ಮೇಘನಾ ರಾಜ್ ಸರ್ಜಾ! ಹೆಚ್ಚಿನ‌ ಹೆಣ್ಣುಮಕ್ಕಳು ಮದುವೆಯಾದ ತಕ್ಷಣ ತಮ್ಮ ಹೆಸರಲ್ಲಿ ಪತಿಯ ಹೆಸರು ಸೇರಿಸಿಕೊಂಡರೆ, ಮೇಘನಾ ರಾಜ್ ಪತಿ ಅಗಲಿದ ಬಳಿಕ ತಮ್ಮ ಹೆಸರಿನ ಜೊತೆಗೆ ಸರ್ಜಾ ಎಂಬ ಇನಿಷಿಯಲ್ ಅನ್ನು ಸೇರಿಸಿದ್ದಾರೆ. ಪತಿಯ ಅಗಲಿಕೆ ಮೇಘನಾರನ್ನು ಯಾವ ರೀತಿ ಕಾಡಿದೆ ಅನ್ನೋದಕ್ಕೆ ಇದು ಉದಾಹರಣೆ. ಪತಿ ಚಿರುವಿಗೆ ಆರ್ದ್ರವಾಗಿ ಕಂಬನಿ‌‌ ಮಿಡಿದು ಹೃದಯದಲ್ಲಿ‌ ತುಂಬಿರುವ ದುಃಖವನ್ನೆಲ್ಲಾ ಇತ್ತೀಚೆಗೆ ಪತ್ರದ ಮೂಲಕ ಹೊರ ಹಾಕಿದ್ರು. ಏಕೆಂದರೆ ಮೇಘನಾ‌ ಮತ್ತು ಚಿರು ಅವರ ಪ್ರೀತಿ ಒಂದೆರಡು ದಿನಗಳದ್ದಲ್ಲ, ವರ್ಷಗಳದ್ದು. ಏಳೆಂಟು ವರ್ಷಗಳ‌ ಕಾಲ ಪರಸ್ಪರ ಪ್ರೀತಿಸಿ ಹಿರಿಯರ ಒಪ್ಪಿಗೆ ಪಡೆದೇ ಸಪ್ತಪದಿ ತುಳಿದ ಜೋಡಿ ಇದು.‌ ಹೀಗೆ ಎಲ್ಲರ ಆಶೀರ್ವಾದ ಪಡೆದು ಒಂದಾದ ಜೋಡಿ ಕೇವಲ‌ ಎರಡೇ ವರ್ಷಗಳಲ್ಲಿ ಅಗಲುವಂತಾದರೆ ಉಳಿದುಕೊಂಡ ಜೀವಕ್ಕೆ ಎಷ್ಟು ನೋವಾಗಬೇಡ. 

ಈ ಎಲ್ಲ‌ ನೋವನ್ನು ಮರೆಯಲು ಮೇಘನಾ ಮತ್ತೆ ಸಿನಿಮಾ ರಂಗಕ್ಕೆ ಮರಳುತ್ತಾರಾ ಅಂತ ಪ್ರಶ್ನೆಗಳೆದ್ದಿವೆ. ಏಕೆಂದರೆ ವಿವಾಹದ ಸಂದರ್ಭ ಮಲೆಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು ಬೇಡಿಕೆಯ ನಟಿ ಎನಿಸಿಕೊಂಡಿದ್ದರು ಮೇಘನಾ. ವಿವಾಹದ ಬಳಿಕವೂ ಸ್ವಲ್ಪ ಕಾಲ ಫೀಲ್ಡ್ ನಲ್ಲಿದ್ದು ಒಪ್ಪಿಕೊಂಡ ಚಿತ್ರ ಮುಗಿಸಿಕೊಟ್ಟಿದ್ದರು. ಆಗಲೂ‌ ಮಾಲಿವುಡ್ ನಲ್ಲಿ ಬೇಡಿಕೆ ಇದ್ದೇ ಇತ್ತು. ಈ ಚಿರು ಅಗಲಿದ ಮೇಲೆ ಆ ನೋವನ್ನು‌ ಮರೆಯಲಾದರೂ ಅವರು ಮತ್ತೆ ಸಿನಿಮಾರಂಗಕ್ಕೆ ಬರಬೇಕು. ತಮ್ಮ‌ ಮೆಚ್ಚಿನ‌ ನಟನಾ ಕ್ಷೇತ್ರದಲ್ಲಿ ಮನಃಪೂರ್ವಕವಾಗಿ ತೊಡಗಿಸಿಕೊಂಡರೆ ಇವರಿಗೆ ನೋವಿಂದ ಹೊರಬರಲು ಸಾಧ್ಯವಾದೀತು ಎಂಬ ಮಾತುಗಳು‌ ಆಪ್ತವಲಯದಲ್ಲಿ ಕೇಳಿಬರುತ್ತಿದೆ. 

ಚಿರು ಅಗಲಿಕೆಯ ನೋವಲ್ಲೇ ಹೆಸರು ಬದಲಿಸಿಕೊಂಡ ಮೇಘನಾ..! 
ಮೇಘನಾ ಅವರ ಮೇಲಿನ‌ ಪ್ರೀತಿಯಿಂದ ಇಂಥಾ ಮಾತುಗಳು ಕೇಳಿಬಂದರೂ ಸದ್ಯದ ಸ್ಥಿತಿಯಲ್ಲಿ ಅವರು ಸಿನಿಮಾ ರಂಗಕ್ಕೆ ಮರಳುವುದು‌ ಕಷ್ಟ. ಏಕೆಂದರೆ ಅವರೀಗ ಚಿರು ಮಗುವಿಗೆ ತಾಯಿಯಾಗುವ ಹಾದಿಯಲ್ಲಿದ್ದಾರೆ. ಚಿರಂಜೀವಿ ಅವರ ಮನೆಯಲ್ಲಿದ್ದರೆ ಮೇಘನಾ ಪತಿ ಅಗಲಿದ ಕೊರಗಿನಲ್ಲೇ ಇರುತ್ತಾರೆ, ಇದರಿಂದ ಗರ್ಭವತಿಯಾಗಿರುವ ಈಕೆಗೆ ಸಮಸ್ಯೆ ಆಗಬಹುದು ಅನ್ನೋ ಕಾರಣಕ್ಕೆ ಇವರನ್ನೀಗ ತವರಿನಲ್ಲಿ ಬಿಡಲಾಗಿದೆ. ಅಮ್ಮ‌ ಪ್ರಮಿಳಾ ಜೋಷಾಯ್ , ಅಪ್ಪ ಸುಂದರ್ ರಾಜ್ ಆರೈಕೆಯಲ್ಲಿ‌ ಅವರೀಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸ್ನೇಹಿತರೂ ಅವರ ದುಃಖ ಮರೆಸಲು ಇನ್ನಿಲ್ಲದಂತೆ ಶ್ರಮಿಸುತ್ತಿದ್ದಾರೆ. ಚಿತ್ರರಂಗದ ಆಪ್ತರೂ ಮೇಘನಾರನ್ನು ಆಗಾಗ ಭೇಟಿ ಮಾಡುತ್ತಾ, ಮಾತನಾಡಿಸುತ್ತಾ ಸಮಾಧಾನಿಸುತ್ತಿದ್ದಾರೆ. ಮೇಘನಾ ಈ ದುಃಖದಿಂದ ಬೇಗ ಹೊರಬರಲಿ. ತಾಯಿಯಾದ ಬಳಿಕವಾದರೂ ಮತ್ತೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಪ್ರತಿಭೆ ಮೆರೆಯಲಿ ಎಂಬ ಹಾರೈಕೆ ಇವರ ಅಭಿಮಾನಿಗಳದ್ದು. 

 'ಲವ್ ಯು Baby ma,ನಾನು ನಗಲು ನೀನೇ ಕಾರಣ'; ಮೇಘನಾ ರಾಜ್‌ 
ಮೇಘನಾ ಅವರ ಹೆಸರಿನಲ್ಲಿ ಅಭಿಮಾನಿಗಳು ಕೂಡ ಒಂದು ಇನ್‌ಸ್ಟಗ್ರಾಮ್‌ ಖಾತೆ ತೆರೆದಿದ್ದಾರೆ. ಅಲ್ಲಿ ಮೇಘನಾ ಮತ್ತು ಚಿರುವಿಗೆ ಸಂಬಂಧಿಸಿದ ಫೋಟೋಗಳನ್ನು ಅಪ್‌ಲೋಡ್‌ ಮಾಡಲಾಗ್ತಾ ಇದೆ. ಸ್ವತಃ ತಮ್ಮ ಸ್ವಂತ ಇನ್‌ಸ್ಟಗ್ರಾಮ್‌ ಅಕೌಂಟ್‌ನಲ್ಲಿ ಇತ್ತೀಚೆಗೆ ಮೇಘನಾ ತಮ್ಮ ಅಭೀಮಾನಿಯೊಬ್ಬರು ತಮಗೆ ಕೊಟ್ಟ ಚಿರುವಿನ ರೇಖಾಚಿತ್ರವನ್ನು ಹಂಚಿಕೊಂಡಿದ್ದರು. ಜೊತೆಗೆ ಚಿರುವಿನ ನೆನಪಿನ ಕಾರ್ಯಕ್ರಮದಲ್ಲಿ ಸೇರಿದ ಚಿರು ಬಂಧುಗಳು ಚಿರು ಇಚ್ಛೆಯಂತೆಯೇ ನಗುನಗುತ್ತಾ ಇದ್ದದ್ದು ಕೂಡ ವರದಿಯಾಗಿತ್ತು. ಮೇಘನಾ ಸದಾ ನಗುನಗುತ್ತಾ ಇರಬೇಕು ಎಂಬುದು ಕೂಡ ಚಿರು ಇಚ್ಛೆಯಾಗಿದ್ದಂತೆ ಕಾಣುತ್ತದೆ. 

ಅಭಿಮಾನಿಯ ಪೆನ್ಸಿಲ್ ಸ್ಕೆಚ್‌ನಲ್ಲಿ ಮೂಡಿ ಬಂದ ಚಿರು; ಕೃತಜ್ಞತೆ ಸಲ್ಲಿಸಿದ ಮೇಘನಾ!