ಹುಬ್ಬಳ್ಳಿ(ಜೂ.06): ಈವರೆಗೂ ರಾಜ್ಯಸಭೆಗೆ ತಮ್ಮನ್ನು ಸದಸ್ಯನನ್ನಾಗಿ ಮಾಡಲು ಪಕ್ಷದ ಯಾವ ಮುಖಂಡರು ನನ್ನನ್ನು ಸಂಪರ್ಕಿಸಿಲ್ಲ. ಪಕ್ಷ ನನಗೆ ಏನು ಆದೇಶ ಕೊಡುತ್ತದೆಯೋ ಅದನ್ನು ಪಾಲಿಸುತ್ತೇನೆ ಎಂದು ಮಾಜಿ ಸಂಸದ, ಉದ್ಯಮಿ ಡಾ.ವಿಜಯ ಸಂಕೇಶ್ವರ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಕ್ಷದ ಸಾಮಾನ್ಯ ಹಾಗೂ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಹೇಳಿದರು.ಇದೇ ವೇಳೆ ತಮ್ಮ ಮಾಜಿ ಸಂಸದ ಹಾಗೂ ಮಾಜಿ ಎಂಎಲ್ಸಿ ಸ್ಥಾನಗಳಿಂದ ಬರುವ ಪಿಂಚಣಿ ಹಣವನ್ನು ಸಂಪೂರ್ಣವಾಗಿ ‘ಕೊರೋನಾ ಪರಿಹಾರ’ಕ್ಕೆ ಬಳಸಿಕೊಳ್ಳುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು. ಕೊರೋನಾದಿಂದ ಇಡೀ ದೇಶವೇ ತತ್ತರಿಸಿದೆ. ಇಂಥ ಸಂದರ್ಭದಲ್ಲಿ ಸರ್ಕಾರದ ಜತೆಗೆ ಕೈಜೋಡಿಸುವುದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ ಲೋಕಸಭೆ ಮತ್ತು ವಿಧಾನಪರಿಷತ್‌ ಸದಸ್ಯತ್ವದ ಪಿಂಚಣಿ ಮೊತ್ತವನ್ನು ‘ಕೊರೋನಾ ಪರಿಹಾರ’ಕ್ಕೆ ನೀಡುತ್ತಿರುವುದಾಗಿ ಹೇಳಿದರು.

ಹುಬ್ಬಳ್ಳಿಯಲ್ಲಿ ವಿಶ್ವದ ಅತೀ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌!

ಕೊರೋನಾ ಮಹಾಮಾರಿ ಮುಂದೆ ಇಡೀ ಜಗತ್ತೇ ಮಂಡಿಯೂರಿದೆ. ಆದರೆ ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೊರೋನಾ ಸಂದರ್ಭದಲ್ಲಿ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಅಗ್ನಿಹೋತ್ರ ಮಾಡಿ: 

ಅಗ್ನಿಹೋತ್ರ ಹೋಮ ವೈರಸುಗಳನ್ನು ತಡೆಯುವಲ್ಲಿ, ಸಕಾರಾತ್ಮಕ ಶಕ್ತಿ ಜಾಗೃತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ ಕಾರಣ ಎಲ್ಲರೂ ಅಗ್ನಿಹೋತ್ರ ಹೋಮ ಮಾಡಬೇಕು ಎಂದು ಮನವಿ ಮಾಡಿದರು.