ಪ್ರಕಾಶ್ ರಾಜ್ ಕುಂಭಮೇಳದ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಮೋದಿ ವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ನೆಟ್ಟಿಗರು ಪ್ರಕಾಶ್ ರಾಜ್ ಪತ್ನಿಯ ಧಾರ್ಮಿಕ ಆಚರಣೆಗಳನ್ನು ಒಪ್ಪಿಕೊಳ್ಳುವುದನ್ನು ಪ್ರಶ್ನಿಸಿದ್ದಾರೆ. ಪ್ರಕಾಶ್ ರಾಜ್ ವೈಯಕ್ತಿಕ ನಂಬಿಕೆ, ಸಾಮರಸ್ಯದ ಬದುಕಿನ ಪರವಾಗಿ ವಾದಿಸಿದ್ದಾರೆ. ಧರ್ಮಗಳ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ನಟ ಪ್ರಕಾಶ್ ರಾಜ್ (Prakash Raj) ಅವರು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗುತ್ತಿದ್ದಾರೆ. ಕಾರಣ, ಅದೇ ಮಹಾಕುಂಭ ಮೇಳದ ಮ್ಯಾಟರ್. ಪ್ರಕಾಶ್ ರಾಜ್ ಅವರನ್ನು ಪ್ರಶಾಂತ್ ಸಂಬರ್ಗಿ ಕಾಲೆಳೆದಿದ್ದು, ಅದಕ್ಕೆ ಪ್ರಕಾಶ್ ರಾಜ್ ದೂರು ಕೊಟ್ಟಿದ್ದು, ಇವೆಲ್ಲವೂ ಮುಗಿದ ಅಧ್ಯಾಯ ಎಂದರೂ, ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ನಟ ಪ್ರಕಾಶ್ ರಾಜ್ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ನಟ ಪ್ರಕಾಶ್ ರಾಜ್ ಅವರದು ಸ್ವಲ್ಪ ವಿಭಿನ್ನ ವ್ಯಕ್ತಿತ್ವ ಎನ್ನಬಹುದು. ಅವರಾಗಿಯೇ ವಿವಾದ ಎಳೆದುಕೊಳ್ಳುತ್ತಾರೋ ಅಥವಾ ಕಾಂಟ್ರೋವರ್ಸಿಯೇ ಅವರ ಬೆನ್ನು ಬೀಳುತ್ತೋ ಗೊತ್ತಿಲ್ಲ. ಆದರೆ, ಸದಾ ಒಂದಲ್ಲ ಇನ್ನೊಂದು ವಿವಾದಕ್ಕೆ ಒಳಗಾಗುತ್ತಲೇ ಇರುತ್ತಾರೆ ನಟ ಪ್ರಕಾಶ್ ರಾಜ್ (ಪ್ರಕಾಶ್ ರೈ). ಸದ್ಯ ಅವರು ಹೇಳಿರುವ ಕೆಲವು ಮಾತುಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಕೌಂಟರ್‌ಗಳು ಬರುತ್ತಿವೆ.
ಅದರಲ್ಲಿ ಒಂದು ಹೀಗಿದೆ- 'ಪ್ರಕಾಶ್ ರಾಜ್ ಅವರೇ, ನೀವು ಯಾವಾಗಲೂ ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯುತ್ತಲೇ ಇರ್ತೀರಿ. ಮೋದಿ ಏನು ಮಾಡಿದ್ರೂ ತಪ್ಪು ಅಂತೀರಿ.. ಆದ್ರೆ ನಿಮ್ಮ ಪತ್ನಿ ದೇವರ ಪೂಜೆ, ಹೋಮ ಹಾಗು ಹವನ ಎಲ್ಲವನ್ನೂ ಮಾಡಿದಾಗ ಅದು ಅವರ ನಂಬಿಕೆ ಎಂದು ಒಪ್ಪಿಕೊಳ್ಳುತ್ತೀರಿ. ನಿಮ್ಮ ಹೆಂಡತಿ ಕೇವಲ ನಿಮ್ಮವಳು. ಆದರೆ ಪ್ರಧಾನಿ ಮೋದಿ ಈ ದೇಶದ ಮೆಜಾರಿಟಿ ಜನರು ಆಯ್ಕೆ ಮಾಡಿರುವ ಪ್ರಧಾನಿ. ಅವರ ನಂಬಿಕೆಯನ್ನು ಯಾಕೆ ನೀವು ವಿರೋಧಿಸುತ್ತೀರಿ?' ಯಾಕೆ ಈ ದೇಶದ ಪ್ರಧಾನಿಯನ್ನು ಯಾವಾಗ್ಲೂ ಬೈಯ್ತೀರಿ..?' ಎಂದು ಕೇಳಿದ್ದಾರೆ.
ಇತ್ತೀಚೆಗಷ್ಟೇ ನಟ ಪ್ರಕಾಶ್ ರಾಜ್ ಅವರು 'ಕುಂಭ ಮೇಳ ಎನ್ನುವುದು ತ್ರಿವೇಣಿ ಸಂಗಮದಲ್ಲಿ ಮಾಡುವ ಪುಣ್ಯ ಸ್ಥಾನ. ಹಲವರಿಗೆ ಅದರ ಮೇಲೆ ನಂಬಿಕೆ ಇದೆ, ಅಲ್ಲಿ ಅವರು ಹೋದರೆ ತಪ್ಪೇನು? ನಂಬಿಕೆ ಇದ್ದವರು ಹೋಗುತ್ತಾರೆ. ಅವರವರ ನಂಬಿಕೆ ಅವರವರಿಗೆ. ಯಾರೊಬ್ಬರ ನಂಬಿಕೆಯನ್ನು ಪ್ರಶ್ನೆ ಮಾಡಲು ನಾನ್ಯಾರು ಎಂದು ಪ್ರಶ್ನಿಸಿದ್ದಾರೆ.
ಶ್ರುತಿಗೆ ಶಾಕ್ ಕೊಟ್ಟ ನಿವೇದಿತಾ ಗೌಡ; ಮುದ್ದೆ ತಿನ್ನಲು ಏನ್ ಬಳಸ್ತಾರಂತೆ ನೋಡಿ!
ಜೊತೆಗೆ, ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನಾನು ದೇವರು ಇಲ್ಲದೇ ಇನ್ನೂ ಕೆಲ ವರ್ಷ ಬದುಕುತ್ತೇನೆ. ಆದರೆ ಮನುಷ್ಯರು ಇಲ್ಲದೇ ನಾನು ಬದುಕುವುದಿಲ್ಲ. ನಮಗೆ ಏನೇ ಸಮಸ್ಯೆ ಬಂದರೂ ನಮಗೆ ಮನುಷ್ಯರು ಬೇಕು. ಅದನ್ನು ನಂಬಿ ಬದುಕಿದವನು ನಾನು. ಹಾಗಂತ ಬೇರೆಯವರ ನಂಬಿಕೆಯನ್ನು ಪ್ರಶ್ನೆ ಮಾಡುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂತೋಷ ಇರುತ್ತದೆ. ಅವರ ಮನಸ್ಸಿಗೆ ಶಾಂತಿ, ಚೈತನ್ಯ ಕೊಡುತ್ತದೆ ಎಂತಾದರೆ ಅವರು ಅಲ್ಲಿಗೆ ಹೋದರೆ ತಪ್ಪೇನೂ ಇಲ್ಲ.
ಆದರೆ ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳುವುದು, ಯಾರದ್ದಾದರೂ ವಿರುದ್ಧ ಸುಳ್ಳು ಸುದ್ದಿ ಹರಿಬಿಡುವುದನ್ನು ನಾನು ಒಪ್ಪುವುದಿಲ್ಲ, ಅದನ್ನು ಸಹಿಸುವುದಿಲ್ಲ' ಎಂದಿದ್ದಾರೆ. ಜೊತೆಗೆ, ತಮ್ಮ ಪತ್ನಿಯ ಬಗ್ಗೆ ಮಾತನಾಡಿರುವ ಪ್ರಕಾಶ್ ಅವರು, ನನ್ನ ಹೆಂಡತಿ ಹೋಮ ಮಾಡುತ್ತಾಳೆ, ದೇವಸ್ಥಾನಕ್ಕೆ ಹೋಗುತ್ತಾಳೆ. ಅದನ್ನು ನಾನು ಎಂದಿಗೂ ಬೇಡ ಎಂದಿಲ್ಲ. ಅದು ಆಕೆಯ ನಂಬಿಕೆ. ಆದ್ದರಿಂದ ಕುಂಭಮೇಳಕ್ಕೆ ನಂಬಿಕೆ ಮೇಲೆ ಹೋದರೆ ನನ್ನದೇನೂ ಸಮಸ್ಯೆಯಿಲ್ಲ ಎಂದಿದ್ದಾರೆ.
ಕುಂಭಮೇಳದಲ್ಲಿ ಮಿಂದೆದ್ದರೆ ಬಡತನ ನಿರ್ಮೂಲನ ಆಗುವುದಿಲ್ಲ ಎನ್ನುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ಅವರು, ಆ ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಯಾರ ನಂಬಿಕೆ ನಡುವೆ ನಾನು ಬರುವುದಿಲ್ಲ. ಒಟ್ಟಿನಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎನ್ನುವುದು ನನ್ನ ಆಸೆ ಎಂದಿದ್ದಾರೆ.
ಶಂಕರ್ ನಾಗ್ ಗುಟ್ಟು ಬಯಲು ಮಾಡಿದ 'ಸಿಬಿಐ ಶಂಕರ್' ನಟಿ ಸುಮನ್ ರಂಗನಾಥ್!
ಇದೇ ವೇಳೆ ಧರ್ಮದ ಬಗ್ಗೆ ಮಾತನಾಡಿರುವ ಅವರು, ನಾನು ಸದಾ ಹಿಂದೂ ಧರ್ಮದ ವಿರುದ್ಧ ಮಾತ್ರ ಮಾತನಾಡುತ್ತೇನೆ ಎನ್ನುವುದು ಸರಿಯಲ್ಲ. ಕ್ರೈಸ್ತ ಧರ್ಮವೆನ್ನುವುದು ಮಾಫಿಯಾ ಎಂದಿದ್ದೇನೆ. ಮುಸ್ಲಿಮರಲ್ಲಿ ಭಯೋತ್ಪಾದಕರೂ ಇದ್ದಾರೆ ಎಂದಿದ್ದೇನೆ. ಅದ್ಯಾವುದೂ ಹೈಲೈಟ್ ಆಗುವುದಿಲ್ಲ. ನನ್ನ ಆಸೆ ಎಲ್ಲರಲ್ಲಿಯೂ ಸಾಮರಸ್ಯ ಮೂಡಬೇಕು ಎನ್ನುವುದು ಅಷ್ಟೇ ಎಂದಿದ್ದಾರೆ.
