ಭಾರತೀಯ ಚಿತ್ರರಂಗದ ಸ್ವರ ಸಾಮ್ರಾಟ್‌ ಎಸ್‌ಪಿ ಬಾಲಸುಬ್ರಹ್ಮಣ್ಯಂ ಸುಮಾರು 19 ದಿನಗಳಿಂದೆ ಚೆನ್ನೈನ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ ಹಾಗೂ  ಬೇಗ ಗುಣ ಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 19ನೇ ದಿನ ನಡೆಸಲಾಗಿದ್ದ ಕೊರೋನಾ ಟೆಸ್ಟ್‌ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಅವರ ಅಭಿಮಾನಿಗಳಿಗೆ ತುಸು ನೆಮ್ಮದಿ ತಂದಿದೆ. ಆದರೆ, ಇನ್ನೂ ಎಸ್ಪಿ ಪೂರ್ತಿ ಗುಣಮುಖರಾಗಿಲ್ಲ.  ಅವರ ಚೇತರಿಕೆಗಾಗಿ ಅಭಿಮಾನಿಗಳು ಪ್ರಾರ್ಥನೆ ಮುಂದುವರಿದಿದೆ. ಅಪಾಯದಿಂದ ಎಸ್‌ಪಿ ಪಾರಾದರು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ, ಅವರಿಗೆ ಕೊರೋನಾ ಅಂಟಿಸಿದ್ದು ಯಾರೆಂಬ ಚರ್ಚೆ ಶುರುವಾಗಿದೆ. ಕೆಲವರನ್ನು ಬೊಟ್ಟು ಮಾಡಿ ತೋರಿಸಲಾಗುತ್ತಿದೆ.

ಎಲ್ಲಿಯೂ ಹೊರ ಹೋಗದೇ ಮನೆಯಲ್ಲಿಯೇ ಆರಾಮಾಗಿದ್ದ ಎಸ್‌ಪಿಬಿ ಕೆಲವು ದಿನಗಳ ಹಿಂದೆ ಹೈದರಾಬಾದ್‌ನ ಖಾಸಗಿ ಟಿವಿ ಶೋ ಸಾಮಜವರಗಮನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಗಾಯಕಿ ಮಾಳವಿಕಾ ಅವರಿಂದ ಸೋಂಕು ತಗುಲಿದೆ ಎಂದು ನೆಟ್ಟಿಗರು ಇದೀಗ ಮಾತನಾಡಲು ಶುರು ಮಾಡಿದ್ದಾರೆ. 

ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎನ್ನುವಂತಿದ್ರು ವಿಷ್ಣುದಾದಾ- ಎಸ್‌ಪಿಬಿ..!

ಮಾಳವಿಕಾಗೂ ಪಾಸಿಟಿವ್:
ಚರ್ಚೆಯಾಗುತ್ತಿರುವ ವಿಚಾರ ಬಗ್ಗೆ ಗಾಯಕಿ ಮಾಳವಿಕಾ ಸ್ಪಷ್ಟನೆ ನೀಡಿದ್ದಾರೆ. 'ಎಸ್‌ಪಿ ಬಾಲಸುಬ್ರಹ್ಮಣ್ಯಂ ಸರ್ ಆಸ್ಪತ್ರೆಗೆ ದಾಖಲಾದ ನಂತರ ನನಗೂ ಕೊರೋನಾ  ಪಾಸಿಟಿವ್‌ ಇದೆ ಎಂದು ತಿಳಿದು ಬಂದಿದ್ದು.  ಅದಕ್ಕೂ ಮುನ್ನ ನನಗೆ ಕೊರೋನಾ ಇರಲಿಲ್ಲ,' ಎಂದು ಫೇಸ್‌ಬುಕ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

 

'ಎಸ್‌ಪಿಬಿ ಸರ್‌ ಜೊತೆ ಎರಡು ದಿನ ಸಾಮಜವರಗಮನ ಕಾರ್ಯಕ್ರಮಕ್ಕೆ ಶೂಟಿಂಗ್ ಮಾಡಿದ್ದೆವು. ಜುಲೈ 30ರಂದು ಹೇಮಾಚಂದ್ರ, ಅನುದೀಪ, ಪ್ರಣಾವಿ ಮತ್ತು ಲಿಪ್‌ಸಿಕಾ ಜೊತೆ ಹಾಗೂ ಜುಲೈ 31ರಂದು ಕಾರುಣ್ಯ, ದಾಮಿನಿ, ಸತ್ಯ, ವಸ ಪಾವನಿ ಹಾಗೂ ನಾನೂ ಶೂಟಿಂಗ್‌ನಲ್ಲಿದ್ದೆ.  ನಾನು ನನ್ನ ಜೊತೆಗಿದ್ದ ನಾಲ್ವರು ಗಾಯಕಿ ಹಾಗೂ ನಿರೂಪಕಿ ಜೊತೆ ಮೇಕಪ್ ರೂಮ್ ಶೇರ್ ಮಾಡಿರುವೆ. ನನ್ನ ಸಹೋದರಿಯಿಂದ ನನಗೆ ಕೊರೋನಾ ಬಂದಿದೆ ಎಂದು ಹೇಳಲಾಗಿದೆ. ಆದರೆ ಅದು ಸುಳ್ಳು. ಆಕೆ USAನಲ್ಲಿ ಇದ್ದಾಳೆ. ಲಾಕ್‌ಡೌನ್‌ ಪ್ರಾರಂಭದಿಂದಲೂ ನನ್ನ ಪತಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನನ್ನ ಪೋಷಕರು ಮನೆಯಿಂದ ಹೊರಗೆ ಕಾಲೇ ಇಟ್ಟಿಲ್ಲ. ಕಳೆದ 5 ತಿಂಗಳಿಂದ ಮನೆ ಕೆಲಸದವಳು ಬಂದಿಲ್ಲ. ನನಗೆ ಎರಡು ವರ್ಷದ ಮಗಳಿದ್ದಾಳೆ ಎಂಬ ಕಾರಣಕ್ಕೆ ತುಂಬಾನೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುತ್ತಿರುವೆ. ಇಷ್ಟು ತಿಂಗಳ ನಂತರ ಟಿವಿ ಶೋಗೆಂದು ನಾನು ಮನೆಯಿಂದ ಹೊರಗೆ ಬಂದಿರುವುದು. ನಮ್ಮ ಮನೆಯ ಎಲ್ಲಾ ಸದಸ್ಯರಿಗೂ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ನನಗೆ, ನನ್ನ ಅಪ್ಪ-ಅಮ್ಮ ಹಾಗೂ ನನ್ನ ಎರಡು ವರ್ಷದ ಮಗಳಿಗೆ ಕೊರೋನಾ ಸೋಂಕು ತಗುಲಿದೆ. ನನ್ನ ಪತಿ ಹಾಗೂ ಕಾರು ಡ್ರೈವರ್‌ಗೆ ನೆಗೆಟಿವ್ ಬಂದಿದೆ. ಎಸ್‌ಪಿಬಿ ಸರ್‌ ಆಗಸ್ಟ್‌ 5ರಂದು ಟೆಸ್ಟ್‌ ಮಾಡಿಸಿ ಪಾಸಿಟಿವ್ ಬಂದ ನಂತರ ನಮ್ಮ ಕುಟುಂಬದವರು ಟೆಸ್ಟ್‌  ಮಾಡಿಸಿದ್ದು. ನನ್ನ  ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಬಾ ಸೀರಿಯಸ್‌ ಆಗಿದ್ದಾರೆ. ಈ ಸಮಯದಲ್ಲಿಇಂಥ ಫೇಕ್‌ ನ್ಯೂಸ್‌ ಹರಡಿಸಬೇಡಿ. ದಯವಿಟ್ಟು..' ಎಂದು ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.

ಇನ್ನೊಂದು ಜನ್ಮವಿದ್ದರೆ ಕನ್ನಡಿಗನಾಗಿ ಹುಟ್ಟುತ್ತೇನೆಂದ ಎಸ್ಪಿಬಿ: ಅರ್ಚನಾ!

ನನ್ನ ಕಷ್ಟದ ಸಮಯದಲ್ಲಿ ಎಲ್ಲರ ಪ್ರಾರ್ಥನೆ ನನಗೂ ಅಗತ್ಯವಿದೆ. ಇಂಥ ಸಂದರ್ಭದಲ್ಲಿ ಸುಳ್ಳು ಸಂದೇಶಗಳನ್ನು ಹರಡಬೇಡಿ. ಇಂಥ ತಪ್ಪು ದಾರಿಗೆ ಎಳೆಯುವಂಥ ಸಂದೇಶ ಸಾರುತ್ತಿರುವವರ ವಿರುದ್ಧ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ, ಎಂದು ಮಾಳವಿಕಾ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟಿನಲ್ಲಿ ಸ್ಪಷ್ಪಪಡಿಸಿದ್ದಾರೆ.

ಕೊರೋನಾ ಸೋಂಕಿದೆ ಎಂದು ದೃಢಪಟ್ಟ ನಂತರ, ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿ ಆಸ್ಪತ್ರೆಗೆ ಸೇರಿದ್ದ ಭಾರತದ ಹೆಸರಾಂತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ವಿಪರೀತ ಹದಗೆಟ್ಟಿತ್ತು. ಎಲ್ಲೆಡೆ ಗಾಯಕನ ಆರೋಗ್ಯ ಚೇತರಿಕೆಗಾಗಿ ಸಾಮೂಹಿಕ ಪ್ರಾರ್ಥನೆಯೂ ನಡೆದಿತ್ತು. ಅದರ ಫಲವೋ ಏನೋ, ಎಸ್ಪಿ ಇದೀಗ ಕೊರೋನಾ ಗೆದ್ದಿದ್ದಾರೆ. ಆದರೆ, ಆರೋಗ್ಯ ಸ್ಥಿತಿ ಇನ್ನೂ ಗಂಭಿರವಾಗಿಯೇ ಇದ್ದು ಸಂಪೂರ್ಣ ಗುಣಮುಖರಾಗಲೆಂದು ಸುವರ್ಣನ್ಯೂಸ್.ಕಾಮ್ ಸಹ ಶುಭ ಹಾರೈಸುತ್ತದೆ.