ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ನಟಿಸುತ್ತಿರುವ ಹೊಸ ಚಿತ್ರವನ್ನು ಮಹೇಶ್ ಬಾಬು ಪಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಂದು ರಾಮ್ ಪೋತಿನೇನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೈಟಲ್ ಝಲಕ್ ಬಿಡುಗಡೆ ಮಾಡಿದೆ.
ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ನಟಿಸುತ್ತಿರುವ ಹೊಸ ಚಿತ್ರವನ್ನು ಮಹೇಶ್ ಬಾಬು ಪಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಂದು ರಾಮ್ ಪೋತಿನೇನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೈಟಲ್ ಝಲಕ್ ಬಿಡುಗಡೆ ಮಾಡಿದೆ. ಈ ಝಲಕ್ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಎಲ್ಲರೂ ಊಹಿಸಿದಂತೆ ಈ ಚಿತ್ರಕ್ಕೆ “ಆಂಧ್ರ ಕಿಂಗ್ ತಾಲೂಕ” ಎಂದು ಹೆಸರಿಡಲಾಗಿದೆ. ಬಿಡುಗಡೆಯಾದ ಝಲಕ್‌ನಲ್ಲಿ ಒಬ್ಬ ಸೂಪರ್ ಸ್ಟಾರ್ ಅಭಿಮಾನಿಯಾಗಿ ನಾಯಕನ ಜೀವನ ಹೇಗಿರುತ್ತದೆ, ಒಬ್ಬ ಸ್ಟಾರ್ ನಟನ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳು ಹೇಗೆಲ್ಲಾ ಸಂಭ್ರಮಿಸುತ್ತಾರೆ, ಚಿತ್ರಮಂದಿರಗಳಲ್ಲಿ ಹೇಗೆಲ್ಲಾ ಗದ್ದಲ, ಕೋಲಾಹಲ ನಡೆಯುತ್ತದೆ ಎಂಬುದನ್ನು ದೃಶ್ಯರೂಪದಲ್ಲಿ ತೋರಿಸಲಾಗಿದೆ.
ಈ ಚಿತ್ರದಲ್ಲಿ ರಾಮ್ ಪೋತಿನೇನಿ.. ಆಂಧ್ರ ಕಿಂಗ್ ಸೂರ್ಯ ಎಂಬ ಸ್ಟಾರ್ ನಟನ ಅಭಿಮಾನಿಯಾಗಿ ನಟಿಸುತ್ತಿದ್ದಾರೆ. ಸ್ಟಾರ್ ನಟರ ಚಿತ್ರಗಳ ಸಮಯದಲ್ಲಿ ಟಿಕೆಟ್‌ಗಳ ಬೇಡಿಕೆ ಹೇಗೆ ಹೆಚ್ಚುತ್ತದೆ, ಪ್ರದರ್ಶಕರ ಮೇಲೆ ಹೇಗೆಲ್ಲಾ ಒತ್ತಡ ಇರುತ್ತದೆ ಎಂಬುದನ್ನೂ ಈ ಝಲಕ್‌ನಲ್ಲಿ ತೋರಿಸಿರುವುದು ಗಮನಾರ್ಹ. ಈ ಚಿತ್ರದ ಕಥೆಯು ಅಭಿಮಾನಿಗಳ ಭಕ್ತಿ ಭಾವವನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಳ್ಳುತ್ತಿದೆ. ಸಿನಿಮಾ ಪ್ರಿಯರ ಹೃದಯವನ್ನು ಮುಟ್ಟುವಂತಹ ಕಥೆ ಇದಾಗಿದೆ ಎಂದು ಭಾವಿಸಲಾಗಿದೆ. ಅಭಿಮಾನಿಗಳ ಕಥೆಯಾಧಾರಿತ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.
ಈ ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ನಾಯಕ ಆಂಧ್ರ ಕಿಂಗ್ ಸೂರ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಿದ್ಧ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಸಂಗೀತವನ್ನು ಪ್ರತಿಭಾವಂತ ವಿವೇಕ್ ಮೆರ್ವಿನ್ ಜೋಡಿ ನೀಡುತ್ತಿದ್ದಾರೆ. “ಆಂಧ್ರ ಕಿಂಗ್ ತಾಲೂಕ” ಚಿತ್ರದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಪ್ರಕಟಿಸಲಿದೆ. ರಾಮ್ ಪೋತಿನೇನಿ ಅಭಿಮಾನಿಗಳು ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
ಇನ್ನು ಉಪೇಂದ್ರ ಅವರಿಗೆ ತೆಲುಗು ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಅವರು 'ಕನ್ಯಾದಾನಂ', 'ಓಕೆ ಮಾಟ', 'ರಾ', 'ನೇನು' ಮುಂತಾದ ಚಿತ್ರಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರ ಮನಗೆದ್ದಿದ್ದರು. ಅದರಲ್ಲೂ ಅಲ್ಲು ಅರ್ಜುನ್ ಅಭಿನಯದ 'S/O ಸತ್ಯಮೂರ್ತಿ' (2015) ಚಿತ್ರದಲ್ಲಿ ಅವರು ನಿರ್ವಹಿಸಿದ ಖಳನಾಯಕನ ಪಾತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು ಮತ್ತು ಆ ಪಾತ್ರವು ತೆಲುಗು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಹಲವು ವರ್ಷಗಳ ವಿರಾಮದ ನಂತರ ಉಪೇಂದ್ರ ಅವರು ಮತ್ತೊಮ್ಮೆ ಇಂತಹದೊಂದು ಪವರ್‌ಫುಲ್ ಪಾತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಮರಳುತ್ತಿರುವುದು ವಿಶೇಷ.


