ಟ್ರೆಂಡ್‌ ಆಗಿದೆ #BoycottPushpaInKarnataka  ಅಭಿಯಾನ-ಕನ್ನಡಕ್ಕೆ ಪುಷ್ಪ ಚಿತ್ರತಂಡದಿಂದ ಅವಮಾನ-ಹೆಸರಿಗೆ ಮಾತ್ರ ಕನ್ನಡ ಡಬ್ಬಿಂಗ್‌-ಡಬ್ಬಿಂಗ್‌ ನೆಪ ಹೇಳಿ ಕನ್ನಡದ ಮೇಲೆ ತೆಲುಗು ಚಿತ್ರಗಳ ಸವಾರಿ

ದೊಡ್ಡ ಮಟ್ಟದಲ್ಲಿ ಬಿಡುಗಡೆಯಾದ ಪ್ಯಾನ್‌ ಇಂಡಿಯಾ ಸಿನಿಮಾ ವಿರುದ್ಧ ಮೊದಲ ಬಾರಿಗೆ ದೊಡ್ಡ ಮಟ್ಟದ ವಿರೋಧ ಕೇಳಿಬಂದಿದೆ. ಅಲ್ಲು ಅರ್ಜುನ್‌ ನಟನೆಯ ತೆಲುಗಿನ ‘ಪುಷ್ಪ’ ಸಿನಿಮಾವನ್ನು ತಿರಸ್ಕರಿಸಲು ಸೋಷಿಯಲ್‌ ಮೀಡಿಯಾದಲ್ಲಿ ಕರೆ ಕೊಡಲಾಗಿದೆ. ಈ ಪ್ರಯುಕ್ತ ಶುರುವಾದ#BoycottPushpaInKarnataka ಅಭಿಯಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ಚಿತ್ರತಂಡ ಕನ್ನಡಕ್ಕೆ ಅವಮಾನ ಮಾಡಿರುವುದು.

ಸ್ವಾಗತ್‌ ಎಂಟರ್‌ಪ್ರೈಸಸ್‌ ಕರ್ನಾಟಕದಲ್ಲಿ ಈ ಸಿನಿಮಾದ ವಿತರಣಾ ಹಕ್ಕು ಪಡೆದುಕೊಂಡಿದೆ. ‘ಪುಷ್ಪ’ ಸಿನಿಮಾ ಶುಕ್ರವಾರ ಬುಕ್‌ ಮೈ ಶೋ ಲೆಕ್ಕಾಚಾರದ ಪ್ರಕಾರ ತೆಲುಗು ಭಾಷೆಯಲ್ಲಿ 595 ಪ್ರದರ್ಶನ, ತಮಿಳಿನಲ್ಲಿ 10 ಪ್ರದರ್ಶನ, ಮಲಯಾಳಂನಲ್ಲಿ 5 ಪ್ರದರ್ಶನ ಕಂಡಿತ್ತು. ಆದರೆ ಕನ್ನಡ ವರ್ಷನ್‌ ಪ್ರದರ್ಶನ ಇದ್ದಿದ್ದು ಕೇವಲ ಮೂರು ಶೋ. ಅದೂ ನಿನ್ನೆ ಮಾತ್ರ. ಶನಿವಾರದ ಹೊತ್ತಿಗೆ ಈ ಶೋಗಳ ಸಂಖ್ಯೆ 1 ತೋರಿಸಲಾಗುತ್ತಿತ್ತು. ಡಬ್ಬಿಂಗ್‌ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇದ್ದರೂ ಮೂಲ ತೆಲುಗು ಸಿನಿಮಾವನ್ನೇ ಪ್ರದರ್ಶನ ಮಾಡಿದ್ದು ನೋಡಿ ಕನ್ನಡ ಪರ ಹೋರಾಟಗಾರರು ಸೋಷಿಯಲ್‌ ಮೀಡಿಯಾದಲ್ಲಿ ಪುಷ್ಪ ಸಿನಿಮಾ ಬಹಿಷ್ಕರಿಸುವ ಕರೆಯನ್ನು ನೀಡಿದರು. ಆ ಕರೆಗೆ ವ್ಯಾಪಕ ಮೆಚ್ಚುಗೆ ಪ್ರಾಪ್ತವಾಗಿದೆ. ಚಿತ್ರತಂಡದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

Rashmika Mandanna Pushpa Interview: ನಾನು ಶಂಕರ್‌ನಾಗ್‌ ಅವರ ಫೀಮೇಲ್‌ ವರ್ಷನ್‌ ಎಂದ ವಲ್ಲಿ!

ಇಂಥದ್ದೇ ಭಾಷೆಯ ಚಿತ್ರವನ್ನು ಇಷ್ಟೇ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಬೇಕು, ಬಿಡುಗಡೆ ಮಾಡಬಾರದು ಎಂದು ಯಾರನ್ನೂ ನಾವು ನಿಯಂತ್ರಿಸುವುದಕ್ಕೆ ಅಧಿಕಾರ ಇಲ್ಲ. ಕಾನೂನಾತ್ಮಕವಾಗಿಯೂ ನಮಗೆ ಅಧಿಕಾರ ಇಲ್ಲ. ಆದರೆ, ಭಾಷೆ ಅಂತ ಬಂದಾಗ ವಿಶ್ವಾಸ, ಸ್ನೇಹಪೂರಕವಾಗಿ ಅವರಿಗೆ ಸಲಹೆ ಕೊಡಬಹುದು. ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲೇ ಸಿನಿಮಾ ಬಿಡುಗಡೆ ಮಾಡಿ ಎಂದು ಹೇಳುತ್ತೇವೆ. ತೆಗೆದುಕೊಳ್ಳುವುದು, ಬಿಡುವುದು ಅವರಿಗೇ ಬಿಟ್ಟವಿಚಾರ. ಈ ವಿಚಾರದಲ್ಲಿ ಯಾರನ್ನೂ ಒತ್ತಾಯ ಮಾಡಲಾಗದು. ಹೀಗಾಗಿ ‘ಪುಷ್ಪ’ ಚಿತ್ರದ ಬಹಿಷ್ಕಾರ ಅಭಿಯಾನಕ್ಕೆ ಸಂಬಂಧಿಸಿದಂತೆ ನಾವು ಅಧಿಕಾರಯುತವಾಗಿ ಏನೂ ಹೇಳಕ್ಕೆ ಆಗಲ್ಲ.- ಜೈರಾಜ್‌

ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ ಎಂದು ಶುರುವಾದ ಅಭಿಯಾನ ಇದೀಗ ಚಿತ್ರಕ್ಕೆ ಭಾರಿ ಹಾನಿ ಉಂಟು ಮಾಡುವ ಸಾಧ್ಯತೆ ಉಂಟಾಗಿದೆ. ಭಾಷೆ ವಿಚಾರಕ್ಕೆ ಬಂದರೆ ಯಾರೂ ಸಹಿಸಿಕೊಳ್ಳುವುದಿಲ್ಲ ಎಂದು ಕನ್ನಡ ಅಭಿಮಾನಿಗಳು ಸ್ಪಷ್ಟವಾಗಿ ಕರೆ ನೀಡಿದ್ದಾರೆ. ಪುಷ್ಪ ಮಾತ್ರವಲ್ಲ, ಬೇರೆ ಎಲ್ಲಾ ಸಿನಿಮಾಗಳಿಗೂ ಈ ಮೂಲಕ ಎಚ್ಚರಿಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

Rashmika Mandanna Bold Look: ಸಿಕ್ಕಾಪಟ್ಟೆ ಹಾಟ್ ಎಂದ ಕೇರಳ ಫ್ಯಾನ್ಸ್!

ಸಾಮಾನ್ಯವಾಗಿ ಪ್ರತೀ ಸಲ ದೊಡ್ಡ ಬಜೆಟ್‌ನ ಪರಭಾಷಾ ಸಿನಿಮಾ ಬಂದಾಗಲೂ ಕನ್ನಡ ಸಿನಿಮಾಗಳು ತೊಂದರೆ ಅನುಭವಿಸುತ್ತಿದ್ದವು. ಥಿಯೇಟರ್‌ಗಳು ಸಿಗುತ್ತಿರಲಿಲ್ಲ. ಡಬ್ಬಿಂಗ್‌ ಬಂದ ಮೇಲೆ ಡಬ್ಬಿಂಗ್‌ ಸಿನಿಮಾ ಬರುತ್ತದೆ ಎಂದು ಡಬ್ಬಿಂಗ್‌ ಪರ ಹೋರಾಟಗಾರರು ವಾದಿಸಿದ್ದರೂ ಡಬ್ಬಿಂಗ್‌ ಸಿನಿಮಾ ಪ್ರದರ್ಶನ ಕಾಣದೇ ಇರುವುದು ಅನೇಕರಲ್ಲಿ ಸಿಟ್ಟು ತರಿಸಿದೆ. ಇದಕ್ಕೆ ಪರಿಹಾರ ಏನು ಎಂದು ಕೇಳಿದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಅವರು, ‘ಇಂಥದ್ದೇ ಭಾಷೆಯ ಚಿತ್ರವನ್ನು ಇಷ್ಟೇ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಬೇಕು, ಬಿಡುಗಡೆ ಮಾಡಬಾರದು ಎಂದು ಯಾರನ್ನೂ ನಾವು ನಿಯಂತ್ರಿಸುವುದಕ್ಕೆ ಅಧಿಕಾರ ಇಲ್ಲ. ಕಾನೂನಾತ್ಮಕವಾಗಿಯೂ ನಮಗೆ ಅಧಿಕಾರ ಇಲ್ಲ’ ಎನ್ನುತ್ತಾರೆ.

ಡಬ್ಬಿಂಗ್‌ ಬೇಕು ಎಂದವರು ಈಗ ಮೂಲ ಭಾಷೆಯಲ್ಲಿ ಬರುವ ಚಿತ್ರವನ್ನು ತಿರಸ್ಕರಿಸಲಿ. ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲೇ ಸಿನಿಮಾ ನೋಡುತ್ತೇವೆ ಎನ್ನುವ ತೀರ್ಮಾನ ಮಾಡಲಿ. ಕನ್ನಡಿಗರು, ಕನ್ನಡ ಸಿನಿಮಾ ಮಾತ್ರ ನೋಡುತ್ತಾರೆ ಎನ್ನುವ ಎಚ್ಚರಿಕೆ ರವಾನೆ ಆಗಲಿ. ಕನ್ನಡ ಚಿತ್ರರಂಗದಲ್ಲಿರುವ ಎಲ್ಲಾ ನಟರು ವರ್ಷಕ್ಕೆ 3 ರಿಂದ 4 ಚಿತ್ರಗಳಲ್ಲಿ ನಟಿಸಲಿ. ಸ್ಟಾರ್‌ ನಟರ ಚಿತ್ರಗಳು ವರ್ಷಕ್ಕೆ ಮೂರಾದರೂ ಬಿಡುಗಡೆಗೆ ಬರಲಿ. ಕನ್ನಡ ಥಿಯೇಟರ್‌ಗಳಲ್ಲಿ ಕನ್ನಡ ನಟರ ಕನ್ನಡ ಚಿತ್ರಗಳೇ ಇರುವಂತೆ ನೋಡಿಕೊಳ್ಳಿ. ಖಂಡಿತ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. - ಪ್ರವೀಣ್‌ ಕುಮಾರ್‌ ಅಧ್ಯಕ್ಷ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌, ‘ಮಾತುಕತೆಯಲ್ಲಿ ಪರಭಾಷೆಯ ಚಿತ್ರಗಳು 25 ಚಿತ್ರಮಂದಿರಗಳಿಗಿಂತ ಹೆಚ್ಚು ಬಿಡುಗಡೆ ಮಾಡಬಾರದು ಎನ್ನುವ ನಿಯಮ ಮಾಡಿಕೊಂಡಿದ್ವಿ. ಆದರೆ, ಈಗ ಡಬ್ಬಿಂಗ್‌ ಬಂದಿದೆ. ಪ್ರಯೋಜನ ಏನು? ಇದು ಕನ್ನಡ ಭಾಷೆಯ ಮೇಲಾಗುತ್ತಿರುವ ದೌರ್ಜನ್ಯ. ಇದು ಬದಲಾಗಬೇಕು ಎಂದರೆ ಪ್ರೇಕ್ಷಕರು ಮನಸ್ಸು ಮಾಡಬೇಕು’ ಎನ್ನುತ್ತಾರೆ.

ಅಭಿಯಾನ ಎಲ್ಲಿಯವರೆಗೆ ಹೋಗಿ ಮುಟ್ಟುತ್ತದೆ ಅನ್ನುವುದು ಸದ್ಯದ ಕುತೂಹಲ. ಇದೇ ಹೊತ್ತಲ್ಲಿ ಪುಷ್ಪ ಚಿತ್ರ ಸಾಧಾರಣವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

"