ಮೂರು ತಿಂಗಳಲ್ಲಿ ಯಾವೊಂದು ಕನ್ನಡ ಸಿನಿಮಾದ ಗಳಿಕೆಯೂ 5 ಕೋಟಿ ದಾಟಿಲ್ಲ. ಕಳೆದ ವರ್ಷದ ಆರಂಭದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗಿ ಥೇಟರ್‌ಗಳ ಕೊರತೆ ದೊಡ್ಡ ಸುದ್ದಿಯಾಗಿತ್ತು.

- ಪ್ರಿಯಾ ಕೆರ್ವಾಶೆ

ಸ್ಯಾಂಡಲ್‌ವುಡ್‌ನ ಸಿನಿಮಾಗಳ ಗಳಿಕೆ ಗಾಬರಿ ಹುಟ್ಟಿಸುವ ಮಟ್ಟಿಗೆ ಕ್ಷೀಣಿಸುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಸದ್ಯದ ಸ್ಥಿತಿ ನೋಡಿದರೆ ಭಾರತೀಯ ಸಿನಿಮಾದಲ್ಲೇ ‘ಅತೀ ಕಡಿಮೆ ಗಳಿಕೆಯ ಚಿತ್ರರಂಗ’ ಎಂಬ ಬಿರುದು ಸ್ಯಾಂಡಲ್‌ವುಡ್‌ಗೆ ಸಲ್ಲುವ ಎಲ್ಲಾ ಲಕ್ಷಣ ಕಾಣುತ್ತಿದೆ. ಈ ಮೂರು ತಿಂಗಳಲ್ಲಿ ಯಾವೊಂದು ಕನ್ನಡ ಸಿನಿಮಾದ ಗಳಿಕೆಯೂ 5 ಕೋಟಿ ದಾಟಿಲ್ಲ. ಕಳೆದ ವರ್ಷದ ಆರಂಭದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗಿ ಥೇಟರ್‌ಗಳ ಕೊರತೆ ದೊಡ್ಡ ಸುದ್ದಿಯಾಗಿತ್ತು. ಎಲ್ಲಾ ಸಿನಿಮಾಗಳನ್ನೂ ಸಮಾನ ನಿರಾಸಕ್ತಿಯಿಂದ ನೋಡುವ ಮೂಲಕ ಪ್ರೇಕ್ಷಕರೇ ಈ ಸಮಸ್ಯೆಯನ್ನು ನಿವಾರಿಸಿದರು. ಇತ್ತೀಚೆಗಂತೂ ಸಿನಿಮಾಗಳೂ ಇಲ್ಲ, ನೋಡುವ ಉತ್ಸಾಹ ಜನರಲ್ಲೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಏಪ್ರಿಲ್‌ನಿಂದ ಜೂನ್‌ನವರೆಗೆ ಸ್ಯಾಂಡಲ್‌ವುಡ್‌ನಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಇನ್ನು ಬೆರಳೆಣಿಕೆಯ ಚಿತ್ರಗಳು ಈ ತಿಂಗಳು ಬಿಡುಗಡೆಯಾಗಲಿವೆ. ಈ 40 ಚಿತ್ರಗಳಲ್ಲಿ ‘ವಾಮನ’, ‘ವಿದ್ಯಾಪತಿ’, ‘ಅಜ್ಞಾತವಾಸಿ’, ‘ಮಾದೇವ’, ‘ಯುದ್ಧಕಾಂಡ ಚಾಪ್ಟರ್‌ 2’, ‘ಎಡಗೈಯೇ ಅಪಘಾತಕ್ಕೆ ಕಾರಣ’ ಮೊದಲಾದ ಸಿನಿಮಾಗಳು ಕೊಂಚ ಹೆಸರು ಮಾಡಿದ್ದು ಬಿಟ್ಟರೆ ಅಷ್ಟೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಒಂದೇ ಒಂದು ಗೆಲುವೂ ಸಿಕ್ಕಿಲ್ಲ. ಅದೇ ಭಾರತೀಯ ಚಿತ್ರರಂಗವನ್ನು ಗಮನಿಸಿದರೆ ಬಾಲಿವುಡ್‌ನಲ್ಲಿ ಪ್ಯಾನ್‌ ಇಂಡಿಯಾ ಚಿತ್ರಗಳೂ ಸೇರಿ 27ರಷ್ಟು ಸಿನಿಮಾಗಳು ರಿಲೀಸ್‌ ಆಗಿ ಅದರಲ್ಲಿ ‘ರೈಡ್‌ 2’, ‘ಹೌಸ್‌ಫುಲ್‌ 5’ ಮೊದಲಾದ ಸಿನಿಮಾಗಳು ಸರಾಸರಿ 150 ಕೋಟಿಗಳಷ್ಟು ಗಳಿಕೆ ಮಾಡಿವೆ.

ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಭಾರೀ ಸದ್ದು ಮಾಡಿದ್ದು ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾ. ಕೇವಲ 8 ಕೋಟಿ ಬಜೆಟ್‌ನ ಈ ತಮಿಳು ಸಿನಿಮಾ 88 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ತಮಿಳಿನಲ್ಲಿ 45ಕ್ಕೂ ಅಧಿಕ ಸಿನಿಮಾಗಳು ರಿಲೀಸ್‌ ಆಗಿದ್ದು, ಕೆಲವೊಂದು ಗೆಲುವಿನ ನಗೆ ಬೀರಿದೆ. ಮಲಯಾಳಂನಲ್ಲಂತೂ 28 ಕೋಟಿಯಲ್ಲಿ ತಯಾರಾದ ಮೋಹನ್‌ಲಾಲ್‌ ನಟನೆಯ ‘ತುಡರುಮ್‌’ ಸಿನಿಮಾ ಬರೋಬ್ಬರಿ 235 ಕೋಟಿ ಗಳಿಕೆ ಮಾಡಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದೆ. ತೆಲುಗಿನಲ್ಲಿ ‘ಹಿಟ್‌ 3’ ಹಿಟ್‌ ಆಗಿದೆ. ಆದರೆ ಸ್ಯಾಂಡಲ್‌ವುಡ್‌ನಲ್ಲಿ 5 ಕೋಟಿ ಗಳಿಕೆ ದಾಟಿದ ಒಂದು ಸಿನಿಮಾವೂ ಸಿಗುವುದಿಲ್ಲ. ಇದೇ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.

ಏಪ್ರಿಲ್ ಟು ಜೂನ್- ಸ್ಯಾಂಡಲ್‌ವುಡ್‌ ಸಿನಿಮಾ ಚಾರ್ಟ್‌
ಕೊಂಚ ಸದ್ದು ಮಾಡಿದ ಸಿನಿಮಾಗಳು ಅಂದಾಜು ಗಳಿಕೆ
1. ವಾಮನ - 3.5 ಕೋಟಿ
2. ವಿದ್ಯಾಪತಿ - 75 ಲಕ್ಷ
3. ಅಜ್ಞಾತವಾಸಿ - 64 ಲಕ್ಷ
4. ಕೋರ - 24 ಲಕ್ಷ
5. ಯುದ್ಧಕಾಂಡ ಚಾಪ್ಟರ್ 2 4.81 ಕೋಟಿ
6. ಎಡಗೈಯೇ ಅಪಘಾತಕ್ಕೆ ಕಾರಣ 55 ಲಕ್ಷ
7 ಮಾದೇವ 4 ಕೋಟಿ

3 ತಿಂಗಳಲ್ಲಿ ಅತ್ಯಧಿಕ ಗಳಿಕೆ ಮಾಡಿದ ಇತರೆ ಚಿತ್ರಗಳು
ಚಿತ್ರಗಳು ಗಳಿಕೆ
1. ಹೌಸ್‌ಫುಲ್‌ 5 (ಹಿಂದಿ) 244 ಕೋಟಿ
2. ರೈಡ್‌ 2 (ಹಿಂದಿ) 238 ಕೋಟಿ
3. ತುಡರುಮ್‌ (ಮಲಯಾಳಂ) 237 ಕೋಟಿ
4. ಗುಡ್‌ ಬ್ಯಾಡ್‌ ಅಗ್ಲಿ ( ತಮಿಳು) 240 ಕೋಟಿ
5. ಟೂರಿಸ್ಟ್‌ ಫ್ಯಾಮಿಲಿ (ತಮಿಳು) 88 ಕೋಟಿ