ಚಿತ್ರರಂಗದಲ್ಲಿ ಸಕ್ಸಸ್‌ ಮೀಟ್‌ ಅನ್ನುವುದೇ ಅರ್ಥ ಕಳೆದುಕೊಂಡಿರುವ ಹೊತ್ತಿನಲ್ಲಿ ‘ಗಾಳಿಪಟ 2’ ತಂಡ ಸಕ್ಸಸ್‌ ಕಾರ್ಯಕ್ರಮ ಆಚರಿಸಿಕೊಂಡಿದೆ. ಖುಷಿ ವಿಚಾರ ಎಂದರೆ ಇಲ್ಲಿ ನಂಬರ್‌ಗಳ ಲೆಕ್ಕ ಇರಲಿಲ್ಲ. ಬದಲಿಗೆ ಯಶಸ್ಸಿಗೆ ಸಾಕ್ಷಿಯಾಗಿ ಪ್ರತಿಯೊಬ್ಬರ ಮುಖದಲ್ಲೂ ತುಂಬಿ ತುಳುಕುವಷ್ಟುಸಂತೋಷ ಇತ್ತು.

ಈ ಸಂತೋಷವನ್ನು ಮೊದಲು ಚಿತ್ರತಂಡಕ್ಕೆ ಹಂಚಿದ್ದು ನಿರ್ಮಾಪಕ ರಮೇಶ್‌ ರೆಡ್ಡಿ. ಈ ಮೊದಲು ನಾಲ್ಕು ಪ್ರಯತ್ನಗಳಲ್ಲಿ ಫೇಲಾಗಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದ ಅವರು ಈ ಬಾರಿ ಮಾತ್ರ ಖುಷಿಯಿಂದ, ‘ನಾನು ಕಡೆಗೂ ಪಾಸಾದೆ. ಮೊದಲ ದಿನ ಚಿತ್ರಕ್ಕೆ ಜನ ಬಂದಿದ್ದು ನೋಡಿಯೇ ಈ ಮಾತು ಹೇಳಿದ್ದೇನೆ. ನಾನು ಪಾಸಾಗಲು ಕಾರಣಕರ್ತರಾದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದರು. ಅವರ ಮಾತುಗಳಿಗೆ ಇಡೀ ತಂಡ ಚಪ್ಪಾಳೆ ತಟ್ಟಿಸಂಭ್ರಮಿಸಿತು.

ಆ ಖುಷಿ ಹೆಚ್ಚುವಂತೆ ಮಾತನಾಡಿದ್ದು ಹಿರಿಯ ನಟ ಅನಂತ್‌ನಾಗ್‌. ‘ಚಿತ್ರದ ಕಥಾವಸ್ತು, ನನ್ನ ಪಾತ್ರ ಆನಂದದಾಯಕವಾಗಿತ್ತು. ಕತೆ, ಪಾತ್ರ ನೋಡಿಯೇ ಈ ಚಿತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದೆ. ಯೋಗರಾಜ ಭಟ್‌ ಒತ್ತಡದಲ್ಲಿ ಕೆಲಸ ಮಾಡಿದ್ದಾರೆ. ಆದರೂ ಸುಂದರವಾಗಿ ಕತೆ ಹೇಳಿದ್ದಾರೆ. ಪ್ರತಿಯೊಬ್ಬ ನಿರ್ದೇಶಕನಿಗೂ ಹೊಸ ಸಿನಿಮಾ ಅನ್ನುವುದು ಹೊಸ ಆರಂಭ ಇದ್ದಂತೆ. ಈ ಸಿನಿಮಾದಲ್ಲಿ ಶಿಕ್ಷಣ ಕಮರ್ಷಿಯಲ್‌ ಆಗಿರುವುದನ್ನು ಎತ್ತಿ ತೋರಿಸಿ ಪ್ರಚಂಡ ಗೆಲುವು ನೀಡಿದ್ದಾರೆ. ಗಣೇಶ್‌ ಜೊತೆ ನಾನು ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರದು ಮತ್ತು ನನ್ನ ನಟನೆಯ ಶೈಲಿ ಒಂದೇ ಥರ ಇದೆ. ಅವರ ಜೊತೆ ನಟಿಸುವಾಗ ಸ್ವಲ್ಪ ಅಂದುಕೊಂಡಿದ್ದರೂ ಅವರಿಂದಾಗಿ ಆ ದೃಶ್ಯ ಎತ್ತರಕ್ಕೆ ಹೋಗುವುದು ಅನುಭವಕ್ಕೆ ಬಂದಿದೆ. ನಿರ್ಮಾಪಕ ರಮೇಶ್‌ ರೆಡ್ಡಿಯವರು ಗೆದ್ದಿದ್ದು ಸಂತೋಷ. ಅವರು ಮುಂದೆ ಸಿನಿಮಾ ಮಾಡುವಾಗ ಸ್ಕಿ್ರಪ್‌್ಟಶಕ್ತಿಯುತವಾಗಿದೆಯೇ ಎಂದು ಗಮನಿಸಬೇಕು’ ಎಂದರು. ಗಣೇಶ್‌ ಬಗ್ಗೆ ಮೆಚ್ಚಿ ಮಾತನಾಡುವಾಗ ಗಣೇಶ್‌ ಓಡಿ ಹೋಗಿ ವೇದಿಕೆ ಹತ್ತಿ ಅನಂತ್‌ನಾಗ್‌ ಅವರ ಕಾಲಿಗೆ ನಮಸ್ಕರಿಸಿದ್ದು, ಅವರು ಪರಸ್ಪರ ಇಟ್ಟಿರುವ ಪ್ರೀತಿ, ಗೌರವಕ್ಕೆ ಸಾಕ್ಷಿಯಾಗಿತ್ತು.

ಅನಂತ್‌ನಾಗ್‌ ಸರ್‌ ನನ್ನ ನಟನೆ ಮೆಚ್ಚಿ ಮಾತನಾಡಿದ್ದು ನನಗೆ ಸಿಕ್ಕ ದೊಡ್ಡ ಆಶೀರ್ವಾದ. ಯೋಗರಾಜ ಭಟ್ಟರು ಕತೆ ಕಳುಹಿಸಿದಾಗ ನಾನು ಪ್ರಶ್ನೆಗಳ ಜೊತೆ ಅವರಿಗೆ ಫೋನ್‌ ಮಾಡಿದ್ದೆ. ಅವರು ಆ ಪ್ರಶ್ನೆಗಳಿಗೆ ಉತ್ತರ ಕೊಡುವ ಹಾಗೆ ಸಿನಿಮಾ ಮಾಡಿದ್ದಾರೆ. ಅವರ ತಿಕ್ಲುತನ ಹೀಗೆಯೇ ಇರಲಿ ಎಂದು ನಾನು ಆಶಿಸುತ್ತೇನೆ. ನಮ್ಮ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕ ಮಹಾಪ್ರಭುವಿಗೆ ಮನಸಾರೆ ವಂದಿಸುತ್ತೇನೆ.

- ಗೋಲ್ಡನ್‌ಸ್ಟಾರ್‌ ಗಣೇಶ್‌

ನಿರ್ದೇಶಕ ಯೋಗರಾಜ್‌ ಭಟ್‌ ನಗುಮುಖವೇ ಯಶಸ್ಸನ್ನು ಸಾರುತ್ತಿತ್ತು. ‘ಈ ಸಿನಿಮಾ ಆಗುವುದಕ್ಕೆ ಬಹಳ ಮಂದಿ ಕಾರಣಕರ್ತರಿದ್ದಾರೆ. ನಾನು ಮೊದಲು ಅಂದುಕೊಂಡ ಹಾಗೆ ಸಿನಿಮಾ ಮಾಡಿದ್ದರೆ ಈಗಲೂ ಮುಗಿಯುತ್ತಿರಲಿಲ್ಲ. ಆದರೆ ಅನಂತ್‌ ಸರ್‌ ಅವರ ಜ್ಞಾನದ ಬಲದಿಂದ ನನ್ನನ್ನು ಸರಿದಾರಿಗೆ ತಂದರು. ಇದು ನನ್ನ ಸಿನಿಮಾ ಅಲ್ಲ. ಇದು ಜನರ ಸಿನಿಮಾ. ನಾಡಿಗೆ ವಂದನೆ’ ಎಂದರು.

ಗಾಳಿಪಟ-2; ಸಕ್ಸಸ್ ಖುಷಿಯಲ್ಲಿ ಪ್ರೇಕ್ಷಕರಿಗೆ ಸರ್ಪ್ರೈಸ್ ಕೊಟ್ಟ ಗಣೇಶ್

ಪ್ರತಿಯೊಬ್ಬರೂ ಮಾತಿನ ಲಹರಿಯಲ್ಲೇ ಇದ್ದರು. ಡಿಸೆಂಬರ್‌ನಲ್ಲಿ ಚಿತ್ರದ ಮೊದಲಾರ್ಧದ ಮಳೆ ಸೀನನ್ನು ನಿರ್ದೇಶಿಸಿದ ಕತೆಯನ್ನು ಛಾಯಾಗ್ರಾಹಕ ಸಂತೋಷ್‌ ರೈ ಪಾತಾಜೆ ಹೇಳಿಕೊಂಡರು. ಪ್ಯಾನ್‌ ಇಂಡಿಯಾ ಸಿನಿಮಾ ಗಲಾಟೆಯಲ್ಲಿ ಗಾಳಿಪಟ 2 ಗೆದ್ದು ಚಿತ್ರರಂಗಕ್ಕೆ, ಚಿತ್ರರಂಗದ ಪ್ರತಿಯೊಬ್ಬರಿಗೂ ಭರವಸೆ ತುಂಬಿದೆ ಎಂದು ರಂಗಾಯಣ ರಘು ಘೋಷಿಸಿದರು. ಪವನ್‌ಕುಮಾರ್‌ ಮತ್ತೆ ಭಟ್ಟರ ಸಹಾಯಕ ನಿರ್ದೇಶಕನಾಗುವ ಆಸೆ ತೋಡಿಕೊಂಡರು. ‘ಅನಂತ್‌ನಾಗ್‌ ಸರ್‌ ಕಜಕಿಸ್ಥಾನಕ್ಕೆ ಬಂದಿರಲೇ ಇಲ್ಲ. ಆದರೆ ಭಟ್ಟರು ಎಷ್ಟುಪ್ಲಾನ್‌ ಮಾಡಿ ಚಿತ್ರೀಕರಣ ಮಾಡಿದ್ದರು ಎಂದರೆ ಅನಂತ್‌ ಸರ್‌ ಕಜಕಿಸ್ಥಾನಕ್ಕೆ ಬಂದಿರಲಿಲ್ಲ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ, ಅವರ ಬುದ್ಧಿವಂತಿಕೆಗೆ ನಮಸ್ಕಾರ’ ಎಂದರು.

ಪ್ರಣಯರಾಜ ಶ್ರೀನಾಥ್‌, ಜಯಂತ್‌ ಕಾಯ್ಕಿಣಿ ಖುಷಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿದ್ದ ಧನಂಜಯ್‌ ಮಾಸ್ಟರ್‌, ಮೋಹನ್‌ ಪಂಡಿತ್‌, ರವಿ, ಸುರೇಶ್‌, ವಿಶ್ವ ರೆಡ್ಡಿ, ಪದ್ಮಜಾ ರಾವ್‌, ಆನಂದ್‌ ಆಡಿಯೋ ಶಾಮ್‌, ಶರ್ಮಿಳಾ ಮಾಂಡ್ರೆ ನಗುವೇ ಗೆಲುವನ್ನು ಸಾರುತ್ತಿತ್ತು.

ಯೋಗರಾಜ್ ಭಟ್ರಿಗೆ ಲಿಪ್‌ಕಿಸ್ ಕೊಟ್ಟ ಅಭಿಮಾನಿ; ವಿಡಿಯೋ ವೈರಲ್

ಮುಂಬೈನಲ್ಲೂ ಗಾಳಿಪಟ 2 ಗೆಲುವು

ಚಿತ್ರದ ನಾಯಕಿ ಮುಂಬೈನಲ್ಲಿ ಗಾಳಿಪಟ 2 ಚಿತ್ರಕ್ಕೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ ಕುರಿತು ಹೇಳಿಕೊಂಡರು. ‘ನಾನು ಮುಂಬೈಯವಳು. ಗಾಳಿಪಟ 2 ಚಿತ್ರವನ್ನು ಮುಂಬೈನಲ್ಲಿ ನೋಡಿದೆ. ಜನ ಈಗ ನನ್ನನ್ನು ಅಲ್ಲಿಯೂ ಶ್ವೇತಾ ಎಂದು ಗುರುತಿಸುತ್ತಾರೆ. ಕರ್ನಾಟಕದ ಹೊರಗೂ ಕನ್ನಡ ಸಂಸ್ಕೃತಿಯನ್ನು ಗೌರವಿಸುತ್ತಾರೆ, ಪ್ರೀತಿಸುತ್ತಾರೆ ಅನ್ನುವುದು ಈ ಸಿನಿಮಾದಿಂದ ಗೊತ್ತಾಯಿತು’ ಎಂದರು.