ರಿಷಬ್‌ ಶೆಟ್ಟಿಗೆ ಸೂಪರ್‌ಹಿಟ್‌ ನಾಯಕನ ಪಟ್ಟಕೊಟ್ಟ, ನಿರ್ದೇಶಕ ಜಯತೀರ್ಥರಿಗೆ ಹೊಸ ಹುರುಪು ತುಂಬಿದ, ಸಂತೋಷ್‌ಕುಮಾರ್‌ ಎಂಬ ಹೊಸ ನಿರ್ಮಾಪಕನನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಬೆಲ್‌ ಬಾಟಂ ಚಿತ್ರದ ಭಾಗ 2 ಮುಹೂರ್ತ ಆಗಿದೆ.

ದಿ ಕ್ಯೂರಿಯಸ್‌ ಕೇಸ್‌ ಆಫ್‌ ಚೆಂಡೂವ ಎಂಬುದು ಬೆಲ್‌ ಬಾಟಂ 2 ಚಿತ್ರದ ಟ್ಯಾಗ್‌ಲೈನ್‌. ಪುನೀತ್‌ ರಾಜ್‌ಕುಮಾರ್‌ ಕಾರ್ಯಕ್ರಮದಲ್ಲಿ ಶುಭ ಹರಸಿದ್ದು ಹೈಲೈಟು.

ಭಾಗ 1ಕ್ಕೆ ನಿರೀಕ್ಷೆ ಮಾಡದಷ್ಟುಗೆಲುವು ಸಿಕ್ಕಿದ್ದರಿಂದ ಇಡೀ ತಂಡ ಖುಷಿಯಾಗಿದೆ. ಹಾಗಾಗಿಯೇ ಎರಡನೇ ಭಾಗವನ್ನು ಅದ್ದೂರಿ ಬಜೆಟ್‌ನಲ್ಲಿ ನಿರ್ಮಿಸುವ ಆಸೆ, ಆಸಕ್ತಿ ನಿರ್ಮಾಪಕರಿಗೆ ಇದೆ. ಬೆಲ್‌ ಬಾಟಂ 1 ಚಿತ್ರೀಕರಣದಲ್ಲಿದ್ದಾಗ ಹೊಳೆದ ಒಂದು ಎಳೆಯನ್ನು ಒಂದೂವರೆ ವರ್ಷಗಳ ಕಾಲ ರಿಸಚ್‌ರ್‍ ಮಾಡಿ ಟಿಕೆ ದಯಾನಂದ ಕತೆ, ಚಿತ್ರಕತೆ ಬರೆದಿದ್ದಾರೆ. ಎಂಭತ್ತರ ದಶಕದ ಕತೆಯನ್ನು ಹೊಂದಿರುವ ಡಿಟೆಕ್ಟಿವ್‌ ಕತೆ.

ಇಂಟರೆಸ್ಟಿಂಗ್‌ ಎಂದರೆ ಭಾಗ 1ರಲ್ಲಿ ಕ್ಯಾರೆಟ್‌ ತಿಂದ್ಕೊಂಡ್‌ ಹೆಂಗ್‌ಹೆಂಗೋ ಇದ್ದ ದಿವಾಕರ ಈ ಭಾಗದಲ್ಲಿ ಮಾತ್ರ ಫೈಟ್‌ ಮಾಡುತ್ತಾನೆ. ಡಾನ್ಸ್‌ ಬೇರೆ ಇದೆ. ಆ ಕಾರಣಕ್ಕೆ ಹರಿಪ್ರಿಯಾ ಜತೆಗೆ ಮತ್ತೊಬ್ಬ ನಾಯಕಿಯಾಗಿ ತಾನ್ಯಾ ಹೋಪ್‌ ಬಂದಿದ್ದಾರೆ. ಅವರ ಉತ್ಸಾಹ ದೊಡ್ಡದು. ಕಷ್ಟವಾದರೂ ಇಷ್ಟಪಟ್ಟು ಕನ್ನಡದಲ್ಲೇ ಭಾಷಣ ಮಾಡಿ ಸೈ ಎನ್ನಿಸಿಕೊಂಡಿದ್ದು ಅವರ ಹೆಗ್ಗಳಿಕೆ. ನಾಯಕಿ ಹರಿಪ್ರಿಯಾ ಅವರಿಗೆ ಬೆಚ್ಚಗಿನ ಸ್ವಾಗತ ಕೋರಿದರು.

"

ರಿಷಬ್‌ ಶೆಟ್ಟಿಎಂದಿನಂತೆ ಹೈವೋಲ್ಟೇಜ್‌ ಪವರ್‌. ನಗುತ್ತಾ ಕಾಲೆಳೆಯುತ್ತಾ ಎಷ್ಟುಬೇಕು ಅಷ್ಟೇ ಮಾತಾಡುತ್ತಾ, ಜಾಸ್ತಿ ಮಾತಾಡುವವರನ್ನು ತಡೆಯುತ್ತಾ ಏಳು ಕೆರೆ ನೀರು ಕುಡಿದು ಬಂದ ವೀರನಂತೆ ಕುಳಿತಿದ್ದರು. ನಟ ಶಿವಮಣಿ ಈ ಸಿನಿಮಾ ತನ್ನ ನಟನಾ ಬದುಕಿಗೆ ತಿರುವು ನೀಡಿತು ಎಂದು ಗಡ್ಡ ನೀವಿಕೊಂಡರು.

ಸೆಟ್ಟೇರ್ತಿದೆ ಬೆಲ್‌ಬಾಟಂ 2 ಸಿನಿಮಾ..! ಯಾರ್ಯರಿದ್ದಾರೆ..? 

ನಿರ್ಮಾಪಕ ಸಂತೋಷ್‌ಕುಮಾರ್‌ ಕೆಸಿ ಮುಖದಲ್ಲಿ ಖುಷಿಯೋ ಖುಷಿ. ಹಳೇ ತಂಡ ಮತ್ತೆ ಒಟ್ಟು ಸೇರಿದ ಸಂತೋಷ ಅವರದು. ನಿರ್ದೇಶಕ ಜಯತೀರ್ಥ ಮಾತಲ್ಲಿ ಹೊಣೆಗಾರಿಕೆ ಇತ್ತು. ತಮ್ಮ ತಂಡವನ್ನು ಪ್ರೀತಿಯಿಂದ ಎಲ್ಲರಿಗೂ ಪರಿಚಯಿಸಿ ಬೆನ್ನು ತಟ್ಟುತ್ತಿದ್ದರು. ಉಳಿದಂತೆ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ಸಂಭಾಷಣಾಕಾರ ರಘು ನಿಡುವಳ್ಳಿ, ಛಾಯಾಗ್ರಾಹಕ ಅರವಿಂದ್‌ ಕಶ್ಯಪ್‌, ಕಾಸ್ಟೂ್ಯಮ್‌ ಡಿಸೈನರ್‌ ಪ್ರಗತಿ ಶೆಟ್ಟಿಕೆಲಸ ಶುರು ಮಾಡಿರುವುದಾಗಿ ಹೇಳಿಕೊಂಡರು. ಎರಡು ತಿಂಗಳಲ್ಲಿ ಚಿತ್ರ ಪ್ರೀಪ್ರೊಡಕ್ಷನ್‌ ಕೆಲಸ ಮುಗಿಸಿ ಚಿತ್ರೀಕರಣ ಶುರು ಮಾಡಲಿದೆ.

ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿ ಶಿಳ್ಳೆ ಬಿದ್ದಿದ್ದು ಟೈಗರ್‌ ಪ್ರಮೋದ್‌ ಶೆಟ್ಟರಿಗೆ ಮತ್ತು ಪಿಡಿ ಸತೀಶ್‌ಚಂದ್ರರಿಗೆ. ಹೆಚ್ಚು ತರ್ಲೆ ಮಾಡುತ್ತಿದ್ದಿದ್ದು ಸಗಣಿ ಪಿಂಟೋ ಸುಜಯ್‌ ಶಾಸ್ತ್ರಿ. ಇಡೀ ಟೀಮು ಚೆಂಡೂವ ಧರಿಸಿ ನಿಂತಿದ್ದು ನೆನಪಲ್ಲಿಡಬೇಕಾದ ಗಳಿಗೆ.