ಸುಶಾಂತ್ ಸಾವಿನ  ನಂತರ ಚಿತ್ರರಂಗದಲ್ಲಿ ಸ್ವಜನಪಕ್ಷಪಾತದ ಬಗ್ಗೆ ಮಾತುಗಳು ಹೆಚ್ಚಾಗಿವೆ. ಅದರಲ್ಲೂ ರಾಜ್‌ಕುಮಾರ್‌ ಮೊಮ್ಮಕ್ಕಳನ್ನು ಹಾಗೂ ಉಪೇಂದ್ರ ಅಣ್ಣನ ಮಗನನ್ನು ಟ್ರೋಲ್ ಮಾಡಿದ್ದಕ್ಕೆ ನಟ ವಿನಯ್ ರಾಜ್‌ಕುಮಾರ್‌ ನೆಟ್ಟಿಗರಿಗೆ ಖಡಕ್‌ ಉತ್ತರ ನೀಡಿದ್ದಾರೆ.

ಬಾಲಿವುಡ್‌ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಚಿತ್ರರಂಗದಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ಶುರುವಾಗಿದೆ. ಯಾರ ಬೆಂಬಲವಿಲ್ಲದೇಚಿತ್ರರಂಗಕ್ಕೆ ಎಂಟ್ರಿ ಕೊಡುವವರಿಗೆ ಇಲ್ಲಿ ಸ್ಥಾನವಿಲ್ಲ ಹಾಗೂ ಅವಕಾಶ ಗಿಟ್ಟಿಸಿಕೊಳ್ಳುವುದು ಕಷ್ಟ, ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ವಿಷಯವಾಗಿ ಅಶ್ವಿನಿ ನಕ್ಷತ್ರ ಖ್ಯಾತಿಯ ಜೆಕೆ ಉರೂಫ್ ಜಯರಾಮ್ ಕಾರ್ತಿಕ್ ಮೊದಲು ಧ್ವನಿ ಎತ್ತಿದರೂ, ಅವರ ಬೆಂಬಲಕ್ಕೆ ನಿಂತವರು ಕಡಿಮೆ. ಅದು ಅಲ್ಲಿಗೇ ಮುಗಿದ ಅಧ್ಯಾಯವಾಗಿತ್ತು. ಈ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ನಟ-ನಟಿಯ ಬಗ್ಗೆ ಮಾಡಿದ ಟ್ರೋಲ್‌ವೊಂದನ್ನು ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ವಿನಯ್ ಖಂಡಿಸಿದ್ದಾರೆ.

ಮೂವಿ ಮಾಫಿಯಾವೂ ಇಲ್ಲ, ಸುಶಾಂತ್ ಬಗ್ಗೆ ಅಪ್ಡೇಟ್‌ ನನಗಿಲ್ಲ; ನಟ ನಸೀರುದ್ದೀನ್ ಹೇಳಿಕೆ ವೈರಲ್!

ಹೌದು! ಡಾ.ರಾಜ್‌ಕುಮಾರ್‌ ಅವರ ಮಕ್ಕಳು ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು. ಈಗ ಅವರ ಮೊಮ್ಮಕ್ಕಳೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ರಾಮ್‌ಕುಮಾರ್‌ ಪುತ್ರಿ ಧನ್ಯಾ ಹಾಗೂ ಪುತ್ರ ಧಿರೀನ್‌, ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವ ರಾಜ್‌ ಮತ್ತು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಬೇರ ಬೇರೆ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಎಲ್ಲೆಡೆ ಹರಿದಾಡುತ್ತಿರುವ ಈ ಫೋಟೋವನ್ನು ವಿನಯ್ ರಾಜ್‌ಕುಮಾರ್‌ ಶೇರ್ ಮಾಡಿಕೊಂಡು, ಅದಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸಿದ್ದಾರೆ.

View post on Instagram

ವಿನಯ್ ಪೋಸ್ಟ್‌ ವೈರಲ್:
ಚಕ್ರವರ್ತಿ ಟ್ರೋಲ್‌ ಎಂಬ ಪೇಜ್‌ ಶೇರ್ ಮಾಡಿದ್ದ ಪೋಟೋವನ್ನು ವಿನಯ್‌ ಅಪ್ಲೋಡ್‌ ಮಾಡಿ ಹೀಗೆ ಬರೆದುಕೊಂಡಿದ್ದಾರೆ. 'ಲೇ ನೆಪೋಟಿಸಂ ಬಗ್ಗೆ ಮಾತು, ಅದೂ ನಮ್ಮ ಕನ್ನಡದಲ್ಲಿ! ನೋ ವೇ. ತಮ್ಮ ಮನೆ ಮಕ್ಕಳನ್ನಷ್ಟೇ ಬೆಳಸುವುದಿಲ್ಲ. ನಮ್ಮ ಬ್ಯಾನರ್‌ನಲ್ಲಿ ಹೊರಗಿನ ಜನರಿಗೂ ಅವಕಾಶ ಕೊಟ್ಟು ಬೆಳಸುತ್ತಾರೆ. ಟ್ಯಾಲೆಂಟ್‌ ಬಗ್ಗೆ ಮಾತನಾಡುತ್ತೀಯಾ? ನಿನಗೆ ಏನು ಟ್ಯಾಲೆಂಟ್‌ ಇದೆ? ಮೊದಲು ನೆಗೆಟಿವ್‌ ಆಗಿ ಥಿಂಕ್ ಮಾಡುವುದನ್ನು ನಿಲ್ಲಿಸಿ. ನಿಜವಾಗಲೂ ನೆಪೋಟಿಸಂ ಇದ್ದಿದ್ರೆ ಇಂಡಸ್ಟ್ರಿಯಲ್ಲಿ ಯಾರೂ ಹೊರಗಿನರು ಇರೋಕೆ ಆಗ್ತಾನೇ ಇರ್ಲಿಲ್ಲ. ಡಾ. ರಾಜ್‌ಕುಮಾರ್‌ ಏನು ಅಂತ ಒಂದು ಕಾಲದಲ್ಲಿ ಹೊರಗಿನವರಾಗಿದ್ದ ಜಗ್ಗೇಶ್‌ ಸರ್ ಹತ್ರ ಕೇಳಿ. ಡಾ.ರಾಜ್ ಮಕ್ಕಳು ಹೇಗೆ ಅಂತ ಡಾರ್ಲಿಂಗ್ ಕೃಷ್ಣ ಮತ್ತೆ ಯಶ್‌ ಸರ್‌ಗೂ ಕೇಳಿ. ಅವರೆಲ್ಲ ಉತ್ತರಿಸುತ್ತಾರೆ. ಫಾಲೋವರ್ಸ್‌ ಜಾಸ್ತಿ ಆಗಬೇಕು, ನಿಮ್ಮ ಪೋಸ್ಟ್‌ ವೈರಲ್ ಆಗಬೇಕು ಅಂತ ಇಂಥ ಕಚಡಾ ಕೆಲಸ ಮಾಡ್ತಿದ್ಯಾ ಟ್ರೋಲ್‌ ಚಕ್ರವರ್ತಿ ಪೇಜ್? ಪಿಆರ್‌ಕೆ ಬ್ಯಾನರ್‌ ಬಗ್ಗೆ ಗೊತ್ತಾ? ವಜ್ರೇಶ್ವರಿ ಕಂಬೈನ್ಸ್‌ ಬಗ್ಗೆ ಗೊತ್ತಾ? ಲಾ, ಫ್ರೆಂಚ್‌ ಬಿರಿಯಾನಿ, ಮಾಯಾ ಬಜಾರ್‌ ಬಗ್ಗೆ ಗೊತ್ತಾ? ಅದರಲ್ಲಿ ಯಾರು ಯಾರು ನಟಿಸಿದ್ದಾರೆ ಅಂತಾದ್ರೂ ಗೊತ್ತಾ? ಮೊದಲು ಚೆನ್ನಾಗಿ ತಿಳ್ಕೊಳಪ್ಪ' ಎಂದು ವಿನಯ್ ಬರೆದುಕೊಂಡಿದ್ದಾರೆ.

ನೆಪೊಟಿಸಂ ವಿಷಯ ಎತ್ತಿದ್ದಕ್ಕೆ ಕಂಗಾನ ವಿರುದ್ಧ ಸೋನಾಕ್ಷಿ ಸಿನ್ಹಾ ಕಿಡಿ

ವಿನಯ್ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರ ನಡುವೆಯೇ ಪರ, ವಿರೋಧ ಚರ್ಚೆಗಳು ಆರಂಭವಾಗಿವೆ. ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಸ್ವಜನಪಕ್ಷಪಾತದ ಬಗ್ಗೆ ಪರ, ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದಕ್ಕೆ ಇಂಬು ನೀಡುವಂತೆ ಬಾಲಿವುಡ್‌ಗೆ ಹೊರಗಿನಿಂದ ಬಂದು, ನೆಲೆಯೂರಿದ ಕಂಗನಾ ರಣಾವತ್ ಬಾಲಿವುಡ್ ಮಾಫಿಯಾದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಹಾಗೂ ಸುದ್ದಿ ವಾಹಿನಿಗಳ ಮೂಲಕ ಹಲವು ಸ್ಫೋಟಕ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಅಷ್ಟೇ ಅಲ್ಲದೇ ಬಾಲಿವುಡ್‌ನಲ್ಲಿ ಮಹೇಶ್ ಭಟ್ ಹಾಗೂ ಕರಣ್ ಜೋಹರ್ ಅವರು ಹೇಳಿದ್ದೇ ನಡೆಯುವುದೆಂದೂ ನೇರವಾಗಿ ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಎ.ಆರ್.ರೆಹಮಾನ್ ಅವರಂಥ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಇತರೆ ನಿರ್ದೇಶಕರು ಮತ್ತು ನಟರು ಕಂಗನಾ ಮಾತನ್ನು ಪರೋಕ್ಷವಾಗಿ ಒಪ್ಪಿಕೊಂಡು ತಮಗೆ ಆದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಇದೀಗ ಡ್ರಗ್ಸ್ ಮಾಫಿಯಾದ ಕರಾಳ ಮುಖ ಕಳಚಿ ಬೀಳುತ್ತಿದ್ದು, ಬಾಲಿವುಡ್‌ನಿಂದ ಶುರುವಾದ ಮಾಫಿಯಾ, ನಮ್ಮ ಸ್ಯಾಂಡಲ್‌ವುಡ್‌ಗೂ ಹಬ್ಬುವಂತೆ ಕಾಣಿಸುತ್ತಿದೆ. 

ಈಗ ಜಾನ್ವಿ ಕಪೂರ್ ಮೇಲೂ ನೆಪೊಟಿಸಂ ಆರೋಪ!

ಒಟ್ಟಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ವಜನಪಕ್ಷಪಾತ ಎಂಬ ವಿಷ ಬೀಜ ಮೊಳಕೆ ಒಡೆಯುತ್ತಿರುವುದು ಸುಳ್ಳಲ್ಲ. ಆದರೆ, ಯಾರಿಗೆ ನೈಜ ಪ್ರತಿಭೆ ಹಾಗೂ ಸೌಂದರ್ಯ ಇರುತ್ತದೋ ಅವರು ಮಾತ್ರ ಸುದೀರ್ಘ ಕಾಲ ಉಳಿಯುತ್ತಾರೆಂಬುವುದೂ ಅಷ್ಟೇ ಸತ್ಯ. ಅದರಲ್ಲಿಯೂ ಸಿನಿ ಕ್ಷೇತ್ರದಲ್ಲಿ ಪ್ರೇಕ್ಷಕರನ್ನು ಸೆಳೆದಿಡಬೇಕೆಂದರೆ ಪ್ರತಿಭೆ ಇರುವುದು ಅನಿವಾರ್ಯ ಎಂಬುವುದನ್ನು ಮಾತ್ರ ಒಪ್ಪಲೇ ಬೇಕಾದ ಸತ್ಯ.