Asianet Suvarna News Asianet Suvarna News

SK bhagavan; ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ 'ದೊರೈ ಭಗವಾನ್' ಆಗಿದ್ದು ಹೇಗೆ? ಖ್ಯಾತ ನಿರ್ದೇಶಕನ ರೋಚಕ ಪಯಣ

ಕನ್ನಡ ಸಿನಿಮಾರಂಗದ ದಂತಕಥೆ ಎಸ್.ಕೆ ಭಗವಾನ್ ಇನ್ನು ನೆನಪು ಮಾತ್ರ. ಗೆಳೆಯ ದೊರೈ ಜೊತೆ ಸೇರಿ ಭಗವಾನ್ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಡಾ.ರಾಜ್ ಕುಮಾರ್ ಜೊತೆ ಅತಿ ಹೆಚ್ಚು ಸಿನಿಮಾಗಳನ್ನು ಮಾಡಿರುವುದೇ ವಿಶೇಷ. 

here is the details of How Srinivasa Krishna Iyengar Bhagavan become Dorai Bhagavan sgk
Author
First Published Feb 20, 2023, 11:12 AM IST

ಕನ್ನಡ ಸಿನಿಮಾರಂಗದ ದಂತಕಥೆ ಎಸ್.ಕೆ ಭಗವಾನ್ ಇನ್ನು ನೆನಪು ಮಾತ್ರ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಭಗವಾನ್ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 90 ವರ್ಷದ ಭಗವಾನ್ ಇಂದು ಬೆಳಗ್ಗೆ (ಫೆಬ್ರವರಿ 20) ಇಹಲೋಕ ತ್ಯಜಿಸಿದರು. ಭಗವಾನ್ ಕಳೆದುಕೊಂಡು ಕನ್ನಡ ಸಿನಿಮಾರಂಗ ಬಡವಾಗಿದೆ. ಖ್ಯಾತ ನಿರ್ದೇಶನಕ ನಿಧನಕ್ಕೆ ಸಿನಿಮಾರಂಗದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಎಸ್ ಕೆ ಭಗವಾನ್ ಸಿನಿಮಾ ಪಯಣ ರೋಚಕವಾಗಿದೆ. ಎಸ್ ಕೆ ಭಗವಾನ್ ಎನ್ನುವುದಕ್ಕಿಂತ ದೊರೈ ಭಗವಾನ್ ಎಂದೇ ಖ್ಯಾತಿಗಳಿಸಿದ್ದಾರೆ. ದೊರೈ ಇಲ್ಲಿದೆ ಭಗವಾನ್ ಇಲ್ಲ, ಭಗವಾನ್ ಇಲ್ಲದೆ ದೊರೈ ಇಲ್ಲ ಹಾಗೆ ಬದುಕಿದ ಜೋಡಿ ಇವರು. ಎಪ್ಪತ್ತು, ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಶ್ರೇಷ್ಠ ಚಿತ್ರಗಳನ್ನು ನೀಡಿದ ಗರಿಮೆ ದೊರೈ ಮತ್ತು ಭಗವಾನ್ ಜೋಡಿಗೆ ಸಲ್ಲುತ್ತದೆ. 

ಮೈಸೂರಿನ ಅಯ್ಯಂಗಾರ್ ಕುಟುಂಬದಲ್ಲಿ ಜನನ 

ಎಸ್ ಕೆ ಭಗವಾನ್ ಮೈಸೂರಿನ ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದರು. ಶಾಲಾದಿನಗಳಿಂದನೇ ರಂಗಭೂಮಿಯತ್ತ ಆಸಕ್ತಿ. ಯುವಕರಾಗಿದ್ದಾಗಲೇ ನಾಟಕಗಳಲ್ಲಿ ನಟಿಸುತ್ತಿದ್ದರು. ರಂಗಭೂಮಿಯತ್ತ ಇದ್ದ ಆಸಕ್ತಿ ಕ್ರಮೇಣ ಸಿನಿಮಾಗೆ ಎಂಟ್ರಿ ಕೊಡುವಂತೆ ಮಾಡಿತು.  ಸಿನಿಮಾ ರೆಪ್ರೆಸೆಂಟೆಟಿವ್ ಆಗಿ ರಾಜ್ಯವನ್ನು ಸುತ್ತಿದ ಎಸ್.ಕೆ. ಭಗವಾನ್ ನಿರ್ದೇಶಕ ಕಣಗಾಲ್ ಪ್ರಭಾಕರ ಶಾಸ್ತ್ರೀಗಳಿಗೆ ಸಹಾಯಕರಾಗುವ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಭಾಗ್ಯೋದಯ ಚಿತ್ರದಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರೀ ಜೊತೆ ಸಹಾಯಕರಾಗಿ ಕೆಲಸ ಮಾಡಿದರು. ಬಳಿಕ ಎ.ಸಿ.ನರಸಿಂಹಮೂರ್ತಿ ಅವರೊಂದಿಗೆ ಸೇರಿ ಸಂಧ್ಯಾರಾಗ ಹಾಗೂ ರಾಜದುರ್ಗದ ರಹಸ್ಯ ಚಿತ್ರಗಳನ್ನು ನಿರ್ದೇಶಿಸಿದರು. 

ದೊರೈ- ಭಗವಾನ್ ಜೋಡಿಯ ಮೊದಲ ಸಿನಿಮಾ 'ಜೇಡರ ಬಲೆ'

ಸಹಾಯಕರಾಗಿದ್ದ ಭಗವಾನ್ ಬಳಿಕ ದೊರೈರಾಜು ಜೊತೆ ಸೇರಿ ಜೇಡರ ಬಲೆ ಸಿನಿಮಾ ನಿರ್ದೇಶನ ಮಾಡಿದರು. ಇದು ದೊರೈ ಮತ್ತು ಭಗವಾನ್ ಜೋಡಿಯ ಮೊದಲ ನಿರ್ದೇಶನದ ಸಿನಿಮಾ. ಈ ಸಿನಿಮಾ ಸೂಪರ್ ಹಿಟ್ ಕೂಡ ಆಯಿತು. ವಿಶೇಷ ಎಂದರೆ ಕನ್ನಡದ ಮೊಟ್ಟ ಮೊದಲ ಬಾಂಡ್ ಶೈಲಿಯ ಸಿನಿಮಾ ಇದಾಗಿದೆ. ಬಾಂಡ್ ಶೈಲಿಯ ಸಿನಿಮಾವನ್ನು ಕನ್ನಡಕ್ಕೆ ಪರಿಚಯಿಸಿದ್ದೇ ದೊರೈ ಮತ್ತು ಭಗವಾನ್. ಈ ಜೋಡಿ ಕನ್ನಡ ಸಿನಿಮಾರಂಗಕ್ಕೆ ಶ್ರೇಷ್ಠ ಚಿತ್ರಗಳನ್ನು ನೀಡಿದ್ದಾರೆ. 

‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸಬೆಳಕು’, ‘ಯಾರಿವನು’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. 

ಖ್ಯಾತ ನಿರ್ದೇಶಕ ಎಸ್‌.ಕೆ. ಭಗವಾನ್‌ ವಿಧಿವಶ: ಕಳಚಿತು ಚಿತ್ರರಂಗದ ಮತ್ತೊಂದು ಕೊಂಡಿ

ಕನ್ನಡ ಕಾದಂಬರಿ ಆಧರಿತ ಚಿತ್ರಗಳ ಪಿತಾಮಹಾ 

ದೊರೈ ಮತ್ತು ಭಗವಾನ್ ಜೋಡಿ ಕನ್ನಡದಲ್ಲಿ ಅತ್ಯಧಿಕ ಕಾದಂಬರಿ ಆಧಾರಿತ ಚಿತ್ರಗಳನ್ನು ನೀಡಿದ ಗರಿಮೆ ಕೂಡ ಇವರದ್ದು. ಕನ್ನಡದಲ್ಲಿ ಅತ್ಯಧಿಕ ಕಾದಂಬರಿ ಆಧಾರಿತ ಚಿತ್ರಗಳನ್ನು ನೀಡಿದ ನೆನಪಿಗೆ 2014ರಲ್ಲಿ 'ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಪಿತಾಮಹ' ಬಿರುದನ್ನು ನೀಡಿ ಗೌರವಿಸಲಾಗಿತ್ತು. ಕಾದಂಬರಿ ಆಧರಿತ ಸಿನಿಮಾಗಳು, ಎರಡು ಕನಸು (ವಾಣಿ ಅವರ ಕಾದಂಬರಿ), ಬಯಲು ದಾರಿ (ಭಾರತಿಸುತ), ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಚಂದನದಗೊಂಬೆ (ತ.ರಾ.ಸು), ಹೊಸಬೆಳಕು (ವಾಣಿ), ಸಮಯದ ಗೊಂಬೆ (ಚಿತ್ರಲೇಖ), ಜೀವನಚೈತ್ರ (ವಿಶಾಲಾಕ್ಷಿ ದಕ್ಷಿಣಮೂರ್ತಿ) ಸೇರಿದಂತೆ ಇನ್ನೂ ಅನೇಕ ಚಿತ್ರಗಳಿವೆ. 

ರಾಜ್ ಕುಮಾರ್ ಜೊತೆ ಅತೀ ಹೆಚ್ಚು ಸಿನಿಮಾ 

ದೊರೈ ಮತ್ತು ಭಗವಾನ್  ಜೋಡಿ ಅತೀ ಹೆಚ್ಚು ಸಿನಿಮಾ ಮಾಡಿರುವುದು ಡಾ.ರಾಜ್ ಕುಮಾರ್ ಅವರಿಗೆ ಎನ್ನುವುದು ವಿಶೇಷ. ದೊರೈ ಭಾಗವನ್ ಅವರ 30 ಚಿತ್ರಗಳಿಗೆ ಡಾ. ರಾಜ್‌ ನಾಯಕರಾಗಿದ್ದರು.  ಅಷ್ಟೇ ಅಲ್ಲದೇ ಡಾ ರಾಜ್​ ಕುಟುಂಬದೊಂದಿಗೆ ಆತ್ಮೀಯ ಬಾಂಧ್ಯವವನ್ನು ಹೊಂದಿದ್ದರು ಭಗವಾನ್​. 1994ರಲ್ಲಿ ಬಂದ ‘ಒಡಹುಟ್ಟಿದವರು’ ರಾಜ್​ಕುಮಾರ್ ಜೊತೆ ದೊರೈ-ಭಗವಾನ್ ಮಾಡಿದ ಕೊನೆಯ ಸಿನಿಮಾ. ಡಾ.ರಾಜ್ ಕುಮಾರ್ ಹೊರತಾಗಿ ಈ ಜೋಡಿಯು ಅನಂತ್ ನಾಗ್ ಮತ್ತು ಲಕ್ಷ್ಮಿ ಅವರೊಂದಿಗೆ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. 

ದೊರೈರಾಜು ನಿಧನದ ಬಳಿಕ ಸಿನಿಮಾರಂಗದಿಂದ ದೂರ 

ಸಿನಿಮಾರಂಗದಲ್ಲಿ 65 ವರ್ಷಗಳ ಸುದೀರ್ಘ ಅನುಭವ ಭಗವಾನ್​ ಅವರದ್ದು. ಗೆಳೆಯ ದೊರೈರಾಜು ನಿಧನದ ಬಳಿಕ ನಿರ್ದೇಶನದಿಂದ ಹಿಂದೆ ಸರಿದಿದ್ದರು. ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳಿದ ನಂತರ `ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್'ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. ಗೆಳೆಯನ ನಿಧನದ ಬಳಿಕ ಭಗವಾನ್ ತಮ್ಮ ಹೆಸರಿನ ಜೊತೆ ದೊರೈ ಹೆಸರನ್ನು ಹಾಗೆ ಉಳಿಸಿಕೊಂಡರು. 

2019ರಲ್ಲಿ ಕೊನೆಯ ಸಿನಿಮಾ ನಿರ್ದೇಶನ

ದೊರೈ ಜೊತೆ ಸೇರಿ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಭಗವಾನ್ ಗೆಳೆಯನ ನಿಧನದ ಬಳಿಕ ನಿರ್ದೇಶನಕ್ಕೆ ಗುಡ್ ಬೈ ಹೇಳಿದ್ದರು. ಆದರೆ ಅನೇಕ ವರ್ಷಗಳ ಬಳಿಕ 2019ರಲ್ಲಿ ಆಡುವಗೊಂಬೆ ಸಿನಿಮಾ ಮೂಲಕ ಮತ್ತೆ ನಿರ್ದೇಶನದ ಕ್ಯಾಪ್ ಧರಿಸಿದರು. ಸಂಚಾರಿ ವಿಜಯ್ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಭಗವಾನ್ ಅವರ ಕೊನೆಯ ಸಿನಿಮಾವಾಗಿದೆ. ನಿರ್ದೇಶನದ ಜೊತೆಗೆ ಭಗವಾನ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿನಯ್‌ ರಾಘವೇಂದ್ರ ರಾಜ್‌ಕುಮಾರ್‌ ನಾಯಕರಾಗಿದ್ದ ‘ಅನಂತು ವರ್ಸಸ್‌ ನುಸ್ರತ್‌’ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. 

Follow Us:
Download App:
  • android
  • ios