ಸಾವಿಲ್ಲದ ಸಾಹಸಸಿಂಹ: ವಿಷ್ಣುವರ್ಧನ್ ಮತ್ತೆ ಹುಟ್ಟಿಬರಲಾರರು, ಯಾಕಂದ್ರೆ, ಅವರಿಗೆ ಸಾವಿಲ್ಲ!
ಡಾ.ವಿಷ್ಣುವರ್ಧನ್ ಹೆಸರು ಕೇಳಿದರೆ ಸಾಕು ಅನೇಕ ಪಾತ್ರಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಎಂಥವರನ್ನು ಕಣ್ಣಲ್ಲೇ ಸೆಳೆಯುತ್ತಿದ್ದ ನಟ ಪುಣ್ಯ ತಿಥಿ ಇಂದು.
ಕೃಷ್ಣರಾಜ ಸಾಗರ ( KRS)ದಲ್ಲಿ ಪೊಲೀಸ್ ಆಗಿದ್ದ ನಮ್ಮಪ್ಪ, ಅದೊಂದು ರಾತ್ರಿ ಊಟ ಬಡಿಸುತ್ತಿದ್ದ ಅಮ್ಮನ ಬಳಿ, 'ನಾಳೆ ಬೃಂದಾವನ ಗಾರ್ಡನ್‌ನಲ್ಲಿ ಶೂಟಿಂಗ್ ಇದೆ. ವಿಷ್ಣುವರ್ಧನ್ ಬರ್ತಾರಂತೆ', ಎಂದಿದ್ದಷ್ಟೇ ನನ್ನ ಕಣ್ಣು ಅರಳಿತ್ತು. ಆಗಷ್ಟೇ ಬಂಧನ ಸಿನಿಮಾ ನೋಡಿ ಡಾ.ಹರೀಶ್‌ಗೆ ಫಿದಾ ಆಗಿದ್ದ ನನಗೆ, ಇಷ್ಟು ಬೇಗ ವಿಷ್ಣುವರ್ಧನ್ ನೋಡ್ತೀನೆಂಬ ಕಲ್ಪನೆಯೇ ಇರಲಿಲ್ಲ. ಕೆಆರ್‌ಎಸ್‌ನಲ್ಲಿ ಇದ್ದಷ್ಟು ವರ್ಷ, ಹತ್ತಾರು ಸಿನಿಮಾ ಶೂಟಿಂಗ್, ಹೀರೋ, ಹೀರೋಯಿನ್ ನೋಡಿದ್ರೂ ಡಾ.ರಾಜ್, ವಿಷ್ಣುವರ್ಧನ್ ಸಿನಿಮಾ ನೋಡುವ ಅವಕಾಶ ಸಿಕ್ಕಿರಲಿಲ್ಲ. ಆ ಕೊರಗು ನಿವಾರಿಸಿದವರು ವಿಷ್ಣುವರ್ಧನ್. ಬಹುಶಃ ಸಿಂಹ ಘರ್ಜನೆ ಸಿನಿಮಾ ಇರಬೇಕು. ಹಾಡಿನ ಶೂಟಿಂಗ್. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ನೇರ ಓಡಿದ್ದು ಬೃಂದಾವನ ಗಾರ್ಡನ್ ಬಳಿ ಶೂಟಿಂಗ್ ಡ್ಯೂಟಿಯಲ್ಲಿದ್ದ ಅಪ್ಪನ ಬಳಿ. ಆಗಷ್ಟೇ ಶಾಟ್ ಮುಗಿಸಿ ಕುಳಿತಿದ್ದರು ವಿಷ್ಣುವರ್ಧನ್. ಕೆಂಪಗೆ ಥಳಥಳ ಹೊಳೆಯುತ್ತಿದ್ದ ಮುಖ, ಚೂಪುಗಣ್ಣಿನ ಮೋಹಕ ನಗುವಿನ ಸೊಗಸುಗಾರ. ಥೇಟ್ ಸಿನಿಮಾದಲ್ಲಿದ್ದಂತೆ ಕಾಣ್ತಾರೆ ಅಂದ್ಕೊಂಡೆ.
ಅಪ್ಪ ವಿಷ್ಣುವಿಗೆ ಪರಿಚಯಿಸಿದ್ರು. ತಲೆ ನೇವರಿಸಿ, ಹೆಸರೇನ್ ಮರಿ ಎಂದು ನಕ್ಕರು. ಹೀರೋಗಳ ಆಟೋಗ್ರಾಫ್‌ಗೆಂದೇ ಇಟ್ಕೊಂಡಿದ್ದ ನೋಟ್‌ಬುಕ್‌ನಲ್ಲಿ, ಎಂದೆಂದೂ ನಿಮ್ಮವನೇ ಎಂದು ಬರೆದು ಸಹಿ ಹಾಕಿದ್ರು. ಅಷ್ಟೇ. ಆಮೇಲೆ ನಾನು ವಿಷ್ಣುವರ್ಧನ್ ಫ್ಯಾನ್ ಆಗ್ಬಿಟ್ಟೆ. ವಿಷ್ಣುವರ್ಧನ್ ನೋಡ್ದೆ ಅಂತ ಪೊಲೀಸ್ ಕ್ವಾರ್ಟರ್ಸ್ ತುಂಬಾ ಹೇಳ್ಕೊಂಡು ಓಡಾಡಿದೆ.
ವಿಷ್ಣುವರ್ಧನ್ ಅಭಿಮಾನಿಗಳು ಮಿಸ್ ಮಾಡದೆ ನೋಡಲೇಬೇಕಾದ ಸಿನಿಮಾಗಳಿವು
ಆಗಾಗ ಟಿವಿಯಲ್ಲಿ ವಿಷ್ಣುವರ್ಧನ್ ಸಿನಿಮಾ ಬಂದರೆ ಖುಷಿಯೋ ಖುಷಿ, ಥಿಯೇಟರ್ ನಲ್ಲಿ ನೋಡೋದು ಕಣ್ಣಿಗೆ ಹಬ್ಬ. ಆಗಿನ್ನು ನಮಗೆ ವಿಷ್ಣುವರ್ಧನ್ ‘ಸಾಹಸ ಸಿಂಹ’ ಆಗಿರಲಿಲ್ಲ. ನಮ್ಮ ಪಾಲಿಗೆ ಕರ್ಣ, ಕರುಣಾಮಯಿ, ಡಾ. ಹರೀಶ್, ನಮ್ಮೂರ ರಾಜ, ರಾಮಾಚಾರಿ, ಕಾರ್ಮಿಕ ಕಳ್ಳನಲ್ಲ, ಭೂತಯ್ಯನ ಮಗ ಅಯ್ಯು, ಕಿಟ್ಟು-ಪುಟ್ಟು... ಒಂದಾ..ಎರಡಾ..? ಅಣ್ಣನೂ, ತಮ್ಮನೂ, ಇಡೀ ಕುಟುಂಬ ಹೆಗಲ ಮೇಲೆ ಹೊರುವ ಮಗ, ಘಾಟಿ ಹೆಣ್ಣು ಬಗ್ಗಿಸುವ ಗಂಡುಗಲಿ.. ಕ್ಯಾರೆಕ್ಟರ್ ಯಾವುದೇ ಆಗಲಿ, ಅದನ್ನು ಆವಾಹಿಸಿಕೊಳ್ಳುವುದು ವಿಷ್ಣುಗೆ ಕರಗತ.
ಆಗ ನಮಗೆ ಡಾ.ರಾಜ್, ವಿಷ್ಣುವರ್ಧನ್ ಇಬ್ಬರೂ ಒಂದೇ. ರಾಜ್ ಬಿಟ್ಟರೆ, ವಿಷ್ಣು ಸಿನಿಮಾ. ಬೇರೆ ಯಾವ ನಟರೂ ನಮ್ಮ ಮನೆ, ಮನದೊಳಗೆ ಇಳಿದಿರಲಿಲ್ಲ. ವಿಷ್ಣುವರ್ಧನ್ ಕಣ್ಣಿನಲ್ಲೊಂದು ಆಯಸ್ಕಾಂತೀಯ ಆಕರ್ಷಣೆ ಇತ್ತು. ಕಿರಿದಾದ ಕಣ್ಣಲ್ಲಿ ಥೌಸಂಡ್ ವ್ಯಾಟ್ಸ್ ಬಲ್ಭ್ನಷ್ಟು ಕಾಂತಿ. ಪ್ರೇಮಕ್ಕೆ ಅರಳಿ ಕೊಲ್ಲುವಂಥ ಕಣ್ಣು, ಸಿಟ್ಟಿಗೆ ಬೆಂಕಿಯುಂಡೆ, ವಿಷಾದ, ನೋವು, ಕಂಬನಿಗೆ ಕಣ್ಣೀರಾಗುವ ಪರಿ, ಸಸ್ಪೆನ್ಸ್ ಅನ್ನೂ ಕಣ್ಣಲ್ಲೇ ತೋರುತ್ತಿದ್ದ ರೀತಿ.. ಓಹ್.. ಎಂಥಾ ಕಣ್ಣುಗಳವು. ಬೇಕಿದ್ದರೆ ವಿಷ್ಣು ಕಣ್ಣನ್ನು ಗಮನಿಸಿ ನೋಡಿ, ಕಣ್ಣಲ್ಲೇ ನಟಿಸಿ, ಸೆಳೆದು ಬಿಡುವ ಅಪೂರ್ವ ನಟ. ಈಗಲೂ ವಿಷ್ಣುವರ್ಧನ್ ಫಿಲ್ಮ್ ನೋಡುವುದೆಂದರೆ ಎಲ್ಲಿಲ್ಲದ ಖುಷಿ. ಕೆಲವರು ಸತ್ತ ಮೇಲೂ ತಮ್ಮ ಪ್ರಭಾವ, ಪ್ರಭಾವಳಿ ಬಿಟ್ಟು ಹೋಗ್ತಾರಂತೆ. ಅಂಥವರ ಸಾಲಿನಲ್ಲಿದ್ದಾರೆ ವಿಷ್ಣುವರ್ಧನ್ ಸದಾ ನಿಲ್ಲುವವರು.
ಡಾ. ವಿಷ್ಣುವರ್ಧನ್ ಪುಣ್ಯಸ್ಮರಣೆ; ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿದ ಕುಟುಂಬಸ್ಥರು
ವಿಷ್ಣುವರ್ಧನ್‌ನಂಥ ನಟರು ಮತ್ತೊಮ್ಮೆ ಹುಟ್ಟಿಬರಲಾರರು. ಯಾಕಂದ್ರೆ, ಅವರಿಗೆ ಸಾವಿಲ್ಲ.