ಗಗನಯಾನಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಮುಂದೂಡಿಕೆ ಆಗಿದ್ದು, ಈ ಬಗ್ಗೆ ಇಸ್ರೋ ಅಧ್ಯಕ್ಷ ಸೋಮನಾಥ್‌ ಮಾಹಿತಿ ನೀಡಿದ್ದಾರೆ.

ಶ್ರೀಹರಿಕೋಟಾ (ಅಕ್ಟೋಬರ್ 21, 2023): ಶ್ರೀಹರಿಕೋಟಾ (ಅಕ್ಟೋಬರ್ 21, 2023): ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಮುಂದೂಡಿಕೆಯಾಗಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಉಡಾವಣೆಯಾಗಬೇಕಿದ್ದ ರಾಕೆಟ್‌ ಹವಾಮಾನ ಕಾರಣದಿಂದ 8:45ಕ್ಕೆ ಮುಂದೂಡಿಕೆಯಾಗಿತ್ತು. ಆದರೆ, ಎಂಜಿನ್‌ ಇಗ್ನಿಷನ್‌ನಲ್ಲಿ ದೋಷದಿಂದಾಗಿ ಉಡಾವಣೆ ಮುಂದೂಡಿಕೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್‌ ಮಾಹಿತಿ ನೀಡಿದ್ದಾರೆ.

ಆಂಧ್ರದ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ನಭಕ್ಕೆ ಚಿಮ್ಮಬೇಕಿದ್ದ ರಾಕೆಟ್‌ 17 ಕಿ.ಮೀ. ಎತ್ತರದಲ್ಲಿ ಗಗನಯಾನ ನೌಕೆಯನ್ನು ಬೇರ್ಪಡಿಸಲಿದೆ. ಬಳಿಕ ನೌಕೆ ಪ್ಯಾರಾಚೂಟ್‌ ಸಹಾಯದಿಂದ ಬಂಗಾಳಕೊಲ್ಲಿಯಲ್ಲಿ ಇಳಿಯಲಿದ್ದು, ಅಲ್ಲಿಂದ ಅದನ್ನು ಹಡಗಿನ ಮೂಲಕ ವಶಕ್ಕೆ ಪಡೆಯಲಾಗುತ್ತದೆ.

ಇದನ್ನು ಓದಿ: ಚಂದ್ರಯಾನ ಆಯ್ತು, ಈಗ ಬಾಹ್ಯಾಕಾಶಕ್ಕೆ ಮಹಿಳಾ ರೋಬೋಟ್‌ ಕಳಿಸಲಿದೆ ಭಾರತ!

ಹೀಗಿರಲಿದೆ ನೌಕೆ ಉಡಾವಣೆ ಪರೀಕ್ಷೆ:
ಸತೀಶ್‌ ಧವನ್‌ ಉಡಾವಣಾ ಕೇಂದ್ರದಲ್ಲಿರುವ ಒಂದನೇ ಲಾಂಚ್‌ ಪ್ಯಾಡ್‌ನಿಂದ ಈ ಪರೀಕ್ಷೆಗಾಗಿಯೇ ತಯಾರಿಸಲಾಗಿರುವ ರಾಕೆಟ್‌, ಗಗನಯಾನ ನೌಕೆಯ ಮಾಡೆಲನ್ನು ಹೊತ್ತು ಉಡಾವಣೆಯಾಗಲಿದೆ. 1 ನಿಮಿಷದ ಬಳಿಕ 11.7 ಕಿ.ಮೀ. ಎತ್ತರಕ್ಕೆ ಸಾಗುವ ರಾಕೆಟ್‌ ನೌಕೆಯಿಂದ ಬೇರ್ಪಡಲಿದೆ. 

ಒಂದೂವರೆ ನಿಮಿಷಕ್ಕೆ 16 ಕಿ.ಮೀ. ಎತ್ತರಕ್ಕೆ ತಲುಪುವ ಗಗನಯಾನ ಕ್ಯಾಪ್ಯೂಲ್‌ ಇದಾದ ಬಳಿಕ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಬೂಸ್ಟರ್‌ನಿಂದಲೂ ಬೇರ್ಪಟ್ಟು ಭೂಮಿಯತ್ತ ಬೀಳಲು ಆರಂಭಿಸುತ್ತದೆ. ಈ ಹಂತದಲ್ಲಿ ಗಗನಯಾನ ನೌಕೆ ಮತ್ತು ಸಿಬ್ಬಂದಿಗಳನ್ನು ರಕ್ಷಿಸಲು ಇರುವ ಉಪಕರಣ ಎರಡೂ ಪ್ರತ್ಯೇಕಗೊಂಡು ಸಮುದ್ರದತ್ತ ಧಾವಿಸಲಿದೆ. ಹೀಗೇ ರಾಕೆಟ್‌ನಿಂದ ಬೇರ್ಪಟ್ಟ 5 ಸೆಕೆಂಡ್‌ ಬಳಿಕ ನೌಕೆಯಲ್ಲಿರುವ ಪ್ಯಾರಾಚೂಟ್‌ ಬಿಚ್ಚಿಕೊಳ್ಳಲಿದ್ದು, ನೌಕೆಯ ವೇಗವನ್ನು ನಿಯಂತ್ರಿಸಿ ಭೂಮಿಯತ್ತ ತರಲಿದೆ. 3 ನಿಮಿಷಗಳ ಕಾಲ ಈ ಪ್ಯಾರಾಚೂಟ್‌ನ ಸಹಾಯದಿಂದ ನೌಕೆ ಇಳಿಯಲಿದ್ದು, ಬಳಿಕ ಮತ್ತೊಂದು ಶಕ್ತಿಶಾಲಿ ಪ್ಯಾರಾಚೂಟ್‌ ತೆರೆದುಕೊಳ್ಳಲಿದ್ದು, ನೌಕೆಯನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಇಳಿಸಲಿದೆ.

ಇದನ್ನೂ ಓದಿ: Chandrayaan 3 ಯಶಸ್ಸಿನಲ್ಲಿ ಈ ಎಂಜಿನಿಯರಿಂಗ್ ಕಾಲೇಜಿನ ಪಾತ್ರವೇನು ನೋಡಿ..!

ಈ ಪರೀಕ್ಷೆ ಕೇವಲ 9 ನಿಮಿಷಗಳಲ್ಲಿ ಮುಕ್ತಾಯವಾಗಲಿದ್ದು, ಉಡ್ಡಯನ ಸ್ಥಳದಿಂದ 10 ಕಿ.ಮೀ ದೂರದ ಬಂಗಾಳಕೊಲ್ಲಿಯಿಂದ ನೌಕೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈ ಪರೀಕ್ಷೆಯನ್ನು ನಡೆಸುವುಕ್ಕೆ ಮೊದಲೇ ಇಸ್ರೋ, ನೌಕೆಯನ್ನು ಹಲವು ಬಾರಿ ಪರೀಕ್ಷೆಗೆ ಒಳಪಡಿಸಿದೆ. ಜೊತೆಗೆ ಎಂಜಿನ್‌, ಪ್ಯಾರಾಚೂಟ್‌ ಮತ್ತು ನೌಕೆಯ ವಶ ಎಲ್ಲದರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕೊನೆಯದಾಗಿ ಈ ಮಾನವ ರಹಿತ ಗಗನಯಾನದ ಪರೀಕ್ಷೆ ನಡೆಸಲಾಗುತ್ತಿದೆ.
ಇದನ್ನೂ ಓದಿ: 615 ಕೋಟಿಯ Chandrayaan 3 ಸಕ್ಸಸ್‌ ಎಫೆಕ್ಟ್‌; ಷೇರು ಮಾರುಕಟ್ಟೆಗೆ ಹರಿದುಬಂತು ಬರೋಬ್ಬರಿ 31 ಸಾವಿರ ಕೋಟಿ ಬಂಡವಾಳ