Darshan Thoogudeepa The Devil Movie: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಅವರು ಸದ್ಯ ಜೈಲಿನಲ್ಲಿದ್ದಾರೆ. ಈಗ ಅವರ ಪತ್ನಿ ವಿಜಯಲಕ್ಷ್ಮೀ ಅವರು ನಾನೇ ಎಲ್ಲ ವಿಚಾರದ ಬಗ್ಗೆ ಅಪ್‌ಡೇಟ್ ಕೊಡ್ತೀನಿ ಎಂದಿದ್ದಾರೆ.
ನಟ ದರ್ಶನ್ ತೂಗುದೀಪ ಅವರು ( Darshan Thoogudeepa The Devil Movie ) ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇನ್ನು 'ದಿ ಡೆವಿಲ್' ಸಿನಿಮಾದ ಕೆಲಸ ಮುಗಿದಿದ್ದರೂ ಕೂಡ, ದರ್ಶನ್ ಅನುಪಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಮಾಡ್ತಾರಾ ಇಲ್ಲವಾ ಎಂಬ ಪ್ರಶ್ನೆ ಎದುರಾಗಿದೆ. ಇನ್ನು ಈ ಸಿನಿಮಾ ನಿರ್ಮಾಪಕ ಪ್ರಕಾಶ್ ಕೂಡ ಮುಂದಿನ ದಾರಿ ತಿಳಿಯದೆ, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈಗ ವಿಜಯಲಕ್ಷ್ಮೀ ಅವರೇ ಎಲ್ಲದನ್ನು ಹ್ಯಾಂಡಲ್ ಮಾಡ್ತೀನಿ ಎಂದಿದ್ದಾರೆ.
ವಿಜಯಲಕ್ಷ್ಮೀ ದರ್ಶನ್ ಪೋಸ್ಟ್ ಏನು?
ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮೆಲ್ಲರನ್ನೂ ತಮ್ಮ ಹೃದಯದಲ್ಲಿ ಹೊತ್ತುಕೊಂಡಿರುತ್ತಾರೆ. ಅವರು ನಿಮ್ಮೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಹಿಂತಿರುಗುವವರೆಗೆ, ಅವರ ಪರವಾಗಿ ಅಪ್‌ಡೇಟ್ಸ್ ಮತ್ತು ಸಿನಿಮಾ ಪ್ರಚಾರಗಳನ್ನು ಹಂಚಿಕೊಳ್ಳಲು ನಾನು ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತೀನಿ.
ನೀವು ತೋರಿಸುತ್ತಿರುವ ಪ್ರೀತಿ, ಪ್ರಾರ್ಥನೆ ಮತ್ತು ತಾಳ್ಮೆ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಅಪಾರ ಶಕ್ತಿಯನ್ನು ನೀಡುತ್ತದೆ. ಆ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸಿಕೊಳ್ಳೋಣ. ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ, ನೀವು ಯಾವಾಗಲೂ ತಿಳಿದಿರುವ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ. ಕೃತಜ್ಞತೆ ಮತ್ತು ಪ್ರೀತಿಯಿಂದ, ವಿಜಯಲಕ್ಷ್ಮಿ ದರ್ಶನ್
ನಟ ದರ್ಶನ್ ತಿಳಿಸಿದ ಮೆಸೇಜ್ ಏನು?
ವಿಜಯಲಕ್ಷ್ಮೀ ದರ್ಶನ್ ಅವರು ದರ್ಶನ್ ಕಳಿಸಿದ ಸಂದೇಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. “ಕನ್ನಡ ಕಲಾಭಿಮಾನಿಗಳಿಗೆ, ನನ್ನ ಸೆಲೆಬ್ರಿಟಿಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು. ನನ್ನ ಸುಖ- ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತವರಿಗೆ ನಾನು ಜೀವನ ಪರ್ಯಂತ ಆಭಾರಿ. ನಾನು ಎಲ್ಲೇ ಇರಲಿ, ಹೇಗೆ ಇರಲಿ ನಿಮ್ಮ ಶ್ರೇಯೋಭಿಲಾಷೆಯನ್ನೇ ಬಯಸುವೆ. ಈಗ ಏನೇ ಆಗುತ್ತಿರಲಿ, ನನ್ನ ನಂಬಿರುವ ನಿರ್ದೇಶಕ, ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಕರ್ತವ್ಯ. ಹೀಗಾಗಿ ನನ್ನ ʼದಿ ಡೆವಿಲ್ʼ ಸಿನಿಮಾದ ಎಲ್ಲ ಕೆಲಸ ಕಾರ್ಯಗಳು ಅಡೆತಡೆ ಇಲ್ಲದೆ ಸಾಗಬೇಕು. ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ಧೃಡವಾಗಿ ನಂಬಿದ್ದೇನೆ. ಸಿನಿಮಾವು ಮನರಂಜನೆಯ ಮಾಧ್ಯಮ. ಅದನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ನೋಡಬೇಕು” ಎಂದು ದರ್ಶನ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್ ಏನು?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. 2024 ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ಆಗಿತ್ತು. ಪವಿತ್ರಾ ಗೌಡ ಎನ್ನುವವರಿಗೆ ರೇಣುಕಾಸ್ವಾಮಿ ಅವರು ಅಶ್ಲೀಲ ಮೆಸೇಜ್ ಕಳಿಸಿದ್ದರು ಎಂದು ಅವರನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ಪಟ್ಟಣಗೆರೆ ಶೆಡ್‌ನಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಆ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದರು. ಆ ದೇಹವನ್ನು ರಾಜಕಾಲುವೆಗೆ ಬಿಸಾಡಲಾಗಿತ್ತು. ದರ್ಶನ್ ಗ್ಯಾಂಗ್ ಪರವಾಗಿ ಇಬ್ಬರು ಪೊಲೀಸ್ ಠಾಣೆಗೆ ಬಂದು, ನಾವು ಒಂದು ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದರು. ಇದರ ಬಗ್ಗೆ ಹೆಚ್ಚಿನ ತನಿಖೆ ಮಾಡಿದಾಗ ದರ್ಶನ್ ಹೆಸರು ಕೇಳಿಬಂದಿತ್ತು. ಆ ಬಳಿಕ ಒಟ್ಟೂ 17 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಬೆನ್ನು ನೋವು ಇದೆ, ಆಪರೇಶನ್ ಮಾಡಿಸಿಕೊಳ್ಳಬೇಕು ಎಂದು ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಹೈಕೋರ್ಟ್ ದರ್ಶನ್‌ಗೆ ಜಾಮೀನು ನೀಡಿತ್ತು. ಜಾಮೀನು ಅವಧಿಯಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾದ ದರ್ಶನ್ ಅವರು ಆಪರೇಶನ್ ಮಾಡಿಸಿಕೊಂಡಿರಲಿಲ್ಲ. ಈ ಜಾಮೀನನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡುವುದರ ಜೊತೆಗೆ, ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ಕೊಡಬೇಡಿ ಎಂದು ಹೇಳಿತ್ತು. ತಕ್ಷಣ ಬಂಧಿಸುವಂತೆ ಆದೇಶ ಹೊರಡಿಸಿತ್ತು.

