ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಅವರ ಕಳೆದ ವರ್ಷದ ಹುಟ್ಟುಹಬ್ಬದಂದು ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ಆದರೆ ಈ ವರ್ಷ ಅವರ ಹುಟ್ಟುಹಬ್ಬದಂದು ಗಣೇಶ್‌ ಕಡೆಯಿಂದ ಭರ್ಜರಿ ಸುದ್ದಿಯೊಂದು ಬಂದಿದೆ. ಅದೇನು ಅಂತ ನೋಡಿ..

ಗೋಲ್ಡನ್ ಸ್ಟಾರ್' ನಟ ಗಣೇಶ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!

ಕನ್ನಡ ಚಿತ್ರರಂಗದ ನಟ, 'ಗೋಲ್ಡನ್ ಸ್ಟಾರ್'ಖ್ಯಾತಿಯ ನಟ ಗಣೇಶ್ ಇಂದು (02 July) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಗೊತ್ತೆ ಇದೆ. ಈ ಶುಭದಿನದಂದು ಅಭಿಮಾನಿಗಳಿಗೆ ಭರ್ಜರಿ ಖುಷಿ ಕೊಡುವ ಸಮಾಚಾರ ಕೊಟ್ಟಿದ್ದಾರೆ ಗಣೇಶ್. ಹೌದು, ಇದು ಅಂತಿಂಥ ಸುದ್ದಿಯಲ್ಲ, ಗಣೇಶ್ ನಟನೆಯ 'ಪಿನಾಕ' ಹಾಗೂ 'ಬೃಂದಾ ವಿಹಾರಿ' ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಅಚ್ಚರಿ ಎಂದರೆ, ಕೇವಲ 15 ದಿನಗಳ ಅಂತರದಲ್ಲಿ ಈ ಎರಡೂ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆ ಆಗಲಿವೆ. ಈ ಮೂಲಕ ಗಣೇಶ್ ಫ್ಯಾನ್ಸ್ ಒಂದೇ ತಿಂಗಳಲ್ಲಿ ಎರಡು ಹಬ್ಬಗಳನ್ನು ಆಚರಿಸಲಿದ್ದಾರೆ.

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಅವರ ಕಳೆದ ವರ್ಷದ ಹುಟ್ಟುಹಬ್ಬದಂದು ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ಆದರೆ ಈ ವರ್ಷ ಅವರ ಹುಟ್ಟುಹಬ್ಬದಂದು ಗಣೇಶ್‌ ಕಡೆಯಿಂದ ಭರ್ಜರಿ ಸುದ್ದಿಯೊಂದು ಬಂದಿದೆ. ಅವರ ನಟನೆಯ ಮುಂದಿನ ಎರಡು ಬಹುನಿರೀಕ್ಷಿತ ಚಿತ್ರಗಳಾದ 'ಬೃಂದಾವಿಹಾರಿ ಹಾಗೂ 'ಪಿನಾಕ' ರಿಲೀಸ್‌ ಡೇಟ್‌ ಘೋಷಣೆ ಆಗಿದೆ.

ಹೌದು, ಗಣೇಶ್‌ ನಟನೆಯ 'ಪಿನಾಕ' ಹಾಗೂ 'ಬೃಂದಾ ವಿಹಾರಿ' ಸಿನಿಮಾಗಳ ಶೂಟಿಂಗ್‌ ಮುಕ್ತಾಯಗೊಂಡಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ದಿನಾಂಕಗಳನ್ನು ಘೋಷಣೆ ಮಾಡಲಾಗಿದೆ. 'ಪಿನಾಕ' ಚಿತ್ರವು ಅಕ್ಟೋಬರ್‌ 2ರಂದು ತೆರೆಕಂಡರೆ, 'ಬೃಂದಾ ವಿಹಾರಿ' ಸಿನಿಮಾ ಅಕ್ಟೋಬರ್‌ 16ರಂದು ತೆರೆಗೆ ಬರಲಿದೆ. ಹೀಗೆ ಕೇವಲ 15 ದಿನಗಳ ಅಂತರದಲ್ಲಿ ಗಣೇಶ್‌ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಲಿರುವುದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ.

ಪಿನಾಕ: ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ

ಟಿ.ಜಿ. ವಿಶ್ವಪ್ರಸಾದ್ ಅವರ ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ನಿರ್ಮಾಣವಾಗಿರುವ, ನೃತ್ಯ ನಿರ್ದೇಶಕ ಧನಂಜಯ್ ಚೊಚ್ಚಲ ನಿರ್ದೇಶನ ಮಾಡಿರುವ 'ಪಿನಾಕ' ಚಿತ್ರದಲ್ಲಿ ಗಣೇಶ್‌ ಅವರಿಗೆ ವಿಭಿನ್ನ ಪಾತ್ರವಿದೆ. ಈ ಚಿತ್ರಕ್ಕಾಗಿ ನೆಲಮಂಗಲ ಬಳಿ ಆರು ಎಕರೆ ವಿಸ್ತಾರವಾದ ಪ್ರದೇಶದಲ್ಲಿ 500 ವರ್ಷಗಳ ಹಿಂದಿನ 'ದೇವಗಿರಿ' ಸಾಮ್ರಾಜ್ಯದ ಬೃಹತ್ ಸೆಟ್‍ ಹಾಕಲಾಗಿತ್ತು. ಆ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಕಲಾ ನಿರ್ದೇಶಕ ಸಂತೋಷ್‍ ಪಾಂಚಾಲ್ ಮತ್ತು ತಂಡದವರು ಎರಡು ತಿಂಗಳು ಶ್ರಮವಹಿಸಿ ಈ ಅದ್ಭುತ ಸೆಟ್‍ ನಿರ್ಮಿಸಿದ್ದರು.

ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸೌಂಡ್ ಮಾಡಿರುವ ಪ್ರತಿಷ್ಠಿತ 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಸಂಸ್ಥೆಯು 'ಪಿನಾಕ' ಚಿತ್ರಕ್ಕೆ ಬಂಡವಾಳ ಹೂಡಿದೆ. ಗಣೇಶ್ ಅವರ ವೃತ್ತಿಜೀವನದಲ್ಲೇ ಅತ್ಯಂತ ವಿಭಿನ್ನ ಹಾಗೂ ಬಿಗ್ ಬಜೆಟ್ ಸಿನಿಮಾ ಎನ್ನಲಾಗಿರುವ 'ಪಿನಾಕ' ಈಗ ಅಕ್ಟೋಬರ್‌ 2ರಂದು ತೆರೆಗೆ ಬರಲಿದೆ.

'ಕೃಷ್ಣಂ ಪ್ರಣಯ ಸಖಿ'- ಗಣೇಶ್-ಶ್ರೀನಿವಾಸರಾಜು ಕಾಂಬಿನೇಷನ್‌

'ಕೃಷ್ಣಂ ಪ್ರಣಯ ಸಖಿ' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸರಾಜು ಜೋಡಿಯ ಮೂಲಕ ಮೂಡಿಬರುತ್ತಿರುವ 'ಬೃಂದಾ ವಿಹಾರಿ' ಚಿತ್ರವು ಇದೇ ಅಕ್ಟೋಬರ್‌ 16ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುವ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಅತ್ಯಂತ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ʻಬೃಂದಾ ವಿಹಾರಿʼ ಕೂಡ ಪಕ್ಕಾ ರೊಮ್ಯಾಂಟಿಕ್ ಫ್ಯಾಮಿಲಿ ಜಾನರ್‌ ಚಿತ್ರವಾಗಿದ್ದು, ಗಣೇಶ್ ಜೋಡಿಯಾಗಿ ದೇವಿಕಾ ಭಟ್ ಮತ್ತು ಮಾಳವಿಕ ಶರ್ಮ ನಾಯಕಿಯರಾಗಿ ನಟಿಸಿದ್ದಾರೆ. ಸ್ವತಃ ನಿರ್ದೇಶಕ ಶ್ರೀನಿವಾಸರಾಜು ಅವರೇ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ವೆಂಕಟ್ ಪ್ರಸಾದ್ ಛಾಯಾಗ್ರಾಹಕರು.

ದಕ್ಷಿಣ ಭಾರತ ಸಿನಿರಂಗದ ಸದ್ಯದ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್, ಮಲಯಾಳಂ ಮೂಲದ ಹೇಶಮ್ ಅಬ್ದುಲ್ ವಹಾಬ್ ಅವರು ಬೃಂದಾ ವಿಹಾರಿ ಚಿತ್ರಕ್ಕೆ ಮೊದಲಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಈಗಾಗಲೇ ಹಲವು ಬ್ಲಾಕ್‌ಬಸ್ಟರ್ ಮತ್ತು ಸುಮಧುರ ಹಾಡುಗಳನ್ನು ನೀಡಿರುವ ಹೇಶಮ್, ʻಬೃಂದಾ ವಿಹಾರಿʼ ಚಿತ್ರಕ್ಕಾಗಿ ಸಂಯೋಜಿಸಿರುವ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಸಿನಿಮಾ ಸಹ ಅದ್ಭುತವಾಗಿ ಮೂಡಿಬಂದಿವೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ, ನಟ ಗಣೇಶ್ ಅವರ ಇಂದಿನ ಹುಟ್ಟುಹಬ್ಬವು ಅಭಿಮಾನಿಗಳು ವಿಶೇಷ ಉಡುಗೊರೆ ನೀಡಿದೆ. ಒಂದೇ ತಿಂಗಳಲ್ಲಿ ಎರಡು ಸಿನಿಮಾಗಳನ್ನು ನೋಡುವ ಅವಕಾಶ ಸಿಕ್ಕಿರೋದು ಅವರ ಫ್ಯಾನ್ಸ್‌ಗೆ ಭಾರೀ ಖುಷಿ ನೀಡಿದೆ.