ರಮ್ಯಾ ದರ್ಶನ್‌ ವಿರುದ್ಧ ಸುಪ್ರೀಂ ತೀರ್ಪು ಬೆಂಬಲಿಸಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೋರಿದರು. ಆದರೆ, ದರ್ಶನ್ ಸ್ನೇಹಿತೆ ರಕ್ಷಿತಾ ಪ್ರೇಮ್, ರಮ್ಯಾ ಹೆಸರೆತ್ತದೆ, ಮಾನವೀಯತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ರಮ್ಯಾ ಅವರ ದರ್ಶನ್ ವಿರುದ್ಧದ ಹೇಳಿಕೆಗೆ ಮತ್ತೊಬ್ಬ ನಟಿ ಮತ್ತು ನಿರ್ಮಾಪಕಿ ರಕ್ಷಿತಾ ಪ್ರೇಮ್ ಪರೋಕ್ಷ ತಿರುಗೇಟು ನೀಡಿದ್ದಾರೆ. ಮಾನವೀಯತೆ, ಮಾನಸಿಕ ಆರೋಗ್ಯ, ದಯೆ ತೋರಿಸುವ ಬಗ್ಗೆ ಮಾತನಾಡುತ್ತಾ ಎಲ್ಲಿಯೂ ನಟಿ ರಮ್ಯಾ ಹೆಸರೇಳದೇ ಸಾಮಾಜಿಕ ಜಾಲತಾಣದ ಮೂಲಕವೇ ದರ್ಶನ್ ಪರ ಬ್ಯಾಟ್ ಬೀಸುವ ಮೂಲಕ ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ.

ನಟಿ ಮತ್ತು ರಾಜಕಾರಣಿ ರಮ್ಯಾ (Sandalwood Queen Ramya) ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ 'ನಟ ದರ್ಶನ್ ವಿರುದ್ಧ ಸುಪ್ರೀಂಕೋರ್ಟ್ ತೀರ್ಪಿಗೆ ಬೆಂಬಲ ವ್ಯಕ್ತಪಡಿಸಿ, ರೇಣುಕಾಸ್ವಾಮಿ (Chitradurga Renukaswamy) ಕುಟುಂಬಕ್ಕೆ ನ್ಯಾಯ ಬೇಡುತ್ತೇನೆ' ಎಂದು ತಮ್ಮ ತೀವ್ರ ಅಭಿಪ್ರಾಯವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡರು. ನಂತರ, ದರ್ಶನ್ ಅಭಿಮಾನಿಗಳ ಟೀಕೆಗಳ ನಡುವೆಯೂ 'ತಮ್ಮ ಕಾಮೆಂಟುಗಳೇ ನ್ಯಾಯದ ಅಗತ್ಯತೆಯ ಸಾಕ್ಷಿ' ಎಂದು ಕಠಿಣ ಪ್ರತಿಕ್ರಿಯೆ ನೀಡಿದ್ದರು. ಜೊತೆಗೆ, ಇದಕ್ಕೆಲ್ಲಾ ದರ್ಶನ್ ಕುಮ್ಮಕ್ಕು ಕಾರಣ, ಅಶ್ಲೀಲವಾಗಿ ಮೆಸೇಜ್ ಮಾಡಿದವರ ವಿರುದ್ಧ ದೂರು ಕೊಡುವುದಾಗಿ ತಿಳಿಸಿದ್ದರು.

ಇದರ ಬೆನ್ನಲ್ಲಿಯೇ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಕೋರ್ಟ್ ವಿಚಾರಣೆಯಲ್ಲಿರುವ ಕೇಸಿನ ಬಗ್ಗೆ ಇಷ್ಟು ತರಾತುರಿಯಲ್ಲಿ ನಟಿ ರಮ್ಯಾ ಮಾತನಾಡುವುದು ಸರಿಯಲ್ಲ. ಅವರ ವಿರುದ್ಧ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕೆ ದರ್ಶನ್ ಅಭಿಮಾನಿಗಳೂ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದೀಗ ದರ್ಶನ್ ಅವರ ಆತ್ಮೀಯ ಸ್ನೇಹಿತೆಯೂ ಆಗಿರುವ ನಟಿ ರಕ್ಷಿತಾ ಪ್ರೇಮ್ ಅವರು ದರ್ಶನ್ ಬೆಂಬಲಕ್ಕೆ ಬಂದಂತಿದ್ದು, ನಟಿ ರಮ್ಯಾಗೆ ತಿರುಗೇಟು ಕೊಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಪೋಸ್ಟ್‌ನಲ್ಲಿ ಎಲ್ಲಿಯೂ ನಟಿ ರಮ್ಯಾ ಅವರ ಹೆಸರನ್ನು ಉಲ್ಲೇಖ ಮಾಡಿಲ್ಲ. ಈ ಪೋಸ್ಟ್ ಮೂಲಕ ದರ್ಶನ್ ಅಭಿಮಾನಿಗಳಿಗೆ ಕೆಲವರು ಮಾನಸಿಕವಾಗಿ ಸರಿಯಿಲ್ಲ, ಅವರಿಗೆ ನೀವು ದಯೆ ತೋರಿಸಬೇಕು ಎಂಬ ಅರ್ಥದಲ್ಲಿಯೂ ತಮ್ಮ ಸಂದೇಶದಲ್ಲಿ ಉಲ್ಲೇಖ ಮಾಡಿದ್ದಾರೆ.

ನಟಿ ರಕ್ಷಿತಾ ಪ್ರೇಮ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರಿ ಸ್ಟೇಟಸ್‌ನಲ್ಲಿ 'ನಾನು ನಿಜವಾಗಿಯೂ ಏನು ವೈರಲ್ ಆಗಬೇಕೆಂದು ಬಯಸುತ್ತೇನೆ ಎಂದು ನಿಮಗೆ ತಿಳಿದಿದೆಯೇ? ಕನಿಷ್ಠ ಮಾನವ ಸಭ್ಯತೆ' (You know what I would really like to see go viral? Basic human decency..) ಎಂದು ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದರ ಜೊತೆಗೆ 'ನೀವು ಜನರ ಮಾನಸಿಕ ಆರೋಗ್ಯವನ್ನು ನೋಡಲು ಸಾಧ್ಯವಿಲ್ಲ. ದಯವಿಟ್ಟು ಯಾವಾಗಲೂ ದಯೆಯಿಂದಿರಿ' ಎಂದು ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನಟಿ ರಕ್ಷಿತಾ ಅವರು ಮಾನವನ ಸಭ್ಯತೆ ಮತ್ತು ಜನರ ಮಾನಸಿಕ ಸ್ಥಿತಿಯ ಬಗ್ಗೆ ದಯೆ ತೋರಿಸಿ ಎಂದು ಕೂಡ ಹೇಳಿದ್ದಾರೆ.

View post on Instagram