ಮೇರುನಟಿ ಲೀಲಾವತಿ ಇನ್ನಿಲ್ಲ ಸ್ವಾಭಿಮಾನದ ನಲ್ಲೆ ವಿಧಿಲೀಲಾ: ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ!

ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಡಾ। ಎಂ.ಲೀಲಾವತಿ (85) ಅವರು ವಯೋಸಹಜ ಕಾಯಿಲೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಬಿನ್ನಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

Sandalwood Veteran Actress Leelavathi Passes Away gvd

ದಾಬಸ್‌ಪೇಟೆ (ಡಿ.09): ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಡಾ। ಎಂ.ಲೀಲಾವತಿ (85) ಅವರು ವಯೋಸಹಜ ಕಾಯಿಲೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಬಿನ್ನಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಲೀಲಾವತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನೆಲಮಂಗಲ ಸಮೀಪದ ಮೈಲನಹಳ್ಳಿಯಲ್ಲಿರುವ ನಿವಾಸದಲ್ಲಿ ಶುಕ್ರವಾರ ಸಂಜೆ 5ರ ಸುಮಾರಿಗೆ ಲೀಲಾವತಿ ಅವರ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿಸಿತ್ತು. ಪುತ್ರ, ನಟ ವಿನೋದ್ ರಾಜ್ ಅವರು ಬಿನ್ನಮಂಗಲ ಬಳಿಯ ಖಾಸಗಿ ಆಸ್ಪತ್ರೆಗೆ ತಮ್ಮ ತಾಯಿಯನ್ನು ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5.40ರ ವೇಳೆಯಲ್ಲಿ ನಿಧನರಾದರು.

ಕುಸಿದು ಬಿದ್ದ ವಿನೋದ್ ರಾಜ್: ಅಮ್ಮ ಲೀಲಾವತಿ ಅವರು ಮೃತಪಟ್ಟ ವಿಚಾರವನ್ನು ವೈದ್ಯರು ತಿಳಿಸುತ್ತಿದಂತೆ ಪುತ್ರ ವಿನೋದ್ ರಾಜ್ ಕುಸಿದು ಬಿದ್ದರು. ತಕ್ಷಣ ವೈದ್ಯರು ವಿನೋದ್‌ ಅವರನ್ನು ಆರೈಕೆ ಮಾಡಿದರು.

ನಿವಾಸಕ್ಕೆ ಮೃತ ದೇಹ: ನೆಲಮಂಗಲ ತಾಲೂಕಿನ ಮೈಲನಹಳ್ಳಿ ಗ್ರಾಮದ ನಿವಾಸಕ್ಕೆ ನಟಿ ಡಾ। ಎಂ.ಲೀಲಾವತಿ ಅವರ ಪಾರ್ಥಿವ ಶರೀರವನ್ನು ಡಿ.9ರಂದು ಶನಿವಾರ ನೆಲಮಂಗಲದಲ್ಲಿರುವ ಡಾ। ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 1938ರಲ್ಲಿ ಜನಿಸಿದ ಲೀಲಾವತಿ ಅವರು ಮೊದಲು ರಂಗಭೂಮಿಯ ಮೂಲಕ ಚಿತ್ರರಂಗ ಪ್ರವೇಶಿಸಿದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ತುಳು ಭಾಷೆಯಲ್ಲಿ ನಟಿ ಲೀಲಾವತಿ 600 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 400 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

ಚಂದನವನದ ಗೊಂಬೆ ಲೀಲಾವತಿ, ಮಂಗಳೂರು ಮೂಲದ ಬೆಡಗಿ; ಚಿತ್ರರಂಗಕ್ಕೆ ಬಂದ ಕಥೆಯೇ ರೋಚಕ

ನಟ ಡಾ। ರಾಜ್‌ಕುಮಾರ್‌, ಡಾ। ವಿಷ್ಣುವರ್ಧನ್‌, ಡಾ। ಅಂಬರೀಷ್‌, ಉದಯ್‌ಕುಮಾರ್‌, ಕಲ್ಯಾಣ್‌ಕುಮಾರ್‌, ಶಿವಾಜಿ ಗಣೇಶನ್‌, ಎಂಜಿಆರ್‌, ರಜನಿಕಾಂತ್‌, ಕಮಲಹಾಸನ್‌, ಎನ್‌ಟಿಆರ್‌ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ಲೀಲಾವತಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಲೀಲಾವತಿ ಅವರು ಬಳಿಕ ತಾಯಿ ಪಾತ್ರದಲ್ಲಿ ಹೆಚ್ಚು ನಟಿಸಿದ್ದರು. ಲೀಲಾವತಿ ಅವರಿಗೆ ವಿನೋದ್ ರಾಜ್‌ ಒಬ್ಬನೇ ಪುತ್ರ. ಚೆನ್ನೈನಲ್ಲಿ ನೆಲೆಸಿದ್ದ ಲೀಲಾವತಿ ಅವರು ಬಳಿಕ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ತೋಟ ಖರೀದಿಸಿ ಅಲ್ಲಿಯೇ ಪುತ್ರನೊಂದಿಗೆ ನೆಲೆಸಿದ್ದರು.

ಜನರಿಗಾಗಿ ಏನನ್ನಾದರೂ ಮಾಡಲೇಬೇಕು ಎಂಬ ತುಡಿತ ಹೊಂದಿದ್ದ ಲೀಲಾವತಿ ಅವರು, ನೆಲಮಂಗಲದ ಬಳಿ ಸೋಲದೇವನಹಳ್ಳಿಯಲ್ಲಿ ಜನರಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿದ್ದರು. ಇತ್ತೀಚೆಗೆ ಪಶು ಆಸ್ಪತ್ರೆಯನ್ನು ನಿರ್ಮಿಸಿದ್ದರು. ಇದರ ಉದ್ಘಾಟನೆಗಾಗಿ ಅನಾರೋಗ್ಯದ ನಡುವೆಯೂ ವಿಧಾನಸೌಧಕ್ಕೆ ಕಾರಿನಲ್ಲಿ ಆಗಮಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಆಹ್ವಾನಿಸಿದ್ದರು. ಲೀಲಾವತಿ ಅವರ ಆಸೆಯಂತೆ ಡಿಸಿಎಂ ಅವರು ಇತ್ತೀಚೆಗೆ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಡಾ। ರಾಜ್‌ಕುಮಾರ್‌ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನಟಿ ಲೀಲಾವತಿ ಅವರು ಪಡೆದುಕೊಂಡಿದ್ದಾರೆ. ಅಲ್ಲದೆ ತುಮಕೂರು ವಿಶ್ವ ವಿದ್ಯಾನಿಲಯವು ಲೀಲಾವತಿ ಅವರ ನಟನೆಗೆ ಗೌರವ ಡಾಕ್ಟರೆಟ್‌ ನೀಡಿ ಗೌರವಿಸಿತ್ತು.

ಗಣ್ಯರ ಸಂತಾಪ: ನಟಿ ಲೀಲಾವತಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಲವು ಸಚಿವರು, ಚಿತ್ರ ನಟರು, ಗಣ್ಯರು, ಸಾಹಿತಿಗಳು, ಸಿನಿಮಾ ತಾರೆಯರು, ನಿರ್ದೇಶಕರು ಕಂಬನಿ ಮಿಡಿದಿದ್ದಾರೆ.

ಆಸ್ಪತ್ರೆಗೆ ಅಭಿಮಾನಿಗಳ ದೌಡು: ಲೀಲಾವತಿ ನಿಧನ ಸುದ್ದಿ ತಿಳಿಯುತ್ತಿದ್ದಂತೆ ದುಃಖತಪ್ತ ಸಾವಿರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಮುಂದೆ ಜಮಾಯಿಸಿದರು. ಬಳಿಕ ನೆಲಮಂಗಲ ಉಪವಿಭಾಗದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬ್ಯಾರಿಕೇಟ್‌ಗಳನ್ನು ಹಾಕಿ ಅಭಿಮಾನಿಗಳು, ಜನರನ್ನು ನಿಯಂತ್ರಿಸಿದರು.

ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ: ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಸಕಲ ಸಿದ್ಧತೆ ಮಾಡಲಾಗಿದೆ. ಮೈದಾನದಲ್ಲಿ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆಯವರೆಗೂ ಅಭಿಮಾನಿಗಳು, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಧ್ಯಾಹ್ನದ ಬಳಿಕ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ತಾಯಿ ಲೀಲಾವತಿ ಅಗಲಿಕೆ ಆಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದ ಪುತ್ರ ವಿನೋದ್ ರಾಜ್!

ಆಸ್ಪತ್ರೆಗೆ ನಟ ಶಿವಣ್ಣ ಭೇಟಿ: ಲೀಲಾವತಿ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ನಟ ಶಿವರಾಜ್‌ಕುಮಾರ್ ಅಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದುಕೊಂಡರು.

Latest Videos
Follow Us:
Download App:
  • android
  • ios