ಉಪೇಂದ್ರ ನಟನೆ, ನಿರ್ದೇಶನದ ‘ಯುಐ’ ಚಿತ್ರಕ್ಕೆ ಅದ್ದೂರಿ ಮುಹೂರ್ತ ಜರುಗಿದೆ. ಉಪೇಂದ್ರ ಸಿನಿಮಾ ಅಭಿಮಾನಿಗಳಲ್ಲಿ ಎಷ್ಟುಕ್ರೇಜ್‌ ಸೃಷ್ಟಿಸಿದೆ ಎಂದರೆ ಮುಹೂರ್ತ ನಡೆದ ಬೆಂಗಳೂರಿನ ಶ್ರೀನಗರದ ಬಂಡಿ ಮಾಂಕಾಳಮ್ಮ ದೇವಾಲಯ ರಸ್ತೆಯಲ್ಲಿ ಆಚೀಚೆ ಹೋಗುವುದಕ್ಕೂ ಸಾಧ್ಯವಾಗದಂತೆ ಜನ ಸೇರಿದ್ದರು. 

ಉಪೇಂದ್ರ ನಟನೆ, ನಿರ್ದೇಶನದ ‘ಯುಐ’ ಚಿತ್ರಕ್ಕೆ ಅದ್ದೂರಿ ಮುಹೂರ್ತ ಜರುಗಿದೆ. ಉಪೇಂದ್ರ ಸಿನಿಮಾ ಅಭಿಮಾನಿಗಳಲ್ಲಿ ಎಷ್ಟುಕ್ರೇಜ್‌ ಸೃಷ್ಟಿಸಿದೆ ಎಂದರೆ ಮುಹೂರ್ತ ನಡೆದ ಬೆಂಗಳೂರಿನ ಶ್ರೀನಗರದ ಬಂಡಿ ಮಾಂಕಾಳಮ್ಮ ದೇವಾಲಯ ರಸ್ತೆಯಲ್ಲಿ ಆಚೀಚೆ ಹೋಗುವುದಕ್ಕೂ ಸಾಧ್ಯವಾಗದಂತೆ ಜನ ಸೇರಿದ್ದರು. ದೇಗುಲದ ಹೊರಗಿದ್ದವರು ಒಳ ಹೋಗುವುದಕ್ಕೂ ಒಳಗೆ ಹೋದವರು ಹೊರಗೆ ಬರುವುದಕ್ಕೂ ಕಷ್ಟಪಡುವ ವಾತಾವರಣ ಸೃಷ್ಟಿಯಾಗಿತ್ತು.

ನಿರ್ಮಾಪಕ, ನಿರ್ದೇಶಕರೆಲ್ಲರೂ ಸೇರಿದಂತೆ ಇಡೀ ಚಿತ್ರತಂಡ ಹಾಗೂ ಅಭಿಮಾನಿಗಳು ಹಣೆಗೆ ಮೂರು ನಾಮ ಬಳಿದು ಕಾಣಿಸಿಕೊಂಡರು. ಬೇರೆಯವರೆಲ್ಲಾ ಅಂಗಿ ಮೇಲೆ ಸಿನಿಮಾದ ಟೈಟಲ್‌ ಹಾಕಿಕೊಂಡರೆ ಉಪ್ಪಿ ಹಣೆ ಮೇಲೆ ಸಿನಿಮಾ ಟೈಟಲ್‌ ಬರೆದುಕೊಂಡಿದ್ದು ಅಚ್ಚರಿಗೆ ಕಾರಣವಾಯಿತು. ಮುಹೂರ್ತ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಅಲ್ಲಿ ಎಂದಿನಂತೆ ಉಪೇಂದ್ರ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ಬದಲಾಗಿ ಪ್ರಶ್ನೆಗಳನ್ನೆಲ್ಲಾ ಸೀಳಿ ಚೆಂಡಾಡಿ ಬಿಸಾಕಿದರು. ಅವರ ಮಾತುಗಳ ಮುಖ್ಯಾಂಶ ಹೀಗಿತ್ತು;

Upendra ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ರಿಲೀಸ್: ಕುದುರೆ ಏರಿ ಬಂದ ರಿಯಲ್ ಸ್ಟಾರ್!

1. ಈ ಸಿನಿಮಾ ವಿಭಿನ್ನವಾಗಿರುತ್ತದೆ. ದೊಡ್ಡದಾಗಿ ಇರಲಿದೆ. ಬಜೆಟ್‌ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ನಿರ್ಮಾಪಕರು ಹೇಳಿದ್ದಾರೆ. ಇಡೀ ದೇಶವೇ ತಿರುಗಿ ನೋಡುವಂತಹ ಸಿನಿಮಾ ಮಾಡುತ್ತೇವೆ. ಬೇರೆ ಬೇರೆ ಭಾಷೆಯ ಕಲಾವಿದರು ನಟಿಸಲಿದ್ದಾರೆ.

2. ನಾನು ಕನ್ಫ್ಯೂಸ್‌ ಮಾಡುತ್ತೇನೆ ಅಂತಾರೆ. ಸತ್ಯವೇ ಗೊಂದಲ ಆಗಿಬಿಟ್ಟಿದೆ ನಮ್ಮ ಜನರಿಗೆ. ನಾನು ಕನ್ವಿನ್ಸ್‌ ಮಾಡುವುದಕ್ಕೆ ಪ್ರಯತ್ನಿಸುತ್ತೇನೆ. ಕನ್ವಿನ್ಸ್‌ ಆಗುವವರು ಆಗುತ್ತಾರೆ. ಕನ್ಫ್ಯೂಸ್‌ ಆಗುವವರು ಯಾವಾಗರೂ ಕನ್ಫ್ಯೂಸ್‌ ಆಗಿರುತ್ತಾರೆ.

3. ಸಿನಿಮಾ ಕೆಜಿಎಫ್‌ ತರಬೇಕು ಅಂತ ಏನೂ ಇಲ್ಲ. ಅದೊಂದು ಸಿನಿಮಾ ಅಷ್ಟೇ. ನಾವು ಇನ್ನೊಂದು ಸಿನಿಮಾ ಮಾಡೋಣ. ಜನ ಅದರ ಬಗ್ಗೆಯೂ ಮಾತನಾಡಬೇಕು. ಅದು ನಿಜವಾದ ಸಾಧನೆ. ನಾವು ಹೋಲಿಕೆ ಮಾಡಬಾರದು. ಮಕ್ಕಳಿಗೆ ತೆಂಡೂಲ್ಕರ್‌ ಆಗು, ಕಲಾಂ ಆಗು, ರಾಜ್‌ಕುಮಾರ್‌ ಆಗು ಅಂತ ಹೇಳಬಾರದು. ನೀನು ನೀನೇ ಆಗು ಅಂತ ಹೇಳಬೇಕು.

4. ಜನ ನನ್ನನ್ನು ನನ್ನ ಯೋಗ್ಯತೆಗಿಂತ ಜಾಸ್ತಿ ಹೊಗಳಿದ್ದಾರೆ. ನನ್ನ ತಲೆ ಸ್ಪೆಷಲ್‌ ಆಗಿ ಓಡುತ್ತದೆ ಎನ್ನುತ್ತಾರೆ. ದೇವರಾಣೆ ಏನೂ ಓಡುವುದಿಲ್ಲ. ನಾನು ತಲೆ ಖಾಲಿ ಇಟ್ಟುಕೊಳ್ಳುತ್ತೇನೆ. ಖಾಲಿ ಇಟ್ಟುಕೊಂಡಾಗಲೇ ಹೊಸ ಐಡಿಯಾಗಳು ಬರುತ್ತವೆ.

5. ನಾನು ನಿರ್ದೇಶಕನಾಗಿದ್ದಾಗ ತುಂಬಾ ಸ್ಟ್ರಾಂಗ್‌ ಆಗಿರುತ್ತೇನೆ. ಕಮಾಂಡಿಂಗ್‌ ಆಗಿ ಇರುತ್ತೇನೆ. ಪ್ಯಾನ್‌ ಇಂಡಿಯಾ ಅಂತ ಯಾವ ಸಿನಿಮಾಗಳೂ ಇರುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಅದನ್ನು ಎಲ್ಲಾ ಕಡೆಗೆ ತೆಗೆದುಕೊಂಡು ಹೋಗಬಹುದು. ಸಿನಿಮಾ ಚೆನ್ನಾಗಿ ಮಾಡುವುದು ನನ್ನ ಕರ್ತವ್ಯ. ಅದನ್ನು ನಿಭಾಯಿಸುತ್ತೇನೆ.

ಯು-ಐ ಅನ್ನಿ, ಮೂರು ನಾಮ ಅನ್ನಿ, ನಿಮಗೆ ಬಿಟ್ಟಿದ್ದು: Upendra

6. ಈ ಸಿನಿಮಾ ಕತೆ ಮಾಡಿಕೊಂಡಿದ್ದು 15-20 ವರ್ಷಗಳ ಹಿಂದೆ. ಈಗ ಸಿನಿಮಾ ಮಾಡುತ್ತಿದ್ದೇನೆ. ನಾನು ಸಹ ನಿರ್ದೇಶಕರಿಂದ ಹಿಡಿದು ಪ್ರೊಡಕ್ಷನ್‌ ಬಾಯ್‌ವರೆಗೂ ಎಲ್ಲರಿಗೂ ಸ್ಕ್ರಿಪ್ಟ್‌ ಹೇಳುತ್ತೇನೆ. ಎಲ್ಲರೂ ಸ್ಕ್ರಿಪ್ಟ್‌ ಒಳಗಿದ್ದರೆ ಮಾತ್ರ ಸಿನಿಮಾ ಚೆನ್ನಾಗಿರುತ್ತದೆ ಎನ್ನುವುದು ನನ್ನ ನಂಬಿಕೆ.

ಉಪೇಂದ್ರ ಮಾತಿಗೆ ಮೊದಲು ಸುದೀಪ್‌ ಚಿತ್ರಕ್ಕೆ ಕ್ಲಾಪ್‌ ಮಾಡಿದರು. ‘ನಾನೊಬ್ಬ ಅಭಿಮಾನಿಯಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ’ ಎಂದು ಉಪೇಂದ್ರರನ್ನು ಮೆಚ್ಚಿಕೊಂಡರು. ಶಿವಣ್ಣ, ಧನಂಜಯ್‌, ವಸಿಷ್ಠ ಸಿಂಹ ಶುಭ ಹಾರೈಸಿದರು. ನಿರ್ಮಾಪಕರಾದ ಜಿ ಮನೋಹರನ್‌, ಕೆ.ಪಿ. ಶ್ರೀಕಾಂತ್‌, ನವೀನ್‌ ಮನೋಹರನ್‌, ಲಹರಿ ವೇಲು ಇದ್ದರು.