ಪ್ರಕಾಶ್ ರಾಜ್ ಅವರ ಕುಂಭಮೇಳದ ನಕಲಿ AI ಚಿತ್ರವನ್ನು ಪ್ರಶಾಂತ್ ಸಂಬರಗಿ ಹಂಚಿಕೊಂಡಿದ್ದಕ್ಕೆ ಪ್ರಕಾಶ್ ರಾಜ್ ದೂರು ದಾಖಲಿಸಿದ್ದಾರೆ. ವೈಯಕ್ತಿಕ ನಂಬಿಕೆಗಳನ್ನು ಗೌರವಿಸಬೇಕು, ಧಾರ್ಮಿಕ ವಿಚಾರಗಳನ್ನು ರಾಜಕೀಯ ಲಾಭಕ್ಕೆ ಬಳಸಬಾರದು ಎಂದಿದ್ದಾರೆ. ಪತ್ನಿಯ ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸುವುದಿಲ್ಲ, ಸಾಮರಸ್ಯದ ಬದುಕೇ ಮುಖ್ಯ ಎಂದರು. ಎಲ್ಲ ಧರ್ಮಗಳಲ್ಲೂ ನ್ಯೂನತೆಗಳಿವೆ ಎಂದೂ ಅಭಿಪ್ರಾಯಪಟ್ಟರು.

 ಉತ್ತರ ಪ್ರದೇಶದ ಪ್ರಯಾಗ್​ ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದ ಸಂದರ್ಭದಲ್ಲಿ, ದೇಶ-ವಿದೇಶಗಳ ಕೋಟ್ಯಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳೂ ಗಂಗೆಯಲ್ಲಿ ಮಿಂದು ಎದ್ದಿದ್ದಾರೆ. ಇದೇ ವೇಳೆ ಹಲವು ಖ್ಯಾತನಾಮರ ಕೃತಕ ಬುದ್ಧಿಮತ್ತೆ (AI) ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅವರು ಪುಣ್ಯಸ್ನಾನ ಮಾಡಿರುವುದಾಗಿ ಶೀರ್ಷಿಕೆ ಕೊಡಲಾಗುತ್ತಿದೆ. ಅದರಲ್ಲಿ ಒಬ್ಬರು ಪ್ರಕಾಶ್​ ರಾಜ್​. ಕೆಲ ದಿನಗಳ ಹಿಂದೆ ಪ್ರಕಾಶ್​ ರಾಜ್​ ಅವರ, ಎಐ ಫೋಟೋ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಸಾಮಾಜಿಕ ಕಾರ್ಯಕರ್ತ ಹಾಗೂ ನಟ ಪ್ರಶಾಂತ್​ ಸಂಬರಗಿ ಅವರೂ ಶೇರ್​ ಮಾಡಿದ್ದರು. ಕುಂಭಮೇಳದಲ್ಲಿ ಪ್ರಕಾಶ್​ ರಾಜ್​ ಮಿಂದೆದ್ದರು. ಅವರ ಎಲ್ಲಾ ಪಾಪಗಳು ತೊಳೆದು ಹೋಗುತ್ತವೆ ಎನ್ನುವ ನಂಬಿಕೆ ಇದೆ ಎನ್ನುವ ಕ್ಯಾಪ್ಷನ್​ ನೀಡಿದ್ದರು.

ಇದರಿಂದ ಸಿಟ್ಟುಗೊಂಡಿರುವ ಪ್ರಕಾಶ್‌ ಅವರು, ಸಂಬರ್ಗಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಸಂಬರ್ಗಿ ಯಾರು ಎಂದೇ ನನಗೆ ಗೊತ್ತಿಲ್ಲ. ಅವರ ಪರಿಚಯನೇ ಇಲ್ಲ. ಈಗ ಅವರ ಎಲ್ಲಾ ಹಿನ್ನೆಲೆ ತಿಳಿದುಕೊಳ್ಳುತ್ತಿದ್ದೇನೆ ಎಂದು ಪ್ರಕಾಶ್‌ ರಾಜ್‌ ಮಾಧ್ಯಮಗಳ ಎದುರು ಹೇಳಿದ್ದಾರೆ. ಇದೇ ವೇಳೆ, ಕುಂಭಮೇಳ, ನಂಬಿಕೆ, ಪುಣ್ಯಸ್ನಾನ, ದೇವರು, ಧರ್ಮ ಇವೆಲ್ಲವುಗಳ ಬಗ್ಗೆ ಪ್ರಕಾಶ್ ರಾಜ್‌ ಮಾತನಾಡಿದ್ದಾರೆ. 

ಕೇಸ್ ಹಾಕೋ ಭರದಲ್ಲಿ ಅಂತೂ ಸತ್ಯ ಒಪ್ಪಿಕೊಂಡು ಬಿಟ್ರಾ ಪ್ರಕಾಶ್​ ರಾಜ್​? ಥ್ಯಾಂಕ್ಯೂ ಸರ್​ ಅಂತಿರೋ ಟ್ರೋಲಿಗರು!

ನೋಡಿ, ಕುಂಭ ಮೇಳ ಎನ್ನುವುದು ಪುಣ್ಯ ಸ್ಥಾನ. ಹಲವರಿಗೆ ಅದರ ಮೇಲೆ ನಂಬಿಕೆ ಇದೆ, ಅಲ್ಲಿ ಹೋದರೆ ತಪ್ಪೇನು? ನಂಬಿಕೆ ಇದ್ದವರು ಹೋಗುತ್ತಾರೆ. ಅವರವರ ನಂಬಿಕೆ ಅವರವರಿಗೆ. ಯಾರೊಬ್ಬರ ನಂಬಿಕೆಯನ್ನು ಪ್ರಶ್ನೆ ಮಾಡಲು ನಾನ್ಯಾರು ಎಂದು ಪ್ರಶ್ನಿಸಿದ್ದಾರೆ. ಹಾಗಂತೆ ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನಾನು ದೇವರು ಇಲ್ಲದೇ ಇನ್ನೂ ಕೆಲ ವರ್ಷ ಬದುಕುತ್ತೇನೆ. ಆದರೆ ಮನುಷ್ಯರು ಇಲ್ಲದೇ ನಾನು ಬದುಕುವುದಿಲ್ಲ. ನಮಗೆ ಏನೇ ಸಮಸ್ಯೆ ಬಂದರೂ ನಮಗೆ ಮನುಷ್ಯರು ಬೇಕು. ಅದನ್ನು ನಂಬಿ ಬದುಕಿದವನು ನಾನು. ಹಾಗಂತ ಬೇರೆಯವರ ನಂಬಿಕೆಯನ್ನು ಪ್ರಶ್ನೆ ಮಾಡುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂತೋಷ ಇರುತ್ತದೆ. ಅವರ ಮನಸ್ಸಿಗೆ ಶಾಂತಿ, ಚೈತನ್ಯ ಕೊಡುತ್ತದೆ ಎಂತಾದರೆ ಅವರು ಅಲ್ಲಿಗೆ ಹೋದರೆ ತಪ್ಪೇನೂ ಇಲ್ಲ. ಆದರೆ ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳುವುದು, ಯಾರದ್ದಾದರೂ ವಿರುದ್ಧ ಸುಳ್ಳು ಸುದ್ದಿ ಹರಿಬಿಡುವುದನ್ನು ನಾನು ಒಪ್ಪುವುದಿಲ್ಲ, ಅದನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಒದೇ ವೇಳೆ ತಮ್ಮ ಪತ್ನಿಯ ಬಗ್ಗೆ ಮಾತನಾಡಿರುವ ಪ್ರಕಾಶ್‌ ಅವರು, ನನ್ನ ಹೆಂಡತಿ ಹೋಮ ಮಾಡುತ್ತಾಳೆ, ದೇವಸ್ಥಾನಕ್ಕೆ ಹೋಗುತ್ತಾಳೆ. ಅದನ್ನು ನಾನು ಎಂದಿಗೂ ಬೇಡ ಎಂದಿಲ್ಲ. ಅದು ಆಕೆಯ ನಂಬಿಕೆ. ಆದ್ದರಿಂದ ಕುಂಭಮೇಳಕ್ಕೆ ನಂಬಿಕೆ ಮೇಲೆ ಹೋದರೆ ನನ್ನದೇನೂ ಸಮಸ್ಯೆಯಿಲ್ಲ ಎಂದಿದ್ದಾರೆ. ಕುಂಭಮೇಳದಲ್ಲಿ ಮಿಂದೆದ್ದರೆ ಬಡತನ ನಿರ್ಮೂಲನ ಆಗುವುದಿಲ್ಲ ಎನ್ನುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್‌ ಅವರು, ಆ ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಯಾರ ನಂಬಿಕೆ ನಡುವೆ ನಾನು ಬರುವುದಿಲ್ಲ. ಒಟ್ಟಿನಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎನ್ನುವುದು ನನ್ನ ಆಸೆ ಎಂದಿದ್ದಾರೆ. ಇದೇ ವೇಳೆ ಧರ್ಮದ ಬಗ್ಗೆ ಮಾತನಾಡಿರುವ ಅವರು, ನಾನು ಸದಾ ಹಿಂದೂ ಧರ್ಮದ ವಿರುದ್ಧ ಮಾತ್ರ ಮಾತನಾಡುತ್ತೇನೆ ಎನ್ನುವುದು ಸರಿಯಲ್ಲ. ಕ್ರೈಸ್ತ ಧರ್ಮವೆನ್ನುವುದು ಮಾಫಿಯಾ ಎಂದಿದ್ದೇನೆ. ಮುಸ್ಲಿಮರಲ್ಲಿ ಭಯೋತ್ಪಾದಕರೂ ಇದ್ದಾರೆ ಎಂದಿದ್ದೇನೆ. ಅದ್ಯಾವುದೂ ಹೈಲೈಟ್‌ ಆಗುವುದಿಲ್ಲ. ನನ್ನ ಆಸೆ ಎಲ್ಲರಲ್ಲಿಯೂ ಸಾಮರಸ್ಯ ಮೂಡಬೇಕು ಎನ್ನುವುದು ಅಷ್ಟೇ ಎಂದಿದ್ದಾರೆ.

ಮಕ್ಕಳ ಉಸಿರುಗಡ್ತಾ ಇದೆ, ಮಾತನಾಡ್ತಾ ಇಲ್ಲ, 10 ವರ್ಷದಲ್ಲಿ ಏನಾಗತ್ತೆ? ಪ್ರಕಾಶ್​ ರಾಜ್​ ನೋವಿನ ನುಡಿ...

View post on Instagram