ಮಾನವಸಹಿತ ಗಗನಯಾನಕ್ಕೆ ಮುನ್ನುಡಿ ಬರೆದ ಭಾರತ: ಇಸ್ರೋ ಮಹತ್ ವಿಕ್ರಮ
ಉಡ್ಡಯನ ಹಾಗೂ ಗಗನಯಾನ ನೌಕೆ ಇಳಿಸುವ ಪರೀಕ್ಷೆ ಯಶಸ್ವಿಯಾಗುತ್ತಿದ್ದಂತೆ ವಿಜ್ಞಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಚಂದ್ರಯಾನ ಬಳಿಕ ಇಸ್ರೋಗೆ ಮತ್ತೊಂದು ಹಿರಿಮೆ ಮುಡಿಗೇರಿತು.
ಶ್ರೀಹರಿಕೋಟ (ಅಕ್ಟೋಬರ್ 22, 2023): 2025ಕ್ಕೆ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸುವ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮಹತ್ವದ ಪರೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಆರಂಭಿಕ ಅಡ್ಡಿಗಳ ಬಳಿಕ ಯಶಸ್ವಿಯಾಗಿದೆ. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುವಾಗ ಅನೂಹ್ಯ ತೊಂದರೆ ಎದುರಾದರೆ, ಅಂತಹ ಸಂದರ್ಭದಲ್ಲಿ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವುದೇ ಈ ಪ್ರಯೋಗದ ಬಹುಮುಖ್ಯ ಉದ್ದೇಶ.
ಆರಂಭಿಕ ಅಡ್ಡಿ, ಆತಂಕಗಳ ನಡುವೆ ಎರಡು ತಾಸು ವಿಳಂಬವಾಗಿ ಇಸ್ರೋ ವಿಜ್ಞಾನಿಗಳು ನಡೆಸಿದ ಪ್ರಯೋಗ ನಿರೀಕ್ಷೆಯಂತೆ ಸುಸೂತ್ರವಾಗಿ ನಡೆಯಿತು. ಉಡ್ಡಯನ ಹಾಗೂ ಗಗನಯಾನ ನೌಕೆ ಇಳಿಸುವ ಪರೀಕ್ಷೆ ಯಶಸ್ವಿಯಾಗುತ್ತಿದ್ದಂತೆ ವಿಜ್ಞಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಚಂದ್ರಯಾನ ಬಳಿಕ ಇಸ್ರೋಗೆ ಮತ್ತೊಂದು ಹಿರಿಮೆ ಮುಡಿಗೇರಿತು. ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು.
ಇದನ್ನು ಓದಿ: ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನ ಮಿಷನ್ ಪರೀಕ್ಷಾರ್ಥ ಉಡಾವಣೆ ಮುಂದೂಡಿಕೆ: ಕಾರಣ ಹೀಗಿದೆ..
ಅಪಾಯದಿಂದ ಪಾರು ಮಾಡುವ ಉದ್ದೇಶ:
ಗಗನಯಾತ್ರಿಗಳ ವಾಹನ (ಕ್ರ್ಯೂ ಮಾಡ್ಯೂಲ್) ಹಾಗೂ ಗಗನಯಾತ್ರಿಗಳನ್ನು ಅಪಾಯದಿಂದ ಪಾರು ಮಾಡುವ ವ್ಯವಸ್ಥೆ (ಕ್ಯ್ರೂ ಎಸ್ಕೇಪ್ ಮಾಡ್ಯೂಲ್)ಯನ್ನು ಶನಿವಾರ ಇಸ್ರೋ ಪ್ರಯೋಗ ಮಾಡಿತು.
ಇವನ್ನು ಹೊತ್ತ ಟಿವಿ-ಡಿ1 (ಪರೀಕ್ಷಾರ್ಥ ರಾಕೆಟ್) ಬೆಳಗ್ಗೆ 8ಕ್ಕೆ ಉಡಾವಣೆಯಾಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣ ಉಡಾವಣೆಯನ್ನು ಮೊದಲು ಬೆಳಗ್ಗೆ 8.30ಕ್ಕೆ ಹಾಗೂ ಬಳಿಕ ಇನ್ನೂ 15 ನಿಮಿಷ ಮುಂದೂಡಲಾಯಿತು. ಇನ್ನು ಉಡಾವಣೆ ಆರಂಭಕ್ಕೆ ಕೇವಲ 4 ಸೆಕೆಂಡ್ ಇದ್ದಾಗ, ಸಣ್ಣ ಸಮಸ್ಯೆಯೊಂದು ಕಾಣಿಸಿಕೊಂಡು ಉಡಾವಣೆ ಸ್ಥಗಿತಗೊಂಡಿತು. ಶರವೇಗದಲ್ಲಿ ಅದನ್ನು ವಿಜ್ಞಾನಿಗಳು ಬಗೆಹರಿಸಿದರು. ಬಳಿಕ ರಾಕೆಟ್‌ಗೆ ಅನಿಲ ತುಂಬಲಾಯಿತು. ಸ್ವಯಂಚಾಲಿತ ಉಡಾವಣೆ ವ್ಯವಸ್ಥೆ ಸಜ್ಜುಗೊಳಿಸಲಾಯಿತು. ನೌಕೆ ಸುಸ್ಥಿತಿಯಲ್ಲಿರುವುದನ್ನು ಗಮನದಲ್ಲಿರಿಸಿಕೊಂಡು ಉಡಾವಣೆ ಮಾಡಲಾಯಿತು.
ಇದನ್ನೂ ಓದಿ: ಚಂದ್ರಯಾನ ಆಯ್ತು, ಈಗ ಬಾಹ್ಯಾಕಾಶಕ್ಕೆ ಮಹಿಳಾ ರೋಬೋಟ್ ಕಳಿಸಲಿದೆ ಭಾರತ!
34.9 ಮೀಟರ್ ಎತ್ತರದ ಟಿವಿ-ಡಿ1 ಉಡ್ಡಯನ ವಾಹಕ ಬೆಳಗ್ಗೆ 10ರ ವೇಳೆ ಉಡಾವಣೆಗೊಂಡಿತು. 12 ಕಿ.ಮೀ. ಎತ್ತರಕ್ಕೆ ಹೋದಾಗ ತಾಂತ್ರಿಕ ದೋಷ ಕಾಣಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದರಂತೆ ಆ ದೋಷ ಕಾಣಿಸಿಕೊಂಡಾಗ ಕ್ರ್ಯೂ ಎಸ್ಕೇಪ್ ಮಾಡ್ಯೂಲ್ 5 ಕಿ.ಮೀ. ದೂರಕ್ಕೆ ಕ್ರ್ಯೂ ಮಾಡ್ಯೂಲ್ ಅನ್ನು ಒಯ್ದು, ಯಶಸ್ವಿಯಾಗಿ ಪ್ರತ್ಯೇಕಗೊಂಡಿತು. ಪ್ಯಾರಾಚೂಟ್‌ಗಳ ಸಹಾಯದಿಂದ ಕ್ರ್ಯೂ ಮಾಡ್ಯೂಲ್ ಸಮುದ್ರಕ್ಕೆ ಬಿತ್ತು. ಕ್ರ್ಯೂ ಎಸ್ಕೇಪ್ ಮಾಡ್ಯೂಲ್ ಕೂಡ ಸ್ವಲ್ಪದೂರದಲ್ಲಿ ಸಮುದ್ರದಲ್ಲಿ ಬಿತ್ತು. ಎರಡನ್ನೂ ಚೆನ್ನೈ ಬಂದರಿಗೆ ತರಲಾಯಿತು.
ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿ.ಮೀ. ಎತ್ತರದ ಅಂತರಿಕ್ಷಕ್ಕೆ ಕರೆದೊಯ್ದು, 3 ದಿನಗಳ ಬಳಿಕ ಭೂಮಿಗೆ ಕರತರುವುದೇ ‘ಗಗನಯಾನ’ ಯೋಜನೆ. 2025ಕ್ಕೆ ಈ ಪ್ರಯೋಗವನ್ನು ನಡೆಸಲು ಇಸ್ರೋ ಮುಂದಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಶನಿವಾರದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.
ಇದನ್ನೂ ಓದಿ: Chandrayaan 3 ಯಶಸ್ಸಿನಲ್ಲಿ ಈ ಎಂಜಿನಿಯರಿಂಗ್ ಕಾಲೇಜಿನ ಪಾತ್ರವೇನು ನೋಡಿ..!
ಏನಿದು ಕ್ರ್ಯೂ ಮಾಡ್ಯೂಲ್?:
ಗಗನಯಾತ್ರೆ ವೇಳೆ ಗಗನಯಾತ್ರಿಗಳು ಉಳಿದುಕೊಳ್ಳುವ ಕೋಶ. ಅಲ್ಲಿ ಭೂಮಿಯಂತಹ ವಾತಾವರಣ ಇರುತ್ತದೆ. ಜೀವ ರಕ್ಷಕ ವ್ಯವಸ್ಥೆ ಕೂಡ ಇರುತ್ತದೆ.
ಮುಂದೇನು?
ಈಗ ಗಗನಯಾನ ತಾಲೀಮು ಯಶಸ್ವಿಯಾಗಿರುವ ಕಾರಣ ಮುಂದಿನ ದಿನಗಳಲ್ಲಿ ಮಾನವ ರಹಿತ ನೈಜ ಗಗನಯಾನ ನಡೆಯಲಿದೆ. ಅದರ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಬಳಿಕ ಇದರ ಯಶಸ್ಸು ಆಧರಿಸಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸೂಚಿಸಿದಂತೆ 2025ಕ್ಕೆ ಮೊದಲ ಮಾನವ ಸಹಿತ ಗಗನಯಾನ ನಡೆಯಲಿದೆ.
ಇದನ್ನೂ ಓದಿ: 615 ಕೋಟಿಯ Chandrayaan 3 ಸಕ್ಸಸ್ ಎಫೆಕ್ಟ್; ಷೇರು ಮಾರುಕಟ್ಟೆಗೆ ಹರಿದುಬಂತು ಬರೋಬ್ಬರಿ 31 ಸಾವಿರ ಕೋಟಿ ಬಂಡವಾಳ
ಆತಂಕದ ಕ್ಷಣ ಕ್ಷಣ
- ಬೆಳಗ್ಗೆ 8: ಪರೀಕ್ಷಾರ್ಥ ರಾಕೆಟ್ ಬೆಳಗ್ಗೆ 8ಕ್ಕೆ ಉಡಾವಣೆ ಆಗುಬೇಕಿತ್ತು. ಹವಾಮಾನ ವೈಪರಿತ್ಯದ ಕಾರಣ 8.30ಕ್ಕೆ ಮುಂದೂಡಿಕೆ
- ಬೆಳಗ್ಗೆ 8.30: ಕೈಗೂಡದ ರಾಕೆಟ್ ಉಡಾವಣೆ. ಮತ್ತೆ 15 ನಿಮಿಷ ಕಾಲ ಉಡಾವಣೆ ಮುಂದೂಡಿಕೆ
- ಬೆಳಗ್ಗೆ 8.45: ಉಡಾವಣೆಗೆ ಕೇವಲ 4 ಸೆಕೆಂಡು ಇದೆ ಎನ್ನುವಾಗ ತಾಂತ್ರಿಕ ಸಮಸ್ಯೆ, ಉಡಾವಣೆ ಸ್ಥಗಿತ, ಬಳಿಕ ಶರವೇಗದಲ್ಲಿ ಕೈಗೂಡಿದ ರಿಪೇರಿ
- ಬೆಳಗ್ಗೆ 10: ಎಲ್ಲ ಸಮಸ್ಯೆ ಇತ್ಯರ್ಥ, ನೌಕೆ ಸುಸ್ಥಿತಿಯಲ್ಲಿರುವುದನ್ನು ಗಮನದಲ್ಲಿರಿಸಿಕೊಂಡು ಯಶಸ್ವಿ ಉಡಾವಣೆ
ಮಾನವಸಹಿತ ಗಗನಯಾನ ಸಾಕಾರದತ್ತ ಇಸ್ರೋ ಹೆಜ್ಜೆ
- ಇಸ್ರೋ ನಡೆಸಿದ ಪರೀಕ್ಷೆ ಮೊದಲ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮ ಸಾಕಾರವಾಗುವತ್ತ ಭಾರತವನ್ನು ಒಯ್ದಿದೆ. ಇಸ್ರೋದ ವಿಜ್ಞಾನಿಗಳಿಗೆ ನನ್ನ ಅಭಿನಂದನೆಗಳು.
- ನರೇಂದ್ರ ಮೋದಿ, ಪ್ರಧಾನಿ
- ಇಸ್ರೋ ಮತ್ತೊಂದು ಗಮನಾರ್ಹ ಬಾಹ್ಯಾಕಾಶ ವಿಕ್ರಮ ಸಾಧಿಸಿದೆ. ವಿಜ್ಞಾನಿಗಳಿಗೆ ಹಾಗೂ ದೇಶದ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳು.
-ಅಮಿತ್ ಶಾ, ಕೇಂದ್ರ ಗೃಹ ಸಚಿವ
- ಗಗನಯಾನದ ಮೊದಲ ಯಶಸ್ವಿ ಪರೀಕ್ಷೆಗೆ ಕಾರಣರಾದ ಎಲ್ಲ ಸಿಬ್ಬಂದಿ ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಅಭಿನಂದನೆಗಳು. 2007ರಿಂದಲೂ ಮಾನವ ಸಹಿತ ಗಗನಯಾನದ ಸತತ ಚಲಬಿಡದ ಪರಿಶ್ರಮಕ್ಕೆ ಈಗ ಫಲ ಸಿಗುತ್ತಿದೆ. ನಾವು ನಮ್ಮ ಗುರಿಗೆ ಇನ್ನು ಹತ್ತಿರವಾಗುತ್ತಿದ್ದೇವೆ
- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ