Actor Darshan Thoogudeepa Arrest: ನಟ, ಪತಿ ದರ್ಶನ್‌ ತೂಗುದೀಪ ಅವರು ಮತ್ತೆ ಜೈಲಿಗೆ ಹೋಗಿರೋದು ವಿಜಯಲಕ್ಷ್ಮೀಗೆ ಬೇಸರ ತಂದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ದುಃಖವನ್ನು ಹಂಚಿಕೊಂಡಿದ್ದಾರೆ. 

ಕಳೆದ ಡಿಸೆಂಬರ್‌ನಿಂದ ಮೊನ್ನೆಯವರೆಗೂ ನಟ, ಪತಿ ದರ್ಶನ್‌ ತೂಗುದೀಪ ಜೊತೆ ವಿಜಯಲಕ್ಷ್ಮೀ ಅವರು ಹೆಚ್ಚಿನ ಸಮಯ ಕಳೆದಿದ್ದರು. ರಾಜಸ್ಥಾನ ಹಾಗೂ ವಿದೇಶದಲ್ಲಿ 'ಡೆವಿಲ್'‌ ಸಿನಿಮಾ ಶೂಟಿಂಗ್‌ ಇದ್ದಾಗಲೂ ಕೂಡ ಅಲ್ಲಿ ವಿಜಯಲಕ್ಷ್ಮೀ ಅವರು ಹೋಗಿದ್ದುಂಟು. ಹೊಸಕೆರೆಹಳ್ಳಿಯ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಿಜಯಲಕ್ಷ್ಮೀ ಮನೆ ಇದ್ದರೆ, ಆರ್‌ ಆರ್‌ ನಗರದಲ್ಲಿ ದರ್ಶನ್‌ ಮನೆಯಿದೆ. ಜೈಲಿಗೆ ಹೋಗಿ ಬಂದಾಗಿನಿಂದ ದರ್ಶನ್‌ ಅವರು ಪತ್ನಿ ಜೊತೆಗೆ ಇದ್ದಿದ್ದೇ ಜಾಸ್ತಿ. ಈಗ ಮತ್ತೆ ದರ್ಶನ್‌ ಜೈಲಿಗೆ ಹೋಗಿದ್ದು, ವಿಜಯಲಕ್ಷ್ಮೀ ಮನಸ್ಸು ಕದಲಿಸಿದೆ.

ಸೋಶಿಯಲ್‌ ಮೀಡಿಯಾ ಫೋಟೋ ಹಂಚಿಕೊಂಡ ವಿಜಯಲಕ್ಷ್ಮೀ!

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಪ್ರಾಣಿಗಳನ್ನು ನೋಡುತ್ತ ನಿಂತ ದರ್ಶನ್‌ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಜಯಲಕ್ಷ್ಮೀ ಅವರು, “ಹೃದಯ ಒಡೆದಿದೆ” ಎಂದು ಅರ್ಥಕೊಡುವ ಇಮೋಜಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ದರ್ಶನ್‌ ಅವರು ಜೈಲಿಗೆ ಹೋಗಿರೋದು ಬೇಸರ ತಂದಿದೆ ಎಂದು ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ವಿಜಯಲಕ್ಷ್ಮೀ ಅವರು ದರ್ಶನ್‌ ಜೈಲಿಗೆ ಹೋದಾಗಿನಿಂದ ಆಗಾಗ ಏನಾದರೂ ಪೋಸ್ಟ್‌ ಮಾಡುತ್ತಿದ್ದರು. ಈಗ ಅವರು ಮತ್ತೊಮ್ಮೆ ಬೇಸರ ಹೊರಹಾಕಿದ್ದಾರೆ.

ವಿಜಯಲಕ್ಷ್ಮೀಗೆ ಮಿಶ್ರ ಪ್ರತಿಕ್ರಿಯೆ!

ದರ್ಶನ್‌ ಅವರು ಪರಪ್ಪನ ಅಗ್ರಹಾರದಲ್ಲಿದ್ದಾಗಿನಿಂದ, ಬಳ್ಳಾರಿ ಜೈಲಿಗೆ ಹೋಗುವ ತನಕ ಅವರು ವಾರಕ್ಕೊಮ್ಮೆ ಜೈಲಿಗೆ ಹೋಗಿ ಗಂಡನನ್ನು ನೋಡಿಕೊಂಡು ಬರುತ್ತಿದ್ದರು. ಪ್ರತಿ ಬಾರಿಯೂ ಅವರು ಹಣ್ಣು-ತಿಂಡಿಗಳನ್ನು ಕೊಟ್ಟು ಬರುತ್ತಿದ್ದರು. ಕಷ್ಟದ ಸಮಯದಲ್ಲಿಯೂ ಗಂಡನನ್ನು ಬಿಟ್ಟುಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಸಾಕಷ್ಟು ಜನರು ವಿಜಯಲಕ್ಷ್ಮೀಯನ್ನು ಬೆಂಬಲಿಸಿದ್ದುಂಟು. ಗಂಡ ತಪ್ಪು ಮಾಡಿದಾಗ ಪ್ರೋತ್ಸಾಹಿಸೋದು ಸರಿ ಅಲ್ಲ ಎಂದು ಕೆಲವರು ತಿಳಿ ಹೇಳಿದ್ದುಂಟು.

70 ದಿನಗಳ ಜೈಲುವಾಸ!

ಅದೇನೇ ಇರಲಿ, ಪತಿ ಜೈಲಿನಲ್ಲಿದ್ದಾಗ ಬಿಡಿಸಿಕೊಂಡು ಬರಲು ವಿಜಯಲಕ್ಷ್ಮೀ ಅವರು ಸಿಕ್ಕಾಪಟ್ಟೆ ಒದ್ದಾಡಿದ್ದಾರೆ ಎಂದು ದರ್ಶನ್‌ ಸಹೋದರ ದಿನಕರ್‌ ತೂಗುದೀಪ ಕೂಡ ಸಂದರ್ಶನಗಳಲ್ಲಿ ಹೇಳಿದ್ದರು. ಸ್ನೇಹಿತೆ ಪವಿತ್ರಾ ಗೌಡಗೆ ಫೇಕ್‌ ಅಕೌಂಟ್‌ ಮೂಲಕ ಅಶ್ಲೀಲ ಮೆಸೇಜ್‌ ಕಳಿಸಿದ್ದರು ಎಂದು ನಟ ದರ್ಶನ್‌ ಅವರು 2024 ಜೂನ್‌ ತಿಂಗಳಿನಲ್ಲಿ ಚಿತ್ರದುರ್ಗ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿಸಿ, ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆಸಿದ್ದರು. ಅಲ್ಲಿ ಅವರ ಮೇಲೆ ನಿರಂತರ ದೌರ್ಜನ್ಯ ಮಾಡಲಾಗಿತ್ತು. ಆ ನೋವಿನಲ್ಲಿ ಅವರು ಸಾವನ್ನಪ್ಪಿದ್ದಾಗ ಅವರ ಹೆಣವನ್ನು ರಾಜಕಾಲುವೆಗೆ ಬಿಸಾಡಲಾಗಿತ್ತು. ಇಬ್ಬರು ಪೊಲೀಸ್‌ ಠಾಣೆಗೆ ಬಂದು ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದರು. ತನಿಖೆ ಮಾಡಿದ ಬಳಿಕ ದರ್ಶನ್‌ ಹೆಸರು ಕೇಳಿ ಬಂದಿತ್ತು. ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಹನ್ನೊಂದು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 70 ದಿನಗಳ ಬಳಿಕ ದರ್ಶನ್‌ಗೆ ಜಾಮೀನು ಸಿಕ್ಕಿತ್ತು.

ಜಾಮೀನು ರದ್ದಾಗಿದೆ!

ದರ್ಶನ್‌ ಅವರಿಗೆ ಜಾಮೀನು ಕೊಟ್ಟಿದ್ದು, ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ಕೊಟ್ಟಿದ್ದನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್‌ ಜಾಮೀನು ಅರ್ಜಿಯನ್ನು ರದ್ದು ಮಾಡಿದೆ. ಈಗ ಮತ್ತೆ ದರ್ಶನ್‌ ಜೈಲು ಸೇರಿದ್ದಾರೆ. ಇನ್ನು ಆರು ತಿಂಗಳುಗಳ ಕಾಲ ಅವರಿಗೆ ಜಾಮೀನು ಸಿಗೋದಿಲ್ಲ, ಕೋರ್ಟ್‌ನಲ್ಲಿ ಟ್ರಯಲ್‌ ಶುರುವಾಗಿ ತೀರ್ಪು ಏನೆಂದು ಇತ್ಯರ್ಥವಾಗುವುದು.

ಮುಂದೆ ಏನಾಗುವುದು?

ತಪ್ಪು ಮಾಡಿರೋದು ಸಾಬೀತಾದರೆ ಜೀವಾವಧಿ ಶಿಕ್ಷೆ ಆಗುವುದು, ಇಲ್ಲದಿದ್ದರೆ ರಿಲೀಸ್‌ ಆಗುವುದು. ಆದರೆ ಈ ಪ್ರಕರಣ ಬಗೆಹರಿಯಲು ಇನ್ನೂ ಆರು ತಿಂಗಳು ಬೇಕು ಎಂಬ ಮಾತು ವ್ಯಕ್ತವಾಗ್ತಿದೆ.