Vijayalakshmi Darshan Instagram Post: ನಟ ದರ್ಶನ್ ಜೈಲು ಸೇರಿದ ಬಳಿಕ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿವೆ.
ನಟ ದರ್ಶನ್ ಜೈಲು ಸೇರಿದ ಬಳಿಕ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿವೆ. ಇದೀಗ ಅವರು ಹಂಚಿಕೊಂಡಿರುವ ಮತ್ತೊಂದು ಪೋಸ್ಟ್ ಕೂಡ ಅಭಿಮಾನಿಗಳು ಹಾಗೂ ನೆಟ್ಟಿಗರ ಗಮನ ಸೆಳೆದಿದೆ.
ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಮಾಕ್ಯ ದೇವಿಯ ಫೋಟೋವನ್ನು ಹಂಚಿಕೊಂಡಿದ್ದು, ಅದರೊಂದಿಗೆ “ದೇವರಿಗೆ ಗೊತ್ತು, ಅಷ್ಟೇ ಸಾಕು” ಎಂಬ ಅರ್ಥಪೂರ್ಣ ಕ್ಯಾಪ್ಷನ್ ಬರೆದಿದ್ದಾರೆ. ಇದಕ್ಕೆ ಜೊತೆಯಾಗಿ “ಎಲ್ಲಿಗೆ ಓಡುವೆ ಓ ಮನುಜ, ನಿನ್ನ ಕರ್ಮಗಳೆಲ್ಲಾ ಇಲ್ಲೇ ಕೊನೆ” ಎಂಬ ಹಾಡನ್ನೂ ಹಾಕಿಕೊಂಡಿದ್ದಾರೆ.
ಈ ಒಂದು ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ. ವಿಜಯಲಕ್ಷ್ಮಿ ಯಾವ ಸಂದರ್ಭವನ್ನು ಉದ್ದೇಶಿಸಿ ಈ ಮಾತುಗಳನ್ನು ಬರೆದಿದ್ದಾರೆ? ಯಾರಿಗಾದರೂ ಪರೋಕ್ಷ ಸಂದೇಶ ನೀಡಿದ್ದಾರಾ? ಅಥವಾ ತಮ್ಮ ವೈಯಕ್ತಿಕ ಭಾವನೆಗಳನ್ನು ಹಂಚಿಕೊಂಡಿದ್ದಾರಾ ಎಂಬ ಪ್ರಶ್ನೆಗಳು ನೆಟ್ಟಿಗರಲ್ಲಿ ಮೂಡಿವೆ.
ಇದರ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣವೂ ಕಾನೂನು ಹಂತದಲ್ಲಿ ಹೊಸ ಬೆಳವಣಿಗೆಗಳನ್ನು ಕಾಣುತ್ತಿದೆ. ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವುದು ಪ್ರಕರಣದ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈ ಬೆಳವಣಿಗೆಗಳ ನಡುವೆಯೇ ವಿಜಯಲಕ್ಷ್ಮಿ ಅವರ ಹೊಸ ಪೋಸ್ಟ್ ಬಂದಿರುವುದು ಮತ್ತಷ್ಟು ಗಮನ ಸೆಳೆದಿದೆ.
ಇದರ ಹಿಂದಿನ ಅರ್ಥವೇನು?
ವಿಜಯಲಕ್ಷ್ಮಿ ಈ ಹಿಂದೆ ಕೂಡ “ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ, ಅದು ವಸ್ತುವಾಗಲಿ, ವ್ಯಕ್ತಿಯಾಗಲಿ” ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಕರ್ಮ ಹಾಗೂ ದೇವರನ್ನು ಉಲ್ಲೇಖಿಸಿರುವ ಪೋಸ್ಟ್ ಹಾಕಿರುವುದರಿಂದ, ಇದರ ಹಿಂದಿನ ಅರ್ಥವೇನು ಎಂಬ ಚರ್ಚೆ ಜೋರಾಗಿದೆ.
ಆದರೆ ವಿಜಯಲಕ್ಷ್ಮಿ ತಮ್ಮ ಪೋಸ್ಟ್‌ನಲ್ಲಿ ಯಾರನ್ನೂ ನೇರವಾಗಿ ಉಲ್ಲೇಖಿಸಿಲ್ಲ. ಹೀಗಾಗಿ ಈ ಸಂದೇಶದ ನಿಜವಾದ ಉದ್ದೇಶವೇನು ಎಂಬುದು ಸದ್ಯಕ್ಕೆ ಅವರಿಗೇ ಗೊತ್ತು. ಒಂದು ಸಣ್ಣ ಕ್ಯಾಪ್ಷನ್, ಆದರೆ ಅದರಿಂದ ಹುಟ್ಟಿಕೊಂಡಿರುವ ಪ್ರಶ್ನೆಗಳು ಮಾತ್ರ ಹಲವು!


