- ಆರ್‌. ಕೇಶವಮೂರ್ತಿ

ಹಬ್ಬ ಮತ್ತು ಸಿನಿಮಾಗಳಿಗೂ ಹತ್ತಿರದ ನಂಟು. ಒಂದೊಂದು ಭಾಷೆಯ ಚಿತ್ರಗಳು ನಿರ್ದಿಷ್ಟಹಬ್ಬಗಳನ್ನೇ ಗುರಿಯಾಗಿಟ್ಟುಕೊಂಡು ಸಿನಿಮಾಗಳನ್ನು ಬಿಡುಗಡೆ ಮಾಡುವುದು, ಹೊಸ ಚಿತ್ರಗಳನ್ನು ಘೋಷಿಸುವುದು, ಚಿತ್ರಗಳಿಗೆ ಮುಹೂರ್ತ ಮಾಡುವ ಬಹು ದೊಡ್ಡ ಪರಂಪರೆ ಚಿತ್ರಜಗತ್ತಿನಲ್ಲಿ ನಡೆದುಕೊಂಡು ಬಂದಿದೆ. ಕೆಲವು ಹೀರೋಗಳಿಗಂತೂ ಇಂಥ ಹಬ್ಬದಲ್ಲಿ ತನ್ನ ಸಿನಿಮಾ ಬಂದರೆ ಸೂಪರ್‌ ಹಿಟ್‌ ಆಗುತ್ತೆ ಅನ್ನುವ ಗಾಢವಾದ ನಂಬಿಕೆ. ಈ ಹಬ್ಬಗಳೇನಾದರೂ ವಾರದ ಕೊನೆಯಲ್ಲಿ ಬಂದರಂತೂ ಡಬಲ್‌ ಸೆಂಚುರಿ ಹೊಡೆದಷ್ಟೇ ಖುಷಿ. ಅಂದರೆ ಯಾವುದಾದರೂ ಹಬ್ಬ ಶುಕ್ರವಾರ ಬಂದರೆ ಹಬ್ಬದ ದಿನವನ್ನೂ ಒಳಗೊಂಡು ಶನಿವಾರ ಹಾಗೂ ಭಾನುವಾರ ಸೇರಿದರೆ ಮೂರು ದಿನ ರಜೆ ಸಿಗುತ್ತದೆ. ಈ ಮೂರು ದಿನದಲ್ಲಿ ಎಷ್ಟುಸಾಧ್ಯವೋ ಅಷ್ಟುತಮ್ಮ ಚಿತ್ರಗಳು ಬಾಕ್ಸ್‌ ಅಫೀಸ್‌ನಲ್ಲಿ ಗಳಿಕೆ ಮಾಡುತ್ತದೆ ಎನ್ನುವುದು ಹಬ್ಬದ ಹಿಂದಿನ ಲೆಕ್ಕಾಚಾರ.

ಪಂಡಿತರ ಇಂಥ ಸಿನಿಮಾ ಎಕಾನಮಿಕ್ಸ್‌ ಲೆಕ್ಕಾಚಾರಗಳ ಕಾರಣಕ್ಕೋ, ಏನೋ ತಮಿಳು ಸಿನಿಮಾಗಳಿಗೆ ಪೊಂಗಲ್‌, ಟಾಲಿವುಡ್‌ ತಾರೆಗಳಿಗೆ ಸಂಕ್ರಾಂತಿ, ಮಲಯಾಳಂ ಚಿತ್ರಗಳಿಗೆ ಓಣಂ, ಬಾಲಿವುಡ್‌ಗೆ ಹೋಳಿ, ಬಕ್ರೀದ್‌ ಮತ್ತು ರಂಜಾನ್‌ ಹಬ್ಬಗಳು ಸಿನಿಮಾ ಗಲ್ಲಾಪಟ್ಟಿಗೆಯ ಗುರಿಯಾಗುತ್ತಾ ಬಂದಿವೆ. ಕನ್ನಡ ಚಿತ್ರರಂಗದ ಪಾಲಿಗೆ ವರಮಹಾಲಕ್ಷ್ಮೀ, ದಸರಾ, ಗಣೇಶ ಚತುರ್ಥಿ, ಯುಗಾದಿ ಹಾಗೂ ದೀಪಾವಳಿ ಹಬ್ಬಗಳು ಬಲು ಜೋರು. ಅಂದರಲ್ಲೂ ವರಮಹಾಲಕ್ಷ್ಮೀ ಹಬ್ಬ ಎಂದರೆ ಕನ್ನಡ ಚಿತ್ರರಂಗದ ಮಟ್ಟಿಗೆ ಅತ್ಯಂತ ಶು»ಘಳಿಗೆ-ಗಳಿಕೆ. ದಸರಾ, ಗಣೇಶ ಚತುರ್ಥಿ, ಯುಗಾದಿ ಹಾಗೂ ದೀಪಾವಳಿಗೆ ಸಿನಿಮಾಗಳನ್ನು ತೆರೆಗೆ ತಂದರೆ, ವರಮಹಾಲಕ್ಷ್ಮೀ ಹಬ್ಬದಂದು ಹೊಸ ಚಿತ್ರಗಳನ್ನು ಘೋಷಣೆ ಮಾಡುವ ವಾಡಿಕೆ ಸ್ಯಾಂಡಲ್‌ವುಡ್‌ ಮಂದಿಯದ್ದು. ಸಿನಿಮಾ ಚಟುವಟಿಕೆಗಳ ಆರಂಭ ವರಮಹಾಲಕ್ಷ್ಮೀಯ ಹಬ್ಬದಿಂದಲೇ ಎನ್ನುವ ನಂಬಿಕೆ ಕನ್ನಡ ಚಿತ್ರಗಳ ನಿರ್ಮಾಪಕರದ್ದು. ಹೊಸ ಸಿನಿಮಾ ಮೂಹೂರ್ತ, ಸ್ಕಿ್ರಪ್ಟ್‌ ಪೂಜೆ, ಹಾಡುಗಳ ಧ್ವನಿ ಮುದ್ರಣಕ್ಕೆ ಚಾಲನೆ, ಹೀರೋಗಳನ್ನು ಲಾಂಚ್‌ ಮಾಡುವುದು, ಚಿತ್ರಗಳ ಫಸ್ಟ್‌ ಲುಕ್‌, ಟ್ರೇಲರ್‌, ಆಡಿಯೋ ಬಿಡುಗಡೆ... ಹೀಗೆ ಹಲವು ರೀತಿಯಲ್ಲಿ ಸಿನಿಮಾ ಕೆಲಸಗಳ ಆರಂಭಕ್ಕೆ ವರಮಹಾಲಕ್ಷ್ಮೀ ಹಬ್ಬದ ಕೃಪೆ ದೊಡ್ಡ ಮಟ್ಟದಲ್ಲಿ ಇದೆ.

ನಾನು ಮತ್ತು ವರಮಹಾಲಕ್ಷ್ಮಿ; ಐವರು ತಾರೆಯರ ಹಬ್ಬದ ಸಂಭ್ರಮ!

ನೋಡಿ ಕಳೆದ ವರ್ಷ ವರಮಹಾಲಕ್ಷ್ಮೀ ಹಬ್ಬದಂದು ಸೆಟ್ಟೇರಿ ದಸರಾ, ಯುಗಾದಿಗೆ ತೆರೆ ಮೇಲೆ ಬಂದ ನಮ್ಮ ಸಿನಿಮಾ ಸೂಪರ್‌ ಹಿಟ್‌ ಆಗಿದೆ ಎನ್ನುವ ನಿರ್ಮಾಪಕ ಅಥವಾ ನಿರ್ದೇಶಕನ ಮುಂದೆ ತಕ್ಷಣಕ್ಕೆ ಕೇಳಿ ಬರುವ ಮತ್ತೊಂದು ಪ್ರಶ್ನೆ ‘ಮತ್ತೊಂದು ಸಿನಿಮಾ ಯಾವಾಗ’ ಎಂಬುದು. ನೋಡ್ತಾ ಇರಿ, ಇನ್ನೆರಡು ದಿನದಲ್ಲಿ ಹೊಸ ಸಿನಿಮಾ ಅನ್ಸೌ ಮಾಡುತ್ತೇನೆ. ಎಲ್ಲ ರೆಡಿಯಾಗಿದೆ ಎನ್ನುತ್ತಾನೆ ನಿರ್ಮಾಪಕ. ಎಲ್ಲವೂ ರೆಡಿ ಇದ್ದ ಮೇಲೆ ಕಾಯೋದು ಯಾಕೆ ಇವತ್ತೇ ಘೋಷಣೆ ಮಾಡಿ ಅಂದರೆ ನೋಡಿ, ವರಮಹಾಲಕ್ಷ್ಮೀ ಹಬ್ಬ ನಮ್ಮ ಬ್ಯಾನರ್‌ಗೆ ಕೂಡಿ ಬಂದಿದೆ. ಲಕ್ಷ್ಮೀ ಮನೆಗೆ ಬರುವ ಘಳಿಗೆ. ಅವತ್ತೇ ಹೊಸ ಚಿತ್ರ ಘೋಷಿಸುವುದು ಒಳ್ಳೆಯದು.. ಇದು ಚಿತ್ರರಂಗದ ಬಹುತೇಕರಲ್ಲಿ ಕೇಳಿ ಬರುವ ಮಾತುಗಳು. ವರಮಹಾಲಕ್ಷ್ಮೀ ಹಬ್ಬ, ಸಿನಿಮಾ ಮಂದಿಯ ಪಾಲಿಗೆ ಹೀಗೆ ಲಕ್ಷ್ಮೀಯೇ ಎದ್ದು ಬಂದಂತೆ, ವರ ಕೊಟ್ಟಂತೆ!

*

ಕಳೆದ ಐದಾರು ತಿಂಗಳುಗಳಿಂದ ಸಂಪೂರ್ಣ ಬಾಗಿಲು ಹಾಕಿರುವ ಕನ್ನಡ ಚಿತ್ರರಂಗಕ್ಕೆ ಈ ವರಮಹಾಲಕ್ಷ್ಮೀ ಹಬ್ಬ, ವರವಾಗಿ ಕಂಗೊಳಿಸಲಿ ಎಂಬುದು ಬಹುತೇಕರ ಹಾರೈಕೆ. ಯಾಕೆಂದರೆ ಬಹು ಹಿಂದಿನಿಂದಲೂ ಸಿನಿಮಾ ಚಟುವಟಿಕೆಗಳ ಆರಂಭಕ್ಕೆ ಮುನ್ನುಡಿಯಾಗುತ್ತಿದ್ದ ಈ ಹಬ್ಬ ಮತ್ತೆ ಬಂದಿದೆ. ವರಮಹಾಲಕ್ಷ್ಮೀ ಚಿತ್ರರಂಗದ ಬಾಗಿಲು ತೆರೆದು, ಬೆಳ್ಳಿತೆರೆಯನ್ನು ಬೆಳಗಿಸಲಿ ಎಂಬುದು ಹಲವರ ಪ್ರಾರ್ಥನೆ. ಈಗಾಗಲೇ ಚಿತ್ರರಂಗ ಒಗ್ಗಟ್ಟಿನಿಂದ ಸರ್ಕಾರದ ಜತೆ ಮಾತುಕತೆ ಮಾಡುತ್ತಿದೆ. ಚಿತ್ರರಂಗಕ್ಕೆ ಆಗಬೇಕಿರುವ ಕೆಲಸಗಳು, ಚಿತ್ರರಂಗದವರೇ ಮಾಡಿಕೊಳ್ಳಬೇಕಾದ ತಯಾರಿಗಳ ಸುತ್ತ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಲು ಶಿವರಾಜ್‌ಕುಮಾರ್‌ ಅವರ ನೇತೃತ್ವದಲ್ಲಿ ಇಡೀ ಚಿತ್ರರಂಗಕ್ಕೆ ಒಂದಾಗಿದೆ. ಇದು ಕೂಡ ಒಂದು ರೀತಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಫಲವೇ ಎನ್ನಬಹುದು. ಚಿತ್ರೀಕರಣ, ತಾಂತ್ರಿಕ ಕೆಲಸಗಳು, ಪೋಸ್ಟ್‌ ಪ್ರೊಡಕ್ಷನ್‌, ಹೊಸ ಚಿತ್ರಗಳ ಪ್ರಕಟಣೆ... ಸೇರಿದಂತೆ ಬಹುತೇಕ ಸಿನಿಮಾ ಸಂಬಂಧಿತ ಕೆಲಸಗಳು ಇನ್ನೇನು ದೊಡ್ಡ ಮಟ್ಟದಲ್ಲಿ ಚಾಲನೆಗೆ ಬರುವ ಸಾಧ್ಯತೆಗಳು ಇವೆ.

ಮನೆಯಲ್ಲಿ ಹೀಗೆ ಮಾಡಿದ್ರೆ ದರಿದ್ರ ಲಕ್ಷ್ಮಿ ವಕ್ಕರಿಸುವುದು ಖಂಡಿತ!

ಚಿತ್ರರಂಗದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆಗಳು ಸಂಪೂರ್ಣವಾಗಿ ನಿಂತು ಹೋಗಿದ್ದ ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬುವ ಭರವಸೆ ಪ್ರತಿಯೊಬ್ಬರಲ್ಲೂ ಇದೆ. ಸುದೀಪ್‌ ಅವರ ‘ಫ್ಯಾಟಮ್‌’ ಚಿತ್ರಕ್ಕೆ ಶೂಟಿಂಗ್‌ ನಡೆಯುತ್ತಿದೆ. ಇದೇ ರೀತಿ ಬೇರೆ ಬೇರೆ ಚಿತ್ರಗಳು ಚಿತ್ರೀಕರಣದ ಅಖಾಡಕ್ಕಿಳಿದು, ಕೊರೋನಾ ಭಯವನ್ನು ದೂರ ತಳ್ಳಿದರೆ ವರಮಹಾಲಕ್ಷ್ಮೀ ಹಬ್ಬ, ಸಿನಿಮಾ ಮಂದಿಯ ಕೈ ಹಿಡಿಯಲಿದೆ ಎನ್ನುವ ಸಂಭ್ರಮ ಚಿತ್ರರಂಗದಲ್ಲಿ ಮನೆ ಮಾಡಿದೆ. ಹಬ್ಬ ಎಂದರೆ ಕೇವಲ ಆಚರಣೆ ಅಲ್ಲ. ಅದೊಂದು ನಂಬಿಕೆ ಮತ್ತು ಯಶಸ್ಸಿನ ಭರವಸೆ. ಅದೇ ಕಾರಣಕ್ಕೆ ಈ ಬಾರಿ ಕೊರೋನಾ ಭಯವನ್ನು ಮರೆತು ಕನ್ನಡದಲ್ಲಿ ಒಂದಿಷ್ಟುಸಿನಿಮಾಗಳು ಶುರುವಾಗಲಿವೆ.

ಈಗಾಗಲೇ ಹರ್ಷ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಹೊಸ ಚಿತ್ರವನ್ನು ಇದೇ ವರಮಹಾಲಕ್ಷ್ಮೀ ಹಬ್ಬಕ್ಕೆ ಘೋಷಣೆ ಮಾಡಲಾಗುತ್ತಿದೆ. ಇತ್ತ ಉದ್ಯಮದ ಮಂದಿ ಸೇರಿಕೊಂಡು ಚಿತ್ರೀಕರಣ ಶುರು ಮಾಡುವುದು ಹೇಗೆ, ಚಿತ್ರಮಂದಿರಗಳ ಬಾಗಿಲು ತೆಗೆಯುವ ಯೋಜನೆ ಹೇಗೆ ಎಂಬುದನ್ನು ಚರ್ಚಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನೋಡಿದರೆ ವರಮಹಾಲಕ್ಷ್ಮೀ ಹಬ್ಬ ಬೆಳ್ಳಿತೆರೆಯನ್ನು ಬೆಳಗುವ ಎಲ್ಲ ಸಾಧ್ಯತೆಗಳು ಇವೆ. ಐದಾರು ತಿಂಗಳುಗಳ ಕೊರೋನಾ ಶಾಪಕ್ಕೆ ಲಕ್ಷ್ಮೀ ಮುಕ್ತಾಯ ಹೇಳುವ ನಂಬಿಕೆ ಎಲ್ಲರದ್ದು. ಅಂದಹಾಗೆ ಕನ್ನಡ ಸಿನಿಮಾಗಳಲ್ಲಿ ಎಷ್ಟೇ ಎವರ್‌ ಗ್ರೀನ್‌ ಹಾಡುಗಳು ಬಂದು ಹೋದರೂ ಭೀಮಸೇನ ಜೋಷಿ ಅವರ ಕಂಠದಲ್ಲಿ ಮೂಡಿ ಬಂದ, ಅನಂತ್‌ನಾಗ್‌ ಅಭಿನಯದ ‘ಭಾಗ್ಯದ ಲಕ್ಷ್ಮೀ ಬಾರಮ್ಮ ... ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ’ ಎನ್ನುವ ಹಾಡು ಸಿನಿಮಾ ನಿರ್ಮಾಪಕರ ಪಾಲಿಗೆ ಅಕ್ಷರಶಃ ಪ್ರಾರ್ಥನಾ ಗೀತೆ. ಈ ಹಾಡಿನ ಸಾಲನ್ನು ಈ ವರ್ಷದ ವರಮಹಾಲಕ್ಷ್ಮೀ ಹಬ್ಬಕ್ಕೂ ಸಿನಿಮಾ ಮಂದಿ ನೆನಪಿಸಿಕೊಳ್ಳಲಿದ್ದಾರೆ.