ಕಿಚ್ಚ ಸುದೀಪ್ (Kichcha Sudeep) ಕೋಟಿಗೊಬ್ಬ 3 ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ತಾನೊಬ್ಬ ಅದ್ಭುತ ನಟ ಅನ್ನೋದನ್ನ ಸುದೀಪ್ ಮತ್ತೆ ಸಾಬೀತುಪಡಿಸಿದ್ದಾರೆ. ಇಂತಿಪ್ಪ ಕಿಚ್ಚನಿಗೆ ಅಡುಗೆ ಪ್ರಿಯವಾದ ಹವ್ಯಾಸ. ಕಿಚ್ಚನ ಕಿಚನ್ ಪ್ರೇಮದ ಬಗ್ಗೆ ಇಲ್ಲಿದೆ ಡೀಟೈಲ್ಸ್.

ಸಾಮಾನ್ಯವಾಗಿ ಸ್ಟಾರ್ (stars) ನಟರ ಮನೆಗಳಲ್ಲಿ ಅವರು ಅತೀ ಕಡಿಮೆ ವಿಸಿಟ್ ಮಾಡೋ ಜಾಗ ಅಂದ್ರೆ ಕಿಚನ್ (Kitchen). ಅವರಿದ್ದಲ್ಲಿಗೇ ತಿಂಡಿ, ಊಟ ಸಪ್ಲೈ ಆಗುತ್ತೆ. ಟೈಮ್ ಇದ್ದಾಗ ಡೈನಿಂಗ್ ಟೇಬಲ್ ವರೆಗೂ ಪಾದ ಬೆಳೆಸಿ ಹೊಟ್ಟೆ ತುಂಬಿಸಿಕೊಂಡರೆ ಅದೇ ಹೆಚ್ಚು. ಆದರೆ ನಮ್ ಕಿಚ್ಚ ಸುದೀಪ್ ಹಂಗಲ್ವೇ ಅಲ್ಲ. ಅವರು ಮನೆಯಲ್ಲಿದ್ರೆ ಹಾಲ್‌ನಲ್ಲೋ, ರೂಮ್‌ನಲ್ಲೋ ಸಿಗಲ್ಲ. ಅವರನ್ನ ಭೇಟಿ ಮಾಡಬೇಕಂದ್ರೆ ನೀವು ಸೀದ ಮೇಲಕ್ಕೆ ಹೋಗ್ಬೇಕು.

ಅಲ್ಲೊಂದು ಕುಟೀರದಂಥಾ ಅದ್ಭುತ ಜಾಗ ಇದೆ. ಅಲಲ್ಲಿ ಪಾಟ್‌ಗಳು, ಬಳ್ಳಿಗಳು, ಹಳದಿ ಬಣ್ಣದ ಗೋಡೆಯಲ್ಲಿ ಇಳಿಬಿದ್ದ ಬಿದಿರು. ಸಮೃದ್ಧವಾದ ಗಾಳಿ, ಬೆಳಕು. ರಾತ್ರಿ ಹೊತ್ತು ತಲೆ ಎತ್ತಿ ನೋಡಿದ್ರೆ ತಲೆ ಮೇಲೇ ಹೊಳೆ ಹೊಳೆಯುವ ನಕ್ಷತ್ರ. ಸ್ವಚ್ಛ ಕಾರ್ನರ್‌ಗಳು. ಅಚ್ಚುಕಟ್ಟಾಗಿ ಜೋಡಿಸಿಟ್ಟ ಕಪಾಟು, ಅದರೊಳಗೆ ಕ್ಲೀನ್ ಆಗಿ ಮೈ ಒರೆಸಿಕೊಂಡು ಕೂತ ಸ್ಟೀಲ್, ಪಿಂಗಾಣಿ, ಯಾವ್ಯಾವುದೋ ದೇಶದ ಪಾತ್ರೆಗಳು, ಟೇಬಲ್ ಮೇಲಿರೋ ಕೆಂಪು ಬಣ್ಣದ ಸಿಗಾರ್ ಡಿಸೈನ್‌ನ ಸಾಲ್ಟ್, ಪೆಪ್ಪರ್ ಬಾಕ್ಸ್. ಮಧ್ಯದಲ್ಲೊಂದು ಬಾಸ್ ಚೇರ್. ಅಲ್ಲಿ ಕೂತು ಕಪ್ ಕಾಫಿ ಹೀರುತ್ತಾ ತನ್ನದೇ ಲೋಕದಲ್ಲಿರುವ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ (Sudeep). 

ಕೋಟಿಗೊಬ್ಬ ಬಗ್ಗೆ ಸುದೀಪ್ ಪೋಸ್ಟ್: ಮನದಾಳದ ಮಾತು ಬಿಚ್ಚಿಟ್ಟ ಕಿಚ್ಚ

ಸುದೀಪ್‌ ಅವರನ್ನು ಇಲ್ಲಿ ಮಾತನಾಡಿಸೋ ಅವಕಾಶ ಸಿಕ್ಕರೆ ಅವರ ಅದ್ಭುತ ಲಹರಿ ತೆರೆದುಕೊಳ್ಳುತ್ತದೆ. ಸಿನಿಮಾದಿಂದ ಶುರುವಾಗೋ ಮಾತು ನಿಧಾನಕ್ಕೆ ತಮಾಷೆಯತ್ತ ಹರಿದು ಅಲ್ಲಲ್ಲಿ ವ್ಯಂಗ್ಯದ ಮೆಣಸಿನಕಾಯಿ ಜಜ್ಜಿ, ನಡುವೆ ಚಕ್ಕಂತ ಏನೋ ಹೊಳೆದದ್ದನ್ನ ಅವರು ಎತ್ತಲೋ ನೋಡುತ್ತಾ ವಿವರಿಸುತ್ತಿದ್ದರೆ ಎದುರು ಕೂತವರಿಗೆ ವೋಹ್.. ಅನ್ನೋ ಫೀಲು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆತನ ಅಭಿರುಚಿಯಿಂದ ಗುರುತಿಸಬಹುದು ಅಂತಾರೆ.

ಸುದೀಪ್‌ ಅವರ ಅಭಿರುಚಿಗೆ ಸಾಕ್ಷಿಯಾಗೋದು ಅವರ ಕಿಚನ್ ಮತ್ತು ಅದನ್ನು ಅವರು ಇಟ್ಟಿರುವ ರೀತಿ. ಸುದೀಪ್ ಅವರ ತಂದೆ ಸಂಜೀವ್ ಅವರು ಸರೋವರ ಗ್ರೂಪ್ ಆಫ್ ಹೊಟೇಲ್‌ನ ಮಾಲಕರು. ಸರೋವರ ಸಂಜೀವ್ ಅಂತಲೇ ಫೇಮಸ್. ಇದೊಂದೇ ಅಲ್ಲ, ಇನ್ನೊಂದಿಷ್ಟು ಹೊಟೇಲ್‌ಗಳು ಸಂಜೀವ್ ಹಾಗೂ ಸುದೀಪ್‌ ತಾಯಿ ಸರೋಜಾ ಅವರ ಹೆಸರಲ್ಲಿದೆ. ಸಂಜೀವ್‌ ಅವರ ಆಹಾರದ ಮೇಲಿನ ಪ್ರೀತಿಯೇ ಸರೋವರ್‌ ಹೊಟೇಲ್‌ನ ಸ್ಥಾಪನೆಗೆ ಪ್ರೇರೇಪಿಸಿತು, ಆ ಹೊಟೇಲ್‌ ಅಷ್ಟು ಎತ್ತರಕ್ಕೆ ಬೆಳೆಯಲು ಕಾರಣವೂ ಅವರ ಆಹಾರ ಪ್ರೀತಿ ಎಂಬ ಮಾತಿದೆ. ಮುಂದೆ ಅದು ಲಾಡ್ಜಿಂಗ್, ಬ್ಯುಸಿನೆಸ್‌ ಸೆಂಟರ್‌ ರೂಪ ತಾಳಿತು.

ದುಬೈನಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡ ಯಶ್-ರಾಧಿಕಾ; ಸಿಂಡ್ರೆಲಾ ಸಿನಿ ಎಂಟ್ರಿ ಯಾವಾಗ?

 ಬಹುಶಃ ಸುದೀಪ್‌ ಅವರಿಗೆ ಈ ಮಟ್ಟಿನ ಆಹಾರ ಪ್ರೀತಿ ಬೆಳೆಯಲು ಕಾರಣ ಅವರ ತಂದೆಯೇ ಇರಬೇಕು. ಹಾಗಂತ ಸುದೀಪ್‌ ಅವರು ತಿಂಡಿಪೋತರಲ್ಲ. ತಿನ್ನೋದರಲ್ಲಿ ಅವರಿಗೆ ಆಸಕ್ತಿ ಅಷ್ಟಿಲ್ಲ. ಆದರೆ ಹೊಸ ಹೊಸ ರುಚಿಗಳನ್ನು ಟ್ರೈ ಮಾಡಿ ಪ್ರೀತಿ ಪಾತ್ರರಿಗೆ ಬಡಿಸಿ ಅವರು ಸಂತೃಪ್ತಿಯಿಂದ ಉಂಡು ಮೆಚ್ಚಿದರೆ ಈ ಸ್ಟಾರ್‌ ನಟನಲ್ಲಿ ಸಾರ್ಥಕ ಭಾವ. ಸುದೀಪ್‌ ಮನೆಯಲ್ಲಿ ಹೆಚ್ಚಿನ ಪತ್ರಿಕಾ ಸಂದರ್ಶನಗಳಾಗೋದು ಅವರ ಈ ಕಿಚನ್‌ನಲ್ಲೇ. ಅಲ್ಲಿ ಅವರು ಓಪನ್‌ಅಪ್‌ ಆದಷ್ಟೂ ಬೇರೆಲ್ಲೂ ಆಗಲ್ಲ ಅಂತಾರೆ ಬಲ್ಲವರು.

ಸುದೀಪ್‌ ಅಡುಗೆ ಎಷ್ಟು ರುಚಿಯಾಗಿರುತ್ತೆ ಅಂದ್ರೆ ಇತ್ತೀಚೆಗೆ ಅವರ ಆತ್ಮೀಯ ಬಾಡಿಗಾರ್ಡ್ ಒಬ್ಬರಿಗೆ ನಿಮ್ಮ ಬರ್ತ್ ಡೇಗೆ ಏನು ಗಿಫ್ಟ್ ಕೊಡಲಿ ಅಂತ ಸುದೀಪ್ ಕೇಳಿದಾಗ, ನಿಮ್ಮ ಕೈಯ್ಯಾರೆ ಬಿರಿಯಾನಿ ಮಾಡಿಕೊಡಿ ಅಣ್ಣಾ ಅಂದರಂತೆ ಅವರು. ಸುದೀಪ್ ಅವರಿಗೆ ರುಚಿಯಾದ ಬಿರಿಯಾನಿ ಮಾಡಿಕೊಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಮಂದಿಯೂ ಕಿಚ್ಚನ ಕೈ ಅಡುಗೆ ಉಂಡ ಅದೃಷ್ಟಶಾಲಿಗಳು. ಸರಿಯಾದ ಊಟ, ನಿದ್ದೆಯಿಲ್ಲದೇ ಬರಗೆಟ್ಟಿದ್ದ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಸಖತ್‌ ಖುಷಿ ನೀಡಿದ್ದು ಕಿಚ್ಚನ ಅಡುಗೆ.

ಇದೊಂದು ಬ್ಯೂಟಿಫುಲ್ ಚಾಲೆಂಜ್: ಕೋಟಿಗೊಬ್ಬ ಕಲಹ ಕುರಿತು ಕಿಚ್ಚ ಮಾತು

ಸದ್ಯಕ್ಕಂತೂ ಕೋಟಿಗೊಬ್ಬ 3 ಹವಾದ ನಡುವೆಯೂ ಕಿಚ್ಚ ಸುದೀಪ್ ಆಗಾಗ ಅಡುಗೆ ಮನೆಯಲ್ಲಿ ನಿರಾಳರಾಗಿ ಸಮಯ ಕಳೆಯುತ್ತಾರೆ. ಈ ಸಂಭ್ರಮ, ಗಲಾಟೆಗಳ ನಡುವೆಯೂ ಅವರ ಮನಸ್ಸಿಗೆ ಬಹಳ ಆಪ್ತವಾಗೋದು ಅವರ ಅಡುಗೆಮನೆಯಲ್ಲೇ ಅನ್ನೋದರಲ್ಲಿ ಎರಡು ಮಾತಿಲ್ಲ.