ಮತ್ತೆ ಕನ್ನಡ ನಾಡಿನಲ್ಲಿಯೇ ಹುಟ್ಟಿ ಬನ್ನಿ ಬಾಲು ಸರ್
ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ವಿಧಿವಶ/ ಕೊರೋನಾ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು/ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನ/ ಗಾನ ಲೋಕ ತೊರೆದ ಗಂಧರ್ವ
ಚೆನ್ನೈ (ಸೆ.25): ಗಾನ ಲೋಕದ ದೊರೆ ಸಹಸ್ರಾರು ಅಭಿಮಾನಿಗಳನ್ನು, ತಮ್ಮ ಅದ್ಭುತ ಕಂಠಸಿರಿಯ ಸಾವಿರಾರು ಹಾಡುಗಳನ್ನು ಬಿಟ್ಟು ಅಗಲಿದ್ದಾರೆ. ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ (74) ಇನ್ನಿಲ್ಲ. ಕೊರೋನಾ ಕಾರಣಕ್ಕೆ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಏನೋ ಹೆದರಿ ಅವರಿಂದ ದೂರವಾಗಿತ್ತು. ಆದರೆ, ಹದಗೆಟ್ಟ ಶ್ವಾಸಕೋಶದ ಆರೋಗ್ಯ ಚೇತರಿಸಿಕೊಳ್ಳಲೇ ಇಲ್ಲ. ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು.
"
ಚೆನ್ನೈ: ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ (74) ಸಂಗೀತ ಲೋಕವನ್ನು ಬಿಟ್ಟು ಅಗಲಿದ್ದಾರೆ. ಚೆನ್ನೈ MGM ಆಸ್ಪತ್ರೆಯಲ್ಲಿ SP ಬಾಲಸುಬ್ರಹ್ಮಣ್ಯಂ ಚಿಕಿತ್ಸೆ ಪಡೆಯುತ್ತಿದ್ದರು. ಆ.5ರಂದು SPBಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಎಸ್‌ಪಿಬಿಗೆ ಕೊರೋನಾ ನೆಗೆಟಿವ್ ಬಂದಿದ್ದರೂ, ಉಳಿದ ಆರೋಗ್ಯ ಸಮಸ್ಯೆ ಅವರನ್ನು ಕಾಡುತ್ತಿತ್ತು. ಎಸ್ಪಿಬಿ ಪತ್ನಿ ಸಾವಿತ್ರಿ, ಮಗ ಚರಣ್, ಮಗಳು ಪಲ್ಲವಿ ಮತ್ತು ಅಸಂಖ್ಯ ಅಭಿಮಾನಿಗಳನ್ನು ಅಗಲಿದ್ದಾರೆ.
ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ 1946, ಜೂನ್ 4ರಂದು ನೆಲ್ಲೂರಿನಲ್ಲಿ ಜನಿಸಿದವರು. 1966ರಲ್ಲಿ ಹಿನ್ನೆಲೆ ಗಾಯಕರಾಗಿ ವೃತ್ತಿ ಆರಂಭಿಸಿದರು ಬಾಲು, ಮೊದಲ ಚಿತ್ರ ತೆಲುಗಿನ ‘ಮರ್ಯಾದಾ ರಾಮಣ್ಣ’. 1966ರಲ್ಲೇ ಕನ್ನಡದಲ್ಲೂ ಹಾಡಿದ ಬಾಲಸುಬ್ರಹ್ಮಣ್ಯಂ ‘ನಕ್ಕರೆ ಅದೇ ಸ್ವರ್ಗ’ ಚಿತ್ರಕ್ಕೆ ದನಿ ನೀಡಿದರು. ವಿವಿಧ ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಜನರ ಮನಸ್ಸಿಗೆ ತಲುಪಿಸಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು, ತಮಿಳು ಚಿತ್ರರಂಗದಲ್ಲಿ ಎಸ್‌ಪಿಬಿ ಮಹೋನ್ನತ ನಾಯಕರಿಗೆ ದನಿ ನೀಡಿದ್ದಾರೆ.
ಪ್ರಶಸ್ತಿಗಳು :
4 ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳಿಗಳಿಗೆ ಎಸ್‌ಪಿಬಿ ಭಾಜನರಾಗಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪುರಸ್ಕಾರ ಅವರನ್ನು ಅಲಂಕರಿಸಿದೆ. 25 ಬಾರಿ ಆಂಧ್ರಪ್ರದೇಶ ಸರ್ಕಾರದ ‘ನಂದಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. 4 ಭಾಷೆಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಗಾಯಕ ಎಂಬ ಹಿರಿಮೆ ಅವರದ್ದು. ಹಲವು ವಿಶ್ವ ವಿದ್ಯಾಲಯಗಳು ಎಸ್ಬಿಪಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿವೆ.
ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಹಿನ್ನೆಲೆ ಧ್ವನಿ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ನಿರಂತರ ಸಾಧನೆ ಮಾಡಿದ್ದಾರೆ.
ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ರಾಷ್ಟ್ರ ಪ್ರಶಸ್ತಿಯ ಗರಿ ಮುಡಿಗೇರಿದ್ದು, ಮತ್ತೆ ಅದೆಷ್ಟೋ ರಾಜ್ಯ ಪ್ರಶಸ್ತಿಗಳು ಹಾಗೂ ಇನ್ನಿತರೆ ಪ್ರಶಸ್ತಿಗಳು ಅವರಿಗೆ ಸಂದಿವೆ. ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿದ ಬಾಲಸುಬ್ರಹ್ಮಣ್ಯಂ ಅವರಿಗೆ ಸಾಟಿ ಯಾರೂ ಇರಲೂ ಸಾಧ್ಯವೇ ಇಲ್ಲ.
ಆಗೊಂದು ಯುಗ, ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರು. ಬಾಲು ಚಿತ್ರರಂಗಕ್ಕೆ ಬಂದು ಈ ಎಲ್ಲ ಭಾಷೆಗಳಿಗೂ ಸಾರ್ವಭೌಮರಾಗಿಬಿಟ್ಟರು. ಒಮ್ಮೆ ಅವರು ತಮಿಳು ತೆಲುಗಿನಲ್ಲಿ ಒಂದೇ ದಿನದಲ್ಲಿ 19 ಗೀತೆಗಳನ್ನು ಧ್ವನಿಮುದ್ರಿಸಿದ್ದರು.
ಕನ್ನಡದಲ್ಲಿಟೂ ಒಂದೇ ದಿನ 17 ಗೀತೆಗಳನ್ನು ಧ್ವನಿಮುದ್ರಿಸಿದ್ದರು, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ರೆಕಾರ್ಡ್ ಮಾಡಿದ್ದ ಎಸ್ಬಿಪಿ. ಇದು ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ವೈಶಾಲ್ಯತೆಗಳಿಗೆನಿದರ್ಶನ.
ಹಲವು ಹೀರೋಗಳನ್ನು ಹುಟ್ಟಿಸಿದ ಎಸ್‌ಪಿಬಿ ಗಾಯನ
‘ಹಾವಿನ ದ್ವೇಷ ಹನ್ನೆರಡು ವರುಷ’ ಎಂದು ಎಸ್. ಪಿ. ಹಾಡಿದಾಗ ವಿಷ್ಣುವರ್ಧನ್ ರಾಮಾಚಾರಿಯಾಗಿಬಿಟ್ಟರು. ‘ಸ್ನೇಹದ ಕಡಲಲ್ಲಿ ಎಂದು ಹಾಡಿದಾಗ’ ಶ್ರೀನಾಥ್ ಗರಿಗೆದರಿಬಿಟ್ಟರು. ‘ಎಲ್ಲಿರುವೇ ಮನವ ಕಾಡುವ ರೂಪಸಿಯೇ’ ಎಂದು ಅನಂತ್ ನಾಗ್ ಆಕಾಶಕ್ಕೆ ಹಾರಿದರು. ‘ನಲಿವಾ ಗುಲಾಬಿ ಹೂವೆ’ ಎಂದು ಶಂಕರ್ ಭಾವಸ್ಥರಾದರು.
ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ 70-80ರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿ ಬಾಲು ಅವರದ್ದು. ಅವರ ಧ್ವನಿಯ ಮೋಡಿ ಎಂ.ಜಿ. ಆರ್, ಶಿವಾಜಿ ಗಣೇಶನ್, ಎನ್ ಟಿ ರಾಮರಾವ್, ರಾಜ್ ಕುಮಾರ್, ಅಕ್ಕಿನೇನಿ ಅಂತಹ ಹಿರಿಯರಿಗೆ ಕೂಡಾ ಆಗಾಗ ಇಣುಕಿತ್ತು.
ನಿಮಗೆ ಗೊತ್ತಿರದ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಹಿಂದಿಯಲ್ಲಿ ‘ಏಕ್ ದೂಜೇ ಕೆ ಲಿಯೇ’ ಬಂದಾಗ ಬಾಲು ಹಿಂದಿ ಚಿತ್ರರಂಗವನ್ನೂ ತಮ್ಮ ಮೋಡಿಗೆ ಸೆಳೆದುಕೊಂಡರು. ಸಾಜನ್, ಮೈ ನೇ ಪ್ಯಾರ್ ಕಿಯಾ, ಹಮ್ ಆಪ್ ಕೆ ಹೈ ಕೌನ್’ ಮುಂತಾದ ಚಿತ್ರಗಳು ಬಂದಾಗ ರಫಿ, ಕಿಶೋರ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದ ಹಿಂದಿ ಚಿತ್ರರಂಗಕ್ಕೆ ಬಾಲು ಬೆನ್ನೆಲುಬಾಗಿದ್ದರು.
ಮತ್ತೊಂದು ಜನ್ಮವೊಂದು ಇದ್ದರೆ ಕನ್ನಡ ನಾಡಿನಲ್ಲಿಯೇ ಹುಟ್ಟುವುದಾಗಿ ಸದಾ ಹೇಳುತ್ತಿದ್ದ ಬಾಲು ಸರ್ ಸಂಗೀತ ಲೋಕವನ್ನು ಅಗಲಿದ್ದು ತುಂಬಲಾರದ ನಷ್ಟ. ಹೋಗಿ ಬನ್ನಿ ಸರ್. ಮತ್ತೆ ಕರುನಾಡಿನಲ್ಲಿಯೇ ಹುಟ್ಟಿ ಬನ್ನಿ. ಇಂಥ ಮಹಾನ್ ಗಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿ.