Asianet Suvarna News Asianet Suvarna News

ನನಗೆ ಕನ್ನಡ ಕಲಿಸಿದ ಗುರು ಭಗವಾನ್‌; ಹಿರಿಯ ನಟ ಲಕ್ಷ್ಮೀ

ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ, ಯಶಸ್ವಿಯಾಗುವ ರೀತಿ ಮಾಡಿದ ಮಾಸ್ಟರ್‌ ಭಗವಾನ್‌ ಬಗ್ಗೆ ಹಿರಿಯ ನಟಿ ಲಕ್ಷ್ಮೀ ಮಾತು 

SK Bhagavan taught me perfect kannada says actress Lakshmi vcs
Author
First Published Feb 21, 2023, 11:57 AM IST

ಲಕ್ಷ್ಮೀ

ನಾನಿವತ್ತು ಕನ್ನಡ ಮಾತನಾಡುವುದಕ್ಕೆ ಕಾರಣವೇ ಭಗವಾನ್‌ ಅವರು. ಯಾರು ಬೇಕಾದರೂ ಅವರನ್ನು ಮರೆಯಬಹುದು. ಆದರೆ ನಾನು ಮರೆಯಲಿಕ್ಕಾಗೋದಿಲ್ಲ. 1968ರಲ್ಲಿ ‘ಗೋವಾದಲ್ಲಿ ಸಿಐಡಿ 999’ ಎನ್ನುವ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್‌ ಜೊತೆ ನಟನೆ ಮಾಡುತ್ತಿದ್ದಾಗಿನ ಸನ್ನಿವೇಶ ನೆನಪಾಗ್ತಿದೆ. ನಾನಾಗ ಸ್ಕೂಲ್‌ ಓದುತ್ತಿದ್ದ ಹುಡುಗಿ. ಕ್ಲಾಸ್‌ ಮುಗಿಸಿ ಬ್ಯಾಡ್ಮಿಂಟನ್‌ ಆಡೋದಕ್ಕೆ ಹೊರಡ್ತಿದ್ದೆ. ಭಗವಾನ್‌ ಅವರು ಎದುರಾದರು. ‘ನಾನು ಬ್ಯಾಡ್ಮಿಂಟನ್‌ ಕ್ಲಾಸ್‌ ಮುಗಿಸಿ ಬರುತ್ತೇನೆ’ ಅಂತ ಇಂಗ್ಲಿಷ್‌ನಲ್ಲಿ ಹೇಳಿದೆ. ಆಗ ದೊರೈ ಸಾರ್‌ ಅವರ ಜೊತೆಗಿದ್ದರು. ‘ಈ ಹುಡುಗಿ ಇಂಗ್ಲಿಷ್‌ನಲ್ಲಿ ಮಾತಾಡ್ತಿದ್ದಾಳೆ. ಅವಳತ್ರ ಕನ್ನಡ ಕಲಿಸಿ ಸಿನಿಮಾ ಮಾಡಿಸೋದು ಹೇಗೆ?’ ಅಂತ ದೊರೈ ಕೇಳಿದ್ರಂತೆ. ‘ನೀವು ಬಿಡಿ, ನಾನಿದ್ದೀನಲ್ಲ, ಎಲ್ಲಾ ಮಾಡೋಣ’ ಅಂತ ಅವರನ್ನು ಭಗವಾನ್‌ ಸಮಾಧಾನಿಸಿದ್ರಂತೆ. ನಾನು ಆಟ ಮುಗಿಸಿ ವಾಪಾಸ್‌ ಬಂದೆ. ಆಗ ನನ್ನ ಭಾಷೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ‘ನಾನು ಬೆಂಗಳೂರಿಗೆ ಹೋಗಿ ಬರೋ ಕಾರಣ ಕನ್ನಡ ಅರ್ಥ ಆಗುತ್ತೆ. ಮಾತಾಡೋದಕ್ಕೆ ಬರೋದಿಲ್ಲ’ ಅಂದೆ. ‘ಯಾಕೆ ಬರಲ್ಲ, ಬರುತ್ತೆ’ ಅಂದರು. ಮುಂದೆ ‘ಗೋವಾದಲ್ಲಿ ಸಿಐಡಿ 999’ ಚಿತ್ರ ಸೂಪರ್‌ ಹಿಟ್‌ ಆಯ್ತು. ಭಗವಾನ್‌ ಬೆಂಬಲವಾಗಿ ನಿಂತ ಕಾರಣ ನಾನು ಆ ಸಿನಿಮಾದ ಭಾಗವಾದೆ.

ಭಗವಾನ್‌ ಅವರ ಬಳಿ ನಾನು ಕಲಿತದ್ದು

1. ನಗ್‌ ನಗ್ತಾ ಇರೋದು

ಏನೇ ತೊಂದರೆ ಇದ್ರೂ, ಏನೇ ಕಷ್ಟಇದ್ರೂ ನಗುನಗುತ್ತಾ ಇರಬೇಕು ಅನ್ನೋದು ನಾನು ಅವರನ್ನು ನೋಡಿ ಕಲಿತ ಪಾಠ. ಬೇಸರ, ಸಿಟ್ಟು, ನೋವುಗಳನ್ನೆಲ್ಲ ಒಳಗಿಟ್ಟುಕೊಂಡೂ ಹೊರಗೆ ನಗು ನಗುತ್ತಾ ಇರೋದು ಹೆಚ್ಚಿನ ಗಂಡಸರಿಗೆ, ಅದರಲ್ಲೂ ನಿರ್ದೇಶಕರಿಗೆ ಕಷ್ಟಸಾಧ್ಯ. ಆದರೆ ಭಗವಾನ್‌ ಅವರಿಗೆ ಅದು ಸಾಧ್ಯವಾಗಿತ್ತು. ಹೆಚ್ಚೆಂದರೆ ‘ಯಾಕಪ್ಪಾ ಹೀಗೆ ತಲೆ ತಿಂತೀರ..’ ಅಂತ ಹೇಳಬಹುದಷ್ಟೇ. ಅದಕ್ಕಿಂತ ಹೆಚ್ಚು ಇಲ್ಲ. ಬಹುಶಃ ಡಾ.ರಾಜ್‌ ಅವರ ಪ್ರಭಾವವೋ ಏನೋ. ಅವರಿಗೂ ಕೋಪ ಬರಲ್ಲ. ‘ಒಂಚೂರಾದ್ರೂ ಕೋಪ ಮಾಡ್ಕೊಳ್ಳಿ ಸಾರ್‌, ಇಲ್ಲಾಂದ್ರೆ ನಮಗೆ ಟೆನ್ಶನ್‌ ಆಗುತ್ತೆ’ ಅಂತ ಅವರಿಗೆ ಹೇಳ್ತಾ ಇದ್ದೆ. ‘ಕೋಪ ಮಾಡ್ಕೊಂಡು ಏನು ಪ್ರಯೋಜನ ಅಮ್ಮಾ, ಬಿಪಿ ಬರುತ್ತಷ್ಟೇ’ ಅನ್ನುತ್ತಿದ್ದರು.

SK bhagavan; ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ 'ದೊರೈ ಭಗವಾನ್' ಆಗಿದ್ದು ಹೇಗೆ? ಖ್ಯಾತ ನಿರ್ದೇಶಕನ ರೋಚಕ ಪಯಣ

2. ಕನ್ನಡ ಕಲಿತೆ

‘ಗಾಳಿಮಾತು’ ಸಿನಿಮಾ ಶೂಟಿಂಗ್‌ ಸಮಯದಲ್ಲಿ ಹೇಳಿದ್ರು, ‘ಲಕ್ಷ್ಮಮ್ಮ ಕನ್ನಡ ಓದು, ಬರಹ ಕಲಿತುಕೊಳ್ಳಿ’ ಅಂತ. ‘ನಾನಿನ್ನ ಮರೆಯಲಾರೆ’ ಸಿನಿಮಾ ಶೂಟಿಂಗ್‌ ವೇಳೆ ಭಾರ್ಗವ ಓದೋದು ಹೇಳಿಕೊಟ್ಟಿದ್ದರು. ಅಕ್ಷರಗಳು ಸ್ವಲ್ಪ ತೆಲುಗಿನ ಹಾಗಿರುವ ಕಾರಣ ಸುಲಭವಾಗಿ ಕಲಿತೆ. ಆದರೆ ಇವರು, ‘ಬರೆಯೋದೂ ಕಲಿಯಿರಿ, ಇಲ್ಲಾಂದ್ರೆ ಕಷ್ಟಆಗುತ್ತೆ’ ಅಂದರು. ಡಬ್ಬಿಂಗ್‌ ಮಾಡ್ತಾ ಮಾಡ್ತಾನೇ ಬರೆಯೋದು ಕಲಿತೆ. ಆಮೇಲೆ ಅವರಿಗೆ ಕನ್ನಡದಲ್ಲಿ ಚಿಕ್ಕ ಪತ್ರ ಬರೆದೆ. ಭಗವಾನ್‌ ರೆಕಾರ್ಡಿಂಗ್‌ ಥಿಯೇಟರ್‌ ಒಳಗೆ ಇದ್ರು. ಅದನ್ನೋದಿ ಅವರಿಗೆ ಎಂಥಾ ಹೆಮ್ಮೆ ಆಯ್ತು ಅಂದ್ರೆ, ‘ನಾನು ಹೆತ್ತ ಮಗಳು ಎಷ್ಟುಜಾಣೆ, ಇಷ್ಟುಬೇಗ ಕನ್ನಡ ಕಲಿತುಬಿಟ್ಟಿದ್ದಾಳೆ’ ಅಂತ ಖುಷಿಯಲ್ಲಿ ಅಲ್ಲಿದ್ದವರಿಗೆಲ್ಲ ಹೇಳಿದ್ರು. ನಮ್ಮ ಲಕ್ಷ್ಮೇ ನಮ್ಮ ಲಕ್ಷ್ಮೇ ಅಂತಿದ್ರು. ಹೆತ್ತ ಮಗಳಷ್ಟೇ ಪ್ರೀತಿ ನನ್ನ ಮೇಲೆ.

3. ಅಪಾರ ತಾಳ್ಮೆ

‘ಗಾಳಿಮಾತು’ ಸಿನಿಮಾದಲ್ಲಿ ಹಿರಿಯ ನಟ ಅಶ್ವತ್‌್ಥ ಅವರು ಛತ್ರಿ ಹಿಡ್ಕೊಂಡು ನನ್ನ ಹೊಡೆಯೋ ಸೀನ್‌ ಇತ್ತು. ಅಶ್ವತ್‌್ಥ ಅಂಕಲ್‌ ನಟನೆಗಿಳಿದರೆ ಬಹಳ ತಲ್ಲೀನರಾಗ್ತಿದ್ರು. ನನಗೆ ನಿಜವಾಗಿಯೂ ಹೊಡೆದೇ ಬಿಟ್ಟರು. ಕಾಲು, ಬೆನ್ನು, ಸೊಂಟ ಎಲ್ಲ ಬಾಸುಂಡೆ ಬಂದು ಊದಿಕೊಂಡು ನನಗೆ ಎದ್ದು ನಿಲ್ಲೋದಕ್ಕೂ ಆಗ್ತಿರಲಿಲ್ಲ. ದುರಾದೃಷ್ಟವಶಾತ್‌ ಆ ಶಾಟ್‌ ರೀಟೇಕ್‌ ತಗೊಳ್ಬೇಕಿತ್ತು. ಭಗವಾನ್‌ ತಾಳ್ಮೆಯಿಂದ ನಿಭಾಯಿಸಿ ಬ್ರೇಕ್‌ ತಗೊಂಡರು. ಅಂಥಾ ದೊಡ್ಡವರು ನನ್ನ ಬಳಿ ಕ್ಷಮೆ ಕೇಳಿದರು. ಆಮೇಲೆ ಟೇಕ್‌ 2 ಬಹಳ ಚೆನ್ನಾಗಿ ಬಂತು.

ಕನ್ನಡ ಇಂಡಸ್ಟ್ರಿಗೆ ನನ್ನ ಪರಿಚಯಿಸಿ ಯಶಸ್ವಿ ಆಗೋ ಹಾಗೆ ಮಾಡಿದ್ದಷ್ಟೇ ಅಲ್ಲ, ಇವತ್ತು ನಾನು ಕನ್ನಡದಲ್ಲಿ ಇಷ್ಟುಮಾತಾಡ್ತೀನಿ, ಬರೀತೀನಿ, ಓದುತ್ತೀನಿ ಅಂದರೆ ಆ ಮಾಸ್ಟರ್‌ ಕಾರಣ. ಅವರದು ಪೂರ್ಣ ಲೈಫು. ಆ ಗುರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರ.

Follow Us:
Download App:
  • android
  • ios