1984ರಲ್ಲಿ ತೆರೆಕಂಡ 'ಬಂಧನ' ಚಿತ್ರದ ಶೂಟಿಂಗ್ ವೇಳೆ ನಟ ಜೈ ಜಗದೀಶ್ ಅವರು ಡಾ. ವಿಷ್ಣುವರ್ಧನ್ ವಿರುದ್ಧ ಬೈಗುಳದ ಡೈಲಾಗ್ ಹೇಳಲು ನಿರಾಕರಿಸಿದ್ದರು. ಅಭಿಮಾನಿಗಳ ಆಕ್ರೋಶಕ್ಕೆ ಹೆದರಿ ಶೂಟಿಂಗ್ ನಿಲ್ಲಿಸಿದ್ದ ಜಗದೀಶ್‌ಗೆ ಸ್ವತಃ ವಿಷ್ಣುವರ್ಧನ್ ಧೈರ್ಯ ತುಂಬಿದ್ದರು.
ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಸಾಲಿನಲ್ಲಿ 1984ರಲ್ಲಿ ತೆರೆಕಂಡ ‘ಬಂಧನ’ ಚಿತ್ರಕ್ಕೆ ವಿಶೇಷ ಸ್ಥಾನವಿದೆ. ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಮನೋಜ್ಞ ಅಭಿನಯದಿಂದ ಕನ್ನಡಿಗರ ಮನಗೆದ್ದ ಈ ಚಿತ್ರದ ಚಿತ್ರೀಕರಣದ ವೇಳೆ ನಡೆದ ಸ್ವಾರಸ್ಯಕರ ಘಟನೆ ಒಂದನ್ನು ನಟ ಜೈ ಜಗದೀಶ್, ಹಂಚಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಮೇಲಿನ ಅಪಾರ ಗೌರವ ಹಾಗೂ ಅವರ ನಟನೆಯ ತೀವ್ರತೆಗೆ ಅಂಜಿಕೊಂಡು ಜೈ ಜಗದೀಶ್ ಒಮ್ಮೆ ಶೂಟಿಂಗ್ ಅನ್ನೇ ನಿಲ್ಲಿಸಿದ್ದರಂತೆ!
ಜೈಜಗದೀಶ್ ಹೇಳಿದ್ದೇನು?
ಕಾರ್ಯಕ್ರಮ ಒಂದರ ವೇದಿಕೆ ಮೇಲೆ ಮಾತನಾಡುವ ವೇಳೆ ಜೈ ಜಗದೀಶ್ ಈ ಸ್ವಾರಸ್ಯಕರ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ʼಬಂದನʼ ಚಿತ್ರದ ಶೂಟಿಂಗ್ ನಡೀತಾ ಇತ್ತು. ಅದರಲ್ಲಿ ಒಂದು ಸೀನ್ ಇದೆ. ನಿಮಗೆ ಜ್ಞಾಪಕ ಇರಬಹುದು. ನಾನು ಡೇ ಟೈಮ್ ಕೆಲಸಕ್ಕೆ ಹೋಗಿ ಎಂಜಿನಿಯರ್ ಆಗಿ ಬರ್ತೀನಿ. ರಾತ್ರಿ ಬರೋಷ್ಟೊತ್ತಿಗೆ ಹೆಂಡತಿ (ಸುಹಾಸಿನಿ) ಡಾಕ್ಟರ್ ಆಗಿ ಆಸ್ಪತ್ರೆಗೆ ಹೋಗುವ ಸೀನ್. ಒಂದು ಸಲ ನನ್ನ ಪತ್ನಿ ಆಸ್ಪತ್ರೆಯಿಂದ ಬೆಳಿಗ್ಗೆ ಬರುವಾಗ ರಾಧಾಕೃಷ್ಣ ಮೂರ್ತಿ ಹಿಡ್ಕೊಂಡು ಬಂದು.. ಇದನ್ನ ʼಯಾರು ಕೊಟ್ರು ಗೊತ್ತಾʼ ಎಂದು ಕೇಳುತ್ತಾರೆ. ಸುಹಾಸಿನಿಯ ಈ ಮಾತಿಗೆ ʼಯಾವ ಬೋ* ಮಗ ಕೊಟ್ಟರೆ ನನಗೇನು ಹೋಗ್ʼ ಎಂದು ನಾನು ಹೇಳಬೇಕಿತ್ತು. ಆ ಡೈಲಾಗ್ ಹೇಳೋಕೆ ನನ್ನ ಮನಸ್ಸು ಒಪ್ಪಲಿಲ್ಲ. ನಾನು ಆ ಡೈಲಾಗ್ ಹೇಳೋದಿಲ್ಲ ಎಂದು ಹಠ ಹಿಡಿದು ಕೂತೆ. ಅವರ ವಿರುದ್ಧ ಆ ಥರಾ ಮಾತು ಆಡಲ್ಲ ಎಂದೆ. ಅದಕ್ಕೆ ಬಾಬು, ʼಇಲ್ಲ ಅದು ಸಿನಿಮಾ, ನೀನು ಹೇಳಲೇಬೇಕುʼ ಎಂದರು. ಅಷ್ಟೊತ್ತಿಗೆ ವಿಷ್ಣು ಬಂದು ಯಾಕೆ ಶೂಟಿಂಗ್ ನಡೆಯುತ್ತಿಲ್ಲ ಎಂದರು. ಇಲ್ಲ ಈ ವಿಷಯಕ್ಕೆ ವಾದ ನಡೆಯುತ್ತಿದೆ ಎಂದರು. ಅದಕ್ಕೆ ವಿಷ್ಣು ನನ್ನ ಹೆಗಲ ಮೇಲೆ ಕೈಹಾಕಿ ʼಹೇ ಹೇಳೋ, ಹೇಳೋ ಪರವಾಗಿಲ್ಲʼ ಅಂದ್ರು. ಆಗ ನಾನು ಅವರಿಗೆ ಹೇಳಿದ್ದೆ, ʼಬೇಡ ಸ್ವಾಮಿ ನಿಮ್ಮ ಅಭಿಮಾನಿಗಳು ಎಕ್ಕಡ ತಗೊಂಡು ಹೊಡಿತಾರೆ. ದಯವಿಟ್ಟು ಬಿಟ್ಟುಬಿಡಿ, ನನ್ನ ಆ dialogue ಬದಲು ಬೇರೆ ಏನಾದರೂ ಬರೆಯಿರಿ ಎಂದಿದ್ದೆʼ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
‘ಬಂಧನ’ ಚಿತ್ರದಲ್ಲಿ ವಿಷ್ಣುವರ್ಧನ್ ‘ಡಾ. ಹರೀಶ್’ ಪಾತ್ರದಲ್ಲಿ ಮತ್ತು ಜೈ ಜಗದೀಶ್ ಆತ್ಮೀಯ ಸ್ನೇಹಿತ ‘ಬಾಲು’ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಭಾವನಾತ್ಮಕ ಮತ್ತು ಗಂಭೀರ ದೃಶ್ಯ ಒಂದರ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ನಡೆದಿರೋದಾಗಿ ಜೈ ಜಗದೀಶ್ ತಿಳಿಸಿದ್ದಾರೆ. ವಿಷ್ಣುವರ್ಧನ್ ಮೇಲೆ ಅಪಾರ ಗೌರವ ಹೊಂದಿದ್ದ ಜೈ ಜಗದೀಶ್ ಅವರಿಗೆ, ಹಿರಿಯ ನಟನ ಮೇಲಿನ ಗೌರವ ಮತ್ತು ಭಯದಿಂದ ಗಾಬರಿಗೊಂಡ ಡೈಲಾಗ್ ಹೇಳಲು ತಡವರಿಸಿ ಕೊನೆಗೆ ಶೂಟಿಂಗ್ ಅನ್ನೇ ನಿಲ್ಲಿಸಿಬಿಟ್ಟಿದ್ದರಂತೆ. ಶೂಟಿಂಗ್ ನಿಂತ ತಕ್ಷಣ ವಿಷ್ಣುವರ್ಧನ್ ಪರಿಸ್ಥಿತಿ ಅರ್ಥಮಾಡಿಕೊಂಡರು. ತಕ್ಷಣವೇ ನಗುತ್ತಾ ಜೈ ಜಗದೀಶ್ ಬಳಿ ಬಂದು ಪ್ರೀತಿಯಿಂದ ಹೆಗಲ ಮೇಲೆ ಕೈಹಾಕಿ..ಅದು ಕೇವಲ ಪಾತ್ರದ ಅಭಿನಯ ಮಾತ್ರ, ನೀನು ಆರಾಮಾಗಿ ನಟಿಸು ಎಂದು ಸಮಾಧಾನಪಡಿಸಿ ಧೈರ್ಯ ತುಂಬಿದರು.
ರಾಷ್ಟ್ರಪ್ರಶಸ್ತಿ ಗೆದ್ದ ಸಿನಿಮಾ
ಈ ಸ್ವಾರಸ್ಯಕರ ಘಟನೆ ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿತು. ಮುಂದೆ ‘ಬಂಧನ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಲ್ಲಿ ಒಂದಾಯಿತು. ಪ್ರತಿಷ್ಠಿತ ರಾಷ್ಟ್ರಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿತು.















