ವಿಶ್ವಸಂಸ್ಥೆಯಲ್ಲಿ ಕನ್ನಡ ಡಿಂಡಿಮ ಮೊಳಗಲಿದ್ದು, ‘ಕಾಂತಾರ’ ಖ್ಯಾತಿಯ ಖ್ಯಾತ ನಟ ಹಾಗೂ ಚಿತ್ರ ನಿರ್ಮಾಣಕಾರ ರಿಷಬ್‌ ಶೆಟ್ಟಿ ಅವರು ಕನ್ನಡದಲ್ಲೇ ಭಾಷಣ ಮಾಡಲಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಮಾಡಲಿರುವ ಮೊದಲ ಕನ್ನಡಿಗ ಎನ್ನಿಸಿಕೊಳ್ಳಲಿದ್ದಾರೆ. 

ವಿಶ್ವಸಂಸ್ಥೆ (ಮಾ.15): ವಿಶ್ವಸಂಸ್ಥೆಯಲ್ಲಿ ಕನ್ನಡ ಡಿಂಡಿಮ ಮೊಳಗಲಿದ್ದು, ‘ಕಾಂತಾರ’ ಖ್ಯಾತಿಯ ಖ್ಯಾತ ನಟ ಹಾಗೂ ಚಿತ್ರ ನಿರ್ಮಾಣಕಾರ ರಿಷಬ್‌ ಶೆಟ್ಟಿ ಅವರು ಕನ್ನಡದಲ್ಲೇ ಭಾಷಣ ಮಾಡಲಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಮಾಡಲಿರುವ ಮೊದಲ ಕನ್ನಡಿಗ ಎನ್ನಿಸಿಕೊಳ್ಳಲಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಇದೀಗ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಈ ವಾರ್ಷಿಕ ಸಭೆಯಲ್ಲಿ ನಟ ರಿಷಬ್‌ ಶೆಟ್ಟಿ ಸಹ ಭಾಗವಹಿಸಲಿದ್ದು, ವಿವಿಧ ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ವೇಳೆ ಅವರು ತಮ್ಮ ಸೂಪರ್‌ ಹಿಟ್‌ ಚಿತ್ರ ‘ಕಾಂತಾರ’ದ ಬಗ್ಗೆ ಮಾತನಾಡಲಿದ್ದಾರೆ. ಇದಲ್ಲದೆ, ಭಾರತೀಯ ಸಿನಿಮಾ ಬೆಳೆದು ಬಂದ ಬಗೆ, ದೇಶದ ಸಂಸ್ಕೃತಿ, ಪರಿಸರ ರಕ್ಷಣೆ ಹಾಗೂ ಇತರ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ರಿಷಬ್‌ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ವಿಶ್ವಕ್ಕೇ ಪರಿಚಯಿಸಿದ್ದರು. ಇದರ ಬಗ್ಗೆ ಅವರು ಮಾತನಾಡಿ, ದಕ್ಷಿಣ ಕನ್ನಡದ ವಿಶೇಷ ಸಂಸ್ಕೃತಿ, ದೈವಾರಾಧನೆಯ ವಿವರ ನೀಡುವ ನಿರೀಕ್ಷೆಯಿದೆ. ಜತೆಗೆ ಕಾಡಿನ ಜನರ ಬದುಕು ಬವಣೆಯ ಬಗ್ಗೆ ಇದರಲ್ಲಿ ವಿವರ ನೀಡಲಿದ್ದಾರೆ.

ವನ್ಯಸಂಪತ್ತು ಅರಣ್ಯ ಇಲಾಖೆಯದ್ದೆಂಬ ಮನೋಭಾವ ಬಿಡಿ: ರಿಷಬ್‌ ಶೆಟ್ಟಿ

ಕೆಲವು ದಿನಗಳ ಹಿಂದಷ್ಟೆ ನಟ ರಿಷಬ್‌ ಶೆಟ್ಟಿ, ಅವರು ‘ಕನ್ನಡ ಪ್ರಭ’ ಹಾಗೂ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ನಡೆಸಿದ್ದ ಅರಣ್ಯ ರಕ್ಷಣಾ ಅಭಿಯಾನದಲ್ಲಿ ಭಾಗಿಯಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅರಣ್ಯ ಹಾಗೂ ಕಾಡಂಚಿನ ಜನರ ಸಮಸ್ಯೆಗಳ ನೀಗಿಸುವಂತೆ ಮನವಿ ಮಾಡಿದ್ದರು. ಅವರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಮುಖ್ಯಮಂತ್ರಿಗಳಿಗೆ ನೀಡಿದ್ದರು. ಈ ಬಗ್ಗೆ ಕೂಡ ಅವರು ವಿಶ್ವಸಂಸ್ಥೆಯಲ್ಲಿ ಮಾತನಾಡಿ, ವಿಶ್ವದಲ್ಲಿ ಅರಣ್ಯ ಹಾಗೂ ಪರಿಸರ ರಕ್ಷಣೆಗೆ ಒತ್ತು ನೀಡಬೇಕೆಂದು ಆಗ್ರಹಿಸುವ ಸಾಧ್ಯತೆ ಇದೆ.

ರಿಷಬ್‌ ಮುಂದಿಟ್ಟ ಅರಣ್ಯ ಸಮಸ್ಯೆಗೆ ಶೀಘ್ರ ಪರಿಹಾರ: ಸಿಎಂ ಬೊಮ್ಮಾಯಿ

ರಿಷಬ್‌ ಅವರು ಕನ್ನಡದಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಸಾಕಷ್ಟು ಸುದ್ದಿ ಆಗಿದ್ದು, ಅವರ ಭಾಷಣವನ್ನು ಆಲಿಸಲು ಕಾತರದಿಂದ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.ಇನ್ನು ಕಾಂತಾರ ಸಿನಿಮಾದಲ್ಲಿ ರಿಷಬ್ ನಾಯಕನಾಗಿ ಕಾಣಿಸಿಕೊಂಡರೆ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕಾಂತಾರ -2 ಮೂಲಕ ರಿಷಬ್ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ.