ಗಂಡು ಕಪ್ಪೆಗಳು ಸಂಯೋಗಕ್ಕೆ ಬಂದಾಗ, ಇಷ್ಟವಿಲ್ಲದ ಹೆಣ್ಣು ಕಪ್ಪೆಗಳು ಸತ್ತಂತೆ ನಟಿಸಿ ತಪ್ಪಿಸಿಕೊಳ್ಳುತ್ತವೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.  ಸಂಶೋಧನೆಯಲ್ಲಿ, ಹೆಣ್ಣು ಕಪ್ಪೆಗಳು ನಿಸ್ತೇಜವಾಗಿ ಬಿದ್ದು, ಗಂಡು ಕಪ್ಪೆಗಳು ದೂರ ಹೋದ ನಂತರ ಮತ್ತೆ ಚಲಿಸುತ್ತವೆ ಎಂಬುದು ತಿಳಿದುಬಂದಿದೆ.

ಗಂಡಿಗೆ ರೊಮಾನ್ಸ್‌ ಮಾಡಲು ಮೂಡ್‌ ಬಂದ ಮಾತ್ರಕ್ಕೆ ಅದು ಹೆಣ್ಣಿನ ಬಳಿ ಹೋಗುವಂತೆ ಇಲ್ಲ. ಹೆಣ್ಣಿಗೆ ಇಷ್ಟ ಇಲ್ಲದೇ ಹೋದ್ರೂ ಗಂಡು ಬಿಡಲ್ಲ ಎನ್ನೋದು ಗೊತ್ತು. ಅದಕ್ಕಾಗಿಯೇ ಈ ಕಿಲಾಡಿ ಹೆಣ್ಣು ಏನ್‌ ಮಾಡತ್ತೆ ಗೊತ್ತಾ? ಇದು ಕಪ್ಪೆ ಲೋಕದ ರೋಚಕ ರೊಮಾನ್ಸ್‌ ಸ್ಟೋರಿ. ಲೀಬ್ನಿಜ್ ಇನ್‌ಸ್ಟಿಟ್ಯೂಟ್‌ ಫಾರ್ ಎವಲ್ಯೂಷನ್ ಅಂಡ್ ಬಯೋಡೈವರ್ಸಿಟಿ ಸೈನ್ಸ್‌ನ ಸಂಶೋಧಕರು ಈ ಕುತೂಹಲದ ಅಧ್ಯಯನ ಮಾಡಿದ್ದಾರೆ. ನಾರಾ ಟೆಂಪೊರೇರಿಯಾ ಎಂದು ಕರೆಯಲ್ಪಡುವ ಯುರೋಪಿಯನ್ ಸಾಮಾನ್ಯ ಕಪ್ಪೆಗಳ ಅಧ್ಯಯನ ಇದಾಗಿದೆ. ಸಾಧಾರಣವಾಗಿ ಎಲ್ಲಾ ಜಾತಿಗಳ ಕಪ್ಪೆಗಳ ನಡವಳಿಕೆಯೂ ಇದೇ ರೀತಿ ಆಗಿರುವುದಾಗಿ ಅಧ್ಯಯನ ಹೇಳಿದೆ.

ರೋಚಕ ರೊಮಾನ್ಸ್‌

ಅಷ್ಟಕ್ಕೂ, ಈ ರೋಚಕ ರೊಮಾನ್ಸ್‌ ಸ್ಟೋರಿ ಏನೆಂದರೆ, ಒಂದು ವೇಳೆ ಹೆಣ್ಣಿಗೆ ರೊಮಾನ್ಸ್‌ ಮಾಡಲು ಇಷ್ಟವಿಲ್ಲದೇ ಹೋದರೆ ಅದು ಸತ್ತಂತೆ ನಟಿಸುತ್ತದೆಯಂತೆ! ಗಂಡು ಕಪ್ಪೆಗಳು ಹತ್ತಿರ ಬರುವ ರೀತಿಯಲ್ಲಿಯೇ ಅದರ ಉದ್ದೇಶ ಅರಿಯುವ ಹೆಣ್ಣು ಕಪ್ಪೆ ಕೂಡಲೇ ನಿಸ್ತೇಜವಾಗಿ ಬಿದ್ದು ಸತ್ತಂತೆ ನಟಿಸುತ್ತವೆ. ಇದು ಈ ಪೆದ್ದು ಗಂಡುಗಳಿಗೆ ಅರ್ಥವೇ ಆಗುವುದಿಲ್ಲ. ಕಪ್ಪೆ ಸತ್ತು ಹೋಗಿದೆ ಎಂದು ಭಾವಿಸಿ ಮತ್ತೊಬ್ಬಳನ್ನು ಹುಡುಕಿ ಹೋಗುತ್ತದೆ. ಈ ಕಳ್ಳ ಹೆಣ್ಣು ಕಪ್ಪೆ, ಆ ಗಂಡು ಅತ್ತ ಹೋಗುತ್ತಿದ್ದಂತೆಯೇ ಛಂಗನೆ ನೆನೆದು ಮರೆಯಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಸಂತಾನೋತ್ಪತ್ತಿಯ ಸಮಯ

ಅಷ್ಟಕ್ಕೂ ಕಪ್ಪೆಗಳು ಮನುಷ್ಯರಂತೆ ಅಲ್ಲ. ಬಹುತೇಕ ಜೀವರಾಶಿಗಳಲ್ಲಿ ಗಂಡು ಮತ್ತು ಹೆಣ್ಣು ಕೂಡುವುದು ನಿರ್ದಿಷ್ಟ ಸಮಯದಲ್ಲಿ ಮಾತ್ರ. ಅದು ಸಂತಾನೋತ್ಪತ್ತಿಯ ಸಮಯ. ಮನುಷ್ಯರಂತೆ ಹೊತ್ತು ಗೊತ್ತಿಲ್ಲದೇ, ಯಾವ ಹೊತ್ತಿನಲ್ಲಾದರೂ, ಯಾವ ಕಾಲದಲ್ಲಾದರೂ ಈ ಜೀವರಾಶಿಗಳು ದೈಹಿಕ ಸಂಪರ್ಕ ಬಯಸುವುದಿಲ್ಲ. ಅದರಂತೆ ಕಪ್ಪೆಗೂ ಅದರದ್ದೇ ಆದ ಸಂತಾನೋತ್ಪತ್ತಿ ಸಮಯವಿದೆ. ಅಂಥ ಸಮಯದಲ್ಲಿ ಹೆಣ್ಣು ಕಪ್ಪೆಗಳಿಗೆ ಕೆಲವೊಮ್ಮೆ ಮೂಡ್‌ ಇರುವುದಿಲ್ಲ. ಆಗ ಗಂಡು ಕಪ್ಪೆ ಹತ್ತಿರ ಬಂದಾಗ ಸತ್ತಂತೆ ನಟಿಸಿ ನುಣುಚಿಕೊಳ್ಳುವುದು ಅಧ್ಯಯನದಿಂದ ಬಹಿರಂಗಗೊಂಡಿದೆ.

ಸಂಶೋಧನೆಯಲ್ಲಿ ಹೇಗಿತ್ತು?

ಸಂಶೋಧಕರು ಸಂತಾನೋತ್ಪತ್ತಿ ಅವಧಿಯಲ್ಲಿ ಕೊಳಗಳಿಂದ ಸಂಗ್ರಹಿಸಲಾದ ಗಂಡು ಮತ್ತು ಹೆಣ್ಣು ಯುರೋಪಿಯನ್ ಸಾಮಾನ್ಯ ಕಪ್ಪೆಗಳನ್ನು ಅಧ್ಯಯನಕ್ಕೆ ಬಳಸಿದರು. ಅವರು ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ನಿರ್ದಿಷ್ಟ ರೀತಿಯಲ್ಲಿ ಪ್ರತ್ಯೇಕ ನೀರಿನ ಟ್ಯಾಂಕ್‌ಗಳಲ್ಲಿ ಇರಿಸಿದರು, ಪ್ರತಿಯೊಂದರಲ್ಲೂ ಎರಡು ಹೆಣ್ಣು ಮತ್ತು ಒಂದು ಗಂಡು ಇತ್ತು. ಇವುಗಳಲ್ಲಿ, 80 ಪ್ರತಿಶತ ಹೆಣ್ಣುಗಳು ಸಂಯೋಗವನ್ನು ತಪ್ಪಿಸಲು ಸತ್ತಂತೆ ನಟಿಸಿದವು. ಸಾಮಾನ್ಯವಾಗಿ ಕಪ್ಪೆಗಳು ಸತ್ತಾಗ ಬೆನ್ನು ಕೆಳಗಾಗಿ ಸಾಯುತ್ತವೆ. ಅದೇ ರೀತಿ ಅವು ಕಾಣಿಸಿಕೊಂಡಿರುವುದು ಅಧ್ಯಯನದಿಂದ ತಿಳಿದಿದೆ.

ಇನ್ನು ಕೆಲವೊಮ್ಮೆ, ಸಂಯೋಗದಲ್ಲಿ ತೊಡಗಿರುವ ಹೆಣ್ಣು ಕಪ್ಪೆಗಳಲ್ಲಿ ಅರ್ಧದಷ್ಟು ಹೆಣ್ಣು ಕಪ್ಪೆಗಳು ಸಂಯೋಗವನ್ನು ತಪ್ಪಿಸಲು ಗುಡುಗುವ ಅಥವಾ ಕಿರುಚುವ ಶಬ್ದಗಳನ್ನು ಮಾಡಲು ಪ್ರಾರಂಭಿಸಿದವು ಎಂದು ಅಧ್ಯಯನವು ಕಂಡುಹಿಡಿದಿದೆ. ಗಂಡು ಕಪ್ಪೆಗಳ ಹಿಂಸೆ ತಾಳದೆಯೂ ಅವು ಸಂಪರ್ಕ ನಡೆಸುತ್ತಿರುವ ನಡುವೆಯೇ ವಿಚಿತ್ರವಾಗಿ ಕಿರುಚಿಕೊಂಡು ಸತ್ತಂತೆ ನಟಿಸುವುದೂ ಇರುವುದು ತಿಳಿದುಬಂದಿದೆ.