ಕಂಬಳ ವಿವಾದ: ಸಿನಿಮಾದಲ್ಲಿ ನಟಿಸಲು ಒಪ್ಪದ ಕಾರಣಕ್ಕೆ ಸುಳ್ಳು ಆರೋಪ: ಶ್ರೀನಿವಾಸ ಗೌಡ ಸ್ಪಷ್ಟನೆ
ಕಂಬಳದ 'ಉಸೇನ್ ಬೋಲ್ಟ್' ವಿವಾದದ ವಿಚಾರದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ ವಿಚಾರ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಕಂಬಳ ಓಟಗಾರ ಶ್ರೀನಿವಾಸ ಗೌಡ ಹೇಳಿಕೆ ನೀಡಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಜು. 23): ಸದ್ಯ ನನ್ನ ವಿರುದ್ದ ದೂರು ಕೊಟ್ಟಿರೋ ಲೋಕೇಶ್ ಶೆಟ್ಟಿ ಕಂಬಳದ ಹೆಸರಿನಲ್ಲಿ ಸಿನಿಮಾ ಮಾಡಲು ಟೈಟಲ್ ರಿಜಿಸ್ಟರ್ ಮಾಡಿಸಿದ್ದರು. ಅದರಲ್ಲಿ ನನ್ನನ್ನು ನಟಿಸಲು ಕೇಳಿದ್ದರು. ಆದರೆ ನಾನು ಒಪ್ಪಿರಲಿಲ್ಲ. ಹೀಗಾಗಿ ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ಆರೋಪಿಸಿದ್ದಾರೆ. ಕಂಬಳದ 'ಉಸೇನ್ ಬೋಲ್ಟ್' ವಿವಾದದ ವಿಚಾರದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ ವಿಚಾರ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಕಂಬಳ ಓಟಗಾರ ಶ್ರೀನಿವಾಸ ಗೌಡ ಹೇಳಿಕೆ ನೀಡಿದ್ದಾರೆ. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಿದ್ದಾರೆ. ದೂರುದಾರ ಲೋಕೇಶ್ ಶೆಟ್ಟಿ ನಮ್ಮ ಊರಿನವರು. ನಾನು ಕಂಬಳದಲ್ಲಿ ದಾಖಲೆ ಮಾಡಿದಾಗಲೇ ಅವರು ಕಂಬಳ ಅಂತಾ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿದ್ದರು.
ಅದರಲ್ಲಿ ಆಕ್ಟ್ ಮಾಡುವಂತೆ ಕೇಳಿದ್ದರು, ಆದರೆ ಅವರು ಜನ ಸರಿ ಇಲ್ಲ ಅಂತ ಒಪ್ಪಲಿಲ್ಲ. ಅವರು ನಮ್ಮ ಜಾತಿಯವರನ್ನು ಕೀಳಾಗಿ ಕಾಣುತ್ತಾರೆ. ಈಗ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಜೊತೆ ವೀರ ಕಂಬಳ ಸಿನಿಮಾ ಮಾಡಿದ್ದೇನೆ. ಲೇಸರ್ ಬೀಮ್ ತಂತ್ರಜ್ಞಾನದ ಜೊತೆ ಕಂಬಳ ಓಟ ವಿಡಿಯೋ ರೆಕಾರ್ಡ್ ಆಗುತ್ತೆ. ಓಟವನ್ನು ನಕಲಿ ಅಂತಾ ಹೇಳಲು ಸಾಧ್ಯವಿಲ್ಲ.
ಕಂಬಳದ 'ಉಸೇನ್ ಬೋಲ್ಟ್' ವಿವಾದಕ್ಕೆ ಕಾರಣವಾಯ್ತಾ ರಾಜೇಂದ್ರ ಸಿಂಗ್ ಬಾಬು ಸಿನಿಮಾ?
ನನಗೆ ಸರ್ಕಾರದಿಂದ ಒಟ್ಟು 5 ಲಕ್ಷ ಸಹಾಯಧನ ಬಂದಿದೆ. ಅವರು ಹೇಳುವ ಹಾಗೆ ಸಿಕ್ಕ ಸಿಕ್ಕ ಕಡೆ ಹಣ ಸಂಗ್ರಹ ಮಾಡಿಲ್ಲ. ನಾನು 2011ರಲ್ಲಿ ಕಂಬಳ ಅಕಾಡೆಮಿ ತರಬೇತಿ ಪಡೆದಿದ್ದೇನೆ. ಆ ಬಳಿಕ ಕಂಬಳ ಕೂಟಗಳಲ್ಲಿ ಕೋಣಗಳನ್ನು ಓಡಿಸಿ ಹಲವು ಪ್ರಶಸ್ತಿ ಪಡೆದಿದ್ದೇನೆ. ನನ್ನ ಐದು ವರ್ಷದ ಸಾಧನೆ ಗುರುತಿಸಿ ಸರ್ಕಾರ ಕ್ರೀಡಾ ರತ್ನ ಪ್ರಶಸ್ತಿ ನೀಡಿದೆ.2020ರ ಜ.2ರಂದು ಐಕಳ ಕಂಬಳದಲ್ಲೂ ಕೋಣಗಳನ್ನು ಓಡಿಸಿ 9.55 ಸೆಕೆಂಡ್ ನಲ್ಲಿ ಗುರು ತಲುಪಿದ್ದೆ. ಕಂಬಳದಲ್ಲಿ ನನ್ನ ಕೆಲಸ ಕೋಣಗಳನ್ನು ಓಡಿಸುವುದು ಮಾತ್ರ ಆಗಿರುತ್ತದೆ.
ಕಂಬಳದಲ್ಲಿ ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ. ತೀರ್ಪುಗಾರರ ತೀರ್ಪಿಗೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ಅಲ್ಲದೇ ಕಂಬಳ ಅಕಾಡೆಮಿಯಿಂದಲೂ ನಾನು ಯಾವುದೇ ಹಣ ಪಡೆದುಕೊಂಡಿಲ್ಲ. ನನಗೆ ಕೋಣ ಓಡಿಸುವುದು ಖುಷಿ ಕೊಡುತ್ತದೆಯೇ ಹೊರತು ಬೇರೆ ಲಾಭ ಇಲ್ಲ. ನನ್ನ ಸಾಧನೆಯಲ್ಲಿ ಕೋಣಗಳ ಪಾತ್ರವೂ ಇದೆ, ಅದು ಓಡಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಈ ವೇಳೆ ಮಾಧ್ಯಮ ಮತ್ತು ಅಭಿಮಾನಿಗಳು ನನಗೆ ಸನ್ಮಾನಿಸಿದ್ದರು. ಕಟ್ಟಡ ಕಾರ್ಮಿಕನಾದ ಕಾರಣ ಸರ್ಕಾರ 3 ಲಕ್ಷ ರೂ. ನಗದು ಕೊಟ್ಟಿದೆ. ಅಶ್ವಥ್ ನಾರಾಯಣ ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ಕೊಟ್ಟಿದ್ದಾರೆ.
ಕಂಬಳ ವೇಗಿ ಶ್ರೀನಿವಾಸ ಗೌಡ ಸೇರಿ ಮೂವರ ವಿರುದ್ಧ ದೂರು
ದೂರು ಕೊಟ್ಟ ಲೋಕೇಶ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡ್ತೇನೆ ಎಂದಿದ್ದರು. ಕಂಬಳ ಕುರಿತ ಅದರ ಟೈಟಲ್ ಕೂಡ ರಿಜಿಸ್ಟ್ರಾರ್ ಮಾಡಿಸಿದ್ದರು. ಆದರೆ ನಾನು ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿಯೇ ಅವರು ಈ ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ನಾನು ನನಗೆ ಸಿಕ್ಕ ಹಣವನ್ನು ಕೂಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿದ್ದೇನೆ ಎಂದರು.