ಪ್ರತೀ ವರ್ಷ ದೊಡ್ಡ ಮೊತ್ತದ ವಹಿವಾಟು ನಡೆಸುವ ಕ್ಷೇತ್ರವಿದು. ಟಿಕೆಟ್ ಬೆಲೆ ವಿಚಾರದಲ್ಲಿ ಒಂದೊಂದು ಚಿತ್ರಮಂದಿರದ್ದು ಒಂದೊಂದು ರೀತಿಯ ರೇಟು. 50 ರು.ನಿಂದ ಆರಂಭವಾಗಿ 150 ರು.ವರೆಗೂ ಏಕಪರದೆ ಚಿತ್ರಮಂದಿರಗಳ ಟಿಕೆಟ್ ಬೆಲೆ ಇದೆ.
ಆರ್. ಕೇಶವಮೂರ್ತಿ
ಕರ್ನಾಟಕದಲ್ಲಿ ಸುಮಾರು 650 ಏಕಪರದೆ ಚಿತ್ರಮಂದಿರಗಳು ಇದ್ದವು. ಈ ಪೈಕಿ 150 ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿವೆ. 72 ಮಲ್ಟಿಪ್ಲೆಕ್ಸ್‌ಗಳಲ್ಲಿ ಸುಮಾರು 300 ರಿಂದ 350 ಸ್ಕ್ರೀನ್‌ಗಳಿವೆ. ಬೆಂಗಳೂರಿನಲ್ಲೇ 50 ಮಲ್ಟಿಪ್ಲೆಕ್ಸ್‌ಗಳು ಇವೆ. ಪ್ರತೀ ವರ್ಷ ದೊಡ್ಡ ಮೊತ್ತದ ವಹಿವಾಟು ನಡೆಸುವ ಕ್ಷೇತ್ರವಿದು. ಟಿಕೆಟ್ ಬೆಲೆ ವಿಚಾರದಲ್ಲಿ ಒಂದೊಂದು ಚಿತ್ರಮಂದಿರದ್ದು ಒಂದೊಂದು ರೀತಿಯ ರೇಟು. 50 ರು.ನಿಂದ ಆರಂಭವಾಗಿ 150 ರು.ವರೆಗೂ ಏಕಪರದೆ ಚಿತ್ರಮಂದಿರಗಳ ಟಿಕೆಟ್ ಬೆಲೆ ಇದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಮಾತ್ರ ಇದು ಎರಡು ಪಟ್ಟು. ಸಾಮಾನ್ಯ ಚಿತ್ರಗಳಿಗೆ 250 ರು.ನಿಂದ ಶುರುವಾಗಿ 500 ರು. ಇದೆ. ಇನ್ನೂ ಸ್ಟಾರ್ ನಟರು, ಪ್ಯಾನ್ ಇಂಡಿಯಾ ಚಿತ್ರಗಳಿಗೆ 1000 ಸಾವಿರದಿಂದ 1500 ಸಾವಿರದವವರೆಗೂ ದರ ಇಡುತ್ತಾರೆ.
ಈಗ ರಾಜ್ಯ ಸರ್ಕಾರ, ಆ ಅಡ್ಡಾದಿಡ್ಡಿ ಟಿಕೆಟ್ ದರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ 200 ರು. ನಿಗದಿ ಮಾಡಿದೆ. ಬಜೆಟ್‌ನಲ್ಲಿ ಘೋಷಣೆ ಆಗಿರುವ ಈ ಯೋಜನೆಯನ್ನು ಕ್ಯಾಬಿನೆಟ್‌ನಲ್ಲಿ ಮಂಡಿಸಿ ಅಲ್ಲಿ ಚರ್ಚೆಯಾದ ಮೇಲೆ ಅನುಮೋದನೆ ಪಡೆಯಬೇಕಿರುತ್ತದೆ. ಈ ನಡುವೆ ಸಂಬಂಧಪಟ್ಟ ಇಲಾಖೆಯು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ್ದ ನಿಯಮ ರೂಪಿಸಬೇಕಿರುತ್ತದೆ. ಇವಿಷ್ಟು ಪ್ರಕ್ರಿಯೆಗಳು ಮುಗಿದ ಮೇಲೆ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸುತ್ತದೆ. ಆ ನಂತರ ಇದು ನಿಯಮವಾಗಿ ಜಾರಿಯಾಗುತ್ತದೆ. ಇಷ್ಟೂ ಪ್ರಕ್ರಿಯೆಗಳ ನಡುವೆ ಅಥವಾ ಸರ್ಕಾರ ಅಧಿಸೂಚನೆ ಹೊರಡಿಸಿದ ಮೇಲೆ ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳೂ ಇರುತ್ತದೆ. ಈ ಹಿಂದೆ ಇದೇ ರೀತಿ ಆಗಿತ್ತು.
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ಏನಿರಬಹುದು ನೀವೇ ಗೆಸ್ ಮಾಡಿ!
ಪಿಕ್ ಪಾಕೆಟ್ ಕೆಲಸ: ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ರೇಟು ಕಡಿಮೆ ಮಾಡಬೇಕು ಎಂದಾಗಲೆಲ್ಲ ವಿರೋಧ ವ್ಯಕ್ತಪಡಿಸುವವರು ಹೇಳುವ ಮಾತು, ನಮ್ಮದು ದೊಡ್ಡ ಬಜೆಟ್ ಚಿತ್ರ, ಸಣ್ಣ ಬಜೆಟ್ ಚಿತ್ರಗಳಂತೆ ನಾವು ಟಿಕೆಟ್ ರೇಟು ಇಟ್ಟರೆ ನಷ್ಟ ಆಗುತ್ತೇವೆ ಎಂಬುದು. ಒಂದು ರೀತಿಯಲ್ಲಿ ಕಾಶ್ಮೀರಿ ಸೇಬಿಗೂ ಊಟಿ ಸೇಬಿಗೂ ಒಂದೇ ರೇಟು ಇಟ್ಟರೆ ಹೇಗೆ ಎನ್ನುವುದು ಈ ಅಪಸ್ವರಿಗಳ ಸಂಕಟ. ಹಾಗೆ ನೋಡಿದರೆ ಒಂದು ಸಾವಿರ ರುಪಾಯಿ ಟಿಕೆಟ್ ಇದ್ದಾಗ ಐದು ಸಾವಿರ ಮಂದಿ ಸಿನಿಮಾ ನೋಡುತ್ತಿದ್ದರು ಅಂದುಕೊಂಡರೆ 200 ರುಪಾಯಿ ಟಿಕೆಟ್ ಇದ್ದಾಗ ಎಷ್ಟು ಜನ ನೋಡುತ್ತಾರೆ? ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗುವುದಿಲ್ಲವೇ ಎನ್ನುವ ಪ್ರಶ್ನೆ ಇವರ ಮುಂದಿಟ್ಟರ ಉತ್ತರ ಬರಲ್ಲ. ದುಬಾರಿ ಟಿಕೆಟ್ ರೇಟು ಇಟ್ಟು, ಮೊದಲ ದಿನವೇ ದರೋಡೆ ಮಾಡುವ ಪ್ಲಾನ್ ಇದು. ಇದು ಒಂದು ರೀತಿಯಲ್ಲಿ ಪಿಕ್ ಪಾಕೆಟರ್ ಅಂತ ಗೊತ್ತಾಗುವ ಮೊದಲೇ ಬೇಬಿಗೆ ಕತ್ತರಿ ಹಾಕಿ ಪರಾರಿಯಾಗುವ ತಂತ್ರ ಎಂದು ಹೇಳಬಹುದು.
ದೊಡ್ಡ ಬಜೆಟ್ ಚಿತ್ರಗಳ ಹೊರತಾಗಿ ಎಲ್ಲರಿಗೂ ಅನುಕೂಲ
ಸಿನಿಮಾ ಟಿಕೆಟ್ ದರವನ್ನು ಏಕರೂಪ ಮಾಡಿರುವುದು ತುಂಬಾ ಅನುಕೂಲ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡುವುದಕ್ಕೆ ಈ ಯೋಜನೆ ಅನುಕೂಲ ಆಗಲಿದೆ. ಪ್ಯಾನ್ ಇಂಡಿಯಾ ಅಥವಾ ದೊಡ್ಡ ಬಜೆಟ್‌ನ ಚಿತ್ರಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದರೂ ಎಲ್ಲಾ ರೀತಿಯ ಸಿನಿಮಾಗಳಿಗೂ ಇದು ಒಳ್ಳೆಯ ಯೋಜನೆ. ಸರ್ಕಾರ ಆದಷ್ಟು ಬೇಗ ಟಿಕೆಟ್ ನೀತಿ ಯೋಜನೆಯನ್ನು ಜಾರಿಗೆ ತರಲಿ.
-ಎಂ. ನರಸಿಂಹಲು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ಪ್ರಾದೇಶಿಕ ಭಾಷೆಯ ಚಿತ್ರಗಳನ್ನು ಉಳಿಸುವ ಯೋಜನೆ
ಪ್ರಾದೇಶಿಕ ಭಾಷೆಗಳಿಗೆ ಈ ಯೋಜನೆ ತುಂಬಾ ಅನುಕೂಲ ಆಗಲಿದೆ. ನಿರ್ಮಾಪಕರ ಸಂಘದ ಅಧ್ಯಕ್ಷನಾಗಿ ಸರ್ಕಾರದ ಈ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಕೆಲವೇ ಕೆಲವು ಚಿತ್ರಗಳ ಹೊರತಾಗಿ ಉಳಿದಂತೆ ಎಲ್ಲಾ ಚಿತ್ರಗಳು ಮತ್ತು ನಿರ್ಮಾಪಕರಿಗೂ ಈ ಯೋಜನೆ ವರದಾನ. ಯಾಕೆಂದರೆ ಪ್ರಯೋಗಾತ್ಮಕ, ಕಂಟೆಂಟ್ ಆಧರಿತ ಚಿತ್ರಗಳಿಗೆ ಜೀವ ಕೊಟ್ಟಿದೆ. ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುತ್ತೇವೆ ಎಂದು ಅನುಮತಿ ಪಡೆದುಕೊಂಡಿರುವ ಮಲ್ಟಿಪ್ಲೆಕ್ಸ್‌ಗಳು ಪರಭಾಷೆ ಚಿತ್ರಗಳ ಮೂಲಕ ಪ್ರೇಕ್ಷಕರಿಂದ ಹಗಲು ದರೋಡೆ ಮಾಡುತ್ತಿದ್ದವು. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಆಗುತ್ತಿತ್ತು. ಈಗ ಇದಕ್ಕೆ ಬ್ರೇಕ್ ಬೀಳಲಿದೆ. ಇದರ ವಿರುದ್ಧ ಯಾರೇ ಕೋರ್ಟ್‌ಗೆ ಹೋದರೂ ಕಠಿಣ ಕ್ರಮ ಕೈಗೊಳ್ಳಿ ಅಂತ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸಿನಿಮಾ ಟಿಕೆಟ್ ರೀತಿಯಲ್ಲೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾರುವ ಊಟ, ನೀರು, ಕಾಫಿ ಸೇರಿದಂತೆ ಎಲ್ಲಾ ರೀತಿ ಪದಾರ್ಥಗಳ ರೇಟಿಗೂ ಬ್ರೇಕ್ ಹಾಕಬೇಕಿದೆ.
-ಉಮೇಶ್ ಬಣಕಾರ್, ನಿರ್ಮಾಪಕರ ಸಂಘದ ಅಧ್ಯಕ್ಷ
ಭಿಕ್ಷಾಟನೆ ಮಾಡಿ ತಿನ್ನುತ್ತೇನೆ, ಆ ನಟನೊಂದಿಗೆ ನಟಿಸಲ್ಲ ಎಂದ ನಟಿ ಸೋನಾ
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿ ಮಾಡಲಿ
ಸಿನಿಮಾ ಟಿಕೆಟ್ ದರ 200 ರು. ನಿಗದಿ ಮಾಡಿರುವುದರಿಂದ ನಿರ್ಮಾಪಕನಿಗೆ ತಮ್ಮ ಚಿತ್ರದ ಗಳಿಕೆ ಎಷ್ಟಾಗಬಹುದು ಎನ್ನುವ ಸ್ಪಷ್ಟತೆ ಇದೆ. ಪ್ರೇಕ್ಷಕರಿಗೆ ಅನುಕೂಲ ಆಗುವ ಈ ಯೋಜನೆ ಈಗ ಬಜೆಟ್‌ನಲ್ಲಿ ಬಂದಿರುವುದು ದೊಡ್ಡ ಭರವಸೆ. ಇದು ಭರವಸೆಯಾಗಿಯೇ ಉಳಿಯಬಾರದು. ಸಿನಿಮಾ ರೆಗ್ಯೂಲೇಷನ್ ಆ್ಯಕ್ಟ್ ವ್ಯಾಪ್ತಿಗೆ ತಂದು ನಿಯಮ ರೂಪಿಸಿ ಜಾರಿ ಮಾಡಬೇಕು. ಇದಕ್ಕೂ ಮೊದಲು ಸಂಬಂಧಪಟ್ಟ ಇಲಾಖೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯನ್ನು ಜಾರಿ ಮಾಡಬೇಕು. ಕಳೆದ ಮೂವತ್ತು ವರ್ಷಗಳಿಂದ ಚಿತ್ರನಗರಿ ಬರೀ ಘೋಷಣೆಯಲ್ಲೇ ಇದೆ. ಇದೂ ಅದೇ ರೀತಿ ಆಗಬಾರದು.
-ಕೆ ವಿ ಚಂದ್ರಶೇಖರ್, ಸಿನಿಮಾ ಪ್ರದರ್ಶನಕರ ಸಂಘದ ಅಧ್ಯಕ್ಷ
