‘31 ಡೇಸ್‌’, ವಿ ಮನೋಹರ್‌ ಅವರು ಸಂಗೀತ ಸಂಯೋಜಿಸಿರುವ 150ನೇ ಸಿನಿಮಾ. ಈ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ತಾವು ಸಂಗೀತ ನಿರ್ದೇಶಕನಾಗಿದ್ದು ಹೇಗೆಂದು ಹೇಳಿಕೊಂಡರು.

ನಟ ಉಪೇಂದ್ರ ಅವರಿಂದ ರಾತ್ರಿ ಪೂರ್ತಿ ಬೈಯಿಸಿಕೊಂಡ ಮೇಲೆ ಮರು ದಿನ ಸಂಗೀತ ನಿರ್ದೇಶಕನಾಗಲು ಮನಸ್ಸು ಮಾಡಿದೆ. ಅಲ್ಲಿಂದ ಇಲ್ಲಿವರೆಗೂ 150 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ. ಹೀಗೆ ಹೇಳಿದ್ದು ಸಂಗೀತ ನಿರ್ದೇಶಕ ವಿ ಮನೋಹರ್‌ ಅವರು. ‘31 ಡೇಸ್‌’, ವಿ ಮನೋಹರ್‌ ಅವರು ಸಂಗೀತ ಸಂಯೋಜಿಸಿರುವ 150ನೇ ಸಿನಿಮಾ. ಈ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ತಾವು ಸಂಗೀತ ನಿರ್ದೇಶಕನಾಗಿದ್ದು ಹೇಗೆಂದು ಹೇಳಿಕೊಂಡರು.

‘ನಿಜ ಹೇಳಬೇಕು ಎಂದರೆ ನಾನು ಸಿನಿಮಾ ನಿರ್ದೇಶಕನಾಗಲು ಚಿತ್ರರಂಗಕ್ಕೆ ಬಂದವನು. ಕತೆ ಬರೆದುಕೊಂಡು ನಿರ್ಮಾಪಕರಾಗಿ ಸಾಕಷ್ಟು ಹುಡುಕಾಟ ಕೂಡ ಮಾಡಿಡುತ್ತಿದ್ದೆ. ಹಾಗೆ ನಿರ್ಮಾಪಕರ ಹುಡುಕಾಟದಲ್ಲಿದ್ದಾಗ ಉಪೇಂದ್ರ ಅವರು ಜಗ್ಗೇಶ್‌ ಅವರ ಜತೆಗೆ ‘ತರ್ಲೆ ನನ್ಮಗ’ ಚಿತ್ರ ಶುರು ಮಾಡಿದಾಗ ಅವರು ನನ್ನನ್ನೇ ಸಂಗೀತ ನಿರ್ದೇಶಕನಾಗುವಂತೆ ಒತ್ತಾಯ ಮಾಡಿದರು.

ಅದಕ್ಕೆ ಕಾರಣ ನಾನು ಮತ್ತು ಎಲ್‌ ಎನ್‌ ಶಾಸ್ತ್ರಿ ಅವರು ಸೇರಿ ಮಾಡಿದ್ದ ಒಂದು ಆಲ್ಬಂ. ಆದರೆ, ನಾನು ಸಂಗೀತ ಮಾಡಲು ಒಪ್ಪಲಿಲ್ಲ. ಇದೇ ವಿಷಯವಾಗಿ ರಾತ್ರಿ ಪೂರ್ತಿ ಉಪೇಂದ್ರ ಅವರಿಂದ ಬೈಯಿಸಿಕೊಂಡಿದ್ದು ಆಯಿತು. ಮರು ದಿನ ಸಂಗೀತ ನಿರ್ದೇಶಕನಾಗಲು ಒಪ್ಪಿದೆ. ‘ತರ್ಲೆ ನನ್ಮಗ’ ಸಿನಿಮಾ ಹಿಟ್‌ ಆಯಿತು. ಆ ನಂತರ ಜಗ್ಗೇಶ್‌ ಅವರು ‘ಭಂಡ ನನ್ನ ಗಂಡ’ ಚಿತ್ರಕ್ಕೆ ಸಂಗೀತ ಮಾಡಿದೆ. ಅದೂ ಸೂಪರ್‌ ಹಿಟ್‌ ಆಯಿತು.

ಅಲ್ಲಿಂದ ಸತತವಾಗಿ ಜಗ್ಗೇಶ್‌ ಅವರೊಬ್ಬರಿಗೇ 28 ಚಿತ್ರಗಳಿಗೆ ಸಂಗೀತ ಮಾಡಿದೆ. ಹೀಗೆ ನನಗೇ ಇಷ್ಟ ಇಲ್ಲದೆ ಆಯ್ಕೆ ಮಾಡಿಕೊಂಡ ಸಂಗೀತವನ್ನೇ 150 ಚಿತ್ರಗಳಿಗೆ ಸಂಯೋಜನೆ ಮಾಡಿದ್ದಾನೆ. ಈಗಲೂ ನನ್ನ ಆಸೆ ಸಿನಿಮಾ ನಿರ್ದೇಶಕನಾಗಬೇಕು ಎಂಬುದು’ ಎಂದು ವಿ ಮನೋಹರ್‌ ಹೇಳಿಕೊಂಡರು. ನಿರಂಜನ್‌ ಶೆಟ್ಟಿ ಅರಿಗೆ ‘31 ಡೇಸ್‌’ ನಾಯಕನಾಗಿ 8ನೇ ಸಿನಿಮಾ. ನಾಗವೇಣಿ ಎನ್‌ ಶೆಟ್ಟಿ ಚಿತ್ರದ ನಿರ್ಮಾಪಕರು. ರಾಜಾ ರವಿಕುಮಾರ್‌ ನಿರ್ದೇಶನದ ಈ ಚಿತ್ರಕ್ಕೆ ಪ್ರಜ್ವಲಿ ಸುವರ್ಣ ನಾಯಕಿ.