ಸ್ಯಾಂಡಲ್ ವುಡ್ ನಲ್ಲಿ ಸು ಫ್ರಮ್ ಸೋ ಸಿನಿಮಾ ಧೂಳೆಬ್ಬಿಸುತ್ತಿದೆ. ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗ್ತಿದ್ದು, ಹೌಸ್ ಫುಲ್ ಆಗಿ ಸಿನಿಮಾ ಓಡ್ತಿದೆ. 

ಕಥೆ ಚೆನ್ನಾಗಿದ್ರೆ ಪ್ರೇಕ್ಷಕ ಒಟಿಟಿಗೆ ಕಾಯೋದಿಲ್ಲ. ಕನ್ನಡಿಗರು ಥಿಯೇಟರ್ ಗೆ ಬಂದು ಸಿನಿಮಾ ವೀಕ್ಷಣೆ ಮಾಡ್ತಾರೆ. ಇದಕ್ಕೆ ಮೂರು ದಿನಗಳ ಹಿಂದೆ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣ್ತಿರುವ ಸು ಫ್ರಮ್ ಸೋ (Su from So) ಅಂದ್ರೆ ಸುಲೋಚನ ಫ್ರಮ್ ಸೋಮೇಶ್ವರ (Sulochana from Someshwara) ಸಿನಿಮಾ ಉತ್ತಮ ನಿದರ್ಶನ. ಕನ್ನಡ ಸಿನಿಮಾವನ್ನು ಕನ್ನಡಿಗರು ನೋಡೋದಿಲ್ಲ ಎನ್ನುವ ಕೂಗು ಎದ್ದಿದ್ದ ಸಂದರ್ಭದಲ್ಲಿ, ಕನ್ನಡ ಸಿನಿಮಾಗಳು ಕಲೆಕ್ಷನ್ ಇಲ್ಲದೆ ಗೋಲಾಡ್ತಿದ್ದ ಟೈಂನಲ್ಲಿ ಸು ಫ್ರಮ್ ಸೋ, ಸ್ಯಾಂಡಲ್ ವುಡ್ ಕೈ ಹಿಡಿದಿದೆ. ಸ್ಯಾಂಡಲ್ ವುಡ್ ದಿಕ್ಕನ್ನು ಬದಲಿಸ್ತಿದೆ.

ಕರಾವಳಿ ಜಾಗದಲ್ಲಿ ನಡೆಯುವ ಸಾಮಾನ್ಯ ಕಥೆಯೊಂದಕ್ಕೆ ಹಾಸ್ಯ, ಹಾರರ್ ಸೇರಿಸಿ ಅಚ್ಚುಕಟ್ಟಾಗಿ ಸಿನಿಮಾ ನೀಡಿದ ಸು ಫ್ರಮ್ ಸೋ ಥಿಯೇಟರ್ ನಲ್ಲಿ ಹೌಸ್ ಫುಲ್ ಆಗಿ ಓಡ್ತಿದೆ. ಬೆಳಿಗ್ಗೆ , ಮಧ್ಯಾಹ್ನ, ಸಂಜೆ ಮಾತ್ರ ಅಲ್ಲ ರಾತ್ರಿ 10ರ ಶೋಕ್ಕೂ ಟಿಕೆಟ್ ಇಲ್ಲ. ವಾರಾಂತ್ಯದಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚು, ಹಾಗಾಗಿ ಟಿಕೆಟ್ ಸಿಗ್ತಿಲ್ಲ ಅಂದ್ಕೊಂಡಿದ್ದವರಿಗೆ ವೀಕ್ ಡೇಸ್ ನಲ್ಲೂ ಟಿಕೆಟ್ ಸಿಗ್ತಿಲ್ಲ. ಕಳೆದ ಒಂದು ಗಂಟೆಯಲ್ಲಿ ಸು ಫ್ರಮ್ ಸೋ ಸಿನಿಮಾದ 6320 ಟಿಕೆಟ್ ಸೌಂಡ್ ಔಟ್ ಆಗಿದ್ದೇ ಇದಕ್ಕೆ ಎಗ್ಸಾಂಪಲ್.

ರಾಜ್ ಬಿ ಶೆಟ್ಟಿ (Raj B Shetty) ನಿರ್ಮಾಣ ಹಾಗೂ ಜೆಪಿ ತುಮ್ಮಿನಾಡು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಪ್ರೇಕ್ಷಕರನ್ನು ನೂರಕ್ಕೆ ನೂರು ಪರ್ಸೆಂಟ್ ರಂಜಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡದಲ್ಲಿ ಹಾಸ್ಯಭರಿತ ಸಿನಿಮಾಗಳು ಅಪರೂಪ. ಒಂದಿಷ್ಟು ಬಿಲ್ಡಪ್ ಡೈಲಾಗ್ಸ್, ಗ್ರಾಫಿಕ್ಸ್, ವಿದೇಶದಲ್ಲಿ ಸಾಂಗ್ಸ್, ಡಿಶುಂ ಡಿಶುಂ ಶಬ್ಧಗಳಿಂದಲೇ ಕೂಡಿರುತ್ತಿದ್ದ ಸಿನಿಮಾ ನೋಡಿ ವೀಕ್ಷಕರು ಬೇಸತ್ತಿದ್ದರು. ಸು ಫ್ರಂ ಸೋ ಸಿನಿಮಾ ಇದ್ಯಾವುದೂ ಇಲ್ದೆ, ಸಿಂಪಲ್ ಆಗಿ ಸಿನಿಮಾ ಮಾಡಿದ್ರೂ ಗೆಲ್ಬಹುದು ಎಂಬುದನ್ನು ತೋರಿಸಿಕೊಟ್ಟಿದೆ.

ಕರಾವಳಿಯ ಮರ್ಲೂರಿನಲ್ಲಿಯೇ ಸುತ್ತವ ಕಥೆ ಇದು. ರಸಭರಿತ ಸಂಭಾಷಣೆ, ಅಧ್ಬುತ ನಟನೆ, ಕಲಾವಿದರ ಹಾವ ಭಾವ ಪ್ರೇಕ್ಷಕರು ಖುರ್ಚಿ ಮೇಲೆ ಕುಳಿತು ಸಿನಿಮಾ ನೋಡೋಕೆ ಬಿಡೋದೇ ಇಲ್ಲ. ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕ ನಕ್ಕು ನಕ್ಕು ಹೊಟ್ಟೆ ಹುಣ್ಣು ಮಾಡಿಕೊಳ್ತಾನೆ. ಬರೀ ಥಿಯೇಟರ್ ನಲ್ಲಿ ನಕ್ಕಿದ್ದು ಮಾತ್ರವಲ್ಲ, ಮನೆಗೆ ಬಂದ್ಮೇಲೂ ಕಾಡುವ ಹಾಸ್ಯ ದೃಶ್ಯಗಳಿಂದ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸುಮಾರು ಆರು ವರ್ಷಗಳ ಹಿಂದೆ ಶುರುವಾಗಿದ್ದ ಈ ಕಥೆ, ಹೋಗ್ತಾ ಹೋಗ್ತಾ ಬದಲಾವಣೆ ಜೊತೆ ಸು ಫ್ರಮ್ ಸೋ ಆಗಿ ಮೂಡಿ ಬಂದಿದೆ. ಮೊದಲ ನಿರ್ದೇಶನದಲ್ಲೇ ಜೆ.ಪಿ. ತುಮಿನಾಡು ಯಶಸ್ಸು ಕಂಡಿದ್ದಾರೆ. ರಾಜ್ ಶೆಟ್ಟಿ ಸಲಹೆಯಂತೆ ಕಥೆ ಬದಲಿಸಿಕೊಂಡು, ತಮ್ಮೂರಿನ ಸುತ್ತಮುತ್ತ ನಡೆಯುವ ಘಟನೆಗಳನ್ನೇ ದೃಶ್ಯಕ್ಕೆ ಬಳಸಿಕೊಂಡಿದ್ದರಿಂದ ಚಿತ್ರ ಪ್ರೇಕ್ಷರಿಗೆ ಹತ್ತಿರವಾಗುತ್ತದೆ.

ಸು ಫ್ರಮ್ ಸೋ, ತನ್ನ ಜೊತೆ ಬಿಡುಗಡೆಯಾದ ಎರಡು ಕನ್ನಡ ಸಿನಿಮಾಗಳನ್ನು ಗಳಿಕೆಯಲ್ಲಿ ಹಿಂದಿಕ್ಕಿದೆ. ವಾರಾಂತ್ಯದಲ್ಲಿ ಸಿನಿಮಾ 8 ಕೋಟಿ ಕಲೆಕ್ಷನ್ ಮಾಡಿದೆ. ಆರಂಭದ ದಿನವೇ 78 ಲಕ್ಷ ಗಳಿಸಿದ್ದ ಸಿನಿಮಾ ಶನಿವಾರ 2.17 ಕೋಟಿಗೆ ಬಂದು ನಿಂತಿತ್ತು. ಭಾನುವಾರ 3.86 ಕೋಟಿ ಗಳಿಕೆ ಕಂಡಿತ್ತು. ಸಿನಿಮಾದಲ್ಲಿ ರಾಜ್. ಬಿ ಶೆಟ್ಟಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವ್ರ ಜೊತೆ ಜೆ.ಪಿ. ತುಮಿನಾಡು, ಸಂಧ್ಯಾ ಅರೆಕರೆ, ದೀಪಕ್ ರೈ ಸೇರಿದಂತೆ ಅನೇಕ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಣ ಕೊಟ್ಟು ಸೈಯಾರ ಸಿನಿಮಾ ನೋಡಿ ಕಣ್ಣೀರು ಸುರಿಸುವ ಬದಲು ಸು ಫ್ರಮ್ ಸೋ ಸಿನಿಮಾ ನೋಡಿ ರಿಲ್ಯಾಕ್ಸ್ ಆಗಿ ಅಂತ ನೋಡಿದ ಪ್ರೇಕ್ಷಕರು ಹೇಳ್ತಿದ್ದಾರೆ.