ಕನ್ನಡ ಚಿತ್ರರಂಗಕ್ಕೆ ಆಷಾಢವೆಂದರೆ ಆತಂಕ, ಶ್ರಾವಣ ಎಂದರೆ ಸಂಭ್ರಮ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದಿಂದ ಸಿನಿಮಾಗಳ ಭರಾಟೆ ಶುರು. ಈ ಸಲದ ವರಮಹಾಲಕ್ಷ್ಮಿ ಹಬ್ಬ ಏನೇನು ಸಂಭ್ರಮಗಳನ್ನು ಹೊತ್ತು ತರಲಿದೆ ಎಂದು ಹುಡುಕಾಡಿದರೆ ಸಿಕ್ಕದ್ದು ಇಷ್ಟು. ಅಂಥ ಮಹಾ ಸಂಭ್ರಮ ಕಾಣದಿದ್ದರೂ, ಕತ್ತಲು ಸರಿದೀತು, ಬೆಳಕು ಹೊಳೆದೀತು ಎಂಬ ನಂಬಿಕೆಯಲ್ಲಿ ಚಿತ್ರೋದ್ಯಮ ಹಬ್ಬಕ್ಕೆ ಸನ್ನದ್ಧವಾಗುತ್ತಿದೆ. ಈ ಶುಕ್ರವಾರ ವಿಶೇಷಗಳೇನು ನೋಡೋಣ ಬನ್ನಿ.

1. ತೆರೆ ಕಾಣುತ್ತಿರುವ ಚಿತ್ರಗಳು

ಕೊರೋನಾ ಎರಡನೇ ಅಲೆ ನಂತರ ಕೇವಲ ಒಂದೇ ಒಂದು ಸಿನಿಮಾ ತೆರೆಕಂಡಿತ್ತು. ಈ ಶುಕ್ರವಾರ ಮೂರು ಸಿನಿಮಾಗಳನ್ನು ಹೊತ್ತು ತರುತ್ತಿದೆ. ರಾಜು ಭಂಡಾರಿ ರಾಜವರ್ಥ ನಿರ್ದೇಶನದ ‘ಜೀವ್ನಾನೇ ನಾಟ್ಕ ಸಾಮಿ’, ಅರವಿಂದ್‌ ಕೌಶಿಕ್‌ ನಿರ್ದೇಶನದ ‘ಶಾರ್ದೂಲ’, ರವಿ ಅರ್ಜುನ್‌ ನಿರ್ದೇಶನದ ‘ಗ್ರೂಫಿ’ ವರಮಹಾಲಕ್ಷ್ಮಿ ಕೃಪಾಕಟಾಕ್ಷಕ್ಕೆ ಕಾಯುತ್ತಿರುವ ಚಿತ್ರಗಳು.

2. ಹೊಸ ಚಿತ್ರಗಳ ಘೋಷಣೆ

ವರಮಹಾಲಕ್ಷ್ಮಿ ಹಬ್ಬದ ದಿನ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಅಭಿನಯದ, ನಿರ್ದೇಶನದ ಚಿತ್ರ ಸೆಟ್ಟೇರುತ್ತಿದೆ. ಚಿತ್ರದ ಶೀರ್ಷಿಕೆಯನ್ನು ಆ.20ರಂದು ಬಿಡುಗಡೆ ಮಾಡಲಿದ್ದಾರೆ. ಇದು ನಿರಂಜನ್‌ ಸುಧೀಂದ್ರ ನಟನೆಯ ಮೂರನೇ ಚಿತ್ರ. ಚಂದನ್‌ ಶೆಟ್ಟಿಸಂಗೀತ ನೀಡುತ್ತಿದ್ದು, ಮಲಯಾಳಿ ನಟಿ ಸೌಮ್ಯ ಮೆನನ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದರ ಜೊತೆಗೇ ಹೊಂಬಾಳೆ ಫಿಲಮ್ಸ್‌ ಹಾಗೂ ಕೆಆರ್‌ಜಿ ಸ್ಟುಡಿಯೋ ಹೊಸ ಚಿತ್ರಗಳ ಘೋಷಣೆ ಮಾಡುವ ವದಂತಿಯಿದೆ.

ತಂಡದ ಜೊತೆ ಮುತ್ತತ್ತಿಯಲ್ಲಿ ಕೊನೆಯ ಶೂಟ್; ಭಾವುಕರಾದ ರಕ್ಷಿತಾ, ಪ್ರೇಮ್!

3. ಟೀಸರ್‌, ಟ್ರೇಲರ್‌ಗಳು

ಧನಂಜಯ್‌, ರೆಬಾ ಮೋನಿಕಾ ಮುಖ್ಯ ಪಾತ್ರದಲ್ಲಿರುವ ‘ರತ್ನನ್‌ ಪ್ರಪಂಚ’ ಚಿತ್ರದ ಟ್ರೇಲರ್‌ ಶುಕ್ರವಾರ ರಿಲೀಸ್‌ ಆಗಲಿದೆ. ಹಾಗೇ, ನಿರಂಜನ್‌ ಸುಧೀಂದ್ರ ನಟಿಸಿರುವ ಸೂಪರ್‌ ಸ್ಟಾರ್‌ ಚಿತ್ರದ ಟೀಸರ್‌ ಕೂಡ ಶುಕ್ರವಾರವೇ ಯೂಟ್ಯೂಬಿಗೆ ಬರಲಿದೆ.

4. ಹಾಡುಗಳ ಬಿಡುಗಡೆ

ಶಿವರಾಜ್‌ ಕುಮಾರ್‌ ನಟನೆಯ ಭಜರಂಗಿ 2 ಚಿತ್ರದ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಲಿದೆ. ಶಾನ್ವಿ ಶ್ರೀವಾತ್ಸವ್‌ ಗ್ಯಾಂಗ್‌ಸ್ಟರ್‌ ಆಗಿ ನಟಿಸಿರುವ ‘ಬ್ಯಾಂಗ್‌’ ಚಿತ್ರದ ಹಾಡು ಈ ದಿನ ಬಿಡುಗಡೆ ಆಗಲಿದೆ. ಅಜಯ್‌ ರಾವ್‌-ಸಂಜನಾ ಆನಂದ್‌ ನಟನೆಯ ‘ಶೋಕಿವಾಲ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ.

ಶಿವರಾಜ್‌ಕುಮಾರ್ 124ನೇ ಚಿತ್ರ 'ನೀ ಸಿಗೋವರೆಗೂ' ಶೂಟಿಂಗ್ ಶುರು!

5. ಹೊಸ ಸಿನಿಮಾಗಳ ಪೋಸ್ಟರ್‌:

ಸುದೀಪ್‌, ಪುನೀತ್‌, ಶಿವಣ್ಣ, ಯಶ್‌, ಗಣೇಶ್‌ ಮೊದಲಾದ ಸ್ಟಾರ್‌ ನಟರ ಸಿನಿಮಾಗಳ ಪೋಸ್ಟರ್‌ಗಳು ಹಬ್ಬಕ್ಕೆ ಬಿಡುಗಡೆಯಾಗಲಿವೆ. ಗುಟ್ಟಾಗಿಟ್ಟಿರುವ ಹೊಸ ಸಿನಿಮಾಗಳ ಘೋಷಣೆ ಕೂಡ ಆಗಲಿದೆ. ಸಾಮಾನ್ಯವಾಗಿ ಸ್ಟಾರ್‌ ನಟರ ಹೊಸ ಗೆಟಪ್‌, ಹೊಸ ಚಿತ್ರಗಳ ಮೊದಲ ಸುದ್ದಿ ಪ್ರಕಟವಾಗುವುದು ಕೂಡ ವರಮಹಾಲಕ್ಷ್ಮಿ ಹಬ್ಬದಂದೇ.