ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮಕ್ಕೆ ರಶ್ಮಿಕಾ ಪೋಷಕರು ಕೊಡಗಿನ ವಿರಾಜಪೇಟೆಯಲ್ಲಿರುವ ತಮ್ಮ 'ಸೆರಿನಿಟಿ' ಐಶಾರಾಮಿ ಬಂಗಲೆಯನ್ನು ಮದುವೆ ಉಡುಗೊರೆಯಾಗಿ ನೀಡಿದ್ದಾರೆ. ಈ ಆಸ್ತಿ ಹಸ್ತಾಂತರದ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಂಡಿದೆ.

ಕೊಡಗು (ಏ.06):ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದ ಬೆನ್ನಲ್ಲೇ ರಶ್ಮಿಕಾ ಪೋಷಕರು ತಮ್ಮ ಮಗಳಿಗೆ ತವರಿನಿಂದ ಅತ್ಯಂತ ಬೆಲೆಬಾಳುವ 'ಮದುವೆ ಉಡುಗೊರೆ'ಯನ್ನು ನೀಡಿದ್ದಾರೆ. ವಿರಾಜಪೇಟೆಯಲ್ಲಿದ್ದ ಐಶಾರಾಮಿ ಬಂಗಲೆ ಹಾಗೂ ಸುತ್ತಲಿನ ಜಾಗವನ್ನು ಮಗಳ ಹೆಸರಿಗೆ ಮಾಡಿಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಗಳ ಹೆಸರಿಗೆ 'ಸೆರಿನಿಟಿ' ಬಂಗಲೆ ಹಸ್ತಾಂತರ:

ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ ಮತ್ತು ತಾಯಿ ಸುಮನ್ ಮಂದಣ್ಣ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಕ್ಲೂರಿನಲ್ಲಿರುವ ತಮ್ಮ ಕನಸಿನ ಐಶಾರಾಮಿ ಮನೆ 'ಸೆರಿನಿಟಿ'ಯನ್ನು (Serenity) ಈಗ ಅಧಿಕೃತವಾಗಿ ಮಗಳ ಹೆಸರಿಗೆ ವರ್ಗಾಯಿಸಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವಿಶೇಷ ಉಡುಗೊರೆಯಾಗಿ ಈ ಆಸ್ತಿಯನ್ನು ಹಸ್ತಾಂತರಿಸಲಾಗಿದೆ.

ನೋಂದಣಿ ಪ್ರಕ್ರಿಯೆ ಪೂರ್ಣ:

ವಿರಾಜಪೇಟೆಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈ ಆಸ್ತಿ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಕುಕ್ಲೂರು ಗ್ರಾಮದ ಸರ್ವೆ ನಂಬರ್ 142/1 ಹಾಗೂ 142/2 ರಲ್ಲಿರುವ ಈ ಬಂಗಲೆಯು ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರು ತಮ್ಮ ಹೆಸರಿನಲ್ಲಿದ್ದ ಈ ಆಸ್ತಿಯ ಖಾತೆಯನ್ನು ಮಗಳ ಹೆಸರಿಗೆ ಬದಲಾಯಿಸಿಕೊಟ್ಟಿದ್ದಾರೆ.

ಕೊಡಗಿನಲ್ಲಿ ವಾಸ್ತವ್ಯ:

ಮದುವೆಯ ನಂತರ ಕೊಡಗಿಗೆ ಬಂದಿರುವ ನಟಿ ರಶ್ಮಿಕಾ ಮಂದಣ್ಣ ಪ್ರಕೃತಿಯ ನಡುವೆ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಜೋಡಿಯ ಕೊಡಗು ಭೇಟಿಯು ಕೇವಲ ಪ್ರವಾಸವಾಗಿರದೆ, ಮದುವೆಯ ನಂತರದ ವಿಧಿವಿಧಾನಗಳು ಹಾಗೂ ಕುಟುಂಬದ ಆಸ್ತಿ ಹಸ್ತಾಂತರದ ಕಾರ್ಯಗಳಿಗಾಗಿಯೇ ಇತ್ತು ಎಂಬುದು ಈಗ ಸ್ಪಷ್ಟವಾಗಿದೆ.

ಕುಟುಂಬದ ಆಪ್ತರಿಂದ ದೃಢ:

ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಕೊಡಗಿನ ಸಂಪ್ರದಾಯ ಹಾಗೂ ತಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಈಗ ವಿಜಯ್ ದೇವರಕೊಂಡ ಅವರ ಜೊತೆಗಿನ ಜೀವನಕ್ಕೆ ಪೋಷಕರು ಆಶೀರ್ವಾದದ ರೂಪದಲ್ಲಿ ಈ ಮನೆಯನ್ನು ನೀಡಿದ್ದು, ಕೊಡಗಿನ ಕುವರಿ ಈಗ ಅಧಿಕೃತವಾಗಿ ತನ್ನ ನೆಚ್ಚಿನ 'ಸೆರಿನಿಟಿ' ಮನೆಯ ಒಡತಿಯಾಗಿದ್ದಾರೆ.