ಬೆಂಗಳೂರು:  ಸೋಮವಾರ ಸಂಜೆ ಐದು ಗಂಟೆ ಸುಮಾರಿಗೆ ಬೆಂಗಳೂರು ದಕ್ಷಿಣ ತಾಲೂಕು ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಗ್ರಾಮದ ಧ್ರುವ ಸರ್ಜಾ ಫಾಮ್‌ರ್‍ನಲ್ಲಿ ಚಿರಂಜೀವಿ ಸರ್ಜಾ ಅವರ ತಂದೆ ವಿಜಯಕುಮಾರ್‌ ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಪಾರ್ಥಿವ ಶರೀರವನ್ನು ಮಣ್ಣು ಮಾಡಲಾಯಿತು.

ನಾವಿಬ್ಬರು ಅರ್ಜುನ-ಕೃಷ್ಣ, ಅವನು ಹೇಳಿದ್ದೇ ಮಾಡುತ್ತಿದ್ದೆ: ಪ್ರಜ್ವಲ್ ದೇವರಾಜ್‌

ಈ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರ ತಾಯಿ, ಸೋದರ ಮಾವ ಅರ್ಜುನ್‌ ಸರ್ಜಾ, ಸಹೋದರ ಧ್ರುವ ಸರ್ಜಾ, ಚಿರಂಜೀವಿ ಪತ್ನಿ ಮೇಘನಾ ಮತ್ತು ಅವರ ತಂದೆ ಸುಂದರ್‌ರಾಜ್‌, ತಾಯಿ ಪ್ರಮೀಳಾ ಜೋಷಾಯಿ ಸೇರಿದಂತೆ ಬಂಧು-ಮಿತ್ರರು, ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.

ಹಲವರಿಂದ ಅಂತಿಮ ದರ್ಶನ:

ಭಾನುವಾರ ರಾತ್ರಿಯಿಂದಲೇ ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಸವನಗುಡಿಯ ನಿವಾಸದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೋಮವಾರ ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನಂತರ ಪಾರ್ಥಿವ ಶರೀರವನ್ನು ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಗ್ರಾಮದ ಬೃಂದಾವನ ಫಾಮ್‌ರ್‍ಹೌಸ್‌ಗೆ ತರಲಾಯಿತು. 3.30ರ ಸುಮಾರಿಗೆ ಪೂಜಾ ವಿಧಿವಿಧಾನಗಳು ಆರಂಭಗೊಂಡವು. ಸಂಜೆ 5.10ರ ಸುಮಾರಿಗೆ ಹಿಂದೂ ಸಂಪ್ರದಾಯದ ಪ್ರಕಾರ ವಿಧಿವಿಧಾನಗಳನ್ನು ಪೂರೈಸಿ ಪಾರ್ಥಿವ ಶರೀರವನ್ನು ಮಣ್ಣು ಮಾಡಲಾಯಿತು. ಬಳಿಕ ತಮ್ಮನ್ನಗಲಿದ ಚಿರಂಜೀವಿ ಸರ್ಜಾ ಅವರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬದವರು ಪ್ರಾರ್ಥನೆ ನಡೆಸಿದರು.

ನೆಚ್ಚಿನ ನಟ ಇನ್ನಿಲ್ಲ ಎಂದು ಕಣ್ಣೀರಿಟ್ಟ ವಿಶೇಷ ಚೇತನ ಅಭಿಮಾನಿ!

ಕನ್ನಡ ಚಿತ್ರರಂಗದ ದುನಿಯಾ ವಿಜಿ, ರವಿಶಂಕರ್‌ಗೌಡ, ಸತೀಶ್‌ ನೀನಾಸಂ, ತಾರಾ, ಪ್ರಜ್ವಲ್‌ ದೇವರಾಜ್‌, ವಸಿಷ್ಠ ಸಿಂಹ , ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ಜೈಜಗದೀಶ್‌, ಧರ್ಮ, ಅಜಯ್‌ರಾವ್‌, ಚೇತನ್‌ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.

ಭಾನುವಾರ ತಡರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಂತಿಮ ದರ್ಶನ ಪಡೆದಿದ್ದರು. ಸೋಮವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕಂದಾಯ ಸಚಿವ ಆರ್‌.ಅಶೋಕ್‌, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ರಾಜಕೀಯ ನಾಯಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಬೃಂದಾವನದಲ್ಲಿ ಸಮಾಧಿ

ಕನಕಪುರ ರಸ್ತೆಯಲ್ಲಿ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಇರುವ ಈ ತೋಟವನ್ನು ಧ್ರುವ ಸರ್ಜಾ ಮೂರು ವರ್ಷದ ಹಿಂದೆ ಖರೀದಿ ಮಾಡಿದ್ದರು. ಇದಕ್ಕೆ ಬೃಂದಾವನ ಎಂದು ಹೆಸರು ಇಟ್ಟಿದ್ದರು. ಈ ಮೊದಲು ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಇರುವ ಕುಟುಂಬಸ್ಥರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಸಹೋದರ ಧ್ರುವ ಅವರ ಇಚ್ಛೆಯಂತೆ ಅವರ ಬೃಂದಾವನದಲ್ಲಿ ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯಿತು.

ಚಿರಂಜೀವಿ ಸರ್ಜಾ ಬಗ್ಗೆ ರಮ್ಯಾ ಹಂಚಿಕೊಂಡ ವಿಚಾರ 

ಮುತ್ತಿಟ್ಟು ವಿದಾಯ ಹೇಳಿದ ಮೇಘನಾ

ಅಂತ್ಯ ಸಂಸ್ಕಾರ ವಿಧಿ ನಡೆಸುವ ವೇಳೆ ಪಕ್ಕದಲ್ಲಿ ಕುಳಿತಿದ್ದ ಗರ್ಭಿಣಿ ಪತ್ನಿ ಮೇಘನಾ ರಾಜ್‌ ದುಃಖ ತಾಳಲಾರದೆ ಪದೇಪದೇ ರೋದಿಸುತ್ತಿದ್ದ ದೃಶ್ಯ ಎಲ್ಲರ ಮನ ಕಲಕಿತು. ಮೇಘನಾ ಪಕ್ಕದಲ್ಲೇ ಕುಳಿತಿದ್ದ ತಾಯಿ ಪ್ರಮಿಳಾ ಜೋಷಾಯಿ ಹಾಗೂ ಅತ್ತೆ ಸಂತೈಸುತ್ತಿದ್ದರು.

ಮೇಘನಾ ಕೊನೆಯ ಬಾರಿ ಪತಿಯ ಪಾರ್ಥಿವ ಶರೀರವನ್ನು ಅಪ್ಪಿಕೊಂಡು, ಹಣೆಗೆ ಮುತ್ತು ನೀಡಿದಾಗ ನೆರೆದಿದ್ದವರ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅಳುತ್ತಿದ್ದ ಅವರನ್ನು ಚಿರು ಸಹೋದರ ಧ್ರವ ಸರ್ಜಾ ಕಣ್ಣೀರು ಹಾಕುತ್ತಲೇ ಸಂತೈಸಿದರು. ಹಿರಿಯ ಮಗ ಇನ್ನೆಂದೂ ಬಾರದ ಲೋಕಕ್ಕೆ ಹೋಗಿರುವುದನ್ನು ಕಂಡ ಹೆತ್ತಕರುಳ ನೋವು ಕಣ್ಣೀರಾಗಿ ಸುರಿಯುತ್ತಿತ್ತು. ಅಜ್ಜಿ ಸಹ ಮೊಮ್ಮಗನ ಹಣೆಗೆ ಮುತ್ತು ನೀಡಿ ಕಣ್ಣೀರಿನ ವಿದಾಯ ಹೇಳಿದರು.