ಮದುವೆಯಾಗುವುದಾಗಿ ನಂಬಿಸಿ ಭಾರಿ ಹಣ ವಂಚನೆ ಮಾಡಿದ ಆರೋಪದಡಿ ಕಿರುತೆರೆ ಹಾಗೂ ಸಿನಿಮಾ ನಟಿ ಉಷಾ ರವಿಶಂಕರ್ ಅವರನ್ನು ಬಂಧಿಸಲಾಗಿದೆ. 

ವಂಚನೆ ಆರೋಪದಡಿ ಕಿರುತೆರೆ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸುವ ಉಷಾ ರವಿಶಂಕರ್ ಅವರಿಗೆ ಕೋರ್ಟ್ ವಾರೆಂಟ್ ನೀಡಿದೆ. ಕೋರ್ಟ್ ವಾರೆಂಟ್ ಹಿನ್ನೆಲೆ ನಟಿ ಉಷಾ ಅವರನ್ನು ಶಿವಮೊಗ್ಗದ ವಿನೋಬನಗರ ಪೊಲೀಸರು ಬಂಧಿಸಿ ನಗರದ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಶುಕ್ರವಾರ ರಾತ್ರಿ ನಟಿ ಉಷಾ ರವಿಶಂಕರ್‌ಗೆ ಶಿವಮೊಗ್ಗದ ಜೆಎಂಎಫ್ ಸಿ ಮೂರನೇ ನ್ಯಾಯಾಲಯದದಿಂದ ಮದ್ಯಂತರ ಜಾಮೀನು ಮಂಜೂರು ಆಗಿದೆ. ಇಂದು ಶನಿವಾರ ನ್ಯಾಯಾಲಯದಲ್ಲಿ ರೆಗ್ಯುಲರ್ ಜಾಮೀನು ಪಡೆದುಕೊಳ್ಳಲು ನಟಿ ಉಷಾ ಮುಂದಾಗಿದ್ದಾರೆ. 

ನಟಿ ಉಷಾ ವಿರುದ್ಧ ಶಿವಮೊಗ್ಗದ ಶರವಣನ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ಶಿವಮೊಗ್ಗದ ಮೂರನೇ ಜೆ ಎಂ ಎಫ್ ಸಿ ಕೋರ್ಟ್ ನಿರ್ದೇಶನದ ಮೇರೆಗೆ ಉಷಾ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದರು. ನಟಿ ಉಷಾ ಪರವಾಗಿ ವಕೀಲ ನಿಧಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ತಕ್ಷಣಕ್ಕೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ್ದು, ಇಂದು ರೆಗ್ಯುಲರ್ ಜಾಮೀನು ಪಡೆದುಕೊಳ್ಳುವಂತೆ ನ್ಯಾಯಾಧೀಶೆ ಶ್ರುತಿ ಸೂಚನೆ ಮಾಡಿದ್ದಾರೆ. 

ಫೇಸ್‌ಬುಕ್‌ನ ನೀನಾಸಂ ಫ್ರೆಂಡ್ ಸರ್ಕಲ್‌ನಲ್ಲಿ ಶಿವಮೊಗ್ಗದ ಶರವಣನ್‌ಗೆ ಉಷಾ ರವಿಶಂಕ‌ರ್ ಪರಿಚಯವಾಗಿತ್ತು. ನಂತರ ಪರಿಚಯ ಸ್ನೇಹವಾಗಿ ಇಬ್ಬರೂ ವಾಟ್ಸ್ ಅಪ್ ನಂಬರ್ ವಿನಿಮಯ ಮಾಡಿಕೊಂಡಿದ್ದು ಚಾಟ್ ಮಾಡುತ್ತಿದ್ದರು. ಕ್ರಮೇಣ ಉಷಾ ಅವರು ಮದುವೆ ಪ್ರಸ್ತಾಪ ಇಟ್ಟಿದ್ದು, ಶರವಣನ್ ಈ ಪ್ರಸ್ತಾಪಕ್ಕೆ ಸಮ್ಮತಿ ನೀಡಿದ್ದರು. ಶರವಣನ್ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದು, ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತಿದ್ದರು. 

ಉಷಾ ಮತ್ತು ಶರವಣನ್ ಪರಸ್ಪರ ಭೇಟಿ ಸಂದರ್ಭದಲ್ಲಿ ಉಷಾ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ. ಶರವಣನ್ ಆರ್ಥಿಕ ಸ್ಥಿತಿವಂತನಾಗಿರಲಿಲ್ಲ. ಆತನ ಕ್ರೆಡಿಟ್ ಕಾರ್ಡ್ ಬಳಸಿ ನಾಲ್ಕು ಲಕ್ಷ ರೂಪಾಯಿ ಉಷಾ ಖರೀದಿ ಮಾಡಿದ್ದರು. ಈ ರೀತಿ ಹಂತ ಹಂತವಾಗಿ ಸುಮಾರು 7 ರಿಂದ 8 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದು, ಮರಳಿಸಿರಲಿಲ್ಲ ಎನ್ನುವ ಆರೋಪವಿದೆ.

Bengaluru: ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ: ನಕಲಿ ಐಪಿಎಸ್‌ ಅಧಿಕಾರಿ ಪೊಲೀಸರ ಬಲೆಗೆ!

ಹಣ ವಾಪಸ್ ಕೊಡದ ಕಾರಣ ಶರವಣನ್ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲು ಪ್ರಯತ್ನಿಸಿದ್ದರು. ಆದರೆ ಪೊಲೀಸರು ದೂರು ದಾಖಲು ಮಾಡಿಕೊಂಡಿರಲಿಲ್ಲ. ಬಳಿಕ ವಕೀಲರ ಮೂಲಕ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲು ಮಾಡಿದ್ದರು. ಉಷಾ ಮನೆ ವಿಳಾಸ ಸಿಕ್ಕಿರದ ಕಾರಣ ವಾಟ್ಸ್‌ಆ್ಯಪ್ ಮೂಲಕವೇ ನೋಟಿಸ್ ನೀಡಲಾಗಿತ್ತು. ನಂತರ ಉಷಾ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. 

ಬುರ್ಕಾ ಧರಿಸಿ ಸಾರಾಯಿ ಖರೀದಿಸಲು ಬಂದ ಮುಸ್ಲಿಂ ಮಹಿಳೆಗೆ ಬೆದರಿಕೆ: ಮೂವರ ಬಂಧನ

ನ್ಯಾಯಾಲಯ ಒಂದು ತಿಂಗಳಲ್ಲಿ ಹಾಜರಾಗುವಂತೆ ಸೂಚಿಸಿದ್ದರೂ ಹಾಜರಾಗಿರಲಿಲ್ಲ. ಕೋರ್ಟ್ ಆದೇಶದ ಮೇಲೆ ನಿನ್ನೆ ಸಂಜೆ ವಿನೋಬನಗರ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಸಂಜೆಯ ನಂತರ ಶಿವಮೊಗ್ಗದ ನ್ಯಾಯಾಧೀಶರ ಮನೆಗೆ ವಿನೋಬನಗರ ಪೊಲೀಸರು ಹಾಜರುಪಡಿಸಿದ್ದರು. ಉಷಾ ರವಿಶಂಕರ್ ಸಲಗ, ಒಂದಲ್ಲ ಎರಡು ಸಿನಿಮಾ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ.