Yogaraj Bhat 'ಗರಡಿ' ಮನೆಯಿಂದ ಹೊರಬಂದ ರಚಿತಾ ರಾಮ್: ಡಿಂಪಲ್ ಕ್ವೀನ್ ಜಾಗಕ್ಕೆ ಸೋನಾಲ್!
ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದಲ್ಲಿ ಯಶಸ್ ಸೂರ್ಯಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಕಾಲ್ ಶೀಟ್ ಸಮಸ್ಯೆಯಿಂದಾಗಿ ರಚಿತಾ ರಾಮ್ ಈ ಚಿತ್ರದಿಂದ ಸಿನಿಮಾದಿಂದ ಹೊರ ನಡೆದಿದ್ದಾರೆ.
ಸ್ಯಾಂಡಲ್‌ವುಡ್ ಡೈರೆಕ್ಟರ್ ಯೋಗರಾಜ್ ಭಟ್ (Yogaraj Bhat) ನಿರ್ದೇಶಿಸಿರುವ 'ಗಾಳಿಪಟ 2' (Galipata 2) ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ವಿಕಟಕವಿ ಯೋಗರಾಜ್ ಭಟ್ 'ಗರಡಿ' (Garadi) ಎಂಬ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಯಶಸ್ ಸೂರ್ಯ (Yashas Surya) ನಾಯಕ ಎಂದು ಅನೌನ್ಸ್ ಮಾಡಲಾಗಿತ್ತು. ಮಾತ್ರವಲ್ಲದೇ ಯಶಸ್ ಸೂರ್ಯಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಇದೀಗ ರಚಿತಾ ರಾಮ್ ಕಾಲ್ ಶೀಟ್ ಸಮಸ್ಯೆಯಿಂದಾಗಿ 'ಗರಡಿ' ಸಿನಿಮಾದಿಂದ ಹೊರ ನಡೆದಿದ್ದಾರೆ. ಹೌದು! ರಚಿತಾ ರಾಮ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಸಿನಿರಂಗದಲ್ಲಿ ಸಖತ್ ಬ್ಯುಸಿಯಾಗಿದ್ದರಿಂದ ಯೋಗರಾಜ್ ಭಟ್ ಚಿತ್ರದಿಂದ ಹೊರ ನಡೆದಿದ್ದಾರೆ. ಕೃಷಿ ಸಚಿವ, ನಟ ಬಿ.ಸಿ. ಪಾಟೀಲ್ (B.C.Patil) ನಿರ್ಮಾಣದ 'ಗರಡಿ' ಸಿನಿಮಾಗೆ ಸದ್ಯ ಸೋನಾಲ್ ಮೊಂತೆರೋ (Sonal Monteiro) ನಾಯಕಿಯಾಗಿ ನಟಿಸಲಿದ್ದಾರೆ. 'ಪಂಚತಂತ್ರ' (Panchatantra) ನಂತರ ಯೋಗರಾಜ್ ಭಟ್ ಜೊತೆ ಸೋನಾಲ್ ಮೊಂತೆರೋ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದೆ.
Yogaraj Bhat 'ಗರಡಿ' ಮನೆಗೆ ಎಂಟ್ರಿ ಕೊಟ್ಟ ಯಶಸ್ ಸೂರ್ಯ
ಈ ಮಧ್ಯೆ, 'ರಾಬರ್ಟ್' ಚಿತ್ರದಲ್ಲಿ ವಿನೋದ್ ಪ್ರಭಾಕರ್‌ಗೆ ಜೋಡಿಯಾಗಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಸೋನಲ್, ಜಯತೀರ್ಥ ನಿರ್ದೇಶನದ 'ಬನಾರಸ್' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮಾತ್ರವಲ್ಲದೇ 'ಶಂಭೋ ಶಿವ ಶಂಕರ', 'ಶುಗರ್ ಫ್ಯಾಕ್ಟರಿ', 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ', ಹಾಗೂ 'ಬುದ್ದಿವಂತ 2' ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇವುಗಳ ಜೊತೆಗೆ ಇದೀಗ 'ಗರಡಿ' ಅವರ ಹೊಸ ಸೇರ್ಪಡೆಯಾಗಿದೆ. ಈ ವಾರದಲ್ಲಿ 'ಗರಡಿ' ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಇದೊಂದು ಕಮರ್ಷಿಯಲ್ ಎಂಟರ್ಟೈನ್‌ಮೆಂಟ್ ಸಿನಿಮಾ ಆಗಿದ್ದು, ಚಿತ್ರವನ್ನು ನಿರ್ಮಿಸುತ್ತಿರುವ ಸಚಿವ ಬಿ.ಸಿ. ಪಾಟೀಲ್, ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
'ಗರಡಿ' ಚಿತ್ರದ ನಾಯಕ ಯಶಸ್ ಸೂರ್ಯ ಈ ಚಿತ್ರದೊಂದಿಗೆ ಆ್ಯಕ್ಷನ್ ನಟನಾಗಿ ಹೊರ ಹೊಮ್ಮುವ ಸಾಧ್ಯತೆ ಇದ್ದು, 'ಬಿ ರೆಡಿ' ಎನ್ನುವ ಟ್ಯಾಗ್‌ಲೈನ್ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ (Poster) ಬಿಡುಗಡೆಯಾಗಿತ್ತು. ಆ್ಯಕ್ಷನ್ ಡ್ರಾಮಾ 'ಗರಡಿ' ಚಿತ್ರದಲ್ಲಿ ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಮತ್ತು ಪೈಲ್ವಾನ್‌ಗಳ ಫಿಟ್‌ನೆಸ್‌ಗಳ ಬಗ್ಗೆ ಕಥೆಯಿರುತ್ತದೆ. ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ವಿಶೇಷವಾಗಿ ಯೋಗರಾಜ್ ಭಟ್ ಸಿನಿಮಾಗಳು ಬೇರೆ ರೀತಿ ಇರುತ್ತವೆ. ಹಾಗಾಗಿ ಯೋಗರಾಜ್ ಭಟ್ಟರ ಸಿನಿಮಾ ಅಂದರೆ ಅಲ್ಲಿ ಪ್ರೇಮ ಕತೆಯೇ ಪ್ರಧಾನವಾಗಿ ಇರುತ್ತದೆ.
Yogaraj Bhat: 'ಗರಡಿ' ಮನೆಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್
ಹಾಗಾಗಿ ಈ ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಸುಂದರ ಪ್ರೇಮ ಇರುವುದು ಮಿಸ್ ಆಗುವುದಿಲ್ಲ. ಚಿತ್ರಕ್ಕೆ ನಿರಂಜನ್ ಬಾಬು ಕ್ಯಾಮರಾ ಕೈಚಳಕ, ವಿಕಾಸ್ ಚಿತ್ರಕಥೆಯಿದೆ. ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ. ಇನ್ನು, ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ.