1. ದ್ರೌಪದಿಯ ಮೇಲೆ ಅನುಕಂಪ

ನಾನು ಚಿತ್ರರಂಗಕ್ಕೆ ಬರುವ ಮುಂಚೆ ನೂರಾರು ನಾಟಕಗಳಲ್ಲಿ ನಟಿಸಿದ್ದೇನೆ. ಅವುಗಳ ಅನುಭವವೂ ಅವಿಸ್ಮರಣೀಯ. ಅಂಥದ್ದೊಂದು ಅನುಭವ ಕುಣಿಗಲ್ಲಿನಲ್ಲಿ ನಾವು ಮಾಡಿದ ಕುರುಕ್ಷೇತ್ರ ನಾಟಕದಲ್ಲಿ ಆಯಿತು.

ಆವತ್ತು ನಾನು ದ್ರೌಪದಿಯ ಪಾತ್ರಕ್ಕೆಂದು ಹೋಗಿದ್ದೆ. ಸುಭದ್ರೆಯ ಪಾತ್ರವನ್ನು ಶಾಂತಿನಿ ದೇವಿ ಮಾಡಬೇಕಾಗಿತ್ತು. ಆದರೆ ಅವರ ಆರೋಗ್ಯ ಕೆಟ್ಟಿತೆಂದು ಅವರು ಬರಲಿಲ್ಲ. ಆ ಕಾಲಕ್ಕೆ ಶಾಂತಿನಿ ದೇವಿ ತುಂಬ ಜನಪ್ರಿಯರಾಗಿದ್ದರು. ಕುಂತಿ, ಸುಭದ್ರೆ ಪಾತ್ರಗಳೆಲ್ಲ ಬಹಳ ಪ್ರಸಿದ್ಧವಾಗಿತ್ತು. ಆಗೆಲ್ಲ ಅಂದಚಂದಕ್ಕಿಂತ ಗಾಯನವೇ ಮುಖ್ಯವಾಗಿತ್ತು. ಒಂದೇ ಒಂದು ಹಾಡಿದ್ದರೂ ಸಾಕು ನಾಟಕ ಗೆಲ್ಲುತ್ತಿತ್ತು.

ಸದ್ಯದಲ್ಲೇ `ಟಾಕೀಸ್' ಬಾಗಿಲು ತೆರೆಯಲಿದ್ದಾರೆ ಸೃಜನ್..!

ಶಾಂತಿನಿದೇವಿ ಬರದೇ ಇದ್ದದ್ದು ನೋಡಿ ನಾಟಕದ ಮೇಷ್ಟರು ನನ್ನ ಬಳಿಗೆ ಬಂದರು. ಗಿರಿಜಮ್ಮ, ನಿನಗೆ ಮಾತೆಲ್ಲಾ ಬರುತ್ತಲ್ಲ. ನೀನೇ ಸುಭದ್ರೆ ಪಾತ್ರ ಮಾಡು ಅಂದರು. ಆ ಕಾಲಕ್ಕೆ ಹೆಂಗಸರಿಗೆ ಕುರುಕ್ಷೇತ್ರ ನಾಟಕದಲ್ಲಿ ಇರುತ್ತಿದ್ದದ್ದೇ ಒಂದೊಂದೇ ದೃಶ್ಯ. ಕೃಷ್ಣ ಬಂದಾಗ ರುಕ್ಮಿಣಿ ಎಲ್ಲಾ ಸೌಖ್ಯವೇ ಎಂದು ಕೇಳಬೇಕು. ಆಗ ಕೃಷ್ಣ ಯುದ್ಧ ಆರಂಭವಾಗಿದೆ. ಎಲ್ಲರೂ ನನ್ನನ್ನು ಭೇಟಿಯಾಗಲು ಬರುತ್ತಾರೆ, ನೀನು ಒಳಗೆ ಹೋಗು ಎಂದು ಹೇಳಬೇಕು. ಅಲ್ಲಿಗೆ ರುಕ್ಮಿಣಿ ಕೆಲಸ ಮುಗಿಯಿತು. ದ್ರೌಪದಿಗೆ ಒಂದೇ ಮಾತು: ಯಾವ ಕಾರಣಕ್ಕೂ ಸಂಧಿಗೆ ಒಪ್ಪಿಕೊಳ್ಳಬೇಡ. ನನ್ನ ಬಿಚ್ಚಿದ ಮುಡಿಯನ್ನು ಕಟ್ಟುವ ಭಾರ ನಿನ್ನದು ವಾಸುದೇವಾ.

ಒಂದೇ ದೃಶ್ಯವೆಂದು ನಾನು ಹೂಂ ಅಂದೆ. ನನಗೆ ಆ ಹಾಡು ಬರುತ್ತಿರಲಿಲ್ಲ. ಮಾಸ್ಟರ್‌ ಕಲಿಸಿಕೊಟ್ಟರು. ಜನನಿಯ ದಾಸ್ಯವನು ಹರಿಸಿ ಸುರರನು ಗೆಲ್ದು ಅಮೃತವನೆ ತಂದು ತಾಯ್ಗೆ ನಮಿಸೇ ಎಂಬ ಹಾಡು ಅದು. ಅಭಿಮನ್ಯುವನ್ನು ಯುದ್ಧಕ್ಕೆ ಕಳುಹಿಸುವ ಸಂದರ್ಭದ ಹಾಡು. ಈ ಹಾಡುಗಳನ್ನು ಬೇರೆ ಬೇರೆ ರಾಗದಲ್ಲಿ ಹಾಡಬೇಕು. ಎರಡು ಗಂಟೆ ಕಷ್ಟಪಟ್ಟು ಹಾಡು ಕಲಿತೆ.

ನಾನು ಕಷ್ಟಪಟ್ಟಿದ್ದಕ್ಕೆ ಒಂದು ಕಾರಣ ಇತ್ತು. ಎರಡು ಪಾತ್ರ ಮಾಡಿದ್ದರೆ ಡಬಲ್‌ ಪೇಮೆಂಟ್‌ ಸಿಗುತ್ತದೆ ಅಂದುಕೊಂಡಿದ್ದೆ. ನನ್ನನ್ನು ದ್ರೌಪದಿ ಪಾತ್ರಕ್ಕೆ ಭೀಮ ಕರೆತಂದಿದ್ದ. ಆಗೆಲ್ಲ ಪಾತ್ರಧಾರಿಗಳೇ ತಮ್ಮ ಜೋಡಿ ನಟಿಯರನ್ನು ಕರೆತರಬೇಕಿತ್ತು.

ನಾಟಕ ಚೆನ್ನಾಗಿ ಆಯಿತು. ಬೆಳಗಿನ ತನಕದ ನಾಟಕ. ಭೀಮ ಪಾತ್ರಧಾರಿ ಬಂದು ದುಡ್ಡು ಕೊಟ್ಟ. ಅದರಲ್ಲಿ 30 ರೂಪಾಯಿ ಇತ್ತು. ಇದೇನು ಇಷ್ಟೇ ಕೊಟ್ಟಿದ್ದೀರಿ, ನಾನು ಸುಭದ್ರೆ ಪಾತ್ರವನ್ನೂ ಮಾಡಿದ್ದೀನಿ. ಅದರದ್ದೂ ಕೊಡಿ ಅಂದೆ. ಆಗ ಭೀಮ ನನ್ನನ್ನೇನು ಕೇಳ್ತೀರಿ, ಹೋಗಿ ಆ ಅರ್ಜುನನನ್ನು ಕೇಳಿ ಅಂದ.

ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಲವ್ಲಿ ಅಕ್ಕ ಪೂಜಾ ಹೇಗಿದ್ದಾರೆ ನೋಡಿ

ನಾನು ಅರ್ಜುನನ್ನು ಹುಡುಕಿಕೊಂಡು ಹೋದರೆ ಅವನು ಆಗಲೇ ಹೊರಟುಹೋಗಿದ್ದ. ಮಾಸ್ಟರ್‌ ತಾನೇನೂ ಮಾಡಕ್ಕಾಗಲ್ಲ ಅಂತ ಕೈಚೆಲ್ಲಿದರು. ಆವತ್ತು ಅನ್ನಿಸಿತು; ದ್ರೌಪದಿ ಪಾತ್ರ ಮಾಡಿದ ನನಗೇ ಇಷ್ಟುಅನ್ಯಾಯ, ಕಷ್ಟನಷ್ಟಆಗಿರುವಾಗ, ದ್ವಾಪರ ಯುಗದ ನಿಜವಾದ ದ್ರೌಪದಿಗೆ ಎಷ್ಟುಕಷ್ಟಆಗಿರಬಹುದು.

2. ರಸ್ತೆ ಪಾಲಾದ ರಾತ್ರಿ

ಆ ದಿನಗಳಲ್ಲಂತೂ ನಾನು ತುಂಬಾ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಎಲ್ಲಿ ಕರೆದರೂ ಹೋಗುತ್ತಿದ್ದೆ. ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರತಿದಿನ ನಾಟಕಗಳು ನಡೆಯುತ್ತಿದ್ದವು. ಮಾಗಡಿ, ತುಮಕೂರು ಎಲ್ಲಾ ಕಡೆ ಹೋಗುತ್ತಿದ್ದೆವು. ಚಿತ್ರದುರ್ಗದಲ್ಲಿ ಫೆä್ಲೕಮಿನ್‌ ದಾಸ್‌ ಅಂತ ಒಬ್ಬ ನಿರ್ದೇಶಕರಿದ್ದರು. ತುಮಕೂರಿನಲ್ಲಿ ಚಂದ್ರಣ್ಣ ಅಂತ ಮಾಸ್ಟರ್‌ ಇದ್ದರು. ಒಂದ್ಸಲ ಚಂದ್ರಣ್ಣ ನಿರ್ದೇಶನದ ನಾಟಕಕ್ಕೆ ತುಮಕೂರಿಗೆ ಹೋಗಿದ್ದೆವು. ಅವತ್ತು ನಾಟಕ ಬೇಗ ಮುಗಿಯಿತು. ಮುಂಜಾವದ ಮೂರೋ ನಾಲ್ಕೋ ಗಂಟೆ ಇರಬೇಕು. ಆಗ ಚಂದ್ರಣ್ಣ ‘ಒಂದು ಕಿಮೀ ನಡೆದುಕೊಂಡು ಹೋದರೆ ಎಚ್‌ಎಎಲ್‌, ಎಚ್‌ಎಂಟಿ ಕಡೆ ಹೋಗುವ ಬಸ್‌ ಸಿಗುತ್ತದೆ’ ಎಂದರು.

ನನ್ನ ಜತೆ ಸುಕನ್ಯಾ, ಅವಳ ಅಣ್ಣ ಮತ್ತು ತಂದೆ ಇದ್ದರು. ಸುಕನ್ಯಾಗೂ ನಾಟಕದಲ್ಲಿ ಪಾತ್ರ ಇತ್ತು. ನಾವು ನಾಲ್ಕು ಮಂದಿ ನಡೆಯುತ್ತಾ ಹೊರಟೆವು. ಆಗ ಒಂದು ಧೂಮಕೇತು ಬಂದಿತ್ತು. ಅದನ್ನು ಯಾರೂ ನೋಡಬಾರದು ಅಂತ ಹೇಳಿದ್ದರು ಬೇರೆ. ನಾವು ತಲೆ ತಗ್ಗಿಸಿಕೊಂಡು ಬರ್ತಾ ಇದ್ವಿ. ಹಳ್ಳಿಯವರಿಗೆ ಒಂದು ಕಿಮೀ ಅಂದ್ರೆ ನಮಗೆ ಹತ್ತು ಕಿಮೀ. ಹಳ್ಳಿ, ಗದ್ದೆ, ಬೆಟ್ಟ, ಗುಡ್ಡ ಎಲ್ಲಾ ದಾಟಿ ಬಂದರೂ ದಾರಿ ಮುಗಿಯುತ್ತಲೇ ಇರಲಿಲ್ಲ.

ಕೊನೆಗೂ ಹಳ್ಳಿ ಸಿಕ್ಕಿತು. ನಾವು ಹೋಗುವ ಹೊತ್ತಿಗೆಗಾಗಲೇ ಬಸ್ಸು ಹೋಗಿಯಾಗಿತ್ತು. ಅಲ್ಲೇ ಪಕ್ಕದಲ್ಲಿ ಮುಖ್ಯ ರಸ್ತೆಯಿದೆ. ಅಲ್ಲಿಗೆ ಹೋಗೋಣ ಅಂತ ನಮ್ಮ ಜತೆ ಬಂದವರು ಹೇಳಿದರು. ಅಲ್ಲಿಗೆ ಹೋದಾಗಲೂ ಇನ್ನೂ ಬೆಳಕಾಗಿರಲಿಲ್ಲ.

ನಮಗೋ ಸುಸ್ತಾಗಿತ್ತು. ರಸ್ತೆ ಪಕ್ಕದಲ್ಲೇ ನಮ್ಮ ಬಾಸ್ಕೆಟ್‌, ಬ್ಯಾಗ್‌ ಇಟ್ಟೆವು. ಅಲ್ಲೇ ಬೆಡ್‌ ಶೀಟ್‌ ಹಾಸಿ ಸುಮ್ಮನೆ ಒರಗೋಣ ಅಂದುಕೊಂಡು ಒರಗಿದ್ದಷ್ಟೇ. ನಿದ್ದೆ ಅಂದ್ರೆ ನಿದ್ದೆ. ಗಾಢ ನಿದ್ದೆ. ಒಂದು ಹೊತ್ತಲ್ಲಿ ಕಣ್ಣು ಬಿಟ್ಟು ನೋಡಿದರೆ ನಮ್ಮ ಸುತ್ತ ಜನವೋ ಜನ. ಎಲ್ಲರೂ ನಮ್ಮನ್ನೇ ನೋಡುತ್ತಿದ್ದಾರೆ. ಇಬ್ಬರು ಗಂಡಸರು ಇಬ್ಬರು ಹುಡುಗಿಯರು ಇದ್ದಾರೆ, ಏನಾಗಿರಬಹುದು ಅಂತ ಕುತೂಹಲ ಅವರಿಗೆ. ಆ ಜನರ ಆ ನೋಟವನ್ನು ನೋಡಿ ‘ಅಯ್ಯೋ ದೇವರೇ, ಇಲ್ಲಿಯೇ ಭೂಮಿ ಬಾಯಿ ತೆರೆದು ನಮ್ಮನ್ನೆಲ್ಲಾ ನುಂಗಬಾರದೇ’ಅನ್ನಿಸಿತ್ತು.

ಪುಣ್ಯಕ್ಕೆ ಅದೇ ಹೊತ್ತಲ್ಲಿ ಬಸ್‌ ಬಂತು. ಓಡಿ ಹೋಗಿ ಬಸ್‌ ಹತ್ತಿ ಡ್ರೈವರ್‌ ಪಕ್ಕ ಕುಳಿತೆವು. ಅಲ್ಲಿ ತಗ್ಗಿಸಿದ ತಲೆಯನ್ನು ನಾನು ಬೆಂಗಳೂರಿಗೆ ಬರುವವರೆಗೂ ಎತ್ತಲೇ ಇಲ್ಲ.

ಬೆಳ್ಳಿತೆರೆಗೆ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌! 

3. ತನ್ನ ಹೆಂಡ್ತಿ ಸೀರೆ ತಂದು ಕೊಟ್ಟಭೂಪ

ಹಳ್ಳಿಗಳಲ್ಲಿ ನಮ್ಮನ್ನು ಒಬ್ಬೊಬ್ಬರು ಒಂದೊಂದು ಥರ ನೋಡುತ್ತಿದ್ದರು. ಹಳ್ಳಿಗಳಲ್ಲೇ ಇರುತ್ತಿದ್ದ ಮಹಿಳೆಯರಿಗೆ ನಮ್ಮ ಬಗ್ಗೆ ಏನೂ ಗೊತ್ತಿರುತ್ತಿರಲಿಲ್ಲ. ಅಲ್ಲಿ ಸಾಮಾನ್ಯವಾಗಿ

ಐತಿಹಾಸಿಕ ನಾಟಕಗಳನ್ನು ಆಡಿಸುತ್ತಿದ್ದರು. ಯಾರಾದರೂ ಒಬ್ಬ ಪಾತ್ರಧಾರಿ ನಮ್ಮನ್ನು ಕರೆಯುತ್ತಿದ್ದರು. ನಾವು ಹೋಗಿ ನಟಿಸಿ ವಾಪಸ್ಸು ಬರುತ್ತಿದ್ದೆವು.

ಹಾಗೆ ಹೋಗುತ್ತಿದ್ದಾಗ ಒಂದು ಹಳ್ಳಿಯಲ್ಲಿ ನಡೆದ ಘಟನೆ ತುಂಬ ನೋವು ಕೊಟ್ಟಿತು. ಅಲ್ಲಿ ನನ್ನನ್ನು ನಟಿಸಲು ಕರೆದಿದ್ದ ವ್ಯಕ್ತಿ ತನ್ನ ಹೆಂಡತಿಯ ಮದುವೆ ಸೀರೆಯನ್ನೋ, ರಿಸೆಪ್ಷನ್‌ ಸೀರೆಯನ್ನೋ ತಂದು ಇದನ್ನು ಉಟ್ಟುಕೊಳ್ಳಿ ಇದನ್ನು ಉಟ್ಟುಕೊಳ್ಳಿ ಎಂದು ಹಠ ಮಾಡುತ್ತಿದ್ದ. ನನಗೆ ಅದನ್ನು ಉಟ್ಟುಕೊಳ್ಳಲು ಇಷ್ಟಇರಲಿಲ್ಲ. ಅವನ ಹೆಂಡತಿಯ ಮದುವೆಯ ಸೀರೆಯನ್ನು ಉಟ್ಟುಕೊಂಡರೆ ಆಕೆ ಏನಂದುಕೊಳ್ಳಬೇಕು. ನಾನು ನಯವಾಗಿ ತಿರಸ್ಕರಿಸಿದೆ. ನನ್ನ ಸೀರೆಯನ್ನೇ ಉಟ್ಟುಕೊಂಡೆ.

ಸ್ವಲ್ಪ ಸಮಯದ ನಂತರ ಆತನ ಹೆಂಡತಿ ಬಂದಳು. ನನ್ನ ಬಳಿ ಬಂದು, ಇನ್ನೂ ಎಷ್ಟುದಿನ ಇರ್ತೀರಿ ಎಂದು ಕೇಳಿದಳು. ನನಗೆ ಒಂಥರಾ ಅನ್ನಿಸಿತು. ಎಷ್ಟುದಿನ ಅಂದರೆ ಏನು ಅಂತ ಕೇಳಿದೆ. ಅವಳು ಹೇಳಿದ ಮೇಲೆಯೇ ಆ ಅನಾಹುತಕಾರಿ ಸಂಗತಿ ಗೊತ್ತಾದದ್ದು.

ಆ ಹಳ್ಳಿಯ ಹೆಂಗಸರು ತಮ್ಮ ಗಂಡಸರೆಲ್ಲಾ ನಾಟಕದ ಕಲಾವಿದರನ್ನು ಇಟ್ಟುಕೊಳ್ಳುತ್ತಾರೆ ಎಂದು ಭಾವಿಸಿದ್ದರು. ಅದು ಗೊತ್ತಾಗಿ ಮನಸ್ಸು ಭಾರವಾಗಿತ್ತು.

4. ಕುಳ್ಳ ಕೃಷ್ಣನ ಜೋಕಾಲಿ

ಯಾವುದೋ ಒಂದು ಹಳ್ಳಿ. ಅಲ್ಲಿ ಮತ್ತೆ ಕುರುಕ್ಷೇತ್ರ ನಾಟಕ. ಆಗೆಲ್ಲಾ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪೌರಾಣಿಕ ನಾಟಕಗಳೇ ಜಾಸ್ತಿ ನಡೆಯುತ್ತಿತ್ತು. ಆ ನಾಟಕದಲ್ಲಿ ಕೃಷ್ಣ, ರುಕ್ಮಿಣಿಯನ್ನು ಉದ್ದೇಶಿಸಿ ‘ನೀನು ವಿಶ್ರಾಂತಿ ತೆಗೆದುಕೋ, ನಾನೂ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ’ ಎಂದು ಜೋಕಾಲಿಯಲ್ಲಿ ಮಲಗಬೇಕು. ಅದರ ಮಧ್ಯೆ ರುಕ್ಮಿಣಿಯ ಸೆರಗು ಹಿಡಿದು ಎಳೆಯಬೇಕಿತ್ತು. ‘ನಿಲ್ಲು ನಿಲ್ಲು ನೀಲವೇಣಿ’ ಎಂದು ಹಾಡಬೇಕಿತ್ತು. ನಂತರ ಅವನು ಜೋಕಾಲಿ ಮೇಲೆ ಹೋಗಬೇಕು. ಆ ಕೃಷ್ಣ ನೋಡಿದರೆ ಕುಳ್ಳ. ಜೋಕಾಲಿ ಹತ್ತಿರ ಹೋಗಿ ನೋಡುತ್ತಾನೆ, ಜೋಕಾಲಿ ಅವನಿಗೆ ಎಟುಕುತ್ತಿಲ್ಲ. ಆ ಜೋಕಾಲಿಯನ್ನು ಆಕಡೆ ಈ ಕಡೆ ಇಬ್ಬರು ಎಳೆದು ಹಿಡಿದು ನಿಂತಿರುತ್ತಾರೆ. ಇವನಿಗೆ ಬೇರೆ ದಾರಿ ಕಾಣದೆ ಅವರಿಗೆ ಕೇಳಿಸುವಂತೆ, ಸ್ವಲ್ಪ ಕೆಳಕ್ಕೆ ಬಿಡ್ರೋ, ಕೆಳಕ್ಕೆ ಬಿಡ್ರೋ ಎಂದು ಕೂಗಿದ. ಕೃಷ್ಣ ಹಾಗೆ ಜೋಕಾಲಿ ಎಟುಕದೆ ನೇತಾಡಿದ್ದು ಇನ್ನೂ ಕಣ್ಣ ಮುಂದೆಯೇ ಇದೆ.

ನನಗೆ ನನ್ನ ಜೀವನದಲ್ಲಿ ಮೂರು ಆಸೆಗಳಿದ್ದುವು.

1. ಲೋಕೇಶ್‌ ಅವರಿಂದ ಚೆನ್ನಾಗಿ ನಟಿಸಿದ್ದಿ ಅಂತ ಹೇಳಿಸಿಕೊಳ್ಳಬೇಕು.

2. ಅವರ ಬಳಿ ಐ ಲವ್‌ ಯೂ ಅಂತ ಹೇಳಿಸಿಕೊಳ್ಳಬೇಕು.

3. ಅವರ ಕೈಯಲ್ಲಿ ಏಟು ತಿನ್ನಬೇಕು ಅಂತ.

ಈ ಮೂರು ಆಸೆಗಳು ಕೊನೆಗೂ ನೆರವೇರಲಿಲ್ಲ. ಅವರು ಸಹಜವಾಗಿ ನಟಿಸಿದ್ದೀ ಎಂದರು ಚೆನ್ನಾಗಿ ಎಂದು ಹೇಳಲಿಲ್ಲ. ತಮಾಷೆಗೂ ಐ ಲವ್‌ ಯೂ ಅನ್ನಲಿಲ್ಲ. ಯಾವತ್ತೂ ಒಂದು ಏಟು ಹೊಡೆಯಲಿಲ್ಲ.