ರಿಷಬ್‌ ಮುಂದಿಟ್ಟ ಅರಣ್ಯ ಸಮಸ್ಯೆಗೆ ಶೀಘ್ರ ಪರಿಹಾರ: ಸಿಎಂ ಬೊಮ್ಮಾಯಿ

ವನ್ಯಜೀವಿ ರಕ್ಷಣೆಗೆ ಕ್ರಮ, ಅರಣ್ಯ ನಾಶಕ್ಕೆ ತಡೆ, ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರ ಸಮಸ್ಯೆ ಪರಿಹಾರ ಸೇರಿದಂತೆ ಇನ್ನಿತರ ಅರಣ್ಯ ಸಂಬಂಧಿ ಸಮಸ್ಯೆಗಳ ಪರಿಹಾರ ಒದಗಿಸಲು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದ್ದಾರೆ.
 

rishab shetty submitted request to the cm basavaraj bommai for the solution of forest related problems gvd

ಬೆಂಗಳೂರು (ಮಾ.09): ವನ್ಯಜೀವಿ ರಕ್ಷಣೆಗೆ ಕ್ರಮ, ಅರಣ್ಯ ನಾಶಕ್ಕೆ ತಡೆ, ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರ ಸಮಸ್ಯೆ ಪರಿಹಾರ ಸೇರಿದಂತೆ ಇನ್ನಿತರ ಅರಣ್ಯ ಸಂಬಂಧಿ ಸಮಸ್ಯೆಗಳ ಪರಿಹಾರ ಒದಗಿಸಲು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದ್ದಾರೆ. 20 ಅಂಶಗಳನ್ನು ಪಟ್ಟಿ ಮಾಡಿರುವ ಅವರ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಬೊಮ್ಮಾಯಿ, ಶೀಘ್ರವೇ ಈ ಸಮಸ್ಯೆ ಪರಿಹಾರಕ್ಕೆ ಆದೇಶಿಸುವುದಾಗಿ ಭರವಸೆ ನೀಡಿದ್ದಾರೆ.

‘ಕನ್ನಡಪ್ರಭ- ಸುವರ್ಣನ್ಯೂಸ್‌’ ಆಯೋಜಿಸಿರುವ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ದ ರಾಯಭಾರಿಯಾಗಿ ಕಾರ್ಯನಿರ್ವಹಿಸಿರುವ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಬಳಿಕ ಕರ್ನಾಟಕದ ಅನೇಕ ಅರಣ್ಯಗಳನ್ನು ಸುತ್ತಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಿಡಿದು ಗಾರ್ಡ್‌, ವಾಚರ್‌ಗಳ ಜೊತೆ ಒಡನಾಡಿದ್ದಾರೆ. ಕಾಡಂಚಿನ ಗ್ರಾಮಗಳ ಜನರ ಸಮಸ್ಯೆಯನ್ನು ಆಲಿಸಿದ್ದಾರೆ. ತಾವೇ ಖುದ್ದಾಗಿ ಸಮಸ್ಯೆ ನೋಡಿದ್ದಲ್ಲದೇ ಆ ಕುರಿತು ಮತ್ತಷ್ಟುಅಧ್ಯಯನ ಮಾಡಿ, ಆ ಅಧ್ಯಯನ ವರದಿ ರೂಪದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ. ಆ ಮೂಲಕ ಅರಣ್ಯ ರಕ್ಷಣೆಗೆ, ವನ್ಯಜೀವಿ ಕಷ್ಟಪರಿಹಾರಕ್ಕೆ, ಕಾಡಂಚಿನ ಗ್ರಾಮದ ಜನರ ನೋವು ನಿವಾರಣೆಗೆ ಮುಂದಾಗಿದ್ದಾರೆ.

ಎಲ್ಲರಲ್ಲೂ‘ನಮ್ಮ ಕಾಡು’ಎಂಬ ಭಾವನೆ ಮೂಡಲಿ: ರಿಷಬ್‌ ಶೆಟ್ಟಿ

ಮುಖ್ಯಮಂತ್ರಿಗಳಿಂದ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ರಿಷಬ್‌ ಶೆಟ್ಟಿಯವರು ಖ್ಯಾತ ನಟ ಮತ್ತು ನಾಡಿನಲ್ಲಿ ವಿಚಾರಗಳಲ್ಲಿ ಪ್ರಭಾವ ಬೀರುವ ವ್ಯಕ್ತಿತ್ವ. ಅವರು ವನ್ಯಜೀವಿ ಸಂರಕ್ಷಣಾ ಅಭಿಯಾನ ಮೂಲಕ ಕಾಡಿನಲ್ಲಿ ಪ್ರಯಾಣ ಮಾಡಿ, ಕಾಡಂಚಿನ ಜನರ ಸಮಸ್ಯೆ ಆಲಿಸಿ, ಅಧಿಕಾರಿಗಳ ಜೊತೆ ಚರ್ಚಿಸಿ, ಅಧ್ಯಯನ ಮಾಡಿ ನನಗೆ ಮನವಿ ಪತ್ರ ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮೂಲಭೂತ ಸೌಕರ್ಯ ಒದಗಿಸುವ ಕುರಿತು, ಕಾಡಂಚಿನ ಜನರಿಗೆ ಬೇಕಾದ ಸೌಕರ್ಯ ನೀಡುವ ಕುರಿತಾದ ಅಂಶಗಳಿವೆ. ಆ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

20 ಅಂಶಗಳ ಮನವಿ ಪತ್ರ: ಈ ಕುರಿತು ಮಾತನಾಡಿರುವ ರಿಷಬ್‌ ಶೆಟ್ಟಿ, ‘ಕಾಂತಾರ ಸಿನಿಮಾದ ಬಳಿಕ ಅರಣ್ಯದಲ್ಲಿ ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಸುತ್ತಾಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದೆ. ಗಾರ್ಡ್‌, ವಾಚರ್‌ಗಳ ಜೊತೆ ಒಡನಾಡಿ ಅವರ ಸಮಸ್ಯೆಗಳನ್ನು ಅರಿತುಕೊಂಡೆ. ಕಾಡಂಚಿನ ಗ್ರಾಮಗಳಲ್ಲಿರುವ ಜನರ ಕಷ್ಟಗಳಿಗೆ ಕಿವಿಯಾದೆ. ಆ ಸಂದರ್ಭದಲ್ಲಿ ಗಮನಿಸಿದ ಕೃಷಿಕರು ಎದುರಿಸುತ್ತಿರುವ ಕಾಡಾನೆ ತೊಂದರೆ ಸಮಸ್ಯೆ, ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಚರ್‌ಗಳು ಎದುರಿಸುವ ನೋವುಗಳು, ಅರಣ್ಯ ರಕ್ಷಿಸುವ ಸಿಬ್ಬಂದಿಗಳ ಸಮಸ್ಯೆಗಳು ಮುಂತಾದ 20 ಅಂಶಗಳನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದೇನೆ. ಮುಖ್ಯಮಂತ್ರಿಗಳು ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆದೇಶಿಸುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರವಾಗಿ ಸ್ಪಂದಿಸುವ ಮುಖ್ಯಮಂತ್ರಿ ಸಿಕ್ಕಿರುವುದಕ್ಕೆ ನಾವು ಧನ್ಯರು’ ಎಂದು ತಿಳಿಸಿದ್ದಾರೆ.
 


ಸಿನಿಮಾ ಆಚೆಗೂ ನಾಯಕ: ಕಾಂತಾರ ಸಿನಿಮಾದ ಮೂಲಕ ಅರಣ್ಯ ಸಂರಕ್ಷಣೆಯ ಸಂದೇಶ ಸಾರಿದ ರಿಷಬ್‌ ಶೆಟ್ಟಿಯವರು ಈಗ ಖುದ್ದಾಗಿ ತಾವೇ ಅರಣ್ಯ, ಕಾಡಂಚಿನ ಗ್ರಾಮಗಳನ್ನು ಸುತ್ತಾಡಿ, ಅರಣ್ಯ ರಕ್ಷಣೆ ಕುರಿತು ಅಧ್ಯಯನ ಮಾಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ಕ್ರಮ ಸಾಮಾಜಿಕ ಜಾಲಜಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ರಿಷಬ್‌ ಶೆಟ್ಟಿಯವರು ತೆರೆಯ ಮೇಲಷ್ಟೇ ಅಲ್ಲ, ಸಿನಿಮಾದ ಆಚೆಗೂ ನಾಯಕ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಕಾಂತಾರ ಸಿನಿಮಾದ ಬಳಿಕ ಅರಣ್ಯದಲ್ಲಿ ಸುತ್ತಾಡಿದೆ. ಅಧಿಕಾರಿಗಳು, ಕಾಡಂಚಿನ ಜನರ ಜೊತೆ ಚರ್ಚಿಸಿದೆ. ಅವರೆಲ್ಲರ ಸಮಸ್ಯೆಗಳ ಕುರಿತು 20 ಅಂಶಗಳ ಮನವಿಯನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದೇನೆ. ಅವರು ಪರಿಹರಿಸುವುದಾಗಿ ತಿಳಿಸಿದ್ದಾರೆ. ಇಷ್ಟುಶೀಘ್ರವಾಗಿ ಸ್ಪಂದಿಸುವ ಸಿಎಂ ಇರುವುದು ನಮ್ಮ ಅದೃಷ್ಟ.
- ರಿಷಬ್‌ ಶೆಟ್ಟಿ, ಖ್ಯಾತ ಚಿತ್ರನಟ

ಯಶ್‌, ರಿಷಬ್‌ ಸೇರಿ ಗಣ್ಯರಿಂದ ಮೋದಿ ಭೇಟಿ: ರಾಜಭವನದಲ್ಲಿ ಅನೌಪಚಾರಿಕ ಮಾತುಕತೆ

ರಿಷಬ್‌ ಶೆಟ್ಟಿ ವನ್ಯಜೀವಿ ಸಂರಕ್ಷಣಾ ಅಭಿಯಾನ ಮೂಲಕ ಕಾಡಿನಲ್ಲಿ ಪ್ರಯಾಣ ಮಾಡಿ, ಕಾಡಂಚಿನ ಜನರ ಸಮಸ್ಯೆ ಆಲಿಸಿ, ಅಧಿಕಾರಿಗಳ ಜೊತೆ ಚರ್ಚಿಸಿ, ಅಧ್ಯಯನ ಮಾಡಿ ನನಗೆ ಮನವಿ ಪತ್ರ ನೀಡಿದ್ದಾರೆ. ಅವರದು ಪ್ರಭಾವಿ ವ್ಯಕ್ತಿತ್ವ. ಅವರು ಎತ್ತಿ ತೋರಿಸಿದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Latest Videos
Follow Us:
Download App:
  • android
  • ios