯೋಜಿಸುತ್ತಿದೆ. ಪ್ರತಿಯೊಂದು ರೆಜಿಮೆಂಟ್ ಸಹ ಎಂಟು ಲಾಂಚರ್‌ಗಳನ್ನು ಹೊಂದಿರಲಿದ್ದು, ಪ್ರತಿಯೊಂದು ಲಾಂಚರ್ ತಲಾ ಎಂಟು ಕ್ಷಿಪಣಿಗಳನ್ನು ಹೊಂದಿರಲಿದೆ.

ಈ ಎಂಆರ್‌ಎಸ್ಎಎಂ ಕ್ಷಿಪಣಿಗಳು ಹಳೆಯದಾದ, ರಷ್ಯನ್ ನಿರ್ಮಿತ ಕ್ವಾದ್ರಾತ್ ಮತ್ತು ಒಎಸ್ಎ - ಎಕೆಎಂ ವಾಯು ರಕ್ಷಣಾ ವ್ಯವಸ್ಥೆಗಳ ಬದಲಿಗೆ ಕಾರ್ಯ ನಿರ್ವಹಿಸಲಿವೆ. ಅವುಗಳನ್ನು ಭಾರತ 1970 - 1980ರ ದಶಕದಲ್ಲಿ ಸೇವೆಗೆ ನಿಯೋಜಿಸಿತ್ತು.

ಕ್ಯುಆರ್‌ಎಸ್ಎಎಂ (ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್): ಕ್ಯುಆರ್‌ಎಸ್ಎಎಂ (ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್) ಎನ್ನುವುದು ಭಾರತದ ಡಿಆರ್‌ಡಿಒ ಚಲಿಸುವ ಯುದ್ಧ ಟ್ಯಾಂಕ್‌ಗಳು ಮತ್ತು ವಾಹನಗಳನ್ನು ಶತ್ರುಗಳ ವಾಯುದಾಳಿಯಿಂದ ರಕ್ಷಿಸುವ ಸಲುವಾಗಿ ಅಭಿವೃದ್ಧಿ ಪಡಿಸಿರುವ ಆಧುನಿಕ ಕ್ಷಿಪಣಿ ವ್ಯವಸ್ಥೆಯಾಗಿದೆ.

ಪ್ರಮುಖ ವೈಶಿಷ್ಟ್ಯಗಳು

ಕ್ಯಾನಿಸ್ಟರ್ ಆಧಾರಿತ ಸಿಸ್ಟಮ್: ಕ್ಯುಆರ್‌ಎಸ್ಎಎಂ ಅನ್ನು ಕ್ಯಾನಿಸ್ಟರ್ ಎನ್ನುವ ಒಂದು ವಿಶೇಷ ಸಂಗ್ರಾಹಕದಲ್ಲಿ ಸಂಗ್ರಹಿಸಿ, ಉಡಾವಣೆಗೊಳಿಸಲಾಗುತ್ತದೆ. ಕ್ಯಾನಿಸ್ಟರ್ ಎನ್ನುವುದು ಒಂದು ಭದ್ರವಾಗಿ ಮುಚ್ಚಿಡುವ ವ್ಯವಸ್ಥೆಯಾಗಿದ್ದು, ಕ್ಷಿಪಣಿಯನ್ನು ಧೂಳು, ತೇವಾಂಶ, ಮತ್ತು ತೀಕ್ಷ್ಣ ವಾತಾವರಣದಿಂದ ರಕ್ಷಿಸುತ್ತದೆ.

ಕ್ಯಾನಿಸ್ಟರ್ ತನ್ನ ಒಳಗಿನ ವಾತಾವರಣವನ್ನು ನಿಯಂತ್ರಿಸಿ, ಕ್ಷಿಪಣಿಯನ್ನು ಸಂಗ್ರಹಿಸುವುದು ಮತ್ತು ಸಾಗಿಸುವುದು ಸುರಕ್ಷಿತವಾಗುವಂತೆ ಮಾಡುತ್ತದೆ. ಅದರೊಡನೆ, ಕ್ಷಿಪಣಿಯ ಬಾಳಿಕೆಯನ್ನೂ ಹೆಚ್ಚಿಸಿ, ಅಗತ್ಯ ಬಿದ್ದಾಗ ಕ್ಷಿಪ್ರವಾಗಿ ಉಡಾಯಿಸಲು ನೆರವಾಗುತ್ತದೆ.

ಕ್ಷಿಪ್ರ ಮತ್ತು ಚಲನಶೀಲ: ಈ ಕ್ಷಿಪಣಿ ವ್ಯವಸ್ಥೆ ಚಲಿಸುತ್ತಿರುವಾಗಲೂ ಶತ್ರು ಗುರಿಯನ್ನು ಗುರುತಿಸಿ, ಹಿಂಬಾಲಿಸುವ ಸಾಮರ್ಥ್ಯ ಹೊಂದಿದೆ. ಇದು ಹಾರಾಡುವಾಗಲೂ ಒಂದು ಕ್ಷಣ ನಿಂತು, ಗುರಿಯತ್ತ ದಾಳಿ ನಡೆಸಬಲ್ಲದು. ಆ ಮೂಲಕ, ಇದು ಕ್ಷಿಪ್ರ ಮಿಲಿಟರಿ ಕಾರ್ಯಾಚರಣೆಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.

ವ್ಯಾಪ್ತಿ ಮತ್ತು ಬಳಕೆ: ಕ್ಯುಆರ್‌ಎಸ್ಎಎಂ ಒಂದು ಕಡಿಮೆ ವ್ಯಾಪ್ತಿಯ ಕ್ಷಿಪಣಿಯಾಗಿದ್ದು, 25ರಿಂದ 30 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.

ಇದು ಭಾರತೀಯ ಸೇನೆಯ ಶಸ್ತ್ರಸಜ್ಜಿತ ವಾಹನಗಳೊಡನೆ ಸಾಗಿಸುವಂತೆ ವಿನ್ಯಾಸಗೊಂಡಿದ್ದು, ಅವುಗಳು ಚಲಿಸುವಾಗ ಈ ಕ್ಷಿಪಣಿ ವ್ಯವಸ್ಥೆ ಅವುಗಳಿಗೆ ವಾಯು ರಕ್ಷಣೆ ಒದಗಿಸುತ್ತವೆ. ಸಂಪೂರ್ಣ ಕ್ಯುಆರ್‌ಎಸ್ಎಎಂ ವ್ಯವಸ್ಥೆಯನ್ನು ವಾಹನಕ್ಕೆ ಅಳವಡಿಸಲಾಗಿದ್ದು, ಇದು ಸಂಪೂರ್ಣ ಚಲನಶೀಲವಾಗಿ, ವಿವಿಧ ರೀತಿಯ ಭೂ ಪ್ರದೇಶಗಳಿಂದಲೂ ಸೂಕ್ತವಾಗಿ ಉಡಾವಣೆಗೊಳ್ಳಬಲ್ಲದು..

ಕ್ಯುಆರ್‌ಎಸ್ಎಎಂ ಹೇಗೆ ಕಾರ್ಯ ನಿರ್ವಹಿಸುತ್ತದೆ?: ಕ್ಯುಆರ್‌ಎಸ್ಎಎಂ ವ್ಯವಸ್ಥೆ ಒಂದು ಸಂಪೂರ್ಣ ಸ್ವಯಂಚಾಲಿತ ಕಮಾಂಡ್ ಮತ್ತು ಕಂಟ್ರೋಲ್ ವ್ಯವಸ್ಥೆಯನ್ನು ಹೊಂದಿದ್ದು, ಅದು ಎಲ್ಲಾ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ.

ಇದು ಎರಡು ರೇಡಾರ್‌ಗಳನ್ನು ಬಳಸುತ್ತಿದ್ದು, ಒಂದು ಪ್ರದೇಶವನ್ನು ಸ್ಕ್ಯಾನ್ ಮಾಡಿದರೆ, ಇನ್ನೊಂದು ರೇಡಾರ್ ಕ್ಷಿಪಣಿಯನ್ನು ನಿರ್ದೇಶಿಸುತ್ತದೆ. ಎರಡೂ ರೇಡಾರ್‌ಗಳು 360 ಡಿಗ್ರಿ ವ್ಯಾಪ್ತಿ ಹೊಂದಿದ್ದು, ಕ್ಷಿಪಣಿ ವ್ಯವಸ್ಥೆ ಚಲನೆಯಲ್ಲಿರುವಾಗಲೂ ಕಾರ್ಯಾಚರಿಸುತ್ತವೆ.

ಇದು ದ್ವಿಮುಖ ಸಂವಹನ ವ್ಯವಸ್ಥೆಯನ್ನು ಹೊಂದಿದ್ದು, ಕ್ಷಿಪಣಿ ಉಡಾವಣೆಗೊಂಡ ಬಳಿಕವೂ ನಿಯಂತ್ರಣ ಘಟಕದೊಡನೆ ಸಂಪರ್ಕ ಹೊಂದಿರುತ್ತದೆ. ಇದು ಕ್ಷಿಪಣಿ ಹಾರಾಡುತ್ತಿರುವಾಗಲೇ ಅದಕ್ಕೆ ನೈಜ ಸಮಯದ ವರದಿ ಮತ್ತು ಗುರಿಯ ದಿಕ್ಕಿನಲ್ಲಿನ ಬದಲಾವಣೆಗಳನ್ನು ತಿಳಿಯಲು ನೆರವಾಗುತ್ತದೆ.

ಕ್ಷಿಪಣಿಯ ಮುಂಭಾಗದಲ್ಲಿ ಒಂದು ವಿಶೇಷ 'ಸೀಕರ್' ಎಂಬ ಸ್ಮಾರ್ಟ್ ಸೆನ್ಸರ್ ಇದ್ದು, ಅದು ಕ್ಷಿಪಣಿಗೆ ಗುರಿಯನ್ನು ಗುರುತಿಸಿ, ಹಾರಾಟದ ಅಂತಿಮ ಹಂತದಲ್ಲಿ ಅದನ್ನು ಲಾಕ್ ಮಾಡಲು ನೆರವಾಗುತ್ತದೆ. ಆ ಮೂಲಕ ಕ್ಷಿಪಣಿ ಅತ್ಯಂತ ನಿಖರವಾಗಿ ಗುರಿಯ ಮೇಲೆ ದಾಳಿ ನಡೆಸುತ್ತದೆ.

ಸಂವಹನ ವ್ಯವಸ್ಥೆ, ಸೀಕರ್, ಮತ್ತು ನಿರ್ದೇಶನ ತಂತ್ರಜ್ಞಾನ ಸೇರಿದಂತೆ ಎಲ್ಲ ತಂತ್ರಜ್ಞಾನಗಳನ್ನೂ ಡಿಆರ್‌ಡಿಒ ಭಾರತದಲ್ಲೇ ಅಭಿವೃದ್ಧಿ ಪಡಿಸಿದ್ದು, ರಕ್ಷಣಾ ತಂತ್ರಜ್ಞಾನದಲ್ಲಿ ಹೆಚ್ಚುತ್ತಿರುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ರಕ್ಷಣಾ ಮೂಲಗಳ ಪ್ರಕಾರ, ಭಾರತೀಯ ಸೇನೆ ಈ ವ್ಯವಸ್ಥೆಯಲ್ಲಿ ಒಂದಷ್ಟು ಸುಧಾರಣೆಗಳು ಬೇಕು ಎಂದಿದೆ. ಅದರೊಡನೆ, ಒಂದಷ್ಟು ತಾಂತ್ರಿಕ ಸಮಸ್ಯೆಗಳನ್ನೂ ಪರಿಹರಿಸಿ, ಕ್ಷಿಪಣಿ ವ್ಯವಸ್ಥೆಯನ್ನು ಇನ್ನಷ್ಟು ನಂಬಿಕಾರ್ಹವಾಗಿಸುವಂತೆ ಸೂಚಿಸಿದೆ. ಡಿಆರ್‌ಡಿಒ ಈಗ ಈ ಸುಧಾರಣೆಗಳತ್ತ ಕಾರ್ಯ ನಿರ್ವಹಿಸುತ್ತಿದೆ.

ಇಲ್ಲಿಯ ತನಕ, ಸೆಪ್ಟೆಂಬರ್ 2022ರಲ್ಲಿ ಮತ್ತು ಎಪ್ರಿಲ್ 2023ರಲ್ಲಿ ಕ್ಷಿಪಣಿ ವ್ಯವಸ್ಥೆಯ ಎರಡು ಪರೀಕ್ಷೆಗಳನ್ನು ನಡೆಸಲಾಗಿದೆ. ಮುಂದಿನ ಪರೀಕ್ಷೆ ಕ್ಷಿಪಣಿ ವ್ಯವಸ್ಥೆ ಅತ್ಯಂತ ಕರಾರುವಾಕ್ಕಾಗಿ ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸಲಿದೆ. ಆ ಮೂಲಕ ಕ್ಷಿಪಣಿ ವ್ಯವಸ್ಥೆ ಯುದ್ಧದ ಸನ್ನಿವೇಶದಲ್ಲಿ ಬಳಸಲು ಸೂಕ್ತವಾಗುತ್ತದೆ.

ವಿಶೋರದ್ಸ್ (ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್): ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್ (VSHORADS) ಒಂದು ಆಧುನಿಕ, ಕೈಯಲ್ಲಿ ಹಿಡಿಯಬಲ್ಲ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಕಡಿಮೆ ಎತ್ತರದಲ್ಲಿ ಹಾರಾಡುವ ಶತ್ರುಗಳ ಏರ್‌ಕ್ರಾಫ್ಟ್‌ಗಳನ್ನು ಹೊಡೆದುರುಳಿಸಲು ಬಳಕೆಯಾಗುತ್ತದೆ. ಇದು ಸಾಗಿಸಲು ಮತ್ತು ಭೂಮಿಯಲ್ಲಿರುವ ಸೈನಿಕರಿಗೆ ಬಳಸಲು ಸುಲಭ ವ್ಯವಸ್ಥೆಯಾಗಿದೆ.

ಇದನ್ನು ಶತ್ರುಗಳ ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಇತರ ಕಡಿಮೆ ಎತ್ತರದಲ್ಲಿ ಹಾರಾಡುವ ಏರ್‌ಕ್ರಾಫ್ಟ್‌ಗಳನ್ನು ಹೊಡೆದುರುಳಿಸಲು ವಿನ್ಯಾಸಗೊಳಿಸಲಾಗಿದೆ. ಈ ಆಧುನಿಕ ವ್ಯವಸ್ಥೆ ಭಾರತೀಯ ಸೇನೆಗೆ ಆಧುನಿಕ ಅಪಾಯಗಳನ್ನು ಎದುರಿಸಲು ಸೂಕ್ತವಾಗಿದೆ.

ವಿಶೋರದ್ಸದ ಕ್ಷಿಪಣಿ 20.5 ಕೆಜಿ ತೂಕ ಹೊಂದಿದ್ದು, 2 ಮೀಟರ್ ಉದ್ದವಿದೆ. ಇದು 90 ಎಂಎಂ ವ್ಯಾಸ ಹೊಂದಿದ್ದು, 32 ಸೆಂಟಿಮೀಟರ್ ರೆಕ್ಕೆಯನ್ನು ಹೊಂದಿದೆ. ತನ್ನೊಳಗೆ 2 ಕೆಜಿಯಷ್ಟು ಸಿಡಿತಲೆ ಹೊಂದಿರುವ ಕ್ಷಿಪಣಿ, ಪ್ರಾಕ್ಸಿಮಿಟಿ ಫ್ಯೂಸ್ ಎನ್ನುವ ವಿಶೇಷ ಫ್ಯೂಸ್ ಬಳಸುತ್ತದೆ.

ಪ್ರಾಕ್ಸಿಮಿಟಿ ಫ್ಯೂಸ್ ಎನ್ನುವುದು ಒಂದು ಸ್ಮಾರ್ಟ್ ಸ್ವಿಚ್ ಆಗಿದ್ದು, ಕ್ಷಿಪಣಿ ಗುರಿಯನ್ನು ತಲುಪಲು ಸಾಧ್ಯವಾಗದಿದ್ದರೂ, ಅದರ ಸನಿಹಕ್ಕೆ ತೆರಳಿದಾಗ ಕ್ಷಿಪಣಿಯನ್ನು ಸ್ಫೋಟಿಸುತ್ತದೆ. ಇದು ಹೆಲಿಕಾಪ್ಟರ್‌ಗಳು, ಡ್ರೋನ್‌ಗಳಂತಹ ಚಲಿಸುವ ಸಣ್ಣ ಗುರಿಗಳನ್ನು ನಾಶಪಡಿಸಲು ಸೂಕ್ತವಾಗಿದೆ.

ವಿಶೋರದ್ಸ್ 250ಮೀಟರ್‌ನಿಂದ 6 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಗರಿಷ್ಠ 1.5 ಮ್ಯಾಕ್ (ಪ್ರತಿ ಗಂಟೆಗೆ ಅಂದಾಜು 1,850 ಕಿಲೋಮೀಟರ್) ವೇಗದಲ್ಲಿ ಸಾಗುತ್ತದೆ. ಇದನ್ನು ಭುಜದ ಮೇಲಿನಿಂದ ಅಥವಾ ನೆಲದ ಮೇಲೆ ಅಳವಡಿಸಿರುವ ಟ್ರೈಪಾಡ್ ಮೂಲಕ ಉಡಾಯಿಸಲಾಗುತ್ತದೆ. ಆ ಮೂಲಕ, ಇದು ವಿವಿಧ ಯುದ್ಧ ಸನ್ನಿವೇಶಗಳಲ್ಲಿ ಬಳಸಲು ಸೂಕ್ತ ಆಯ್ಕೆಯಾಗಿದೆ. ಇದು ಹೊಂದಿರುವ ಆಧುನಿಕ ವೈಶಿಷ್ಟ್ಯಗಳು ಭಾರತಕ್ಕೆ ಕೆಳಹಂತದಲ್ಲಿ ಹಾರಿಬರುವ ಅಪಾಯಗಳ ವಿರುದ್ಧ ಮೇಲುಗೈ ಒದಗಿಸುತ್ತದೆ.

ಇಸ್ರೋ ಉಡಾವಣೆಗೆ ಈಗ ಶತಕ ಸಂಭ್ರಮ: ಗಿರೀಶ್‌ ಲಿಂಗಣ್ಣ

ಫೆಬ್ರವರಿ 1, ಶನಿವಾರದಂದು ಹೇಳಿಕೆ ನೀಡಿದ್ದ ಭಾರತದ ರಕ್ಷಣಾ ಸಚಿವಾಲಯ ಒಡಿಶಾದ ಚಂಡೀಪುರ ಕರಾವಳಿಯಲ್ಲಿ ನಡೆದ ಮೂರು ಪರೀಕ್ಷಾ ಪ್ರಯೋಗಗಳಲ್ಲಿ ಕ್ಷಿಪಣಿ ಕೆಳ ಹಂತದಲ್ಲಿ ಹಾರಿ ಬರುವ ಮೂರು ವಿವಿಧ ಗುರಿಗಳನ್ನು ಯಶಸ್ವಿಯಾಗಿ ನಾಶಪಡಿಸಿತು ಎಂದು ಮಾಹಿತಿ ನೀಡಿದೆ.

ಭಾರತೀಯ ನೌಕಾ ದಿನ 2024: ಅಸಾಧಾರಣ ಪ್ರಗತಿ, ಕಾರ್ಯತಂತ್ರದ ಶಕ್ತಿಯತ್ತ ಭಾರತೀಯ ನೌಕಾಪಡೆಯ ಹಾದಿ

ಮೂರು ಪರೀಕ್ಷೆಗಳಲ್ಲಿ ಕ್ಷಿಪಣಿ ಅತ್ಯಂತ ಕಡಿಮೆ ಎತ್ತರದಲ್ಲಿ, ಡ್ರೋನ್ ಮಾದರಿಯಲ್ಲಿ ಹಾರಾಡಿ, ಕನಿಷ್ಠ ಉಷ್ಣತಾ ಸಂಕೇತ ಹೊರಸೂಸುತ್ತಿದ್ದ, ಪತ್ತೆಹಚ್ಚಲು ಸವಾಲಾಗಿದ್ದ ಗುರಿಗಳನ್ನು ನಾಶಪಡಿಸಿ, ತನ್ನ ಸಾಮರ್ಥ್ಯ ಪ್ರದರ್ಶಿಸಿತು. ಕ್ಷಿಪಣಿ ವಿವಿಧ ಸನ್ನಿವೇಶಗಳಲ್ಲೂ ಯಶಸ್ವಿಯಾಗಿ ಕಾರ್ಯಾಚರಿಸಿ, ನಿಖರವಾಗಿ ಗುರಿಗಳನ್ನು ನಾಶಪಡಿಸಿತು.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)