ಕಂಬಳ ವೇಗಿ ಶ್ರೀನಿವಾಸ ಗೌಡ ಸೇರಿ ಮೂವರ ವಿರುದ್ಧ ದೂರು
ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರು. ದೇಣಿಗೆ ಪಡೆದು ವಂಚನೆ ಆರೋಪ ಹೊತ್ತಿರುವ ಕಂಬಳ ವೇಗಿ ಶ್ರೀನಿವಾಸ ಗೌಡ ಸೇರಿ ಮೂವರ ವಿರುದ್ಧ ದೂರು ದಾಖಲಾಗಿದೆ.
ಮಂಗಳೂರು (ಜು.21): ಜಗತ್ತಿನ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾರೆ ಎಂಬ ಖ್ಯಾತಿಯ ಮೂಡುಬಿದಿರೆಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಸೇರಿದಂತೆ ಮೂವರ ವಿರುದ್ಧ ಇದೀಗ ಕಂಬಳ ಸಮಿತಿ ಸದಸ್ಯರೊಬ್ಬರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ. ದ.ಕ. ಜಿಲ್ಲಾ ಕಂಬಳ ಸಮಿತಿ ಸದಸ್ಯ, ಕಂಬಳ ಕೋಣಗಳ ಯಜಮಾನ ಲೋಕೇಶ್ ಶೆಟ್ಟಿಮೂಡುಬಿದಿರೆ ಠಾಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕಂಬಳ ಕ್ರೀಡೆಯ ವೇಗ ನಿರ್ಣಯಕ್ಕೆ ಬಳಸಲಾದ ತಂತ್ರಜ್ಞಾನ ನಂಬಲನರ್ಹವಾಗಿದ್ದು, ಯಾವುದೇ ಅಧಿಕೃತ ಮಾನ್ಯತೆ ಅದಕ್ಕಿಲ್ಲ. ಹೀಗೆ ಪಡೆದ ತೀರ್ಪಿನ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರು. ದೇಣಿಗೆ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಮೂಲಕ ಶ್ರೀನಿವಾಸ ಗೌಡ ಅವರು ಉಸೇನ್ ಬೋಲ್ಟ ದಾಖಲೆ ಮುರಿದದ್ದೇ ಸುಳ್ಳು ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.
ಕಂಬಳ ಅಕಾಡೆಮಿಯ()kambala academy ಗುಣಪಾಲ ಕಡಂಬ(Gunapala kadamba) ಅವರನ್ನು ಮೊದಲ ಆರೋಪಿಯನ್ನಾಗಿ, ಶ್ರೀನಿವಾಸ ಗೌಡ(Shrinivas Gowda) ಅವರನ್ನು 2ನೇ ಆರೋಪಿ ಹಾಗೂ ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಸಂಸ್ಥೆಯ ಮಾಲೀಕ ರತ್ನಾಕರ್ ಅವರನ್ನು ಮೂರನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಕಂಬಳದ 'ಉಸೇನ್ ಬೋಲ್ಟ್' ದಾಖಲೆ ಸುಳ್ಳಂತೆ: ಮೂಡಬಿದ್ರೆ ಠಾಣೆ ಮೆಟ್ಟಿಲೇರಿದ ವಿವಾದ!
ದೂರಿನಲ್ಲೇನಿದೆ?: ಕಂಬಳ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ ಎನ್ನಲಾದ ಶ್ರೀನಿವಾಸ ಗೌಡ ಹೆಸರಿನಲ್ಲಿ ಗುಣಪಾಲ ಕಡಂಬ ಹಲವು ನಕಲಿ ದಾಖಲೆ (duplicate document)ಸೃಷ್ಟಿಸಿದ್ದು, ಕಂಬಳ ಅಭಿಮಾನಿಗಳು, ಮಾಧ್ಯಮ, ಜನಪ್ರತಿನಿಧಿಗಳು, ಸಾರ್ವಜನಿಕರಿಗೆ ನಂಬಿಕೆ ಬರುವಂತೆ ಮೋಸದಿಂದ ನಡೆದುಕೊಂಡಿದ್ದಾರೆ. ಈ ಮೂಲಕ ಮೂವರೂ ಆರೋಪಿಗಳು ನಕಲಿ ದಾಖಲೆ ಮತ್ತು ದಾಸ್ತವೇಜು ಸೃಷ್ಟಿಸುವ ಮೂಲಕ ಸರ್ಕಾರ ಮತ್ತು ಸಾರ್ವಜನಿಕ ವಲಯದಿಂದ ಲಕ್ಷಾಂತರ ರು. ದೇಣಿಗೆ ಪಡೆದು ಯಾವುದೇ ಲೆಕ್ಕಪತ್ರ ಮಾಡದೆ ವಂಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಗುಣಪಾಲ ಕಡಂಬ ಮತ್ತು ಶ್ರೀನಿವಾಸ ಗೌಡ ಅವರ ಎಲ್ಲ ಮೋಸದ ಕೃತ್ಯಗಳಿಗೆ ಮೂರನೇ ಆರೋಪಿ ರತ್ನಾಕರ ಸಹಕರಿಸಿದ್ದಾರೆ. ಯಾವುದೇ ಅಧಿಕೃತ ಮಾನ್ಯತೆ ಪಡೆಯದೆ, ನಂಬಲರ್ಹವಾಗಿರದ ತಂತ್ರಜ್ಞಾನದ ಮೂಲಕ ಮನೋಇಚ್ಛೆಯಂತೆ ತೀರ್ಪು ನೀಡಿ ಆರೋಪಿಗಳ ಸುಳ್ಳು, ಮೋಸ, ವಂಚನೆಗೆ ಉದ್ದೇಶಪೂರ್ವಕವಾಗಿ ಸಹಕರಿಸಿದ್ದಾರೆ. ಆರೋಪಿಗಳ ಮೋಸದ ವಿರುದ್ಧ ಧ್ವನಿ ಎತ್ತಿದವರಿಗೆ ಆರೋಪಿಗಳು ಜೀವ ಬೆದರಿಕೆಯೊಡ್ಡಿರುವುದು ಕೆಲ ತಿಂಗಳ ಹಿಂದೆ ವೈರಲ್ ಆದ ಆಡಿಯೊ ಸಂದೇಶದಿಂದ ದೃಢಪಟ್ಟಿದೆ. ಈ ಮೂವರಿಂದಾಗಿ ಕಂಬಳದ ಖ್ಯಾತಿ ಮತ್ತು ಘನತೆಗೆ ಧಕ್ಕೆ ಆಗಿರುವುದಲ್ಲದೆ, ಯುವ ಓಟಗಾರರ ಮನೋಸ್ಥೈರ್ಯ ಕುಗ್ಗಿದಂತಾಗಿದೆ ಎಂದು ಲೋಕೇಶ್ ಶೆಟ್ಟಿದೂರಿನಲ್ಲಿ ಆರೋಪಿಸಿದ್ದಾರೆ.
Veera Kambala: ಕರಾವಳಿಯ ಕಂಬಳವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವುದು ನಮ್ಮ ಗುರಿ: ರಾಜೇಂದ್ರ ಸಿಂಗ್ ಬಾಬು
ತನಿಖೆ ಮಾಡದಿದ್ದರೆ ಕೋರ್ಚ್‌ಗೆ: ಈ ದೂರಿನೊಂದಿಗೆ ಸುಳ್ಳು ದಾಖಲೆ ಪ್ರತಿಗಳನ್ನು ಕೂಡ ಲೋಕೇಶ್ ಶೆಟ್ಟಿಸಲ್ಲಿಸಿದ್ದಾರೆ. ದೂರಿನ ಪ್ರತಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು, ಗೃಹ ಸಚಿವರು, ದ.ಕ. ಜಿಲ್ಲಾಧಿಕಾರಿಗೂ ಕಳುಹಿಸಿದ್ದಾರೆ. ಪೊಲೀಸರು ತನಿಖೆ ನಡೆಸದೆ ಇದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡುವುದಾಗಿ ಲೋಕೇಶ್ ಶೆಟ್ಟಿತಿಳಿಸಿದ್ದಾರೆ.
ಶ್ರೀನಿವಾಸ ಗೌಡ ಅವರು 2020ರ ಫೆ.1ರಂದು ನಡೆದ ಐಕಳ ಕಂಬಳದಲ್ಲಿ 100 ಮೀ. ದೂರವನ್ನು 9.55 ಸೆಕೆಂಡ್‌ನಲ್ಲಿ ಕ್ರಮಿಸಿ, ಜಾಗತಿಕ ಓಟಗಾರ ಉಸೇನ್ ಬೋಲ್ಟ… ದಾಖಲೆ (9.58 ಸೆಕೆಂಡ್)ಯನ್ನು ಮುರಿದಿದ್ದರು. ಈ ವಿಚಾರ ದೇಶಾದ್ಯಂತ ಬಹು ಚರ್ಚೆಗೆ ಕಾರಣವಾಗಿತ್ತು. ಕಂಬಳ ಓಟಗಾರರನ್ನು ತರಬೇತಿಗೊಳಿಸಿ ಕ್ರೀಡಾಕ್ಷೇತ್ರದಲ್ಲಿ ಬಳಸಿಕೊಳ್ಳಬೇಕು ಎನ್ನುವ ಮಾತುಗಳೂ ಕೇಳಿಬಂದಿದ್ದವು. ಶ್ರೀನಿವಾಸ ಗೌಡ ಅವರನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜು ದೆಹಲಿಗೆ ಆಹ್ವಾನಿಸಿ ಅಭಿನಂದಿಸಿದ್ದರು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಅಭಿನಂದಿಸಿದ್ದರು. ರಾಜ್ಯ ಸರ್ಕಾರ ಸೇರಿ ದೇಶದ ಹಲವು ಸಂಸ್ಥೆಗಳಿಂದ ಶ್ರೀನಿವಾಸ ಗೌಡಗೆ ನೆರವು ಮತ್ತು ಗೌರವ ಸಂದಾಯವಾಗಿತ್ತು.
ಶ್ರೀನಿವಾಸ ಗೌಡ ಬೇಸರ: ಈ ಬೆಳವಣಿಗೆಗೆ ಕಂಬಳ ಓಟಗಾರ ಶ್ರೀನಿವಾಸ ಗೌಡ ನೇರ ಪ್ರತಿಕ್ರಿಯೆ ನೀಡಲು ಲಭ್ಯರಾಗುತ್ತಿಲ್ಲ. ಆದರೆ, ‘ಕೋಣಗಳ ಜತೆ ಓಡಿ ದಾಖಲೆ ಒಲಿದಿದೆ. ಉಸೇನ್ ಬೋಲ್ಟ್ ಎಂಬ ಹೆಸರಾಗಲಿ, ಗೌರವ, ಆರ್ಥಿಕ ಕೊಡುಗೆಗಳಾಗಲಿ ಯಾವುದನ್ನೂ ತಾನು ಬಯಸಿಲ್ಲ. ಎಲ್ಲವೂ ತಾನಾಗಿಯೇ ಒಲಿದು ಬಂದಿದೆ. ಆಗ ಸಂಭ್ರಮಿಸಿದವರು ಈಗ ಈ ರೀತಿ ವರ್ತಿಸುತ್ತಿರುವುದು ಬೇಸರ ತಂದಿದೆ’ ಎಂದು ತಮ್ಮ ಆಪ್ತರ ಬಳಿ ಶ್ರೀನಿವಾಸ ಗೌಡ ತಮ್ಮ ನೋವು ಹೇಳಿಕೊಂಡಿದ್ದಾರೆಂಬುದು ತಿಳಿದುಬಂದಿದೆ.
ಜಿಲ್ಲಾ ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿಎಂಬವರು ಮೂಡುಬಿದಿರೆ ಠಾಣೆಗೆ ಮೂವರ ದೂರು ನೀಡಿದ್ದಾರೆ. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸೂಚಿಸಿದ್ದೇನೆ. ಮೂಡುಬಿದಿರೆ ಇನ್ಸ್‌ಪೆಕ್ಟರ್ ಈ ಬಗ್ಗೆ ವಿಚಾರಣೆ ನಡೆಸಿ ಸತ್ಯಾಸತ್ಯತೆ ತನಿಖೆ ಮಾಡುತ್ತಾರೆ.
- ಶಶಿಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ
ಲೋಕೇಶ ಶೆಟ್ಟಿನೀಡಿದ ದೂರಿನಲ್ಲಿ ಸ್ವಲ್ಪ ಸತ್ಯಾಂಶ ಇದೆ. ಕಂಬಳಕ್ಕೆ ಸಂಬಂಧಪಟ್ಟಂತೆ ಯಾವುದಕ್ಕೇ ಲೆಟರ್ ಹೋಗಬೇಕಾದರೂ ಜಿಲ್ಲಾ ಕಂಬಳ ಕಮಿಟಿ ಮೂಲಕವೇ ಹೋಗಬೇಕಾಗುತ್ತದೆ. ಆದರೆ ಗುಣಪಾಲ ಕಡಂಬರು ಕಂಬಳ ಸಮಿತಿಯನ್ನು ನಿರ್ಲಕ್ಷ್ಯ ಮಾಡಿ ಮುಂದುವರಿದಿದ್ದರಿಂದ ಸ್ವಲ್ಪ ಸಮಸ್ಯೆ ಎದುರಾಗಿದೆ. ಮುಂದೆ ಇದನ್ನು ಸರಿಮಾಡುವ ನಿಟ್ಟಿನಲ್ಲಿ ಸಹಕಾರ ನೀಡುತ್ತೇವೆ. ಶ್ರೀನಿವಾಸ ಗೌಡ ಒಳ್ಳೆಯ ಹುಡುಗ. ಎಲ್ಲ ಸೇರಿ ಅವರನ್ನು ಬಲಿಪಶು ಮಾಡುತ್ತಾರೆ ಎಂದೇ ಭಾವಿಸಿದ್ದೆ. ಒಬ್ಬೊಬ್ಬರನ್ನೇ ಶೈನಿಂಗ್ ಮಾಡುವಾಗ ಅವರೊಂದಿಗೆ ಇದ್ದವರಿಗೆ ನೋವಾಗುತ್ತದೆ. ಎಲ್ಲರನ್ನೂ ಹೊಂದಾಣಿಕೆಯಿಂದ ಕರೆದುಕೊಂಡು ಹೋಗಬೇಕಾಗುತ್ತದೆ.
- ಪಿಆರ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ.