ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಫ್ಯಾನ್ ಫಾಲೋವಿಂಗ್ ಹೊಂದಿರುವ ಉಗಾಂಡಾದ ಘೆಟ್ಟೋ ಕಿಡ್ಸ್ ತಂಡ ಬೆಂಗಳೂರಿಗೆ ಬಂದಿಳಿದಿದೆ.
ವಿಶ್ವಾದ್ಯಂತ ತಮ್ಮ ವಿಶಿಷ್ಟ ನೃತ್ಯದ ಮೂಲಕ ಹೆಸರು ಮಾಡಿರುವ, ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಫ್ಯಾನ್ ಫಾಲೋವಿಂಗ್ ಹೊಂದಿರುವ ಉಗಾಂಡಾದ ಘೆಟ್ಟೋ ಕಿಡ್ಸ್ ತಂಡ ಬೆಂಗಳೂರಿಗೆ ಬಂದಿಳಿದಿದೆ. ಅರ್ಜುನ್ ಜನ್ಯಾ ನಿರ್ದೇಶನದ, ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ಸಿನಿಮಾ ‘45’ ಸಿನಿಮಾದ ಪ್ರಚಾರದ ಹಾಡಿನಲ್ಲಿ ಈ ಘೆಟ್ಟೋ ಮಕ್ಕಳು ಭಾಗಿಯಾಗಲಿದ್ದಾರೆ.
ಈ ಮೂಲಕ ಅರ್ಜುನ್ ಜನ್ಯಾ ಯಾರೂ ಮಾಡಿರದ ರೀತಿಯಲ್ಲಿ ತಮ್ಮ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಜಾನಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬರುವ ಈ ಹಾಡಿನಲ್ಲಿ ಮೂವರು ಸ್ಟಾರ್ ನಟರು ಉಗಾಂಡಾದ ಮಕ್ಕಳ ಜೊತೆಗೆ ಹೆಜ್ಜೆ ಹಾಕಲಿದ್ದಾರೆ. ಎಂ.ಸಿ.ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ.
ಈ ಕುರಿತು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯಾ, ‘ಘೆಟ್ಟೋ ಕಿಡ್ಸ್ ಇದೇ ಮೊದಲ ಬಾರಿ ಭಾರತಕ್ಕೆ ಆಗಮಿಸಿದ್ದಾರೆ. ಈ ಹಾಡಿನ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ’ ಎಂದಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ಈ ವೇಳೆ ಹಾಜರಿದ್ದರು.
ಯಾರು ಈ ಘೆಟ್ಟೋ ಕಿಡ್ಸ್?: ಉಗಾಂಡಾದ ಡ್ಯಾನ್ಸ್ ಹುಡುಗರು. ಇಂಗ್ಲೆಂಡ್‌ನ ಜನಪ್ರಿಯ ಟಿವಿ ಶೋ ‘ಗೋಲ್ಡನ್ ಬಜಾರ್’ ಮೂಲಕ ಜಗತ್ತಿಗೆ ಈ ಪ್ರತಿಭಾವಂತ ಮಕ್ಕಳ ಪರಿಚಯವಾಯಿತು. ಸೋಷಲ್ ಮೀಡಿಯಾ ಸೆನ್ಸೇಶನ್ ಆಗಿ ಹೊರಹೊಮ್ಮಿದ ಈ ಹುಡುಗರು ವಿಶ್ವದ ಪ್ರತಿಷ್ಠಿತ ವೇದಿಕೆಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ಆಫ್ರಿಕಾದ ಬೀದಿಮಕ್ಕಳಿಗೆ ಮಕ್ಕಳಿಗೆ ಆಹಾರ, ಆಶ್ರಯ ನೀಡುವ ಕವುಮಾ ದೌದಾ ಎಂಬ ಸಂಸ್ಥೆಯಿಂದ ಹೊರಹೊಮ್ಮಿದ ಪ್ರತಿಭೆಗಳಿವು. ಈ ಮಕ್ಕಳ ಪ್ರದರ್ಶನದ ಮೂಲಕ ಬರುವ ಹಣವನ್ನು ಕವುಮಾ ದೌದಾ ಸಂಸ್ಥೆ ಉಗಾಂಡದ ಅಲೆಮಾರಿ ಬಡ ಮಕ್ಕಳ ಆಹಾರ, ವಸತಿಗೆ ವಿನಿಯೋಗಿಸುತ್ತದೆ.
