ಉಪೇಂದ್ರ ಹಾಗೂ ನಿರ್ದೇಶಕ ಆರ್‌ ಚಂದ್ರು ಕಾಂಬಿನೇಷನ್‌ನ ‘ಕಬ್ಜ’ ಚಿತ್ರಕ್ಕೆ ಸುದೀಪ್‌ ಎಂಬ ಹೈವೋಲ್ಟೇಜ್‌ ಜತೆಯಾಗುತ್ತಿದೆ. ಈ ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಪ್ಯಾನ್‌ ಇಂಡಿಯಾ ಸ್ಟಾರ್‌ ಎನಿಸಿಕೊಂಡಿರುವ ಸುದೀಪ್‌ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಆ ಮೂಲಕ ‘ಮುಕುಂದ ಮುರಾರಿ’ ಚಿತ್ರದ ನಂತರ ಮತ್ತೊಮ್ಮೆ ಉಪೇಂದ್ರ ಹಾಗೂ ಸುದೀಪ್‌ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ‘ಕಬ್ಜ’ ಚಿತ್ರದಲ್ಲಿ ಕಿಚ್ಚನ ಪಾತ್ರವೇನು ಹಾಗೂ ಅವರ ಗೆಟಪ್‌ ಹೇಗಿರಲಿದೆ ಎಂಬುದು ಸದ್ಯದ ಕುತೂಹಲ. ಯಾಕೆಂದರೆ ಇದು ಎಪ್ಪತ್ತು ಹಾಗೂ ಎಂಭತ್ತರ ದಶಕದ ಭೂತಕದ ಲೋಕದ ಕತೆ.

ಸುವರ್ಣ ಸೂಪರ್‌ ಸ್ಟಾರ್‌ನಲ್ಲಿ ಸಂಕ್ರಾಂತಿ ಸಂಭ್ರಮ, ನಟಿ ಮಯೂರಿಗೆ ತಾರೆಯರಿಂದ ಸೀಮಂತ

ಆ ದಿನಗಳ ರೌಡಿಸಂ ಕತೆಗೆ ಉಪೇಂದ್ರ ಹೀರೋ ಆಗಿದ್ದು, ಸುದೀಪ್‌ ಅವರು ನಾಯಕನೋ, ಖಳನಾಯಕನೋ ಎನ್ನುವ ಜಿಜ್ಞಾಸೆಯಂತೂ ಇದೆ. ಸಿನಿಮಾ ನೋಡಿದರೆ ನಂತರವೇ ಇದಕ್ಕೆ ಉತ್ತರ ದೊರೆಯಲಿದೆ. ಆದರೆ, ‘ಕಬ್ಜ’ ಚಿತ್ರದಲ್ಲಿ ಸುದೀಪ್‌ ಅವರ ಗೆಟಪ್‌ ಹೇಗಿರುತ್ತದೆ ಎನ್ನುವ ಕುತೂಹಲಕ್ಕೆ ಮಾತ್ರ ಜ.14ರ ಬೆಳಗ್ಗೆ 10 ಗಂಟೆಗೆ ಉತ್ತರ ದೊರೆಯಲಿದೆ. ಅಂದು ನಟ ಪುನೀತ್‌ರಾಜ್‌ಕುಮಾರ್‌ ಅವರೇ ಸುದೀಪ್‌ ಅವರ ‘ಕಬ್ಜ’ ಚಿತ್ರದ ಗೆಟಪ್‌ ಅನ್ನು ರಿವಿಲ್‌ ಮಾಡಲಿದ್ದಾರೆ.

ಅದ್ದೂರಿ ಮೇಕಿಂಗ್‌ಗಿಂದಲೇ ಗಮನ ಸೆಳೆದಿರುವ ಬಹುಭಾಷೆಯ ‘ಕಬ್ಜ’ ಚಿತ್ರಕ್ಕೆ ಸುದೀಪ್‌ ಅವರನ್ನು ಕರೆತರುವ ಮೂಲಕ ಸಂಕ್ರಾಂತಿ ಹಬ್ಬದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಪ್ಲಾನ್‌ ಮಾಡಿಕೊಂಡಿದ್ದಾರೆ ನಿರ್ಮಾಪಕರೂ ಆಗಿರುವ ಆರ್‌ ಚಂದ್ರು. ಈ ಬಗ್ಗೆ ಈಗಾಗಲೇ ಅಧಿಕೃತ ಘೋಷಣೆ ಮಾಡಿದ್ದಾರೆ.

‘ಯು’ ಜತೆ ಪ್ಲಸ್‌ ಹಾಗೂ ಪ್ರಶ್ನಾರ್ಥಕ ಚಿನ್ಹೆಯನ್ನು ಹಾಕಿ ‘ಯಾರು ಜತೆಯಾಗಲಿದ್ದಾರೆ ಊಹೆ ಮಾಡಿ’ ಎನ್ನುವಂತೆ ಪೋಸ್ಟರ್‌ ಬಿಡುಗಡೆ ಮಾಡಿದ್ದು, ಇದಕ್ಕೆ ‘ಮುಕುಂದ ಮುರಾರಿ’ ಜೋಡಿ ಮತ್ತೊಮ್ಮೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಆಗುತ್ತಿದೆ. ಅಲ್ಲಿಗೆ ಆರ್‌ ಚಂದ್ರು ಅವರು ‘ಕಬ್ಜ’ ಚಿತ್ರಕ್ಕೆ ಮತ್ತಷ್ಟುಪ್ಯಾನ್‌ ಇಂಡಿಯಾ ಇಮೇಜ್‌ ಕೊಡಲು ಆರಡಿ ಕಟೌಟು ಎನಿಸಿಕೊಂಡಿರುವ ಸುದೀಪ್‌ ಅವರನ್ನು ಕರೆತರುತ್ತಿದ್ದು, ಈಗಾಗಲೇ ಅವರಿಗೆ ಚಿತ್ರದ ಕತೆ ಹಾಗೂ ಸಂಭಾಷಣೆ ರೀಡಿಂಗ್‌ ಕೊಟ್ಟಿದ್ದಾರೆ.