1972ರಿಂದ ಶುರುವಾದ ಗುರುರಾಜ್ ಅವರ ಸಂಗೀತ ಪಯಣ ಇನ್ನೂ ಅದೇ ಹುರುಪಿನಲ್ಲಿ ಮುಂದುವರಿದಿದೆ. ಗಾಯಕ, ಸಂಗೀತ ನಿರ್ದೇಶಕ, ವಾದ್ಯಗೋಷ್ಠಿ ನಿರ್ವಾಹಕ ಹೀಗೆ ಸಂಗೀತದ ವಿವಿಧ ಮಾಧ್ಯಮಗಳಲ್ಲಿ ತೊಡಗಿಸಿಕೊಂಡಿರುವ ಇವರು ಕನ್ನಡದ ಹಾಡುಗಳ ಕರೋಕೆ ಮಾಡಿದ ಮೊದಲಿಗರು.
1972ರಿಂದ ಶುರುವಾದ ಗುರುರಾಜ್ ಅವರ ಸಂಗೀತ ಪಯಣ ಇನ್ನೂ ಅದೇ ಹುರುಪಿನಲ್ಲಿ ಮುಂದುವರಿದಿದೆ. ಗಾಯಕ, ಸಂಗೀತ ನಿರ್ದೇಶಕ, ವಾದ್ಯಗೋಷ್ಠಿ ನಿರ್ವಾಹಕ ಹೀಗೆ ಸಂಗೀತದ ವಿವಿಧ ಮಾಧ್ಯಮಗಳಲ್ಲಿ ತೊಡಗಿಸಿಕೊಂಡಿರುವ ಇವರು ಕನ್ನಡದ ಹಾಡುಗಳ ಕರೋಕೆ ಮಾಡಿದ ಮೊದಲಿಗರು. 9,000ಕ್ಕೂ ಅಧಿಕ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು. ಸಂಗೀತ ಕಲಾವಿದ ಗುರುರಾಜ್ ಮೂಲತಃ ಉತ್ತರ ಕರ್ನಾಟಕದ ಕೊಪ್ಪಳದವರು. ಬೆಂಗಳೂರಿನ ಹೊಟೇಲ್‌ನಲ್ಲಿ ಹಾಡುಗಾರನಾಗಿ ವೃತ್ತಿ ಆರಂಭಿಸಿದ ಗುರುರಾಜ್ ತಮ್ಮ ಗಾಯನದಿಂದ ಪ್ರಸಿದ್ಧರಾದವರು.
‘ನಾನು ಬೆಂಗಳೂರಲ್ಲಿ ಹಾಡುಗಾರನಾಗಿದ್ದೇನೆ ಅಂತ ಅಮ್ಮನ ಬಳಿ ಹೇಳಿದರೆ ಅವರು, ಅಲ್ಲೋ ಹುಚ್ಚಾ, ಬೆಂಗಳೂರಿನವರೇನು ಮೂರ್ಖರಿದ್ದಾರ, ಅವರಾರಯಕೆ ನಿನ್ನ ಹಾಡು ಕೇಳಿ ದುಡ್ಡು ಕೊಡ್ತಾರೆ ಎಂದು ಕೇಳಿದಾಗ ನಾನು ತಬ್ಬಿಬ್ಬು’ ಎಂದು ತಮ್ಮ ಅಂದಿನ ಸ್ಥಿತಿಯ ನೆನಪು ಮಾಡಿಕೊಳ್ಳುತ್ತಾರೆ. ಒಮ್ಮೆ ಇವರ ಹಾಡು ಕೇಳಿದ ಖೋಡೆ ಕಂಪನಿ ಮುಖ್ಯಸ್ಥರಾದ ರಾಮಚಂದ್ರ ಸಾ ಖೋಡೆ ಇವರನ್ನು ವಿಚಾರಿಸಿ ತಮ್ಮ ಕಂಪನಿಯಲ್ಲೇ ಉದ್ಯೋಗ ನೀಡಿದರು. ಆದರೆ ಹಾಡಿನ ಕಡೆಗೇ ಗಮನ ಹೆಚ್ಚಿದ್ದರಿಂದ ಅಲ್ಲಿ ಹೆಚ್ಚು ಕಾಲ ಕೆಲಸ ಮಾಡಲಾಗಲಿಲ್ಲ.
ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್!
ಗಾಂಧೀನಗರದ ‘ಟಾಕ್ ಆಫ್ ದಿ ಟೌನ್’ ಹೊಟೇಲ್‌ನಲ್ಲಿ ಇವರ ಹಾಡನ್ನು ರಜನಿಕಾಂತ್ ಸಹ ಬಂದು ಕೇಳುತ್ತಿದ್ದದ್ದುಂಟು. ಮುಂದೆ ಇವರ ಜನಪ್ರಿಯತೆಯ ಬಗ್ಗೆ ಕೇಳಿದ ಎಸ್ ಪಿ ಬಾಲಸುಬ್ರಹ್ಮಣ್ಯಂ ಈ ಹೊಟೇಲಿನ ಗೇಟಿನ ಮೇಲೆ ಕೂತು ಇವರ ಹಾಡಿಗೆ ಕಿವಿಯಾದ ಸನ್ನಿವೇಶವನ್ನು ಗುರುರಾಜ್ ಅವರು ಸೊಗಸಾಗಿ ವರ್ಣಿಸುತ್ತಾರೆ. ಮುಂದೆ ಎಸ್‌ಪಿ ಬಿ ಹಾಗೂ ಇವರು ಆತ್ಮೀಯ ಸ್ನೇಹಿತರಾಗುತ್ತಾರೆ. ‘ಮುಂದೆ ಆರ್ಕೆಸ್ಟ್ರಾದಲ್ಲಿ ಹಾಡುವಾಗ ಜನ ಸಿನಿಮಾ ಸ್ಟಾರ್‌ಗಳನ್ನು ಬಿಟ್ಟರೆ ನಮ್ಮನ್ನೇ ಸ್ಟಾರ್ ಲೆವೆಲ್‌ನಲ್ಲಿ ನೋಡುತ್ತಿದ್ದರು’ ಎಂದು ಆ ದಿನಗಳನ್ನು ನೆನಪಿಸುತ್ತಾರೆ. ಹಾಡಿಗೆ ಸಿನಿಮಾ ನಟರು ತೊಡುತ್ತಿದ್ದಂಥಾ ಬಟ್ಟೆಯನ್ನೇ ತೊಟ್ಟು, ಹಾಡುತ್ತಾ ಡ್ಯಾನ್ಸ್ ಮಾಡುತ್ತಿದ್ದರೆ ಜನರಿಗೆ ಸಾಕ್ಷಾತ್ ಹೀರೋಗಳೇ ತಮ್ಮೆದುರು ಕುಣಿಯುವಂತೆ ಭಾಸವಾಗುತ್ತಿತ್ತು.
ಸಂಗೀತಗಾರರೆಂದರೆ ಬಡವರು, ಅವರ ಬಳಿ ಹಣ ಇರಲ್ಲ ಅನ್ನುವ ಮಿಥ್‌ಅನ್ನು ಒಡೆದುಹಾಕಿ ಆರ್ಕೆಸ್ಟ್ರಾಗಳಿಗೆ ಶ್ರೀಮಂತಿಕೆ ತಂದವರು ಗುರುರಾಜ್ ಹಾಗೂ ಅವರ ಗುರು ಸೌಂಡ್ ಆಫ್ ಮ್ಯೂಸಿಕ್. ಡಾ. ರಾಜ್, ವಿಷ್ಣುವರ್ಧನ್ ಸೇರಿದಂತೆ ಕನ್ನಡದ ಸೂಪರ್ ಸ್ಟಾರ್‌ಗಳ ಆರ್ಕೆಸ್ಟ್ರಾ ನಡೆಸಿದ್ದು ಇವರ ಹೆಗ್ಗಳಿಕೆ. ‘ಆಗೆಲ್ಲ ತಿಂಗಳ ಮೂವತ್ತೂ ದಿನವೂ ಆರ್ಕೆಸ್ಟ್ರಾ, ಅಷ್ಟೂ ಬೇಡಿಕೆ. ಆಗಷ್ಟೇ ದ್ವಾರಕೀಶ್ ಅವರ ‘ಸಿಂಗಾಪುರದಲ್ಲಿ ರಾಜಾ ಕುಳ್ಳ’ ಚಿತ್ರದ ಹಾಡಿನ ಕ್ಯಾಸೆಟ್ ಮಾರುಕಟ್ಟೆಗೆ ಬಂದಿತ್ತು. ಅದರಲ್ಲಿನ ‘ಕುಳ್ಳರ ರಾಜಾ ಬಾ’ ಹಾಡನ್ನು ಹಾಡಲೇ ಬೇಕು ಅಂದುಕೊಂಡು ಮ್ಯೂಸಿಕ್ ಟೀಮ್‌ಗೆ ಹೇಳಿದ್ದೆ. ಅವರಿಗೆ ಪ್ರಾಕ್ಟೀಸ್ ಮಾಡಲು ಸಮಯವಿರಲಿಲ್ಲ. ಆರ್ಕೆಸ್ಟ್ರಾದ ನಡುವೆ ಗ್ಯಾಪಲ್ಲಿ ಟೇಪ್ ರೆಕಾರ್ಡರ್‌ನಲ್ಲಿ ಮ್ಯೂಸಿಕ್ ಕೇಳಿ ಪ್ರಾಕ್ಟೀಸ್ ಮಾಡುತ್ತಿದ್ದರು.
ಅವತ್ತು ಆ ಹಾಡು, ಆರ್ಕೆಸ್ಟ್ರಾ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡಿತು. ಆದರೆ ಆಯೋಜಕರು ಬಾಕಿ ಇದ್ದ ಹಣ ಕೊಡಲಿಲ್ಲ. ‘ಹಿಂದಿಂದ ಟೇಪ್ ರೆಕಾರ್ಡರ್ ಹಾಕಿ ಹಾಡಿದ ಹಾಗೆ ಆ್ಯಕ್ಟ್ ಮಾಡಿದ್ರಿ ನೀವೆಲ್ಲ’ ಅಂದುಬಿಟ್ಟರು. ನಮಗೆ ಒಂದು ಕಡೆ ಟೇಪ್ ರೆಕಾರ್ಡರ್‌ನಂತೇ ಹಾಡಿದೆವು ಅನ್ನುವ ಖುಷಿ, ಇನ್ನೊಂದು ಕಡೆ ಬಾಕಿ ದುಡ್ಡಿನ ಚಿಂತೆ’ ಎಂದು ಸ್ವಾರಸ್ಯಕರ ಸನ್ನಿವೇಶವನ್ನು ಇವರು ವಿವರಿಸುತ್ತಾರೆ. 1972 ರಿಂದ 2000ವರೆಗೂ ಈ ಸಂಗೀತ ಮುಂದುವರಿಯುತ್ತಲೇ ಬಂತು. ಮುಂದೆ ಇವರ ಪತ್ನಿ, ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ‘ಸಾಧನಾ’ ಎಂಬ ಸಂಗೀತ ಶಾಲೆ ಆರಂಭಿಸಿದರು. ಪತಿ, ಪತ್ನಿ ಇಬ್ಬರೂ ಈ ಶಾಲೆಯಲ್ಲಿ ಸುಮಾರು 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಡು ಕಲಿಸಿದ್ದಾರೆ.
Thurthu Nirgamana ಚಿತ್ರದ ಪಾತ್ರಕ್ಕೆ ಬೆಚ್ಚಿಬಿದ್ದ ಸುಧಾರಾಣಿ!
ಇವರೊಮ್ಮೆ ಅಮೇರಿಕಾಗೆ ಹೋದಾಗ ಕನ್ನಡ ಹಾಡುಗಳ ಕರೋಕೆ ಎಲ್ಲೂ ಸಿಗುತ್ತಿಲ್ಲ ಅನ್ನೋದು ಗೊತ್ತಾಯ್ತು. ಇದನ್ನರಿತು ಸುಮಾರು 1000 ಕನ್ನಡ ಹಾಡುಗಳಿಗೆ ಮೊಟ್ಟಮೊದಲು ಕರೋಕೆ ತಯಾರಿಸಿದ್ದು ಇವರ ಹೆಗ್ಗಳಿಕೆ. ಹಾಗೇ ‘ಮಧುರ ಮಧುರವೀ ಮಂಜುಳ ಗಾನ’ ಎಂಬ ಅಚ್ಚುಕಟ್ಟಾದ ಕನ್ನಡ ಚಿತ್ರಗೀತೆಗಳ ಪುಸ್ತಕ ಹೊರತಂದಿದ್ದಾರೆ. ಸದ್ಯ ಚಂದನದಲ್ಲಿ ‘ಮರೆಯದ ಮಾಣಿಕ್ಯ’ ಎಂಬ ಕಾರ್ಯಕ್ರಮ ನಡೆಸುತ್ತಾರೆ. ಇವರ ಸಂಗೀತ ಪಯಣಕ್ಕೀಗ 50ರ ಹರೆಯ. ಈ ಹಿನ್ನೆಲೆಯಲ್ಲಿ ಇಂದು (ಜೂ.18) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಗೌರವ ಸಮರ್ಪಣೆ’ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಭಾಕಾರ್ಯಕ್ರಮದ ಜೊತೆಗೆ ಇವರ ಹಾಡುಹಬ್ಬವೂ ಇರುತ್ತದೆ.
