10ನೇ ಕ್ಲಾಸ್‌ ಹುಡುಗನ ಪಾತ್ರಕ್ಕೆ ದೇಹ ಇಳಿಸೋದು ಒಂಥರಾ ಎಗ್ಸೈಟಿಂಗ್‌ ಆಗಿತ್ತು. 15-16 ಕೆಜಿ ತೂಕ ಕಡಿಮೆ ಮಾಡಿದ್ದೇನೆ ಎಂದರು ವಿನಯ್‌ ರಾಜ್‌ಕುಮಾರ್‌.

- ಪ್ರಿಯಾ ಕೆರ್ವಾಶೆ

- ಅಂದೊಂದಿತ್ತು ಕಾಲ ಸಿನಿಮಾದಲ್ಲಿ ನನ್ನದು ನಿರ್ದೇಶಕನ ಪಾತ್ರ. ಇದು ಫೀಲ್‌ ಗುಡ್‌ ಸಿನಿಮಾ. ಇದರಲ್ಲಿ ನಿರ್ದೇಶಕನ ಬದುಕಿನ ಏರಿಳಿತಗಳ ಚಿತ್ರಣವಿದೆ. ಆತನ ವೈಯುಕ್ತಿಕ ಬದುಕಿನ ಝಲಕ್‌ ಇದೆ. ಸಿನಿಮಾ ಡೈರೆಕ್ಟರ್‌ ಆಗ್ತೀನಿ ಅಂದರೆ ಮನೆಯಲ್ಲಿ ಅಷ್ಟಾಗಿ ಪ್ರೋತ್ಸಾಹ ಇರಲ್ಲ. ಸಕ್ಸಸ್‌ ಸಿಗದ ಹೊರತು ಸಮಾಜವೂ ಬೆಂಬಲಿಸುವುದಿಲ್ಲ. ಹೀಗಿರುವಾಗ ತನ್ನ ಕನಸಿನ ಬೆನ್ನೇರಿ ಹೊರಟ ನಿರ್ದೇಶಕ ಯಾವೆಲ್ಲ ಸನ್ನಿವೇಶಗಳಿಗೆ ಮುಖಾಮುಖಿಯಾಗುತ್ತಾನೆ ಅನ್ನುವ ಅಂಶ ಸಿನಿಮಾದಲ್ಲಿದೆ.

- ಈ ಸಿನಿಮಾದಲ್ಲಿ 3 ಕಾಲಘಟ್ಟಗಳಲ್ಲಿ ಮೂರು ವಯಸ್ಸಿನಲ್ಲಿ ಕಾಣಿಸಿಕೊಂಡಿದ್ದೇನೆ. 16ನೇ ವಯಸ್ಸಿನ ಹತ್ತನೇ ಕ್ಲಾಸ್‌ ಹುಡುಗ, ಕಾಲೇಜ್‌ ಬಾಯ್‌ ಹಾಗೂ ಆ ನಂತರದ ನಿರ್ದೇಶಕನಾಗಿ ಕೆಲಸ ಮಾಡುವ ದಿನಗಳ ಚಿತ್ರಣ ಇದೆ. ಹೆಚ್ಚು ಕಮ್ಮಿ ಸಿನಿಮಾದುದ್ದಕ್ಕೂ ತೆಳ್ಳನೆಯ ಹುಡುಗನ ಲುಕ್ಕೇ ಇರುತ್ತೆ. ಯಾಕೆಂದರೆ ನಿರ್ದೇಶನ ಕ್ಷೇತ್ರಕ್ಕೆ ಬರುವ ಹುಡುಗರಿಗೆ ಬಾಡಿ ಬಿಲ್ಡ್‌ ಮಾಡಲಿಕ್ಕೆಲ್ಲ ವ್ಯವಧಾನ ಇರುವುದಿಲ್ಲ. ಅವರ ಧ್ಯಾನವೆಲ್ಲ ಕೆಲಸದ ಮೇಲೇ ಇರುತ್ತದೆ. ಆರಂಭಿಕ ಹಂತದಲ್ಲಿ ಅವರು ತೆಳ್ಳಗೆಯೇ ಇರುತ್ತಾರೆ.

- 10ನೇ ಕ್ಲಾಸ್‌ ಹುಡುಗನ ಪಾತ್ರಕ್ಕೆ ದೇಹ ಇಳಿಸೋದು ಒಂಥರಾ ಎಗ್ಸೈಟಿಂಗ್‌ ಆಗಿತ್ತು. 15-16 ಕೆಜಿ ತೂಕ ಕಡಿಮೆ ಮಾಡಿದ್ದೇನೆ. ತೂಕ ಇಳಿಸೋದು ಅಂದಾಕ್ಷಣ ಹಸಿದುಕೊಂಡಿರೋದು, ಆಹಾರ ತಗೊಳ್ಳದೇ ಇರುವುದು ಅಂತಲ್ಲ. ಹಾಗೆ ಮಾಡಿದರೆ ದೇಹ ಬತ್ತಿ ಹೋದಂತಾಗುತ್ತದೆ. ತರಕಾರಿಗಳನ್ನು ಹೆಚ್ಚು ತಿಂದು, ಹೆಚ್ಚೆಚ್ಚು ವ್ಯಾಯಾಮ ಮಾಡಬೇಕು, ನಾನಿಷ್ಟು ತೂಕ ಇಳಿಸಬೇಕು ಅನ್ನುವುದು ತಲೆಯಲ್ಲಿರಬೇಕು. ತೂಕ ಇಳಿಯದಿದ್ದರೆ ಟೆನ್ಶನ್‌ ಆಗುತ್ತೆ. ಹಾಗೆ ಆತಂಕ ಆದರಷ್ಟೇ ಮಾಡಬೇಕಾದ ಕೆಲಸದ ಚುರುಕು ಮುಟ್ಟೋದು. ನಾನು ಈ ಹಿಂದೆಯೂ ‘10’ ಅನ್ನೋ ಸಿನಿಮಾಕ್ಕೆ ತೂಕ ಇಳಿಸಲು ಇದಕ್ಕಿಂತ ಹೆಚ್ಚು ಕಷ್ಟಪಟ್ಟಿದ್ದೆ.

- ನಾನು ಸಿಂಪಲ್‌ ಮ್ಯಾನ್‌ ಲುಕ್‌ನಲ್ಲೇ ಜನರಿಗೆ ಹತ್ತಿರವಾದ ಕಾರಣ ಆ ಥರದ ಪಾತ್ರಗಳೇ ಹೆಚ್ಚೆಚ್ಚು ಬರ್ತಿವೆ. ಆದರೆ ನನಗೆ ಎಲ್ಲಾ ಜಾನರಾಗಳನ್ನೂ ಎಕ್ಸ್‌ಪ್ಲೋರ್‌ ಮಾಡೋದಿಷ್ಟ. ಮುಂಬರುವ ‘ಗ್ರಾಮಾಯಣ’, ‘ಸಿಟಿಲೈಟ್ಸ್‌’ ಸಿನಿಮಾ ಲುಕ್‌ಗೂ ಈ ಸಿನಿಮಾದ ಲುಕ್‌ಗೂ ಅಜಗಜಾಂತರ ವ್ಯತ್ಯಾಸ ಇದೆ.

- ನಾನು ಕನ್ನಡದಲ್ಲೇ ಆರಾಮವಾಗಿದ್ದೇನೆ, ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ಒಂದು ವೇಳೆ ಅವಕಾಶ ಬಂದರೆ ಆ ಯೋಚಿಸಿದರಾಯಿತು. ಸದ್ಯಕ್ಕಂತೂ ಕನ್ನಡ ಸಿನಿಮಾದಲ್ಲೇ ಖುಷಿಯಾಗಿದ್ದೇನೆ.