ಅವತ್ತು ನೀರು, ಕಾಲುವೆಯಲ್ಲಿ ಕೆಸರು ಇಲ್ಲದೆ ಹೋಗಿದ್ದರೆ ನಾನು ತಂದೂರಿ ಚಿಕನ್‌ ಥರಾ ಬೆಂದು ಹೋಗುತ್ತಿದ್ದೆ!

- ರಿಷಬ್‌ ಶೆಟ್ಟಿಹೀಗೆ ಹೇಳಿ ನಿಟ್ಟುಸಿರು ಬಿಡಲಿಲ್ಲ. ಆ ಅಪಘಾತದಿಂದ ಪಾರಾಗಿ ಬಂದಿದ್ದರ ನಗು ಅವರ ಮುಖದಲ್ಲಿತ್ತು ‘ಏನೋ ಪುಣ್ಯ ಮಾಡಿದೆ ಅನಿಸುತ್ತದೆ. ಬೆಂಕಿಯಲ್ಲಿ ಸುಟ್ಟು ಹೋಗಬೇಕಿದ್ದವನು. ಈಗ ಸಿನಿಮಾ ಬಿಡುಗಡೆ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದರು ‘ಹೀರೋ’ ಚಿತ್ರದ ನಾಯಕ ರಿಷಬ್‌ ಶೆಟ್ಟಿ. ಅಂದಹಾಗೆ ಈ ಘಟನೆ ನಡೆದಿದ್ದು ಕೂಡ ‘ಹೀರೋ’ ಚಿತ್ರೀಕರಣ ಸೆಟ್‌ನಲ್ಲಿ ಎಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಜುಲೈ ಕೊನೆ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ನಡೆದ ಆ ದುರ್ಘಟನೆಯನ್ನು ರಿಷಬ್‌ ಶೆಟ್ಟಿಇನ್ನೂ ಮರೆತಿಲ್ಲ. ಸಾವಿನಿಂದ ಬಚಾವ್‌ ಆಗಿದ್ದೇವೆ ಎನ್ನುವ ನೆಮ್ಮದಿ ಇದೆಯಾದರೂ ಅಂಥ ಘಟನೆ ಮತ್ತೆ ಮರುಕಳಿಸದೆ ಇರಲಿ ಎಂಬುದು ಸಿನಿಮಾ ಬಿಡುಗಡೆಯ ಹೊತ್ತಿನಲ್ಲೂ ಅವರು ಕೇಳಿಕೊಳ್ಳುವ ಪ್ರಾರ್ಥನೆ.

ಚೇಸಿಂಗ್‌ ಸೀನಲ್ಲಿ ದುರ್ಘಟನೆ

‘ಅದು ಬೇಲೂರು ಬಳಿ ಇರುವ ಚೀಕನಹಳ್ಳಿಯ ಸಿರಗೂರು ಎಸ್ಟೇಟ್‌. ಅಲ್ಲಿನ ಅಡಿಕೆ ತೋಟದಲ್ಲಿ ಅವತ್ತು ಅದೇ ಅಡಿಕೆ ತೋಟದಲ್ಲಿ ಚೇಸಿಂಗ್‌ ದೃಶ್ಯದ ಚಿತ್ರೀಕರಣ. ಮೊದಲೇ ಅಡಿಕೆ ತೋಟ ತೇವ ಆಗಿತ್ತು. ಪೂರ್ತಿ ಕೆಸರು ಬೇರೆ ಇತ್ತು. ನನ್ನ ಮತ್ತು ನಾಯಕಿ ಗಾನವಿ ಅವರನ್ನು ಅಟ್ಟಿಸಿಕೊಂಡು ಒಂದು ಗ್ಯಾಂಗ್‌ ಬರುತ್ತದೆ. ಫೈರ್‌ ಮಾಡುತ್ತಾರೆ. ತಪ್ಪಿಸಿಕೊಳ್ಳುತ್ತಿರುತ್ತೇವೆ. ಆಗ ಒಬ್ಬ ಪೆಟ್ರೋಲ್‌ ಬಾಂಬ್‌ ಎಸೆಯುವ ಸೀನ್‌. ಆತ ಎಸೆಯುವಾಗಲೇ ನಡುವೆ ಆಳವಾದ ಕಾಲುವೆ ಇತ್ತು. ಆ ಕಾಲುಗೆ ಬಿದ್ದು ಎದ್ದೇಳುವಷ್ಟರಲ್ಲಿ ಪೆಟ್ರೋಲ್‌ ಬಾಂಬ್‌ ಸಿಡಿಯಿತು.

ರಿಷಭ್ ಶೆಟ್ಟಿ ನೆನಪಿನ ಹುಡುಗಿಯೇ ಹಾಡು ವೈರಲ್..!

ಗಾನವಿ ನನ್ನ ಮುಂದೆ ಇದ್ದರು. ನಾನು ಅವರ ಹಿಂದೆ ಇದ್ದೆ. ಹೀಗಾಗಿ ಆ ಪೆಟ್ರೋಲ್‌ ಬಾಂಬ್‌ ಬೆಂಕಿ ನನ್ನ ಬೆನ್ನಿಗೆ ತಾಕಿತು. ಶರ್ಟ್‌ ಸುಟ್ಟು ಹೋಯಿತು. ಪುಣ್ಯ ನಾವು ಕೆಸರಲ್ಲಿ ಬಿದ್ದಿದ್ವಿ. ಜತೆಗೆ ತೋಟ ಪೂರ್ತಿ ನೀರಿನಿಂದ ತೇವ ಆಗಿತ್ತು. ಹೀಗಾಗಿ ಏನೂ ಆಗಲಿಲ್ಲ. ಒಂದು ವೇಳೆ ಕೆಸರು, ನೀರು ಇಲ್ಲದೆ ಹೋಗಿದ್ದರೆ ಅವತ್ತು ನಾನು ತಂದೂರಿ ಚಿಕನ್‌ ಥರಾ ಬೆಂದು ಹೋಗುತ್ತಿದ್ದೆ. ಪುಣ್ಯಕ್ಕೆ ಗಾನವಿ ಬೇರೆ ನನ್ನ ಮುಂದೆ ಇದ್ದರು. ಹಿಂದೆ ಇದ್ದಿದ್ದರೆ ಖಂಡಿತ ಅನಾಹುತ ಆಗುತ್ತಿತ್ತು’ ಎಂದು ರಿಷಬ್‌ ಶೆಟ್ಟಿಅಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಪ್ರಚಾರದ ಗಿಮಿಕ್‌ ಅಲ್ಲ

ಚಿತ್ರೀಕರಣ ಸಮಯದಲ್ಲಿ ಆದ ಈ ದುರ್ಘಟನೆ ಈಗ ಸದ್ದು ಮಾಡುತ್ತಿರುವುದಕ್ಕೆ ಯಾವುದೇ ಪ್ರಚಾರದ ಗಿಮಿಕ್‌ ನೆರಳು ಇಲ್ಲ ಎಂದು ಸ್ಪಷ್ಟನೆ ನೀಡುತ್ತಾರೆ ರಿಷಬ್‌ ಶೆಟ್ಟಿ. ‘ಜಾಹೀರಾತಿಗಾಗಿ ಚಿತ್ರದ ಮೇಕಿಂಗ್‌ ದೃಶ್ಯಗಳನ್ನು ಕೊಟ್ಟಿದ್ದೆ. ಅದರಲ್ಲಿ ಈ ಪೆಟ್ರೋಲ್‌ ಬಾಂಬ್‌ ಘಟನೆಯ ದೃಶ್ಯಗಳು ಕೂಡ ಇದ್ದವು. ಟೀವಿಗಳಲ್ಲಿ ಅದು ಸುದ್ದಿ ಆಗುತ್ತಿದೆ ಅಷ್ಟೆ.

ಇದನ್ನ ಪ್ರಚಾರಕ್ಕೆ ಬಳಸಿಕೊಳ್ಳುವುದಾದರೆ ನಾನು ಟ್ರೇಲರ್‌ ಸಮಯದಲ್ಲೇ ಬಿಡುಗಡೆ ಮಾಡುತ್ತಿದೆ. ಈ ಘಟನೆ ಬಗ್ಗೆ ನನ್ನ ಪತ್ನಿ ಪ್ರಗತಿ ಶೆಟ್ಟಿಗೂ ಹೇಳಿಲ್ಲ’ ಎಂಬುದು ರಿಷಬ್‌ ಶೆಟ್ಟಿಮಾತುಗಳು. ಮಾಚ್‌ರ್‍ 5ಕ್ಕೆ 100 ರಿಂದ 130 ಚಿತ್ರಮಂದಿರಗಳಲ್ಲಿ ‘ಹೀರೋ’ ಸಿನಿಮಾ ಬಿಡುಗಡೆ ಆಗುತ್ತಿದೆ. 24 ಜನ ಸೇರಿ 43 ದಿನಗಳಲ್ಲಿ ಲಾಕ್‌ಡೌನ್‌ ಹೊತ್ತಿನಲ್ಲಿ ಚಿತ್ರೀಕರಣ ಮಾಡಿದ ಸಿನಿಮಾ ಇದು.