ಡಾ.ರಾಜ್‌ಕುಮಾರ್ ಸುಮಧುರ ಕಂಠಕ್ಕೆ ಮನಸೋಲದವರು ಯಾರಿದ್ದಾರೆ? ಗಾನ ಗಂಧರ್ವ ಎಂದೇ ಬಿರುದು ಪಡೆದ ಅಣ್ಣಾವ್ರ ಧ್ವನಿಯನ್ನು ಕರ್ಕಶ ಎಂದು ವ್ಯಂಗ್ಯವಾಡಿದ ಯುವ ಗಾಯಕ ಇದೀಗ ಭೇಷರತ್ ಕ್ಷಮೆ ಯಾಚಿಸಿದ್ದಾನೆ. ಕನ್ನಡಗಿರ ಘರ್ಜನೆಗೆ ಬೆಚ್ಚಿದ ಗಾಯಕ ಕ್ಷಮೆ ಕೇಳಿದ್ದಾನೆ.
ಬೆಂಗಳೂರು(ಫೆ.28) ಡಾ.ರಾಜ್‌ಕುಮಾರ್ ಸ್ಯಾಂಡಲ್‌ವುಡ್ ಮಾತ್ರವಲ್ಲ, ದೇಶದ ಯಾವುದೇ ಸಿನಿಮಾ ಇಂಡಸ್ಟ್ರಿ ಕೂಡ ಅತ್ಯುನ್ನತ ಗೌರವ ನೀಡುವ ವ್ಯಕ್ತಿತ್ವ. ನಟನೆ, ಗಾಯನ, ವ್ಯಕ್ತಿತ್ವ, ಸರಳತೆ, ಮಾನವೀಯತೆ ಸೇರಿದಂತೆ ಎಲ್ಲವೂ ಮಿಳಿತಗೊಂಡಿರುವ ಪರ್ಫೆಕ್ಟ್ ರೋಲ್ ಮಾಡೆಲ್. ಗಾನ ಗಂಧರ್ವ, ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಸೇರಿದಂತೆ ಹಲವು ಬಿರುದುಗಳ ಡಾ.ರಾಜ್‌ಗೆ ಸಂದಿದೆ. ಡಾ.ರಾಜ್ ಹಾಡುಗಳೆಂದರೆ ಈಗಲೂ ಫೇವರಿಟ್. ಅವರ ದ್ವನಿ ವಿಶ್ವದಲ್ಲೇ ಜನಪ್ರಿಯ. ಆದರೆ ಡಾ.ರಾಜ್‌ಕುಮಾರ್ ದ್ವನಿ ಕರ್ಕಶ ಎಂದು ಇತ್ತೀಚೆಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಯುವ ಗಾಯಕನಿಗೆ ಕನ್ನಡಿಗರು ಮಂಗಳಾರತಿ ಮಾಡಿದ್ದರು. ಕನ್ನಡಿಗರು ಮಾತ್ರವಲ್ಲ, ಇತರ ರಾಜ್ಯದ ಹಲವರು ಈ ಗಾಯಕನ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಭಾರಿ ವಿರೋಧ, ಆಕ್ರೋಶ, ಟೀಕೆಗಳಿಂದ ಬೆಚ್ಚಿದ ಯುವ ಗಾಯಕ ಸಂಜಯ್ ನಾಗ್ ಇದೀಗ ಭೇಷರತ್ ಕ್ಷಮೆ ಯಾಚಿಸಿದ್ದಾನೆ.
ನಾದಯಮ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿರುವ ಡಾ.ರಾಜ್‌ಕುಮಾರ್ ಸುಮಧುರ ಕಂಠದ ಹಾಡುಗಳು ಇಂದಿಗೂ ಜನರ ಮನದಲ್ಲಿ ಹಚ್ಚ ಹಸುರಾಗಿದೆ. ಇದರ ನಡುವೆ ಯುವ ಗಾಯಕ ಎಂದು ಹೇಳಿಕೊಂಡ ಸಂಜಯ್ ನಾಗ್ ಡಾ.ರಾಜ್ ಕಂಠವನ್ನು ವ್ಯಂಗ್ಯವಾಡಿದ್ದ. ಟ್ವೀಟ್ ಮೂಲಕ ಈತ ನಾಲಗೆ ಹರಿಬಿಟ್ಟಿದ್ದ. ಡಾ.ರಾಜ್‌ಕುಮಾರ್ ಒರ್ವ ಉತ್ತಮ ನಟನಾಗಿರಬಹುದು. ಆದರೆ ಕರ್ಕಶ ಗಾಯಕ ಎಂದು ಟ್ವೀಟ್ ಮಾಡಿದ್ದರು. ಕರ್ನಾಟಕ ಮಾತ್ರವಲ್ಲ, ದೇಶವೇ ಒಪ್ಪಿರುವ ಡಾ.ರಾಜ್ ದನಿಯನ್ನು ಈ ಮಟ್ಟಕ್ಕೆ ವ್ಯಂಗ್ಯವಾಡಿದ ಯುವ ಗಾಯಕ ಸಂಜಯ್ ನಾಗ್ ವಿರುದ್ದ ಕನ್ನಡಿಗರು ಭಾರಿ ಅಸಮಮಾಧಾನ ಹೊರಹಾಕಿದ್ದರು.
'ಭಯಾನಕ ಗಾಯಕ' ಗಾನ ಗಂಧರ್ವ ರಾಜ್‌ಕುಮಾರ್ ದನಿ ವ್ಯಂಗ್ಯವಾಡಿದ ಸಿಂಗರ್‌ಗೆ ಚಳಿ ಬಿಡಿಸಿದ ಕನ್ನಡಿಗರು!
ಈತ ತನ್ನ ಪಬ್ಲಿಸಿಟಿ ಸ್ಟಂಟ್‌ಗಾಗಿ ಅಣ್ಣಾವ್ರ ಹಾಡು, ಅಣ್ಣಾವ್ರ ದನಿಯನ್ನೇ ಅಣಕಿಸಿದ್ದ. ಇದು ಕನ್ನಡಿಗರ ರೊಚ್ಚೆಗೆಬ್ಬಿಸಿತ್ತು. ಸೋಶಿಯಲ್ ಮೀಡಿಯಾ ಸೇರಿದಂತೆ ಬಹುತೇಕ ಎಲ್ಲಾ ವೇದಿಕೆಗಳ ಮೂಲಕ ಸಂಜಯ್ ನಾಗ್ ವಿರುದ್ದ ಟೀಕೆ, ಬೆದರಿಕೆ ಸೇರಿದಂತೆ ಆಕ್ರೋಶದ ಸುರಿಮಳೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸಂಜಯ್ ನಾಗ್ ತನ್ನ ಎಕ್ಸ್ ಖಾತೆಯಿಂದ ಎಲ್ಲಾ ಟ್ವೀಟ್ ಡಿಲೀಟ್ ಮಾಡಿ ಮೌನಕ್ಕೆ ಜಾರಿದ್ದ. ಆದರೆ ಇಷ್ಟಕ್ಕೆ ಕನ್ನಡಿಗರ ಆಕ್ರೋಶ ತಣ್ಣಗಾಗಿರಲಿಲ್ಲ. ಸಂಜಯ್ ನಾಗ್ ಹೊರಬರಲು ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಮನೆಯೊಳಗೆ ಬೆಚ್ಚಗೆ ಕುಳಿತಿದ್ದರೂ, ಬೆವರಿಹೋಗಿದ್ದ. ನಿಮಿಷ ನಿಮಿಷಕ್ಕೂ ಆತಂಕ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಇದೀಗ ತನ್ನ ತಪ್ಪನ್ನು ಒಪ್ಪಿಕೊಂಡು ಭೇಷರತ್ ಕ್ಷಮೆ ಯಾಚಿಸಿದ್ದಾನೆ.

ಕನ್ನಡದಲ್ಲಿ ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಸಂಜಯ್ ನಾಗ್ ದೊಡ್ಮನೆ, ಡಾ.ರಾಜ್ ಅಭಿಮಾನಿಗಳ ಬಳಿ ಭೇಷರತ್ ಕ್ಷಮೆ ಯಾಚಿಸಿದ್ದಾನೆ. ಡಾ.ರಾಜ್ ಕುಮಾರ್ ಅವರ ಕುರಿತು ನಾನು ಬರೆದ ಮಾತುಗಳಿಗೆ ಮನಃಪೂರ್ವಕ ಕ್ಷಮೆ ಯಾಚಿಸುತ್ತೇನೆ. ನಾನು ಚಿಕ್ಕಂದಿನಿಂದಲೂ ಅಣ್ಣಾವ್ರ ಅಭಿಮಾನಿ ಹಾಗೂ ಅಣ್ಣಾವ್ರ ಬಗ್ಗೆ ಅಪಾರ ಗೌರವವಿದೆ. ನನ್ನ ಉದ್ದೇಶ ಯಾರಿಗೂ ನೋವುಂಟ ಮಾಡುವುದ್ದಲ್ಲ. ಅಚಾತುರ್ಯವಾಗಿ ಹೇಳಿದ ಮಾತಿಗೆ ಅಣ್ಣಾವ್ರ ಪ್ರತಿಯೊಬ್ಬ ಅಭಿಮಾನಿ ದೇವ್ರಿಗೂ ಮತ್ತು ದೊಡ್ಮನೆಯವರಿಗೆ ವೈಯುಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾನೆ.
ಕ್ಷಮೆ ಕೇಳುವಲ್ಲಿ ಗಾಂಛಲಿ ಮಾಡಿದ್ದಾನೆ ಎಂದು ಮತ್ತೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಅಣ್ಣಾವ್ರ ಅಭಿಮಾನಿಯಾಗಿದ್ದರೆ ಈ ಮಾತುಗಳು ಬರುತ್ತಲೇ ಇರುತ್ತಿರಲಿಲ್ಲ. ಇದು ಗಾಂಛಲಿ ಎಂದು ಕಮೆಂಟ್ ಮಾಡಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ತಂದೆ ಯಾರು? ಅಳಿಯನ ಆದರ್ಶ ಪಾಲಿಸಿದ್ರು ಮಾವ!
